×
Ad

11 ತಿಂಗಳಲ್ಲಿ 26,436 ಬಾಲ ಗರ್ಭಿಣಿಯರು ಪತ್ತೆ

Update: 2025-08-01 12:53 IST

ಬೆಂಗಳೂರು: ಅಂಗಳದಲ್ಲಿ ಆಟವಾಡಿಕೊಂಡು ಇರಬೇಕಾದ ಮಕ್ಕಳೇ ಈಗ ಮಕ್ಕಳನ್ನು ಹಡೆದು ಆಟವಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಇದೊಂದು ಕಳವಳಕಾರಿ ಬೆಳವಣಿಗೆ. ಬಾಲ್ಯವಿವಾಹದ ಪಿಡುಗನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಪರಿಣಾಮ, 2024ರ ಎಪ್ರಿಲ್‌ನಿಂದ 2025ರ ಫೆಬ್ರವರಿ ನಡುವೆ ಕೇವಲ 11 ತಿಂಗಳಲ್ಲಿ ರಾಜ್ಯದಲ್ಲಿ 26,436 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ಆತಂಕಕಾರಿ ವಿಷಯವಾಗಿದೆ.

ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ(ಆರ್‌ಸಿಎಚ್)ಯ ಮಾಹಿತಿ ಪ್ರಕಾರ, ಬೆಂಗಳೂರು ನಗರವೊಂದರಲ್ಲೇ 2,723 ಬಾಲ ಗರ್ಭಿಣಿಯರು ಕಂಡು ಬಂದಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣಗಳಿರುವ ಜಿಲ್ಲೆಯಾಗಿದೆ. ಎರಡನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆಯಿದ್ದು, 2,622 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ವಿಜಯಪುರದಲ್ಲಿ 1,919 ಹಾಗೂ ರಾಯಚೂರಿನಲ್ಲಿ 1,648 ಪ್ರಕರಣಗಳು ವರದಿಯಾಗಿವೆ. ಇನ್ನು ಅತೀ ಕಡಿಮೆ ಇರುವುದು ಉಡುಪಿ ಜಿಲ್ಲೆಯಾಗಿದ್ದು, ಇಲ್ಲಿ ಕೇವಲ 72 ಪ್ರಕರಣಗಳಿವೆ. ಒಟ್ಟಾರೆ ರಾಜ್ಯದಲ್ಲಿ 26,436 ಬಾಲ ಗರ್ಭಿಣಿಯರ ಪ್ರಕರಣಗಳು ಬೆಳಕಿಗೆ ಬಂದಿವೆ.

14-15 ವರ್ಷದೊಳಗಿನ 89 ಬಾಲಕಿಯರು, 15-16 ವರ್ಷದೊಳಗಿನ 253 ಬಾಲಕಿಯರು, 16-17 ವರ್ಷದೊಳಗಿನ 661 ಬಾಲಕಿಯರು, 17-18 ವರ್ಷದೊಳಗಿನ 3,252 ಬಾಲಕಿಯರು, 18-19 ವರ್ಷದೊಳಗಿನ 22,181 ಬಾಲಕಿಯರು ಗರ್ಭ ಧರಿಸಿದ್ದಾರೆಂದು ಆರ್‌ಸಿಎಚ್ ಆತಂಕ ವ್ಯಕ್ತಪಡಿಸಿದೆ.

ಕುಟುಂಬದ ಸದಸ್ಯರ ಒತ್ತಡ, ಏಕ ಪೋಷಕತ್ವ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಂದ 2,920 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ಶಾಲೆಯಿಂದ ಹೊರಗುಳಿಯುವುದು, ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ 716 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ 2,033 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ತಂದೆ ಅಥವಾ ತಾಯಿ ಮಾನಸಿಕ ಅಸ್ವಸ್ಥತೆ, ವಿಧವೆ ತಾಯಿ, ಪೋಷಕರ ತೀವ್ರ ಅನಾರೋಗ್ಯದ ಕಾರಣಕ್ಕೆ ಹಲವರು ಬಾಲ್ಯ ವಿವಾಹಕ್ಕೆ ಒಳಗಾಗಿ ಬಾಲ ಗರ್ಭಿಣಿಯಾಗಿದ್ದಾರೆ ಎಂದು ಆರ್‌ಸಿಎಚ್ ತಿಳಿಸಿದೆ.

ಬಾಲ್ಯವಿವಾಹ ತಡೆಯುವ ದಿಸೆಯಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿಯೇ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಸರಕಾರ ಈ ಅನಿಷ್ಠ ಪಿಡುಗನ್ನು ತಡೆಗಟ್ಟಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೀಗಿದ್ದರೂ ರಾಜ್ಯದಲ್ಲಿ ಬಾಲ್ಯವಿವಾಹಗಳು ಕ್ಷೀಣಿಸಿಲ್ಲ ಎಂಬುದಕ್ಕೆ ಇಷ್ಟೊಂದು ಬಾಲಕಿಯರು ಗರ್ಭಿಣಿಯರಾಗಿರುವುದೇ ಸಾಕ್ಷಿಯಾಗಿದೆ.

ಇನ್ನು ಬಾಲ ಗರ್ಭಿಣಿಯರಿಗೆ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಕೂಡಾ ಸಿಗುತ್ತಿಲ್ಲ. ಅವರಿಗೆ ಸೂಕ್ತ ರೀತಿಯಲ್ಲಿ ಆರೈಕೆಯನ್ನೂ ಮಾಡಲಾಗುತ್ತಿಲ್ಲ. ಮಗು ಜನಿಸಿದ ಬಳಿಕ ತಾಯಿ, ಮಗು ಎರಡಕ್ಕೂ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ಇನ್ನು ಬಹುತೇಕ ಸಂದರ್ಭಗಳಲ್ಲಿ ಗರ್ಭಪಾತ ಆಗುತ್ತಿದೆ. ಈ ವೇಳೆ ಕೂಡಾ ಬಾಲ ಬಾಣಂತಿಯರು ಮಾನಸಿಕ ಹಾಗೂ ದೈಹಿಕ ಆಘಾತಕ್ಕೆ ತುತ್ತಾಗುತ್ತಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವೈದ್ಯರು.

ಭ್ರೂಣ ಹತ್ಯೆ-ಮಾರಾಟ ದಂಧೆಗೂ ತಿರುಗಿದ ಪ್ರಕರಣಗಳು

ಇದರ ನಡುವೆ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚಾಗಿ ಭ್ರೂಣ ಹತ್ಯೆ ಹಾಗೂ ಮಗು ಮಾರಾಟ ದಂಧೆಗಳೆಡೆಗೂ ತಿರುಗಿರುವ ಸನ್ನಿವೇಶಗಳು ಬಯಲಿಗೆ ಬಂದಿವೆ. ಒಂದೆಡೆ ಪೋಷಕರು ತಮ್ಮ ಮಕ್ಕಳು ಗರ್ಭಿಣಿಯಾಗಿದ್ದಾರೆಂದು ತಿಳಿದು ಸಮಾಜದಲ್ಲಿ ಮರ್ಯಾದೆಗೆ ಅಂಜಿ ವೈದ್ಯರಿಗೆ ಸಾವಿರಾರು ರೂ. ಲಂಚ ಕೊಟ್ಟು ಗರ್ಭಪಾತ ಮಾಡಿಸುತ್ತಾರೆ. ಮತ್ತೊಂದೆಡೆ ಗರ್ಭಿಣಿ ಬಾಲಕಿಯರನ್ನು ಮನವೊಲಿಸಿ 9 ತಿಂಗಳವರೆಗೂ ಸಲಹಿ ನಂತರ 1.50 ಲಕ್ಷದಿಂದ 3 ಲಕ್ಷ ರೂ.ವರೆಗೂ ಮಗುವನ್ನು ಮಾರಾಟ ಮಾಡುವ ಘಟನೆಗಳು ಕಂಡುಬಂದಿವೆ ಎಂಬದು ಕೆಲವರ ಆತಂಕವಾಗಿದೆ.

ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಬಹುತೇಕ ಮಕ್ಕಳು ಪ್ರೌಢಶಾಲಾ, ಪದವಿ ಪೂರ್ವ ಹಂತದಲ್ಲೇ ಲೈಂಗಿಕ ಸೆಳೆತಕ್ಕೆ ಒಳಗಾಗುತ್ತಿದ್ದಾರೆ. ಪೋಷಕರ ನಿರ್ಲಕ್ಷ್ಯವೂ ಇದಕ್ಕೆ ಪ್ರಮುಖ ಕಾರಣ. ಬಾಲ ಗರ್ಭಿಣಿಯರ ಹೆಚ್ಚಳಕ್ಕೆ ಬಾಲ್ಯ ವಿವಾಹ ಹಾಗೂ ಲೈಂಗಿಕ ದೌರ್ಜನ್ಯಗಳು ಕೂಡ ಪಾತ್ರವಹಿಸುತ್ತವೆ. ಇವುಗಳು ಕ್ಷೀಣಿಸಬೇಕಾದರೆ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಜಿಲ್ಲಾ, ತಾಲೂಕು ಮಟ್ಟದಲ್ಲಿ ಕೆಲಸಮಾಡಬೇಕು. ವ್ಯಾಪಕವಾಗಿ ಅರಿವು, ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಸದರಿ ಪ್ರಕರಣಗಳನ್ನು ಪೊಕ್ಸೊ ಕಾಯ್ದೆಯಡಿ ಕಡ್ಡಾಯವಾಗಿ ದಾಖಲಿಸಬೇಕು.

-ಡಾ.ಕೆ.ಟಿ.ತಿಪ್ಪೇಸ್ವಾಮಿ, ಸದಸ್ಯರು ,ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News