ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಬೆಂ.ನಗರ ಜಿಲ್ಲೆಯ ವ್ಯಾಪ್ತಿಯ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿಗೆ ಆಹಾರ ಸಾಮಗ್ರಿ ಪೂರೈಸಲು ಎರಡು ವರ್ಷಗಳ ಅವಧಿಗೆ 41.68ಕೋಟಿ ರೂ. ಗೂ ಅಧಿಕ ಮೊತ್ತದ ಟೆಂಡರ್ ನೀಡಲಾಗಿದೆ. ಆದರೆ, ಕೋಟ್ಯಂತರ ರೂ. ಮೌಲ್ಯದ ಈ ಟೆಂಡರ್‌ನಲ್ಲಿ ದಾಖಲೆಗಳಲ್ಲಿ ನಮೂದಿಸಿರುವ ಸಾಮಗ್ರಿಯ ಬದಲಿಗೆ ಬೇರೆ ಸಾಮಗ್ರಿ ಪೂರೈಕೆಯಾಗುತ್ತಿದೆ ಎಂಬ ದೂರುಗಳು ಹಲವು ಹಾಸ್ಟೆಲ್ ವಿದ್ಯಾರ್ಥಿಗಳಿಂದ ಕೇಳಿಬಂದಿವೆ.
ಇದರಲ್ಲಿ ಪ್ರಮುಖವಾಗಿ ಅಡುಗೆ ಎಣ್ಣೆ ಮತ್ತು ರಾಗಿ ಪೂರೈಕೆಯೇ ಪ್ರಶ್ನೆಯಾಗಿ ಪರಿಣಮಿಸಿದೆ. ಟೆಂಡರ್ ದಾಖಲೆಯ ಆಹಾರ ಸಾಮಗ್ರಿಗಳ ಪಟ್ಟಿಯಲ್ಲಿ ಅಡುಗೆ ಎಣ್ಣೆಗೆ ‘ಸನ್‌ಪ್ಯೂರ್/ಗೋಲ್ಡ್ ವಿನ್ನರ್/ಜೆಮಿನಿ’ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಅಂದರೆ ಈ ಮೂರು ಬ್ರ್ಯಾಂಡ್‌ಗಳಲ್ಲಿ ಒಂದನ್ನು ಪೂರೈಸಬೇಕೆಂಬುದು ಟೆಂಡರ್ ದಾಖಲೆಯಿಂದ ಸ್ಪಷ್ಟವಾಗುತ್ತದೆ. ಆದರೆ, ಈ ಮೂರು ಬ್ರ್ಯಾಂಡ್‌ಗಳ ಬದಲಿಗೆ ‘ಫಿಯಾನ’ ಬ್ರ್ಯಾಂಡ್‌ನ ಅಡುಗೆ ಎಣ್ಣೆ ಪೂರೈಸಲಾಗುತ್ತಿದೆ ಎಂದು ಹಲವು ಹಾಸ್ಟೆಲ್‌ಗಳ ವಾರ್ಡನ್‌ಗಳು ದೂರಿದ್ದಾರೆ.
ಟೆಂಡರ್‌ನಲ್ಲಿ ನಿರ್ದಿಷ್ಟ ಬ್ರ್ಯಾಂಡ್‌ಗಳನ್ನು ನಮೂದಿಸಿರುವುದರ ಉದ್ದೇಶವೇ ಪೂರೈಕೆಯಾಗುವ ಆಹಾರ ಸಾಮಗ್ರಿಯ ಗುಣಮಟ್ಟವನ್ನು ಖಚಿತಪಡಿಸುವುದಾಗಿದೆ. ಹೀಗಿರುವಾಗ ಟೆಂಡರ್‌ನಲ್ಲಿ ಉಲ್ಲೇಖಿಸದ ಬ್ರ್ಯಾಂಡ್ ಪೂರೈಕೆಯಾಗುತ್ತಿದ್ದರೆ, ಅದಕ್ಕೆ ಇಲಾಖೆಯ ಅನುಮತಿ ಇದೆಯೇ? ಇದ್ದರೆ ಯಾವ ಆದೇಶದ ಆಧಾರದಲ್ಲಿದೆ? ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಾಗಿದೆ.
70 ಹಾಸ್ಟೆಲ್‌ಗಳಿಗೆ ಪೂರೈಕೆ: ಇದು ಒಂದೆರಡು ಹಾಸ್ಟೆಲ್‌ಗಳಿಗೆ ಸೀಮಿತವಾದ ಟೆಂಡರ್ ಅಲ್ಲ. ಟೆಂಡರ್ ದಾಖಲೆ ಪ್ರಕಾರ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 13ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು, 54 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹಾಗೂ 3 ವಸತಿ ಶಾಲೆಗಳು ಸೇರಿ ಒಟ್ಟು 70 ಸಂಸ್ಥೆಗಳಿಗೆ ಆಹಾರ ಸಾಮಗ್ರಿ ಪೂರೈಸಲಾಗುತ್ತಿದೆ. ಒಟ್ಟು 9,850 ವಿದ್ಯಾರ್ಥಿಗಳಿರುವುದಾಗಿ ಟೆಂಡರ್ ದಾಖಲೆಯಲ್ಲಿ ನಮೂದಿಸಲಾಗಿದೆ. ಎರಡು ವರ್ಷಗಳ ಅವಧಿಗೆ ಅಂದಾಜು ವೆಚ್ಚ 41,68,82,500 ರೂ. ಎಂದು ದಾಖಲಾಗಿದೆ. ಹೀಗಾಗಿ, ಪೂರೈಕೆಯಲ್ಲಿ ಆಗುತ್ತಿರುವ ಎನ್ನಲಾದ ಲೋಪಗಳು ಒಂದು ಸಣ್ಣ ಆಡಳಿತಾತ್ಮಕ ವ್ಯತ್ಯಾಸವಾಗಿ ಪರಿಗಣಿಸಲಾಗದು. ಸಾವಿ ರಾರು ವಿದ್ಯಾರ್ಥಿಗಳ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ವಿಚಾ ರವಾಗಿದೆ.
ಗುಣಮಟ್ಟದ ಷರ ತ್ತುಗಳಿವೆ: ಟೆಂಡರ್ ದಾಖ ಲೆಯಲ್ಲಿಯೇ ಆಹಾರ ಸಾಮಗ್ರಿಗಳ ಗುಣಮಟ್ಟದ ಕುರಿತು ಇಲಾಖಾ ಅಧಿಕಾರಿಗಳು ಅಥವಾ ಮೂರನೇ ವ್ಯಕ್ತಿಯಿಂದ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಯಶಸ್ವಿ ಟೆಂಡರ್‌ದಾರರು ಆಹಾರ ಸಾಮಗ್ರಿಗಳ ಗುಣಮಟ್ಟ ಮತ್ತು ವಾರಂಟಿ ನೀಡಬೇಕು ಎಂಬ ಷರತ್ತೂ ಇದೆ.
ಹಾಗಿದ್ದರೆ, ಟೆಂಡರ್‌ನಲ್ಲಿ ನಮೂದಿಸಿದ ಎಣ್ಣೆಯ ಬದಲಿಗೆ ‘ಫಿಯಾನ’ ಪೂರೈಕೆಯಾಗುತ್ತಿದೆ ಎಂಬ ದೂರು ಇಲಾಖೆಯ ಗಮನಕ್ಕೆ ಬಂದಿದೆಯೇ? ಶುದ್ಧೀಕರಿಸಿದ ರಾಗಿ ಪೂರೈಕೆಯಾಗುತ್ತಿದೆಯೇ? ಪ್ರತಿಯೊಂದು ಹಾಸ್ಟೆಲ್‌ಗೆ ಪೂರೈಕೆಯಾಗುವ ಸಾಮಗ್ರಿಯ ಮಾದರಿ ಮತ್ತು ಗುಣಮಟ್ಟ ಪರೀಕ್ಷೆ ನಡೆಯುತ್ತಿದೆಯೇ? ಎಂಬುದನ್ನು ಇಲಾಖೆ ಖಚಿತಪಡಿಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ದುರ್ಗೇಶ್ ಒತ್ತಾಯಿಸಿದ್ದಾರೆ.
ಆಹಾರ ಸಾಮಗ್ರಿಗಳ ಪೂರೈಕೆಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಟೆಂಡರ್ ಅಂತಿಮಗೊಂಡ ನಂತರ ಪೂರೈಕೆಯಾಗುವ ಸಾಮಗ್ರಿಗಳ ಮೇಲೂ ಅಷ್ಟೇ ಕಟ್ಟುನಿಟ್ಟಿನ ನಿಗಾ ಇದೆಯೇ? ಎಂಬುದು ಪ್ರಮುಖ ಪ್ರಶ್ನೆ.
ವಾರ್ಡನ್‌ಗಳು ನೀಡಿರುವ ದೂರುಗಳು ನಿಜವೇ ಅಥವಾ ತಪ್ಪುಗ್ರಹಿಕೆಯೇ ಎಂಬುದನ್ನು ಇಲಾಖೆ ಪರಿಶೀಲಿಸಬಹುದು. ಆದರೆ ದೂರುಗಳು ಹಲವು ಹಾಸ್ಟೆಲ್‌ಗಳಿಂದ ಬರುತ್ತಿದ್ದರೆ, ಅವುಗಳನ್ನು ನಿರ್ಲಕ್ಷಿಸುವ ಬದಲು ಪ್ರತಿ ಹಾಸ್ಟೆಲ್‌ನ ಪೂರೈಕೆ ದಾಖಲೆ, ಬಿಲ್, ಸ್ಟಾಕ್ ರಿಜಿಸ್ಟರ್, ಪೂರೈಕೆ ಚೀಟಿ ಹಾಗೂ ಆಹಾರ ಸಾಮಗ್ರಿಗಳ ಮಾದರಿಗಳನ್ನು ಪರಿಶೀಲಿಸುವ ಅಗತ್ಯವಿದೆ.
ಕರೆ ಸ್ವೀಕರಿಸದ ಅಧಿಕಾರಿಗಳು: ಈ ಅವ್ಯವಹಾರ ಪ್ರಕರಣದ ಕುರಿತು ಸ್ಪಷ್ಟನೆ ಕೋರಿ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲೆಯ ಜಂಟಿ ನಿರ್ದೇಶಕರಿಗೆ ‘ವಾರ್ತಾಭಾರತಿ’ ಪತ್ರಿಕೆ ಸಂಪರ್ಕಿಸಲು ಪ್ರಯತ್ನಿಸಿದರೂ, ಅಧಿಕಾರಿಗಳು ಕರೆಯನ್ನು ಸ್ವೀಕರಿಸಿರುವುದಿಲ್ಲ.
ಶುದ್ಧೀಕರಿಸದ ರಾಗಿ ಪೂರೈಕೆ
ಇದೇ ಟೆಂಡರ್‌ನಲ್ಲಿ, ‘ರಾಗಿ(ಶುದ್ಧೀಕರಿಸಿದ)’ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಅಂದರೆ ಶುದ್ಧೀಕರಿಸಿದ ರಾಗಿಯನ್ನು ಪೂರೈಸಬೇಕೆಂಬ ಷರತ್ತು ದಾಖಲೆಯಲ್ಲಿದೆ. ಆದರೆ, ‘ಶುದ್ಧೀಕರಿಸಿದ ರಾಗಿ’ಯನ್ನು ಪೂರೈಕೆ ಮಾಡುತ್ತಿಲ್ಲ. ಸಾಕಷ್ಟು ಬಾರಿ ದಾಸ್ತಾನು ಮಳಿಗೆಗೆ ಬಂದಂತಹ ಶುದ್ಧೀಕರಿಸದ ರಾಗಿಯನ್ನು ಹಿಂತಿರುಗಿ ಕಳಿಸಲಾಗಿದೆ ಎಂದು ವಾರ್ಡನ್ ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಟೆಂಡರ್‌ನಲ್ಲಿ ‘ಸನ್‌ಪ್ಯೂರ್/ಗೋಲ್ಡ್ ವಿನ್ನರ್/ಜೆಮಿನಿ’ ಎಂದು ನಮೂದಿಸಿದ್ದರೂ, ಬೇರೆ ಬ್ರ್ಯಾಂಡ್‌ನ ಎಣ್ಣೆ ಪೂರೈಕೆ ಮಾಡಲು ಅನುಮತಿ ನೀಡಿದವರು ಯಾರು? 70 ಹಾಸ್ಟೆಲ್‌ಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ನಿಯಮಿತವಾಗಿ ಯಾರು ಪರಿಶೀಲಿಸುತ್ತಿದ್ದಾರೆ? ಟೆಂಡರ್ ಷರತ್ತುಗಳಿಗೆ ವಿರುದ್ಧವಾದ ಸಾಮಗ್ರಿ ಪೂರೈಕೆಯಾಗಿದ್ದರೆ, ಅಂತಹ ಸಾಮಗ್ರಿಗಳಿಗೆ ಬಿಲ್ ಪಾವತಿಸಲಾಗಿದೆಯೇ? ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.
-ದುರ್ಗೇಶ್ ರಾಜ್ಯ ಸಂಚಾಲಕ,
ಕರ್ನಾಟಕ ವಿದ್ಯಾರ್ಥಿ ಸಂಘಟನೆ
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ಮಕ್ಕಳು ಎಲ್ಲರೂ ದುರ್ಬಲ ವರ್ಗಗಳಿಂದ ಬಂದವರು. ಅವರ ಆಹಾರದಲ್ಲಿ ಗುಣಮಟ್ಟದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ. ಜಂಟಿ ನಿರ್ದೇಶಕರನ್ನೊಳಗೊಂಡ ಸಭೆಯಲ್ಲಿ ಮತ್ತು ಗುತ್ತಿಗೆದಾರರಿಗೆ ಹಲವು ಬಾರಿ ದೂರನ್ನು ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
-ವಾರ್ಡನ್, ಬೆಂ.ಉತ್ತರ ತಾಲೂಕು.
ನಷ್ಟದಿಂದಲೇ ನಾವು ಈ ಟೆಂಡರ್‌ನಲ್ಲಿರುವ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದೇವೆ. ಟೆಂಡರ್‌ನಲ್ಲಿ ‘ಸನ್‌ಪ್ಯೂರ್/ಗೋಲ್ಡ್ ವಿನ್ನರ್/ ಜೆಮಿನಿ’ ಬ್ರ್ಯಾಂಡ್ ಅಡುಗೆ ಎಣ್ಣೆಯನ್ನು ಸರಬರಾಜು ಮಾಡಬೇಕೆಂದು ಸೂಚಿಸಿರುವುದು ನಿಜ. ಆದರೆ, ನಾವು ಅದೇ ಬೆಲೆ ಹೊಂದಿರುವ ‘ಫಿಯಾನ’ ಬ್ರ್ಯಾಂಡ್ ಎಣ್ಣೆಯನ್ನು ಪೂರೈಸುತ್ತಿದ್ದೇವೆ ಮತ್ತು ಅದರ ಗುಣಮಟ್ಟವನ್ನು ಪರಿಶೀಲಿಸಿ, ಸಂಬಂಧಿಸಿದ ದಾಖಲೆಗಳನ್ನು ಇಲಾಖೆಯ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಅದಕ್ಕೆ ಅವರೂ ಒಪ್ಪಿಗೆ ನೀಡಿದ್ದಾರೆ. ನಾವು ಎಲ್ಲ ಹಾಸ್ಟೆಲ್‌ಗಳಿಗೂ ಶುದ್ಧೀಕರಿಸಿದ ರಾಗಿಯನ್ನೇ ನೀಡುತ್ತಿದ್ದೇವೆ.
-ಅಪ್ಪುರಾವ್, ಗುತ್ತಿಗೆದಾರರು