ಆಕಾಶವಾಣಿಗೆ ಬೇಕಾಗಿದೆ ನೈಜ ಸ್ವಾಯತ್ತೆ
ಆಕಾಶವಾಣಿ ಇಂದಿಗೂ ಸಾಕಷ್ಟು ದೊಡ್ಡದಾದ ಶ್ರೋತೃ ವರ್ಗವನ್ನು ಉಳಿಸಿ ಕೊಂಡಿದೆ. ನಗರ ಪ್ರದೇಶಗಳಲ್ಲಿ ಆಕಾಶವಾಣಿ ಕೇಳುಗರ ಸಂಖ್ಯೆ ಕೊಂಚ ಕಡಿಮೆಯಾಗಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಅದರ ಜನಪ್ರಿಯತೆ ಹೆಚ್ಚೇನೂ ತಗ್ಗಿದಂತಿಲ್ಲ. ಸಾಕಷ್ಟು ಮಂದಿ ತಮ್ಮ ದಿನಚರಿ ಯನ್ನು ಆಕಾಶವಾಣಿಯನ್ನು ಆಲಿಸುತ್ತಾ ಪ್ರಾರಂಭಿಸುವವರೇ ಆಗಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವಂತಹ ಶಿಕ್ಷಣ, ಆರೋಗ್ಯ, ವಿಜ್ಞಾನ, ಕೃಷಿ, ಸಾಹಿತ್ಯ ಇತ್ಯಾದಿ ಕುರಿತಾದ ಕಾರ್ಯಕ್ರಮಗಳು ತುಂಬಾ ಉಪಯುಕ್ತ ವಾಗಿರುತ್ತವೆ. ಆಕಾಶವಾಣಿಯಲ್ಲಿ ನಿಯಮಿತವಾಗಿ ಪ್ರಸಾರವಾಗುವಂತಹ ವಾರ್ತೆಗಳಂತೂ ಮಹತ್ವ ಪೂರ್ಣವಾದುದು. ಇದು ಸಮಕಾಲೀನ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕೇಳುಗರ ಮನದಂಗಳಕ್ಕೆ ತಂದು ನಿಲ್ಲಿಸುತ್ತದೆ.
ಆಕಾಶವಾಣಿಯ ಕಾರ್ಯನಿರ್ವಹಣೆಯಲ್ಲಿ ತಕರಾರು ಅಥವಾ ಆಕ್ಷೇಪಾರ್ಹ ಅಂಶಗಳಿಗೆ ಎಡೆ ಮಾಡಿ ಕೊಡುವಂತಹದ್ದೇನಾದರೂ ಇದ್ದರೆ ಅದು ವಾರ್ತೆಗಳು ಮಾತ್ರ. ಸ್ಥಳೀಯ ಭಾಷೆ, ಇಂಗ್ಲಿಷ್, ಹಿಂದಿಗಳಲ್ಲಿ ಬಿತ್ತರಗೊಳ್ಳುವ ವಾರ್ತೆಗಳು ಸಾಮಾನ್ಯವಾಗಿ ವಸ್ತುನಿಷ್ಠವಾಗಿರುತ್ತವೆ. ಆದರೆ ರಾಜಕಾರಣ ಅಥವಾ ಕೇಂದ್ರ ಸರಕಾರದ ಹಿತಾಸಕ್ತಿಯ ವಿರುದ್ಧವಾಗಿರುವ ವಿಚಾರಗಳಿಗೆ ಬಂದಾಗ ಮಾತ್ರ ಆಕಾಶವಾಣಿಯು ವಸ್ತುನಿಷ್ಠತೆ ಹಾಗೂ ನ್ಯಾಯವಂತಿಕೆ ಪ್ರಶ್ನಾರ್ಥವಾಗಿ ಬಿಡುತ್ತದೆ. ಅದು ಏಕಪಕ್ಷೀಯವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪರವಾಗಿ ನಿಂತು ಬಿಡುತ್ತದೆ. ಹಾಗೆಯೇ ಪ್ರತಿಪಕ್ಷಗಳಿಗೆ ಆಕಾಶವಾಣಿಯಲ್ಲಿ ಹೆಚ್ಚಿನ ಮಹತ್ವ ಕಂಡು ಬರುವುದಿಲ್ಲ. ಕೆಲವೊಮ್ಮೆ ಅವುಗಳನ್ನು ನಕರಾತ್ಮವಾಗಿಯೂ ಬಿಂಬಿಸುವುದಿದೆ. ಆಕಾಶವಾಣಿಯ ಈ ನಿಲುವನ್ನು ಪ್ರತಿಪಕ್ಷಗಳು ದಶಕಗಳ ಹಿಂದೆನೇ ಗುರುತಿಸಿವೆ. ಸುದ್ದಿ ಪ್ರಸಾರಗಳಲ್ಲಿ ವಿರೋಧ ಪಕ್ಷಗಳಿಗೆ ಸಾಕಷ್ಟು ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುದು ತುಂಬಾ ಹಳೆಯ ಟೀಕೆ. ಇದರೊಂದಿಗೆ ಮಹತ್ವದ ಜನಪರ ಚಳವಳಿ, ಹೋರಾಟಗಳನ್ನು ವರದಿಗಾರಿಕೆಯಲ್ಲಿ ಕಡೆಗಣಿಸಿ ಬಿಡುವುದು ಕಂಡು ಬರುತ್ತದೆ. ಇದೇ ಸಮಯದಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಲಿನ ಸರಕಾರದ ವಿರುದ್ಧ ನಡೆಯುವ ಬೆಳವಣಿಗಳಿಗೆ ವಾರ್ತೆಗಳಲ್ಲಿ ಪ್ರಾಮುಖ್ಯತೆಯನ್ನು ನೀಡಲು ಹಿಂಜರಿಯಲಾಗುವುದಿಲ್ಲ. ಸ್ವಾಯತ್ತ ಸಂಸ್ಥೆಯೆನಿಸಿಕೊಂಡಿರುವ ಆಕಾಶವಾಣಿಗೆ ಈ ರೀತಿಯ ದ್ವಂದ್ವ ಧೋರಣೆ ಭೂಷಣವೇ?
ಆಕಾಶವಾಣಿಯ ಈ ಪಕ್ಷಪಾತದ ಧೋರಣೆ ಇಂದಿನದಲ್ಲ. ಹಿಂದಿನಿಂದಲೂ ಇದೇ ಕಾರ್ಯನೀತಿ ಮುಂದುವರಿದು ಕೊಂಡು ಬಂದಿದೆ. ಇಂದಿನ ಪ್ರತಿಪಕ್ಷಗಳೂ ಅಧಿಕಾರದಲ್ಲಿದ್ದಾಗ ಆಕಾಶವಾಣಿಯನ್ನು ಇದೇ ರೀತಿ ಸ್ವತಂತ್ರವಾಗಿ ಕಾರ್ಯಾಚರಿಸಲು ಬಿಟ್ಟಿರಲಿಲ್ಲ. ಹಾಗಾದರೆ ಆಕಾಶವಾಣಿ ಪಡೆದಿರುವ ಸ್ವಾಯತ್ತ ಸ್ಥಾನಮಾನ ಹೆಸರಿಗೆ ಮಾತ್ರವೇ? ಈ ಕುರಿತು ಪರಿಶೀಲಿಸುವ ಮೊದಲು ಇತ್ತೀಚೆಗೆ ನಡೆದಿರುವ ಕೆಲವು ಬೆಳವಣಿಗೆಗಳಲ್ಲಿ ಆಕಾಶವಾಣಿ ತಳೆದಿದ್ದ ನಿಲುವುಗಳು ಮತ್ತು ಅವುಗಳನ್ನು ವಾರ್ತೆಗಳಲ್ಲಿ ಬಿಂಬಿಸಿದ ರೀತಿಯನ್ನು ಉದಾಹರಣೆಯನ್ನಾಗಿ ನೋಡ ಬಹುದು.
ಆಗಸ್ಟ್ 11ರ ಬೆಳಗ್ಗಿನ ಕನ್ನಡ ವಾರ್ತೆಯಲ್ಲಿ ಜಾರ್ಖಂಡ್‌ನ ನೇಮಕಾತಿ ಪರೀಕ್ಷಾ ಅವ್ಯವಹಾರ ಬಗ್ಗೆ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ಅಶ್ರುವಾಯು, ಲಾಠಿ ಪ್ರಯೋಗಿಸಿದರು ಎಂಬ ಸುದ್ದಿಯನ್ನು ಬಿತ್ತರಿಸಲಾಯಿತು. ಇದು ವಸ್ತುನಿಷ್ಠ ವರದಿ. ಇದರಲ್ಲೇನು ವಿಶೇಷ ಎಂಬ ಪ್ರಶ್ನೆ ಸ್ವಾಭಾವಿಕ. ಆದರೆ ವಿಷಯ ಅದಲ್ಲ. ಇದಕ್ಕಿಂತ ಮೊದಲು ಜುಲೈ 20ರಂದು ದಿಲ್ಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ನಡೆಸಿದ ಪ್ರತಿಭಟನಾ ಸಂದರ್ಭದಲ್ಲಿ ಪೊಲೀಸರು ಹಿಂಸಾತ್ಮಕವಾಗಿ ಬಲ ಪ್ರಯೋಗಿಸಿದ ಘಟನೆಯನ್ನು ಆಕಾಶವಾಣಿ ತನ್ನ ವಾರ್ತೆಯಲ್ಲಿ ವರದಿ ಮಾಡದೆ ಜಾಣ ಮೌನ ವಹಿಸಿತ್ತು. ಆರಂಭದ ದಿನಗಳಲ್ಲಿ ಈ ಹೋರಾಟದ ಬಗ್ಗೆ ಚಕಾರವೆತ್ತದೆ ಪ್ರತಿಪಕ್ಷಗಳು ವಿದ್ಯಾರ್ಥಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂಬ ಶಿಕ್ಷಣ ಸಚಿವರ ಹೇಳಿಕೆಯನ್ನು ಮಾತ್ರ ಪ್ರಸಾರ ಮಾಡಿತ್ತು. ಹಾಗೆಯೇ ಪ್ರಾರಂಭದಲ್ಲಿ ಸೋನಂ ವಾಂಗ್ಚುಕ್ ಅವರು 26 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದನ್ನು ವಾರ್ತೆಯಲ್ಲಿ ವರದಿ ಮಾಡಲಿಲ್ಲ. ಕೊನೆಗೆ ವಾಂಗ್ಚುಕ್ ಸಚಿವರಿಬ್ಬರ ಸಮ್ಮುಖದಲ್ಲಿ ಉಪವಾಸ ಅಂತ್ಯಗೊಳಿಸಿದ್ದನ್ನು ವಾರ್ತೆಯಲ್ಲಿ ತಿಳಿಸಿತು. ಇದರಿಂದ ಘಟನೆಗಳ ಕ್ರಮಾನುಗತ ಬೆಳವಣಿಗೆಗಳು ವಾರ್ತೆಗಳ ವ್ಯಾಪ್ತಿಯಲ್ಲಿ ಒಳಗೊಳ್ಳದೆ ಹೋದಂತಾಗಿತ್ತು. ಇಲ್ಲಿ ಜಾರ್ಖಂಡ್ ಘಟನೆಗೆ ನೀಡಿದಂತಹ ಪ್ರಾಮುಖ್ಯತೆ ದಿಲ್ಲಿಯ ಜಂತರ್‌ಮಂತರ್ ಘಟನಾವಳಿಗೆ ನೀಡಲಿಲ್ಲ ಎಂಬುದು ಎದ್ದು ಕಾಣುವಂತಹ ಅಂಶ. ಇವಿಷ್ಟೇ ಅಲ್ಲ. ಜಾರ್ಖಂಡ್ ವಿದ್ಯಾರ್ಥಿ ಹೋರಾಟವನ್ನು ಆಕಾಶವಾಣಿ ಮತ್ತೆ ಮತ್ತೆ ವಾರ್ತೆಯಲ್ಲಿ ವರದಿ ಮಾಡುತ್ತಲೇ ಇತ್ತು. ಕೇಂದ್ರ ಸರಕಾರಕ್ಕೆ ಮುಜುಗರ ಆಗುವಂತಹ ಘಟನೆಗಳನ್ನು ಮರೆಮಾಚಿ ಪ್ರತಿಪಕ್ಷಗಳಿಗೆ ಪ್ರತಿಕೂಲವಾಗ ಬಹುದಾದ ಘಟನೆಗಳನ್ನು ಮಾತ್ರ ವಾರ್ತೆಯಲ್ಲಿ ಬಿತ್ತರಿಸುವುದು ವಸ್ತುನಿಷ್ಠ ವರದಿಗಾರಿಕೆಯೇ? ಇದೆಂತಹ ಧೋರಣೆ?
ಪಶ್ಚಿಮ ಬಂಗಾಳ ಮತ್ತು ಕೇರಳಂ ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದು ಅಲ್ಲಿನ ಸರಕಾರಗಳು ಬದಲಾದವು. ಆಕಾಶವಾಣಿಯು ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡು ಹೊಸ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿರುವುದನ್ನು ಕನ್ನಡ ವಾರ್ತೆಯಲ್ಲಿ ಪ್ರಸಾರ ಮಾಡಿತು. ಸರಿ, ತಪ್ಪೇನಿಲ್ಲ. ಆದರೆ ಅದೇ ಸಂದರ್ಭದಲ್ಲಿ ಕೇರಳಂ ರಾಜ್ಯದಲ್ಲಿ ಅಲ್ಲಿನ ಮುಖ್ಯಮಂತ್ರಿ ಪ್ರಕಟಿಸಿದ ಗ್ಯಾರಂಟಿ ಯೋಜನೆಗಳು ಮತ್ತು ತಮಿಳುನಾಡು ಸರಕಾರ ಪ್ರಕಟಿಸಿರುವ ಹೊಸ ಯೋಜನೆಗಳಿಗೆ ಸಂಬಂಧಿಸಿದ ಸುದ್ದಿಯನ್ನು ವಾರ್ತೆಯಲ್ಲಿ ಬಿತ್ತರಿಸಲೇ ಇಲ್ಲ. ಇವೆಲ್ಲ ಎದ್ದು ಕಾಣುವಂತಹ ಕೆಲವು ಉದಾಹರಣೆಗಳು. ಆಕಾಶವಾಣಿ ವಾರ್ತೆಗಳಲ್ಲಿ ಕೇಂದ್ರದ ಆಡಳಿತ ಪಕ್ಷಕ್ಕೆ ದೊರೆಯುವಂತಹ ಪ್ರಾಮುಖ್ಯತೆ ಪ್ರತಿಪಕ್ಷಗಳಿಗೆ ಸಿಗುವುದೇ ಇಲ್ಲ. ಸಂಸತ್ತಿನ ಅಧಿವೇಶನದ ವರದಿಗಾರಿಕೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳನ್ನು ತಾರತಮ್ಯದಿಂದ ಕಾಣುವಂತಹ ಧೋರಣೆಯೂ ಆಕಾಶವಾಣಿಯ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಿದೆ. ಒಟ್ಟಿನಲ್ಲಿ ಆಕಾಶವಾಣಿ ಕೇಂದ್ರ ಸರಕಾರ ನಿಯಂತ್ರಿತ ಸಂಸ್ಥೆಯಾಗಿಯೇ ಉಳಿದಿದೆ.
ದೇಶದಲ್ಲಿ ಪ್ರಸಾರ ಭಾರತಿ ಕಾಯ್ದೆ 1990ರಲ್ಲಿ ರೂಪುಗೊಂಡಾಗ ಪರಿಸ್ಥಿತಿ ಬದಲಾಗ ಬಹುದೆಂಬ ನಿರೀಕ್ಷೆಯಿತ್ತು. 1997ರಲ್ಲಿ ಪ್ರಸಾರ ಭಾರತಿ ಕಾಯ್ದೆ ಜಾರಿಗೆ ಬಂದು ಆಕಾಶವಾಣಿ ಸ್ವಾಯತ್ತೆಯನ್ನು ಏನೋ ಪಡೆಯಿತು. ಪ್ರಸಾರ ಭಾರತಿ ಮಂಡಳಿಯ ಅಧೀನದಲ್ಲಿರುವ ಈ ಸ್ವಾಯತ್ತೆಯೆಂಬುದು ಆಕಾಶವಾಣಿಯನ್ನು ನಿಜವಾದ ಅರ್ಥದಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷ ನೀತಿಯ ಸಂಸ್ಥೆಯನ್ನಾಗಿ ಪರಿವರ್ತಿಸುವಲ್ಲಿ ಸೋತಿತು ಎಂದು ಅರ್ಥವಾಗಲು ತಡವಾಗಲಿಲ್ಲ. ಆಕಾಶವಾಣಿ ಆರ್ಥಿಕ ಸಂಪನ್ಮೂಲ ಮತ್ತು ಸಿಬ್ಬಂದಿ ನೇಮಕಾತಿಯಲ್ಲಿ ಸಂಪೂರ್ಣವಾಗಿ ಕೇಂದ್ರ ಸರಕಾರವನ್ನು ಅವಲಂಬಿಸಿದೆ. ಇರಲಿ, ಸಂಪನ್ಮೂಲಕ್ಕಾಗಿ ಸರಕಾರವನ್ನು ಅವಲಂಬಿಸದೆ ಆಕಾಶವಾಣಿಗೆ ಬೇರೆ ದಾರಿಯಿಲ್ಲ. ಆದರೆ ಆಕಾಶವಾಣಿನ್ನು ಒಂದು ಸ್ವತಂತ್ರ ಧೋರಣೆಯ ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಲು ಕೇಂದ್ರದಲ್ಲಿ ಆಡಳಿತ ನಡೆಸಿದಂತಹ ಪಕ್ಷಗಳು ಮನಸ್ಸು ಮಾಡ ಬಹುದಿತ್ತು. ಈ ರೀತಿ ಮಾಡಿದ್ದರೆ ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ತತ್ವಗಳಾಗಿರುವ ಸತ್ಯ, ನ್ಯಾಯ ಮತ್ತು ನಿಷ್ಪಕ್ಷ ನೀತಿಗಳನ್ನು ಆಕಾಶವಾಣಿಯ ವಾರ್ತೆಗಳಲ್ಲಿ ಹಾಗೂ ಇನ್ನಿತರ ಸಂಬಂಧ ಪಟ್ಟಂತಹ ಕಾರ್ಯಕ್ರಮಗಳಲ್ಲಿ ಕಾಣ ಬಹುದಾಗಿತ್ತು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡೂ ಮುಖ್ಯ. ಪ್ರತಿ ಪಕ್ಷಗಳೆಂದರೆ ಶತ್ರು ಪಕ್ಷಗಳಲ್ಲ. ಅವುಗಳು ವ್ಯವಸ್ಥೆಯ ಭಾಗ. ಇದೇ ಕಾರಣಕ್ಕಾಗಿ ಪ್ರತಿಪಕ್ಷವನ್ನು ಛಾಯಾ ಸರಕಾರವೆಂದು ಕರೆಯಲಾಗು ತ್ತದೆ. ಆಡಳಿತ ಪಕ್ಷದ ನೀತಿ-ನಿರ್ಧಾರಗಳು, ಕಾರ್ಯವೈಖರಿಗಳನ್ನು ಎಚ್ಚರದಿಂದ ಅವಲೋಕಿಸಿ ಜನರ ಹಿತದೃಷ್ಟಿಯಿಂದ ಪ್ರತಿಕ್ರಿಯಿಸುವುದು ಪ್ರತಿಪಕ್ಷಗಳ ಹೊಣೆಗಾರಿಕೆ. ಭಿನ್ನಾಭಿಪ್ರಾಯಗಳು, ರಚನಾತ್ಮಕ ಟೀಕೆಗಳು ಪ್ರಜಾಪ್ರಭುತ್ವದ ಸಹಜ ಲಕ್ಷಣಗಳೇ ಹೊರತು ಅವೆಲ್ಲ ಅನಪೇಕ್ಷಿತ ವಿಚಾರವೇನಲ್ಲ. ಚರ್ಚೆ, ಸಂವಾದಗಳು ವಿಫಲವಾದಾಗ ಪ್ರತಿಪಕ್ಷಗಳು ಪ್ರತಿಭಟನೆ, ಹೋರಾಟಗಳನ್ನು ಮಾಡುವುದೂ ಸ್ವಾಭಾವಿಕ. ಪ್ರಜಾತಂತ್ರವು ಸಮತೋಲನ ಕಾಯ್ದುಕೊಂಡು ಯಶಸ್ವಿಯೆನಿಸಿಕೊಳ್ಳಬೇಕಾದರೆ ಇವೆಲ್ಲ ಅಗತ್ಯ. ಈ ಹಿನ್ನೆಲೆಯಲ್ಲಿ ಆಕಾಶವಾಣಿ ವಾರ್ತೆಗಳಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳಿಗೆ ಸಮಾನ ಸ್ಥಾನಮಾನ ಮತ್ತು ಅವಕಾಶ ಅಗತ್ಯ.
ಸಾರ್ವಜನಿಕ ಸೇವೆಯ ಪ್ರಸಾರ ಸಂಸ್ಥೆಯಾಗಿ ಮಾಹಿತಿ ಮತ್ತು ಸುದ್ದಿಯನ್ನು ಜನರಿಗೆ ತಲುಪಿಸುವುದು ಆಕಾಶವಾಣಿಯ ಗುರಿ. ಪತ್ರಿಕೆಗಳ ಮಾದರಿಯಲ್ಲಿ ಕಟು ಟೀಕೆ, ವಿಡಂಬನೆ, ವಿಶ್ಲೇಷಣೆಯನ್ನು ಯಾರೂ ಆಕಾಶವಾಣಿಯಿಂದ ನಿರೀಕ್ಷಿಸಲಾರರು. ಆದರೆ ಯಾವುದೇ ಸುದ್ದಿಯನ್ನು ತಾರತಮ್ಯ, ಪಕ್ಷ ಭೇದಗಳಿಗೆ ಆಸ್ಪದವಿಲ್ಲದೆ ಕೇವಲ ಸುದ್ದಿಯಾಗಿ ಪ್ರಸಾರ ಮಾಡಲು ಯಾಕೆ ಸಾಧ್ಯವಿಲ್ಲ?. ಆಕಾಶವಾಣಿಗೆ ನೈಜ ಸ್ವಾಯತ್ತೆ ದೊರೆಯ ಬೇಕಾದರೆ ಅದರ ಸಂಪಾದಕೀಯ ಮಂಡಳಿಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು. ಈ ನಿಟ್ಟಿನಲ್ಲಿ ಪ್ರಸಾರ ಭಾರತಿ ಕಾಯ್ದೆಗೆ ತಿದ್ದುಪಡಿ ಅಗತ್ಯವೆಂದೆನಿಸುತ್ತದೆ.