ಆಲಮೇಲ: ತಾಪಂ ಮತ್ತು ಜಿಪಂ ಚುನಾವಣೆಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಆಲಮೇಲ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಪ್ರಕಟಣೆಯೊಂದಿಗೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಗಳ ಲೆಕ್ಕಾಚಾರ ಬದಲಾಗಿದ್ದು, ಹಳ್ಳಿ ಕಟ್ಟೆಗಳಲ್ಲಿ ಚುನಾವಣಾ ಚರ್ಚೆಗಳು ಕಾವೇರಿವೆ.

ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ನ.23ರಂದು ಪ್ರಕಟವಾದ ಅಂತಿಮ ಅಧಿಸೂಚನೆಯ ಪ್ರಕಾರ, ಆಲಮೇಲ ತಾಲೂಕಿನ ಒಟ್ಟು 9 ತಾಪಂ ಕ್ಷೇತ್ರಗಳ ಪೈಕಿ ೫ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ತಾಲೂಕಿನ ವ್ಯಾಪ್ತಿಯ ದೇವಣಗಾಂವ ಮತ್ತು ಬಳಗಾನೂರ ಜಿಪಂ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಹಾಗೂ ಮೋರಟಗಿ ಕ್ಷೇತ್ರ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದೆ.

ಮೀಸಲಾತಿಯಿಂದ ಬದಲಾದ ರಾಜಕೀಯ ಲೆಕ್ಕಾಚಾರ

ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ತಿಂಗಳಿಂದ ಸಿದ್ಧತೆ ನಡೆಸುತ್ತಿದ್ದ ಪುರುಷ ಆಕಾಂಕ್ಷಿಗಳಿಗೆ ಮಹಿಳಾ ಮೀಸಲಾತಿ ಹೊಸ ಸವಾಲಾಗಿದೆ. ದೇವಣಗಾಂವ ಮತ್ತು ಮೋರಟಗಿ ಕ್ಷೇತ್ರಗಳು ಸಾಮಾನ್ಯ ಮಹಿಳೆ, ಮಲಘಾಣ ಹಿಂದುಳಿದ ವರ್ಗ ‘ಅ’ ಮಹಿಳೆ, ಕಕ್ಕಳಮೇಲಿ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಕುಮಸಗಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿವೆ.

ಮಹಿಳಾ ಮೀಸಲಾತಿಯಿಂದ ಸ್ವತಃ ಸ್ಪರ್ಧಿಸಲು ಸಾಧ್ಯವಾಗದ ಪುರುಷ ಆಕಾಂಕ್ಷಿಗಳು ತಮ್ಮ ಕುಟುಂಬದ ಮಹಿಳಾ ಸದಸ್ಯರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ. ಪತ್ನಿ, ಸೊಸೆ ಸೇರಿದಂತೆ ಕುಟುಂಬದ ಮಹಿಳೆಯರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನು ಬಳಗಾನೂರ, ಕೋರಹಳ್ಳಿ ಮತ್ತು ಬಮ್ಮನಹಳ್ಳಿ ತಾಪಂ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷಗಳ ನಡುವೆ ಪೈಪೋಟಿ ಹೆಚ್ಚುವ ಸಾಧ್ಯತೆಯಿದೆ. ಕಡಣಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಆ ಸಮುದಾಯದ ಆಕಾಂಕ್ಷಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆತಿದೆ.

ದೇವಣಗಾಂವ ಮತ್ತು ಬಳಗಾನೂರ ಜಿಪಂ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಈ ಕ್ಷೇತ್ರಗಳಲ್ಲಿಯೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುವ ನಿರೀಕ್ಷೆಯಿದೆ.

ಮೂರೂ ಪಕ್ಷಗಳ ಅಧ್ಯಕ್ಷರ ಗೆಲುವಿನ ವಿಶ್ವಾಸ: ಮೀಸಲಾತಿ ಪ್ರಕಟಣೆಯ ಬೆನ್ನಲ್ಲೇ ತಾಲೂಕಿನ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಮುಂಬರುವ ಚುನಾವಣೆಯಲ್ಲಿ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲಘನಿ ಎಂ.ದೇವರಮನಿ

contributor