ಮುನ್ನಡೆಸುವ ನೆಪದಲ್ಲಿ ಇಸ್ರೋವನ್ನು ಹಿಂದಕ್ಕೆ ತಳ್ಳಲಾಗುತ್ತಿದೆಯೇ?
ಖಾಸಗಿ ವಲಯದ ಪ್ರವೇಶ ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಸುಧಾರಣೆಗಳಿಗೆ ಕಾರಣ ವಾಗಬಹುದು. ಪ್ರಕ್ರಿಯೆಗಳನ್ನು ವೇಗಗೊಳಿಸಬಹುದು ಮತ್ತು ನಾವೀನ್ಯತೆಯನ್ನು ಹೆಚ್ಚಿಸಬಹುದು. ಆದರೆ ನೇರ ಮತ್ತು ದೊಡ್ಡ ಲಾಭಗಳು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಖಾಸಗಿ ಕಂಪೆನಿಗಳಿಗೆ ಸಿಗುತ್ತವೆಯೇ ಹೊರತು ಇಸ್ರೋಗೆ ಅಲ್ಲ.
ಆದ್ದರಿಂದ, ಮುಂದಿನ ಐದು ವರ್ಷಗಳಲ್ಲಿ 20 ಪಟ್ಟು ಬೆಳೆಯುವ ಮಾರುಕಟ್ಟೆಯಲ್ಲಿ ಇಸ್ರೋ ಹಿಂದೆ ಸರಿಯುತ್ತಿದೆ.
ಇನ್ನು ಮುಂದೆ ರಾಕೆಟ್ ಉಡಾವಣೆಯಿಂದ ಇಸ್ರೋವನ್ನು ಹೊರಗಿಟ್ಟು ಖಾಸಗಿಯವರಿಗೆ ಬಾಗಿಲು ತೆರೆಯಲಾಗುತ್ತಿರುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಹಾಗಾದರೆ, ಇಸ್ರೋ ಕೂಡ ಬಿಎಸ್‌ಎನ್‌ಎಲ್‌ನಂತೆ ಮಹತ್ವ ಕಳೆದುಕೊಳ್ಳುತ್ತದೆಯೆ?
ಇಸ್ರೋ ಎಸ್‌ಎಸ್‌ಎಲ್‌ವಿಯ ಯಶಸ್ವಿ ಅಭಿವೃದ್ಧಿಯ ನಂತರ, ಅದರ ತಂತ್ರಜ್ಞಾನ ಮತ್ತು ಉತ್ಪಾದನೆಯನ್ನು ಉದ್ಯಮಕ್ಕೆ ವರ್ಗಾವಣೆ ಮಾಡಲು ಮುಕ್ತಗೊಳಿಸಲಾಯಿತು.
ಹಲವಾರು ಕಂಪೆನಿಗಳು ಆಸಕ್ತಿ ತೋರಿಸಿದವು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಂದರೆ ಎಚ್‌ಎಎಲ್, ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಬಿಡ್ಡಿಂಗ್ ಪ್ರಕ್ರಿಯೆಯ ಅಂತಿಮ ಹಂತ ತಲುಪಿ, ಕೊನೆಗೆ ಎಚ್‌ಎಎಲ್ ಒಪ್ಪಂದವನ್ನು ಗೆದ್ದಿದೆ.
ಈಗ, ಭಾರತದ ಎರಡು ಪ್ರಮುಖ ಉಡಾವಣಾ ವಾಹನಗಳಾದ ಪಿಎಸ್‌ಎಲ್‌ವಿ ಮತ್ತು LVM3 ಕಡೆಗೆ ಗಮನ ಹರಿಸಲಾಗುತ್ತಿದೆ.
ಎಸ್‌ಎಸ್‌ಎಲ್‌ವಿ ಬಿಡ್ಡಿಂಗ್ ಪ್ರಕ್ರಿಯೆಗಿಂತ ಭಿನ್ನವಾಗಿ, ಸಾರ್ವಜನಿಕ ವಲಯದ ಕಂಪೆನಿಗಳನ್ನು ಈ ಉಡಾವಣಾ ವಾಹನಗಳ ಪ್ರಮುಖ ಬಿಡ್‌ಗಳಿಂದ ಹೊರಗಿಡಲಾಗುತ್ತಿದೆ ಎಂದು ವರದಿಯಾಗಿದೆ.
ಹೊಸ ನಿಯಮಗಳ ಪ್ರಕಾರ, ಖಾಸಗಿ ಭಾರತೀಯ ಕಂಪೆನಿಗಳು ಮಾತ್ರ ಪಿಎಸ್‌ಎಲ್‌ವಿ ಮತ್ತು LVMಗಳನ್ನು ನಿರ್ಮಿಸುವಲ್ಲಿ ಭಾಗಿಯಾಗಿರುತ್ತವೆ. ಹೀಗೆ ಇಸ್ರೋವನ್ನು ಹೊರಗಿಡುವಂಥದ್ದು ಏನಾಯಿತು? ಅದೇನು ವಿಫಲ ಸಂಸ್ಥೆಯೆ?
ಇಸ್ರೋ ಕಳೆದ ದಶಕದಲ್ಲಿ 393 ವಿದೇಶಿ ಉಪಗ್ರಹಗಳು ಮತ್ತು ಮೂರು ಭಾರತೀಯ ಗ್ರಾಹಕ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ 143 ಮಿಲಿಯನ್ ಡಾಲರ್ ವಿದೇಶಿ ವಿನಿಮಯವನ್ನು ಗಳಿಸಿದ ಸಂಸ್ಥೆಯಾಗಿದೆ. ವಿಶ್ವಾಸಾರ್ಹತೆಗಾಗಿ ಸೂಕ್ತ ವೆಚ್ಚದಲ್ಲೇ ಪರಿಣಾಮಕಾರಿ ಉಪಗ್ರಹ ಉಡಾವಣೆಗಳಿಗಾಗಿ ದೊಡ್ಡ ಮಟ್ಟದ ಜಾಗತಿಕ ಖ್ಯಾತಿಯೂ ಅದಕ್ಕಿದೆ. ಹಾಗಿರುವಾಗ, ನಿಯಮಗಳನ್ನು ಯಾರಿಗಾದರೂ ಅನುಕೂಲವಾಗುವಂತೆ ಬದಲಾಯಿಸಲಾಗಿದೆಯೇ?
ಆಗಸ್ಟ್ 21ರಂದು ಬಿಸಿನೆಸ್ ಟುಡೇಯ ಇಂಡಿಯಾ 800 ಇಕಾನಮಿ ಶೃಂಗಸಭೆಯಲ್ಲಿ, ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಆ್ಯಂಡ್ ಆಥೋರೈಸೇಷನ್ ಸೆಂಟರ್ ಅಥವಾ ಇನ್‌ಸ್ಪೇಸ್ ಅಧ್ಯಕ್ಷ ಡಾ. ಪವನ್ ಗೋಯೆಂಕಾ ಅವರು ಇಸ್ರೋ ಇನ್ನು ಮುಂದೆ ಯಾವುದೇ ಉಡಾವಣಾ ವಾಹನಗಳನ್ನು ಸ್ವತಃ ತಯಾರಿಸುವುದಿಲ್ಲ ಎಂದು ಘೋಷಿಸಿದರು. ಈ ಕೆಲಸವನ್ನು ಈಗ ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸಲಾಗುತ್ತದೆ.
ಇನ್‌ಸ್ಪೇಸ್ ಎಂಬುದು ಇಸ್ರೋ ಮತ್ತು ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಸರಕಾರಿ ಸಂಸ್ಥೆಯಾಗಿದೆ.
ಇಸ್ರೋ ಕಾರ್ಯಾಚರಣೆಗಳ ಹಠಾತ್ ಖಾಸಗೀಕರಣ ಆಶ್ಚರ್ಯ ತರುವಂತಿದೆ. ಆದರೆ ಈ ಬದಲಾವಣೆ ರಾತ್ರೋರಾತ್ರಿ ಬಂದದ್ದಲ್ಲ. ಬಹಳ ಹಿಂದೆಯೇ ಶುರುವಾಯಿತು.
ಸಣ್ಣ ಉಪಗ್ರಹ ಉಡಾವಣಾ ವಾಹನ ಎಸ್‌ಎಸ್‌ಎಲ್‌ವಿ ಈ ಬದಲಾವಣೆಯ ಮೊದಲ ಉದಾಹರಣೆ.
ಎಸ್‌ಎಸ್‌ಎಲ್‌ವಿಯ ಮೊದಲ ಉಡಾವಣೆ 2023ರಲ್ಲಿ ಪ್ರಾರಂಭವಾಯಿತು ಮತ್ತು ನಂತರ ಸರಕಾರ ಅದರ ತಂತ್ರಜ್ಞಾನ ಮತ್ತು ಉತ್ಪಾದನಾ ಹಕ್ಕುಗಳನ್ನು ಖಾಸಗಿ ಉದ್ಯಮಕ್ಕೆ ಹಸ್ತಾಂತರಿಸಲು ಶುರು ಮಾಡಿತು.
ಸರಿಸುಮಾರು 20 ಕಂಪೆನಿಗಳು ಈ ಯೋಜನೆಯಲ್ಲಿ ಆಸಕ್ತಿ ವ್ಯಕ್ತಪಡಿಸಿದವು. ಮೂರು ಕಂಪೆನಿಗಳು ಎಸ್‌ಎಸ್‌ಎಲ್‌ವಿ ಖಾಸಗೀಕರಣ ಪ್ರಕ್ರಿಯೆಯ ಅಂತಿಮ ಹಂತ ತಲುಪಿದ್ದವು.
ಮೊದಲನೆಯದು ಆಲ್ಫಾ ಡಿಸೈನ್ ಟೆಕ್ನಾಲಜೀಸ್. ಇದರಲ್ಲಿ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಆಂಡ್ ಟೆಕ್ನಾಲಜೀಸ್ ಪಾಲು ಹೊಂದಿದೆ. ಎರಡನೆಯದು DRDO ಸಹಯೋಗದೊಂದಿಗೆ ಕ್ಷಿಪಣಿ ವ್ಯವಸ್ಥೆಗಳನ್ನು ತಯಾರಿಸುವ ಸರಕಾರಿ ಕಂಪೆನಿಯಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್. ಮೂರನೆಯದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಥವಾ ಎಚ್‌ಎಎಲ್. ಕಡೆಗೆ ಒಪ್ಪಂದ ಎಚ್‌ಎಎಲ್ ಪಾಲಾಯಿತು ಮತ್ತು ಎಸ್‌ಎಸ್‌ಎಲ್‌ವಿ ಉತ್ಪಾದನೆಯ ಮಾಲಕತ್ವ ಸಾರ್ವಜನಿಕ ಕಂಪೆನಿಯ ಕೈಯಲ್ಲಿ ಉಳಿಯಿತು.
ಅದಾನಿ ಒಡೆತನದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಅಂತಿಮ ಹಂತ ತಲುಪಿದ ಏಕೈಕ ಖಾಸಗಿ ಕಂಪೆನಿಯಾಗಿತ್ತು.
ಸರಕಾರಿ ಕಂಪೆನಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗದಿದ್ದರೆ ಅದಾನಿ ಒಡೆತನದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಈ ಒಪ್ಪಂದವನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು. ಆದರೂ, ಈಗ ಇದನ್ನು ಖಾಸಗೀಕರಣ ಎಂದು ಕರೆಯದಿದ್ದರೂ ಸಹ, ಎಸ್‌ಎಸ್‌ಎಲ್‌ವಿ ಮಾಲಕತ್ವ ಇಸ್ರೋನಿಂದ ಎಚ್‌ಎಎಲ್ ಕೈಗೆ ಹೋಗಿದೆ.
ಈಗ, ಮುಂದಿನ ಹಂತವೇನು ಎಂಬುದು ಪ್ರಶ್ನೆ.
ಮುಂದಿನ ಹಂತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಿಎಸ್‌ಎಲ್‌ವಿ ಮತ್ತು ಲಾಂಚ್ ವೆಹಿಕಲ್ ಮಾರ್ಕ್ 3 ಅಂದರೆ LVM33. ಈ ಎರಡನ್ನೂ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಶಕ್ತಿಶಾಲಿ ರಾಕೆಟ್‌ಗಳೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಹಂತ ಎಸ್‌ಎಸ್‌ಎಲ್‌ವಿಗಿಂತ ದೊಡ್ಡದಾಗಿದೆ ಮತ್ತು ಹೆಚ್ಚು ಮಹತ್ವದ್ದಾಗಿದೆ.
ಎಸ್‌ಎಸ್‌ಎಲ್‌ವಿ ವರ್ಗಾವಣೆಯಲ್ಲಿ ಸರಕಾರಿ ಕಂಪೆನಿಗಳು ಸಹ ಭಾಗವಹಿಸಲು ಅವಕಾಶ ನೀಡಲಾಗಿತ್ತು ಮತ್ತು ಒಪ್ಪಂದವನ್ನು ಸರಕಾರಿ ಸಂಸ್ಥೆಯೇ ಗೆದ್ದಿತು. ಆದರೆ, ಪಿಎಸ್‌ಎಲ್‌ವಿ ಮತ್ತು LVM ವರ್ಗಾವಣೆಯಲ್ಲಿ ಸರಕಾರಿ ಕಂಪೆನಿಗಳು ಭಾಗವಹಿಸಲು ಅವಕಾಶವಿಲ್ಲ ಎಂದು ಗೋಯೆಂಕಾ ಈ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ, ಖಾಸಗಿ ಕಂಪೆನಿಗಳು ಮಾತ್ರ ಸ್ಪರ್ಧೆಯಲ್ಲಿರುತ್ತವೆ. ಅಲ್ಲಿಗೆ, ಅದಾನಿ ಪಾಲುಗಾರಿಕೆ ಇರುವ ಕಂಪೆನಿ ಬಿಡ್ ಗೆಲ್ಲುವುದು ಇನ್ನು ಸುಲಭವಾಗುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ.
ಯಾಕೆ ಖಾಸಗಿಯವರಿಗೆ ಎಂಬ ಪ್ರಶ್ನೆಗೆ ಪವನ್ ಗೋಯೆಂಕಾ ವಿವರಣೆ ಕೊಟ್ಟಿದ್ದಾರೆ.
ಇಸ್ರೋ ಈಗ ವಿಜ್ಞಾನ ಕಾರ್ಯಾಚರಣೆಗಳು, ನಿರ್ದಿಷ್ಟ ಉಪಗ್ರಹಗಳು, ಹೊಸ ತಂತ್ರಜ್ಞಾನಗಳು ಮತ್ತು ಸುಧಾರಿತ ಮೂಲಸೌಕರ್ಯಗಳ ಮೇಲೆ ಗಮನ ಹರಿಸುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಶ್ನೆಯೆಂದರೆ, ಸಾರ್ವಜನಿಕ ವಲಯದ ಕಂಪೆನಿಗಳು ಸಹ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದರೆ, ಇಸ್ರೋ ವಿಜ್ಞಾನ ಕಾರ್ಯಾಚರಣೆಗಳು ಮತ್ತು ನಿರ್ದಿಷ್ಟ ಉಪಗ್ರಹಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲವೇ ಎಂಬುದು.
ಇಸ್ರೋದಿಂದ ಖಾಸಗಿ ವಲಯಕ್ಕೆ ಇಲ್ಲಿಯವರೆಗೆ ಸುಮಾರು 120 ತಂತ್ರಜ್ಞಾನಗಳನ್ನು ವರ್ಗಾಯಿಸಲಾಗಿದೆ ಎಂದು ಗೋಯೆಂಕಾ ಹೇಳಿದ್ದಾರೆ.
ಇಸ್ರೋ ಪ್ರಸ್ತುತ ನಿರ್ಮಿಸುತ್ತಿರುವ ಕೆಲವು ಉಪಗ್ರಹಗಳನ್ನು ಸಹ ಖಾಸಗಿ ವಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು. ಅಂದರೆ, ಇಸ್ರೋ ನಿರ್ಮಿಸುತ್ತಿರುವ ಯಾವುದೇ ಉಪಗ್ರಹಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಬಹುದು.
ಹೊಸ ನಿಯಮಗಳು ಪ್ರಮುಖ ಬಿಡ್ಡರ್ ಸರಕಾರಿ ಸಂಸ್ಥೆ ಆಗಿರಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಅದು ಖಾಸಗಿ ಕಂಪೆನಿಯಾಗಿರಬೇಕು. ಸರಕಾರಿ ಸಂಸ್ಥೆ ಒಕ್ಕೂಟದ ಭಾಗವಾಗಬಹುದು.
ಇಸ್ರೋ ನಿರಂತರವಾಗಿ ಹೆಚ್ಚುತ್ತಿರುವ ಲಾಭದ ಮೂಲವಾಗಿದ್ದಾಗ, ರಾಕೆಟ್‌ಗಳನ್ನು ಖಾಸಗಿ ಕೈಗಳಿಗೆ ಹೇಗೆ ಹಸ್ತಾಂತರಿಸಲಾಯಿತು ಎಂಬುದು ಈಗ ಪ್ರಶ್ನೆ.
ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಎನ್‌ಎಸ್‌ಐಎಲ್, 2025ರ ಹಣಕಾಸು ವರ್ಷದಲ್ಲಿ 3,026 ಕೋಟಿ ರೂ. ಆದಾಯ ತಂದಿದೆ. ಇದು, 2024ರ ಹಣಕಾಸು ವರ್ಷದಲ್ಲಿನ 2,116 ಕೋಟಿ ರೂ. ಆದಾಯಕ್ಕಿಂತ ಶೇ. 43 ಹೆಚ್ಚಾಗಿದೆ.
ಪಿಎಸ್‌ಎಲ್‌ವಿ, ಅಥವಾ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್, ಇಸ್ರೋದ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯಂತ ಲಾಭದಾಯಕ ರಾಕೆಟ್ ಆಗಿದೆ. ಇದು ಯುಎಸ್, ಯುಕೆ ಮತ್ತು ಸಿಂಗಾಪುರದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ 34ಕ್ಕೂ ಹೆಚ್ಚು ದೇಶಗಳಿಂದ 400ಕ್ಕೂ ಹೆಚ್ಚು ವಿದೇಶಿ ಉಪಗ್ರಹಗಳನ್ನು ಇಲ್ಲಿಯವರೆಗೆ ಉಡಾವಣೆ ಮಾಡಿದೆ.
ಕಳೆದ ದಶಕದಲ್ಲಿ, ಜನವರಿ 2019ರಿಂದ ಜನವರಿ 2020ರವರೆಗೆ, ಇಸ್ರೋ 143 ಮಿಲಿಯನ್ ಡಾಲರ್ ಆದಾಯ ಗಳಿಸಿದೆ. ಪಿಎಸ್‌ಎಲ್‌ವಿಯ ಕೈಗೆಟಕುವಿಕೆ ಮತ್ತು ವಿಶ್ವಾಸಾರ್ಹತೆ ಇಸ್ರೋವನ್ನು ಸಣ್ಣ ಮತ್ತು ಮಧ್ಯಮ ಉಪಗ್ರಹಗಳಿಗೆ ವಿಶ್ವದ ಅತ್ಯಂತ ಆದ್ಯತೆಯ ಉಡಾವಣಾ ಪಾಲುದಾರನನ್ನಾಗಿ ಮಾಡಿದೆ.
ಇಸ್ರೋದ ಪಿಎಸ್‌ಎಲ್‌ವಿ ಉಡಾವಣಾ ವೆಚ್ಚ ಇತರ ಬಾಹ್ಯಾಕಾಶ ಸಂಸ್ಥೆಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.ಇದು ಇಸ್ರೋವನ್ನು ಜಾಗತಿಕ ಉಪಗ್ರಹ ಉಡಾವಣಾ ವಾಹನ ಮಾರುಕಟ್ಟೆಯಲ್ಲಿ ಮುಂದಿಡುತ್ತದೆ. ಹಾಗಾಗಿ, ಇಸ್ರೋ ಪ್ರಮುಖ ಸ್ಥಾನವನ್ನು ಕಾಯ್ದುಕೊಳ್ಳುತ್ತದೆ.
2025ರ ವೇಳೆಗೆ ಸರಿಸುಮಾರು 5.6 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದ ಜಾಗತಿಕ ಉಪಗ್ರಹ ಉಡಾ ವಣಾ ವಾಹನ ಮಾರುಕಟ್ಟೆ 2030ರ ವೇಳೆಗೆ 113 ಶತಕೋಟಿ ಡಾಲರ್ ಮೀರುವ ನಿರೀಕ್ಷೆಯಿದೆ. ಅಂದರೆ, ಮಾರುಕಟ್ಟೆ ಕೇವಲ ಐದು ವರ್ಷಗಳಲ್ಲಿ ಸುಮಾರು 20 ಪಟ್ಟು ದೊಡ್ಡದಾಗಿ ಬೆಳೆಯುವ ಸಾಧ್ಯತೆಯಿದೆ.
ಇದು ಸಣ್ಣ ಬೆಳವಣಿಗೆಯಲ್ಲ; ಬದಲಿಗೆ, ಇದು ಕೈಗಾರಿಕೆಗಳಲ್ಲಿ ವಿರಳವಾಗಿ ಕಂಡುಬರುವ ಏರಿಕೆ.
ಸದ್ಯ Low Earth Orbit ಅಂದ್ರೆ LEO ವಲಯ ಅತ್ಯಧಿಕ ಬೇಡಿಕೆಯಲ್ಲಿದೆ. ಈ ವಲಯದಲ್ಲಿ ಯಾರು ಮುಂದೆ ಬರುತ್ತಾರೋ ಅವರು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಪಾಲು ಪಡೆಯುತ್ತಾರೆ.
ಕುತೂಹಲಕಾರಿಯಾಗಿ, ಎಸ್‌ಎಸ್‌ಎಲ್‌ವಿ ಮತ್ತು ಪಿಎಸ್‌ಎಲ್‌ವಿ ಎರಡೂ ಪ್ರಾಥಮಿಕವಾಗಿ ಈ LEO ವಿಭಾಗಕ್ಕೆ ಸೇವೆ ಸಲ್ಲಿಸುತ್ತವೆ. ಅಂದರೆ, ಪ್ರಸ್ತುತ ಖಾಸಗಿ ಕೈಗಳಿಗೆ ಹಸ್ತಾಂತರಿಸಲಾಗುತ್ತಿರುವ ರಾಕೆಟ್‌ಗಳು ನಿಖರವಾಗಿ ಹೆಚ್ಚಿನ ಲಾಭ ನೀಡುವ ವಿಭಾಗಗಳಲ್ಲಿವೆ.
ಇಂಥ ಫಲ ಬರುತ್ತಿರುವ ಗಿಡವನ್ನು ಖಾಸಗಿಯವರ ಕೈಗೆ ಇಡಲಾಗುತ್ತಿರುವ ಈ ಸಮಯ ಕೂಡ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ತಂತ್ರಜ್ಞಾನ ಮತ್ತು ಮಾರುಕಟ್ಟೆ ಸ್ಥಾನ ಗಳಿಸಲು ಇಸ್ರೋ ದಶಕಗಳನ್ನು ಕಳೆದಿದೆ. ಆದರೆ ಅದನ್ನು ಬಳಸಿಕೊಳ್ಳುವ ಸಮಯ ಬಂದ ತಕ್ಷಣ, ಇಸ್ರೋವನ್ನು ಪಕ್ಕಕ್ಕೆ ತಳ್ಳಲಾಯಿತು.
ಈ ಬದಲಾವಣೆಗೆ ಕೊಡಲಾಗುತ್ತಿರುವ ಕಾರಣ ಕೂಡ ವಿರೋಧಾಭಾಸದ್ದಾಗಿ ಕಾಣುತ್ತಿದೆ. ಖಾಸಗಿ ವಲಯಕ್ಕೆ ಅವಕಾಶ ನೀಡುವ ಮೂಲಕ ಸ್ಪರ್ಧೆಯನ್ನು ಸೃಷ್ಟಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ, ಸೀಮಿತ ಸಂಖ್ಯೆಯ ಯೋಜನೆಗಳ ಮೂಲಕ ಆಯ್ದ ಕಂಪೆನಿಗಳಿಗೆ ಈ ಜವಾಬ್ದಾರಿಯನ್ನು ವಹಿಸಲಾಗುವ ಸಾಧ್ಯತೆಯಿದೆ.
ಎಸ್‌ಎಸ್‌ಎಲ್‌ವಿ ನಿರ್ಮಿಸುವ ಒಪ್ಪಂದವನ್ನು ಗೆದ್ದ ಎಚ್‌ಎಎಲ್ ಕಳಪೆ ದಾಖಲೆಯನ್ನು ಹೊಂದಿದೆ ಎಂಬುದು ನಿಜ. ಅದು ಹಲವಾರು ವರ್ಷಗಳಿಂದ ತೇಜಸ್ Mk1A ಫೈಟರ್ ಜೆಟ್‌ನ ವಿತರಣೆಯನ್ನು ನಿರಂತರವಾಗಿ ವಿಳಂಬ ಮಾಡುತ್ತಿದೆ.
ಇಸ್ರೋ ಈಗ ಹೊಸ ಆಟಗಾರರೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ. ಮೊದಲು ಇಂಥ ಅನಿವಾರ್ಯತೆ ಇರಲಿಲ್ಲ. ದೊಡ್ಡ ಸಮಸ್ಯೆಯೆಂದರೆ, ಹಿಂದೆ ಪ್ರಪಂಚದಾದ್ಯಂತ ಗ್ರಾಹಕರನ್ನು ಪಡೆದುಕೊಂಡು ಅವರಿಂದ ಆದಾಯ ಗಳಿಸಿದ ಇಸ್ರೋ, ಈಗ ಈ ಖಾಸಗಿ ಕಂಪೆನಿಗಳ ಗ್ರಾಹಕನಾಗುತ್ತದೆ.
ಅಂದರೆ, ತಯಾರಕರು ಗ್ರಾಹಕರಾಗುವ ಸ್ಥಿತಿ. ಇದು ಪೂರ್ತಿಯಾಗಿ ಹಿಮ್ಮುಖ ಸ್ಥಿತಿ.
ಖಾಸಗಿ ವಲಯದ ಪ್ರವೇಶ ಮುಂಬರುವ ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಸುಧಾರಣೆಗಳಿಗೆ ಕಾರಣ ವಾಗಬಹುದು. ಪ್ರಕ್ರಿಯೆಗಳನ್ನು ವೇಗಗೊಳಿಸಬಹುದು ಮತ್ತು ನಾವೀನ್ಯತೆಯನ್ನು ಹೆಚ್ಚಿಸಬಹುದು. ಆದರೆ ನೇರ ಮತ್ತು ದೊಡ್ಡ ಲಾಭಗಳು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಖಾಸಗಿ ಕಂಪೆನಿಗಳಿಗೆ ಸಿಗುತ್ತವೆಯೇ ಹೊರತು ಇಸ್ರೋಗೆ ಅಲ್ಲ.
ಆದ್ದರಿಂದ, ಮುಂದಿನ ಐದು ವರ್ಷಗಳಲ್ಲಿ 20 ಪಟ್ಟು ಬೆಳೆಯುವ ಮಾರುಕಟ್ಟೆಯಲ್ಲಿ ಇಸ್ರೋ ಹಿಂದೆ ಸರಿಯುತ್ತಿದೆ.
ಈ ಸ್ಪರ್ಧೆಯಲ್ಲಿ ಪ್ರವೇಶಿಸುವ ಯಾವುದೇ ಖಾಸಗಿ ಕಂಪೆನಿಗಳನ್ನು, ಅವು ಅದಾನಿ ಅಥವಾ ಇತರ ಯಾರದೇ ಆಗಿದ್ದರೂ, ಕುರುಡಾಗಿ ನಂಬಲು ಸಾಧ್ಯವಿಲ್ಲ.
ಪ್ರಶ್ನೆಯೆಂದರೆ, ಈ ನಿರ್ಧಾರ ದೇಶದ ಬಾಹ್ಯಾಕಾಶ ಸಂಸ್ಥೆಯನ್ನು ಬಲಪಡಿಸುತ್ತದೆಯೇ ಅಥವಾ ಕೆಲವೇ ಖಾಸಗಿ ಕಂಪೆನಿಗಳನ್ನು ಬಲಪಡಿಸುತ್ತದೆಯೇ ಎಂಬುದು.
ಖಾಸಗಿ ವಲಯ ಇಸ್ರೋದ ಸಾಮರ್ಥ್ಯಗಳನ್ನು ಮುನ್ನಡೆಸಿದರೆ, ಅದನ್ನು ಸ್ವಾಗತಿಸಬೇಕು. ಆದರೆ ಆಯ್ದ ಕೆಲವು ಖಾಸಗಿ ಕಂಪೆನಿಗಳು ಸಾರ್ವಜನಿಕ ಹಣ ಮತ್ತು ದಶಕಗಳ ಸಾರ್ವಜನಿಕ ಕಠಿಣ ಪರಿಶ್ರಮದಿಂದ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಮತ್ತು ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಪಡೆಯುವಂತಾಗುತ್ತದೆ.
ಮುನ್ನಡೆಸುವ ಹೆಸರಿನಲ್ಲಿ ನಾವು ಇಸ್ರೋವನ್ನು ತಡೆಹಿಡಿಯುತ್ತಿದ್ದೇವೆಯೇ ಎಂದು ಕೇಳಿಕೊಳ್ಳಬೇಕಾಗಿದೆ.