ಕೊಡಗು ಕಾಂಗ್ರೆಸ್‌ನಲ್ಲಿ ಮುಸ್ಲಿಮರ ರಾಜಕೀಯ ಅಸ್ತಿತ್ವಕ್ಕೆ ಸವಾಲು?
►ಶೇ.98ರಷ್ಟು ಮತ ನೀಡಿದರೂ ಸೂಕ್ತ ಸ್ಥಾನಮಾನವಿಲ್ಲ ►ನಾಯಕರಲ್ಲಿ ಒಗ್ಗಟ್ಟಿನ ಕೊರತೆ ►ನೋಟಾ ಅಭಿಯಾನದ ಎಚ್ಚರಿಕೆ
ಮಡಿಕೇರಿ : ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತದಾರರೆಂದೇ ಗುರುತಿಸಿಕೊಂಡಿರುವ ಕೊಡಗಿನ ಮುಸ್ಲಿಮ್ ಸಮುದಾಯಕ್ಕೆ ಪಕ್ಷದಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ದೊರೆಯುತ್ತಿಲ್ಲ ಎಂಬ ಅಸಮಾಧಾನ ಇದೀಗ ಬಹಿರಂಗವಾಗಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದರೂ ಅಧಿಕಾರ ಹಂಚಿಕೆ ಮತ್ತು ನಾಮನಿರ್ದೇಶನದ ವಿಚಾರದಲ್ಲಿ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮುಸ್ಲಿಮ್ ಮತಗಳು ಪ್ರಮುಖ ಪಾತ್ರ ವಹಿಸಿದ್ದವು. ವಿರಾಜಪೇಟೆ ಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ 28 ಸಾವಿರಕ್ಕೂ ಹೆಚ್ಚು ಮುಸ್ಲಿಮ್ ಮತದಾರರಿದ್ದಾರೆ. ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ಸಮುದಾಯಕ್ಕೆ ನಿರೀಕ್ಷಿತ ಸ್ಥಾನಮಾನ ದೊರೆತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎ. ಯಾಕೂಬ್ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡದೆ ಕೇವಲ ಸದಸ್ಯರನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಅವರು ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪಕ್ಷದೊಳಗಿನ ಅಲ್ಪಸಂಖ್ಯಾತರ ಅಸಮಾಧಾನ ಮತ್ತಷ್ಟು ಹೆಚ್ಚಿದೆ.
ಇದರೊಂದಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ವಿಚಾರದಲ್ಲಿಯೂ ಮುಸ್ಲಿಮ್ ಮತದಾರರು ಹೆಚ್ಚಿರುವ ಕ್ಷೇತ್ರಗಳನ್ನು ಮಹಿಳಾ ಮೀಸಲಾತಿಗೆ ನಿಗದಿಪಡಿಸಿರುವುದಕ್ಕೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಡಗು ಕಾಂಗ್ರೆಸ್‌ನಲ್ಲಿ ಉತ್ತರ ಮತ್ತು ದಕ್ಷಿಣ ಬಣಗಳಂತೆ ಅಲ್ಪಸಂಖ್ಯಾತ ಮುಖಂಡರಲ್ಲಿಯೂ ಬಣ ರಾಜಕೀಯ ಸೃಷ್ಟಿಯಾಗಿದ್ದು, ಒಗ್ಗಟ್ಟಿನ ಕೊರತೆಯಿಂದ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಟೀಕೆಗಳಿವೆ.
ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನವೂ ಖಾಲಿ
ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಸುಮಾರು ಮೂರು ವರ್ಷಗಳಿಂದ ಖಾಲಿ ಉಳಿದಿದೆ. ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಮುಸ್ಲಿಮ್ ಮುಖಂಡರು ಹಾಗೂ ಧಾರ್ಮಿಕ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದರಿಂದ ನೇಮಕಾತಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಮುಹಮ್ಮದ್ ಹಾಜಿ ಹಾಗೂ ಎಡಪಾಲ ಶಾಫಿ ಅವರ ಹೆಸರುಗಳು ಪ್ರಸ್ತಾಪವಾಗಿದ್ದರೂ ಇದುವರೆಗೆ ನೇಮಕಾತಿ ನಡೆದಿಲ್ಲ.
5ರಿಂದ 6 ಕ್ಷೇತ್ರಗಳಿಗೆ ಟಿಕೆಟ್ ಒತ್ತಾಯ
ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಕನಿಷ್ಠ 5ರಿಂದ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಸುನ್ನಿ ಮಹಲ್ ಒಕ್ಕೂಟ ಒತ್ತಾಯಿಸಿದೆ. ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ನೋಟಾ ಅಭಿಯಾನ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಬಿಟ್ಟಂಗಾಲದಿಂದ ಆರ್.ಕೆ. ಅಬ್ದುಲ್ ಸಲಾಂ, ಹಾಲುಗುಂದದಿಂದ ಅಬ್ದುರೆಹಮಾನ್, ವಾಲ್ನೂರು- ತ್ಯಾಗತ್ತೂರಿನಿಂದ ಹಕೀಂ ನೆಲ್ಲಿಹುದಿಕೇರಿ, ಕೆ.ಎಂ.ಬಶೀರ್ ಹಾಗೂ ಲತೀಫ್ ಸುಂಟಿಕೊಪ್ಪ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸಿದ್ದಾಪುರ ಕ್ಷೇತ್ರದಿಂದ ಸುಹದಾ ಅಶ್ರಫ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ನಾಪೊಕ್ಲು, ಚೆಯ್ಯಂಡಾಣೆ, ಹಾಲುಗುಂದ, ಬಿಟ್ಟಂಗಾಲ, ಸಿದ್ದಾಪುರ, ವಾಲ್ನೂರು- ತ್ಯಾಗತ್ತೂರು, ಗುಡ್ಡೆಹೊಸೂರು, ಸುಂಟಿಕೊಪ್ಪ ಸೇರಿದಂತೆ 10ಕ್ಕೂ ಅಧಿಕ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಮುಸ್ಲಿಮ್ ಮತಗಳು ನಿರ್ಣಾಯಕವಾಗಿವೆ ಎಂಬ ರಾಜಕೀಯ ಲೆಕ್ಕಾಚಾರವಿದೆ. ಹೀಗಾಗಿ ಮುಸ್ಲಿಮ್ ಸಮುದಾಯ ಕಾಂಗ್ರೆಸ್ ನಿಂದ ದೂರ ಸರಿದರೆ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಚುನಾವಣಾ ಸಂದರ್ಭದಲ್ಲಿ ಮುಸ್ಲಿಮ್ ಮತಗಳನ್ನು ನಿರೀಕ್ಷಿಸುವ ಕಾಂಗ್ರೆಸ್, ರಾಜಕೀಯ ಸ್ಥಾನಮಾನ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಕ್ಕೆ ಪಕ್ಷದ ನಾಯಕರು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಅಲ್ಪಸಂಖ್ಯಾತರು ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿಯುತ್ತಿದ್ದರೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಆರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ನೋಟಾ ಮೂಲಕ ತಕ್ಕ ಪಾಠ ಕಲಿಸುತ್ತೇವೆ.
-ಸಿ.ಎಂ. ಹಮೀದ್ ಮೌಲವಿ,
ಸುನ್ನಿ ಮಹಲ್ ಒಕ್ಕೂಟದ ಜಿಲ್ಲಾಧ್ಯಕ್ಷ
ಪಕ್ಷಕ್ಕಾಗಿ ದುಡಿದ ಅಲ್ಪಸಂಖ್ಯಾತ ನಾಯಕರಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ಪಶ್ಚಿಮ ಘಟ್ಟಗಳ ಸಮಿತಿಯಲ್ಲಿ ಕೇವಲ ಸದಸ್ಯರನ್ನಾಗಿ ಮಾಡಿರುವುದನ್ನು ವಿರೋಧಿಸಿ ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ.
-ಕೆ.ಎ. ಯಾಕೂಬ್,
ಕಾಂಗ್ರೆಸ್ ಹಿರಿಯ ಮುಖಂಡ
ಮುಸ್ಲಿಮ್ ಸಮುದಾಯದ ರಾಜಕೀಯ ಅಸ್ತಿತ್ವದ ಬಗ್ಗೆ ಆತಂಕವಿದೆ. ಇದು ವ್ಯಕ್ತಿಯ ಅಸಮಾಧಾನವಲ್ಲ, ಸಮುದಾಯದ ಹಕ್ಕು ಮತ್ತು ಗೌರವದ ಪ್ರಶ್ನೆಯಾಗಿದೆ.
-ಎಂ.ವೈ. ಅಬ್ದುಲ್ ಹಫೀಲ್ ಸಅದಿ ಕೊಳಕೇರಿ