ರಾಯಚೂರಿನಲ್ಲಿ ಸೇವೆ ಸಲ್ಲಿಸುತ್ತಿರುವ 618 ನಕಲಿ ವೈದ್ಯರು
ಪಟ್ಟಿ ಸಿದ್ಧವಾದರೂ ಕಠಿಣ ಕ್ರಮಕ್ಕೆ ಆರೋಗ್ಯ ಇಲಾಖೆ ಹಿಂದೇಟು!
ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನಕಲಿ ವೈದ್ಯರ ಹಾವಳಿ ಮುಂದುವರಿದಿದ್ದು, ಜನರ ಆರೋಗ್ಯದೊಂದಿಗೆ ಚೆಲ್ಲಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ನಡುವೆ ಜಿಲ್ಲಾಡಳಿತವೇ ಜಿಲ್ಲೆಯ ಐದು ತಾಲೂಕುಗಳಲ್ಲಿ 618 ಮಂದಿ ನಕಲಿ ವೈದ್ಯರನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿರುವುದು ಆತಂಕ
ಮೂಡಿಸಿದೆ. ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಆರೋಗ್ಯ ಇಲಾಖೆಯ ಕ್ರಮಗಳು ದಾಳಿ, ಕ್ಲಿನಿಕ್ ಬಂದ್ ಹಾಗೂ ಎಚ್ಚರಿಕೆಗೆ ಸೀಮಿತವಾಗಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿದ್ದರೂ, ಹಲವು ಕಡೆ ವೈದ್ಯರು, ಸ್ಟಾಫ್ ನರ್ಸ್ ಹಾಗೂ ಇತರೆ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಹಣ ಖರ್ಚು ಮಾಡಿ ಪಟ್ಟಣ ಅಥವಾ ನಗರಗಳ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಾಗದೆ, ಅನಿವಾರ್ಯವಾಗಿ ನಕಲಿ ವೈದ್ಯರ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
ಗ್ರಾಮೀಣ ಭಾಗದ ಹಲವು ಹಳ್ಳಿಗಳಲ್ಲಿ ಕೆಲವರು ಬಾಡಿಗೆ ಮಳಿಗೆಗಳಲ್ಲಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದರೆ, ಇನ್ನು ಕೆಲವರು ತಮ್ಮ ಮನೆಗಳಲ್ಲೇ ಚುಚ್ಚುಮದ್ದು ಹಾಗೂ ಔಷಧಿಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳಿವೆ. ಮತ್ತೊಂದೆಡೆ, ಕೆಲವರು ನಗರ ಹಾಗೂ ಪಟ್ಟಣಗಳಿಂದ ದ್ವಿಚಕ್ರ ವಾಹನಗಳಲ್ಲಿ ಔಷಧಿಗಳ ಬ್ಯಾಗ್ ಗಳನ್ನು ತೆಗೆದುಕೊಂಡು ಹಳ್ಳಿಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪಟ್ಟಿ ಇದ್ದರೂ ಕಠಿಣ ಕ್ರಮವೇಕಿಲ್ಲ?
ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್ಗಳ ಕುರಿತು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ಮತ್ತು ದೂರುಗಳು ಲಭ್ಯವಿದ್ದರೂ, ಆಗಾಗ ದಾಳಿ ನಡೆಸಿ ಕ್ಲಿನಿಕ್ಗಳನ್ನು ಬಂದ್ ಮಾಡುವುದು ಹಾಗೂ ಎಚ್ಚರಿಕೆ ನೀಡುವುದಕ್ಕಷ್ಟೇ ಕ್ರಮ ಸೀಮಿತವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಹಿಂದೆ ದಾಳಿ ನಡೆಸಿ ಬಂದ್ ಮಾಡಲಾಗಿದ್ದ ಹಲವು ಕ್ಲಿನಿಕ್ಗಳು ಬಳಿಕ ಬೇರೆಡೆ ಮತ್ತೆ ಆರಂಭವಾಗಿರುವ ಉದಾಹರಣೆಗಳಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹೀಗಾಗಿ ನಕಲಿ ವೈದ್ಯರ ವಿರುದ್ಧ ಕೇವಲ ಕ್ಲಿನಿಕ್ ಬಂದ್ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ; ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಾಗ ಮಾತ್ರ ಹಾವಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನು ಕೆಲವು ನಕಲಿ ಕ್ಲಿನಿಕ್ಗಳಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಪೂರೈಕೆಯಾಗುವ ಔಷಧಿಗಳು ಕಂಡುಬಂದಿರುವ ಆರೋಪಗಳೂ ಕೇಳಿಬರುತ್ತಿವೆ. ಈ ಕುರಿತು ಆರೋಗ್ಯಇಲಾಖೆ ಸಮಗ್ರ ತನಿಖೆ ನಡೆಸಿ, ಸರಕಾರಿ ಔಷಧಿಗಳು ಅನಧಿಕೃತವಾಗಿ ನಕಲಿ ವೈದ್ಯರ ಕೈಗೆ ಹೇಗೆ ತಲುಪುತ್ತಿವೆ ಎಂಬುದನ್ನು ಪತ್ತೆಹಚ್ಚಬೇಕು ಎಂಬ ಆಗ್ರಹವಿದೆ. ಇಲಾಖೆಯ ಸಿಬ್ಬಂದಿಯೇಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿದ್ದರೆ, ಅವುಗಳ ಸತ್ಯಾಸತ್ಯತೆಯನ್ನೂ ತನಿಖೆ ಮೂಲಕ ಸ್ಪಷ್ಟಪಡಿಸಬೇಕಾಗಿದೆ.
ಜಿಲ್ಲಾಡಳಿತದಿಂದಲೇ 618 ಮಂದಿಯ ಪಟ್ಟಿ
ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಇದೆ ಎಂಬುದು ಹೊಸ ವಿಷಯವಲ್ಲ. ಆದರೆ, ಜಿಲ್ಲಾಡಳಿತವೇ ಅಧಿಕೃತವಾಗಿ ಐದು ತಾಲೂಕುಗಳ ವ್ಯಾಪ್ತಿಯಲ್ಲಿ 618 ಮಂದಿಯನ್ನು ಗುರುತಿಸಿ, ಅವರ ವಿವರಗಳೊಂದಿಗೆ ಪಟ್ಟಿ ಸಿದ್ಧಪಡಿಸಿ ಕ್ರಮಕ್ಕೆ ಸೂಚಿಸಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ.
ಅಕ್ಟೋಬರ್ 30ರಂದು ಹೊರಡಿಸಿರುವ ಪ್ರಕಟಣೆ
ಯಲ್ಲಿ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ 27 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ಐಆರ್ದಾಖಲಿಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಆದರೆ, ಜಿಲ್ಲಾಡಳಿತದ ಮಟ್ಟದಲ್ಲಿ ಪಟ್ಟಿ ಸಿದ್ಧಪಡಿಸಿ ಕ್ರಮಕ್ಕೆ ಸೂಚನೆ ನೀಡಿದ ಬಳಿಕವೂ ಕಠಿಣ ಕಾನೂನು ಕ್ರಮದ ಬದಲು ಎಚ್ಚರಿಕೆ ಹಾಗೂ ಕ್ಲಿನಿಕ್ ಬಂದ್ ಮಾಡಿಸುವಂತಹ ಸರಳ ಕ್ರಮಗಳಿಗೆ ಸೀಮಿತವಾಗಿದ್ದರೆ, ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ತಾಲೂಕುವಾರು ನಕಲಿ ವೈದ್ಯರ ಸಂಖ್ಯೆ
ದೇವದುರ್ಗ ತಾಲೂಕಿನಲ್ಲಿ 134,ರಾಯಚೂರು ತಾಲೂಕಿನಲ್ಲಿ 129, ಲಿಂಗಸುಗೂರು ತಾಲೂಕಿನಲ್ಲಿ 135, ಸಿಂಧನೂರು ತಾಲೂಕಿನಲ್ಲಿ 115 ಹಾಗೂ ಮಾನ್ವಿ ತಾಲೂಕಿನಲ್ಲಿ 105 ನಕಲಿ ವೈದ್ಯರನ್ನು ಗುರುತಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 618 ನಕಲಿ ವೈದ್ಯರನ್ನು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ 618 ನಕಲಿ ವೈದ್ಯರನ್ನು ಗುರುತಿಸಲಾಗಿದೆ. ಮಾನ್ಯತೆ ಪಡೆದ ವೈದ್ಯಕೀಯ ಪದವಿ ಪಡೆಯದವರು, ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುವವರು ಹಾಗೂ ಇಲಾಖೆಯ ನಿಗದಿತ ಮಾನದಂಡಗಳನ್ನು ಪಾಲಿಸದವರನ್ನು ನಕಲಿ ವೈದ್ಯರು ಎಂದು ಗುರುತಿಸಲಾಗಿದೆ. ಮಾನವೀಯತೆಯ ಆಧಾರದ ಮೇಲೆ ಅವರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯ ಬಳಿಕವೂ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
<ಡಾ.ನಂದೀತಾ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ರಾಯಚೂರು.