ಕೊಡಗು ಜಿಪಂ ಮೀಸಲಾತಿಯಲ್ಲಿ ಮತ್ತೆ ಬದಲಾವಣೆ : ನಾಲ್ಕು ಕ್ಷೇತ್ರಗಳಿಗೆ ಹೊಸ ಮೀಸಲು
ವಿಶೇಷ ವರದಿ ಪ್ರಕಟಿಸಿದ್ದ ‘ವಾರ್ತಾಭಾರತಿ’
ಸಾಂದರ್ಭಿಕ ಚಿತ್ರ | Photo credit : AI
ಮಡಿಕೇರಿ : ಕೊಡಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರ ಕೇವಲ 24 ಗಂಟೆಗಳಲ್ಲೇ ಮಹತ್ವದ ಬದಲಾವಣೆ ಮಾಡಿದೆ. ನ.23ರಂದು ಪ್ರಕಟಿಸಿದ್ದ ಅಂತಿಮ ಮೀಸಲಾತಿ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಸರಕಾರ, ಇದೀಗ ನಾಲ್ಕು ಕ್ಷೇತ್ರಗಳ ಮೀಸಲಾತಿಯನ್ನು ಪರಿಷ್ಕರಿಸಿ ನೂತನ ಅಧಿಸೂಚನೆ ಹೊರಡಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನ.24ರಂದು ಅಧಿಸೂಚನೆ ಸಂಖ್ಯೆ RDPR 181 ZPS 2023ರ ಮೂಲಕ ಈ ತಿದ್ದುಪಡಿ ಪ್ರಕಟಿಸಿದೆ. ಇದರೊಂದಿಗೆ ಕೊಡಗಿನ ಮಾದಾಪುರ, ಕೂಡಿಗೆ, ಗುಡ್ಡೆಹೊಸೂರು ಹಾಗೂ ವಾಲ್ನೂರು-ತ್ಯಾಗತ್ತೂರು ಜಿಪಂ ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ.
ಕರಡು ಮೀಸಲಾತಿ ಪಟ್ಟಿ ಪ್ರಕಟವಾದ ಬಳಿಕ ಈ ನಾಲ್ಕು ಕ್ಷೇತ್ರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಕುರಿತು ನ.2ರಂದು ‘ವಾರ್ತಾಭಾರತಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಆದರೆ, ನ.23ರಂದು ಪ್ರಕಟವಾದ ಅಂತಿಮ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಹಿಂದಿನ ಮೀಸಲಾತಿ ಯನ್ನೇ ಮುಂದುವರಿಸಲಾಗಿತ್ತು. ಇದೀಗ ಮರುದಿನವೇ ನಾಲ್ಕು ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗಿದ್ದು, ‘ವಾರ್ತಾಭಾರತಿ’ ವರದಿ ನಿಜವಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16 ಜಿಪಂ ಕ್ಷೇತ್ರಗಳಿವೆ. ಕರಡು ಮೀಸಲಾತಿ ಪಟ್ಟಿಯಲ್ಲಿ ಪ್ರಕಟಗೊಂಡಿದ್ದ ಮೀಸಲಾತಿಯನ್ನೇ ಅಂತಿಮ ಅಧಿಸೂಚನೆಯಲ್ಲೂ ಮುಂದುವರಿಸಲಾಗಿದ್ದು, ಈ ಕ್ಷೇತ್ರಗಳ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 13 ಜಿಪಂ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಮೀಸಲಾತಿಯಲ್ಲಿ ತಿದ್ದುಪಡಿ ಮಾಡಲಾಗಿದೆ.
ಮೀಸಲಾತಿ ನಿಗದಿಪಡಿಸುವ ಅಧಿಕಾರ ಸರಕಾರದ ಕೈಯಲ್ಲಿರುವುದರಿಂದ ರಾಜಕೀಯ ಪ್ರಭಾವ ಹಾಗೂ ಪಕ್ಷದ ಮುಖಂಡರಿಗೆ ಸ್ಪರ್ಧಿಸಲು ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ನಿಗದಿಯಾಗುತ್ತಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಇದೇ ವೇಳೆ ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ, ಚಾಮರಾಜನಗರ ಹಾಗೂ ರಾಯಚೂರು ಜಿಲ್ಲೆಗಳ ಜಿಪಂ ಕ್ಷೇತ್ರಗಳ ಮೀಸಲಾತಿಯಲ್ಲೂ ತಿದ್ದುಪಡಿ ಮಾಡಲಾಗಿದೆ.
ಮೀಸಲಾತಿ ಬದಲಾವಣೆಯ ಸುತ್ತ ರಾಜಕೀಯ ಚರ್ಚೆ :
ಕೊಡಗು ಜಿಪಂ ಕ್ಷೇತ್ರಗಳ ಮೀಸಲಾತಿ ಬದಲಾವಣೆಯ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಪಂ ಮತ್ತು ತಾಪಂ ಚುನಾವಣೆಗಳ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿಯನ್ನು ಅ.9ರಂದು ಪ್ರಕಟಿಸಲಾಗಿತ್ತು. ಆಕ್ಷೇಪ ಸಲ್ಲಿಸಲು ಅ.19ರವರೆಗೆ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಲವು ಕ್ಷೇತ್ರಗಳ ಮೀಸಲಾತಿ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ಅಂತಿಮ ಅಧಿಸೂಚನೆಯಲ್ಲಿ ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯೂ ರಾಜಕೀಯ ವಲಯದಲ್ಲಿತ್ತು.
ಆದರೆ, ನ.23ರಂದು ಪ್ರಕಟವಾದ ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಹಿಂದಿನ ಪಟ್ಟಿಯನ್ನೇ ಮುಂದುವರಿಸಲಾಗಿತ್ತು. ಇದರಿಂದ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದ ಹಲವು ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು. ಇದೀಗ ಕೇವಲ 24 ಗಂಟೆಗಳ ಅವಧಿಯಲ್ಲಿ ನಾಲ್ಕು ಕ್ಷೇತ್ರಗಳ ಮೀಸಲಾತಿ ಬದಲಾಗಿರುವುದು ಮತ್ತೊಮ್ಮೆ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ವಿಶೇಷವಾಗಿ ವಾಲ್ನೂರು-ತ್ಯಾಗತ್ತೂರು ಜಿಪಂ ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ಜಿಪಂ ಹಾಗೂ ತಾಪಂ ಮಾಜಿ ಸದಸ್ಯರಿಗೆ ಪರಿಷ್ಕೃತ ಮೀಸಲಾತಿ ಹಿನ್ನಡೆಯಾಗಿದೆ. ಮತ್ತೊಂದೆಡೆ, ಕೂಡಿಗೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿ.ಪಿ. ಶಶಿಧರ್ ಅವರಿಗೆ ಸಾಮಾನ್ಯ ಕ್ಷೇತ್ರದ ಮೀಸಲಾತಿ ಅನುಕೂಲಕರವಾಗಿದೆ.
ಒಟ್ಟಿನಲ್ಲಿ, ಮೀಸಲಾತಿಯಲ್ಲಿನ ಈ ದಿಢೀರ್ ಬದಲಾವಣೆ ಕೊಡಗಿನ ಜಿಪಂ ಚುನಾವಣಾ ಕಣಕ್ಕೆ ಹೊಸ ಆಯಾಮ ನೀಡಿದ್ದು, ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರಗಳನ್ನೂ ಬದಲಾಯಿಸಿದೆ.
ಕುಶಾಲನಗರ ತಾಲೂಕು ರಚನೆಯಾದ ಬಳಿಕ ಪ್ರಪ್ರಥಮ ಬಾರಿಗೆ ಹಲವು ಬದಲಾವಣೆಗಳೊಂದಿಗೆ ಜಿಪಂ ಹಾಗೂ ತಾಪಂ ಚುನಾವಣೆಗಳನ್ನು ಎದುರಿಸುತ್ತಿದ್ದೇವೆ. ಕೂಡಿಗೆ ಒಂದು ಪ್ರತಿಷ್ಠಿತ ಕ್ಷೇತ್ರ. ಕೂಡಿಗೆಯನ್ನು ಪ್ರತ್ಯೇಕ ಕ್ಷೇತ್ರವನ್ನಾಗಿ ಮಾಡುವಲ್ಲಿ ನನ್ನ ಶ್ರಮವೂ ಇದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಆಸೆ, ನಿರೀಕ್ಷೆ ಹಾಗೂ ಭಾವನಾತ್ಮಕ ಸಂಬಂಧವಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕೆಂಬ ಉದ್ದೇಶದಿಂದ ಇದನ್ನೇ ನನ್ನ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡು ಕೆಲಸ ಮಾಡಲು ಪ್ರಾರಂಭಿಸಿದ್ದೇನೆ.
-ವಿ.ಪಿ.ಶಶಿಧರ್, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಕೂಡಿಗೆ
ನಾಲ್ಕು ಕ್ಷೇತ್ರಗಳ ಮೀಸಲಾತಿ ಬದಲಾವಣೆ
ಜಿಪಂ ಕ್ಷೇತ್ರ ನ.23ರ ಅಧಿಸೂಚನೆ ನ.24ರ ತಿದ್ದುಪಡಿ
ಮಾದಾಪುರ ಸಾಮಾನ್ಯ ಸಾಮಾನ್ಯ (ಮಹಿಳೆ)
ಕೂಡಿಗೆ ಸಾಮಾನ್ಯ (ಮಹಿಳೆ) ಸಾಮಾನ್ಯ
ಗುಡ್ಡೆಹೊಸೂರು ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಅ’ (ಮಹಿಳೆ)
ವಾಲ್ನೂರು-ತ್ಯಾಗತ್ತೂರು ಹಿಂದುಳಿದ ವರ್ಗ ‘ಅ’ (ಮಹಿಳೆ) ಹಿಂದುಳಿದ ವರ್ಗ ‘ಅ’