ಖಾಜಾಮೈನುದ್ದೀನ್ ಪಟೇಲ್, ವಾರ್ತಾಭಾರತಿ

ವಿಜಯಪುರ, ಅ.28: ರಾಜ್ಯದ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ನೀಡುವ 1.08 ಲಕ್ಷಕ್ಕೂ ಅಧಿಕ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿಯಾಗದೆ, ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಸಿಯೂಟ ಸಿಬ್ಬಂದಿ ಸಂಘದ ಮುಖಂಡರು ಆರೋಪಿಸಿದ್ದಾರೆ.

ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ. ‘ಖಜಾನೆ-2’ ವ್ಯವಸ್ಥೆಯಿಂದ ‘ಸ್ಪರ್ಶ’ ತಂತ್ರಾಂಶಕ್ಕೆ ವೇತನ ಪಾವತಿ ವ್ಯವಸ್ಥೆ ಬದಲಾಯಿಸಿರುವುದೇ ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ತಂತ್ರಾಂಶ ಬದಲಾವಣೆಯ ನೆಪದಲ್ಲಿ ಬಡ ಸಿಬ್ಬಂದಿಯನ್ನು ಸತಾಯಿಸಲಾಗುತ್ತಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಗೌರವಧನ ಸಿಬ್ಬಂದಿಯ ಖಾತೆಗೆ ಜಮೆಯಾಗಬೇಕಿತ್ತು. ಆದರೆ ಮೂರು ತಿಂಗಳಿಂದ ಒಂದು ರೂಪಾಯಿಯೂ ಪಾವತಿಯಾಗಿಲ್ಲ. ಕೆಲವೆಡೆ ಒಂದೆರಡು ತಿಂಗಳ ಹಣ ಜಮೆಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗಿಲ್ಲ. ಕೇಂದ್ರದ ಪಾಲಿನ ಹಣವೂ ಇನ್ನೂ ತಲುಪಿಲ್ಲ ಎಂದು ಬಿಸಿಯೂಟ ಸಿಬ್ಬಂದಿ ಸಂಘದ ರಾಜ್ಯ ಕಾರ್ಯದರ್ಶಿ ಸಂಧ್ಯಾ ತಿಳಿಸಿದ್ದಾರೆ.

ಮದುವೆ ಛತ್ರಗಳು, ಹೋಟೆಲ್ ಹಾಗೂ ಹಾಸ್ಟೆಲ್‌ಗಳಲ್ಲಿ ಅಡುಗೆ ಕೆಲಸ ಮಾಡುವವರಿಗೂ ಕೂಡ ಒಂದು ನಿರ್ದಿಷ್ಟ ಕನಿಷ್ಠ ವೇತನದ ಕಾನೂನು ಹಾಗೂ ಸುರಕ್ಷತೆ ಇರುತ್ತದೆ. ಆದರೆ ಪ್ರತಿದಿನ ಸಾವಿರಾರು ಮಕ್ಕಳಿಗೆ ಅತ್ಯಂತ ಕಡಿಮೆ ಗೌರವಧನಕ್ಕೆ (ರೂ. 4,600 ರಿಂದ ರೂ. 4,700 ರವರೆಗೆ) ದುಡಿಯುತ್ತಿರುವ ಬಿಸಿಯೂಟದ ಸಿಬ್ಬಂದಿಗೆ ಮಾತ್ರ ಯಾವುದೇ ಕನಿಷ್ಠ ದಿನಗೂಲಿ ಅಥವಾ ಕಾನೂನುಬದ್ಧ ವೇತನದ ಭದ್ರತೆ ಸಿಗುತ್ತಿಲ್ಲ.

ಅಷ್ಟೇ ಅಲ್ಲದೆ, ವರ್ಷಪೂರ್ತಿ 12 ತಿಂಗಳು ಶ್ರಮಿಸಿದರೂ ಇವರಿಗೆ ನೀಡುವುದು ಕೇವಲ 10 ತಿಂಗಳ ವೇತನ ಮಾತ್ರ. ರಾಜ್ಯ ಸರಕಾರ ಇವರನ್ನು ಕನಿಷ್ಠ ವೇತನ ಕಾಯ್ದೆಯ ಪರಿಧಿಗೆ ಒಳಪಡಿಸಬೇಕು ಹಾಗೂ 12 ತಿಂಗಳ ಪೂರ್ಣ ವೇತನವನ್ನು ನಿಯಮಿತವಾಗಿ ನೀಡಬೇಕು ಎಂಬ ಹೋರಾಟಗಾರರ ಹಕ್ಕೊತ್ತಾಯಕ್ಕೆ ಸರಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ವೇತನವಿಲ್ಲದೆ ಸಾವಿರಾರು ಕುಟುಂಬಗಳು ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ಹೀಗಾಗಿ ಬಾಕಿ ಇರುವ ಮೂರು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor