‘‘ವಿದೇಶಿ ವಸ್ತುಗಳನ್ನು ಕೊಳ್ಳಬೇಡಿ, ವಿದೇಶಗಳಲ್ಲಿ ಮದುವೆಯಾಗಬೇಡಿ, ಭಾರತೀಯ ಮೂಲದ ಉತ್ಪನ್ನಗಳನ್ನೇ ಬಳಸಿ’’ ಹೀಗೆಂದು ನಿರಂತರವಾಗಿ ನಾಗರಿಕರಿಗೆ ಕರೆ ನೀಡುವ ಮತ್ತು ನಿರಂತರ ವಿದೇಶ ಪ್ರವಾಸ ಕೈಗೊಳ್ಳುವ ಪ್ರಧಾನಮಂತ್ರಿಗಳು, ಅನಿಶ್ಚಿತತೆ ನಡುವೆಯೂ 2026-27ರ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ) ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿರುವುದಾಗಿ ಮಂಗಳವಾರ ಕಿರ್ಗಿಸ್ತಾನದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಿಂದ ದೂರವಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ನಡು ರಾತ್ರಿಯಲ್ಲೂ ವೀಡಿಯೊ ಮಾಡಿ ಜನರ ನಿದ್ದೆಗೆಡಿಸುವ ಪ್ರಧಾನಿಗಳ ವೀಡಿಯೊ ಸಂದೇಶಕ್ಕೆ ಕೋಟ್ಯಂತರ ಜನ ಫಾಲೋವರ್ಸ್ ಇದ್ದಾರೆ.

ಎಂದಿನಂತೆ ಈ ಬಾರಿಯೂ ಪ್ರಧಾನಿಗಳ ವೀಡಿಯೊ ಸುದ್ದಿ ವರದಿಗಳು ಹೊರಬಿದ್ದ ತಕ್ಷಣ ಆಡಳಿತಾರೂಢ ಸರಕಾರ ಮತ್ತು ಬೆಂಬಲಿತ ಮಾಧ್ಯಮಗಳು ಇದನ್ನು ಮಹಾನ್ ಐತಿಹಾಸಿಕ ಸಾಧನೆ ಎಂಬಂತೆ ಸಂಭ್ರಮಿಸುತ್ತಿವೆ. ಜಾಗತಿಕವಾಗಿ ಮಂದಗತಿಯ ಆರ್ಥಿಕ ವಾತಾವರಣವಿರುವಾಗ ಭಾರತ ಈ ಮಟ್ಟದ ಅಂಕಿ-ಅಂಶ ಪ್ರದರ್ಶಿಸಿರುವುದು ಖಂಡಿತವಾಗಿಯೂ ಮೇಲ್ನೋಟಕ್ಕೆ ಸಂತಸ ತರುವ ವಿಚಾರ. ಆದರೆ, ಈ ಸಂಭ್ರಮದ ಆರ್ಭಟದ ಹಿಂದೆ ಆಡಗಿರುವ ಅಸಲಿಯತ್ತು ಏನು? ಇದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಹಿಗ್ಗಬೇಕಾದ ವಿಷಯವೇ ಅಥವಾ ಇದರ ಹಿಂದಿರುವ ಆರ್ಥಿಕ ತಾರತಮ್ಯಗಳನ್ನು ಕಂಡು ಚಿಂತಿಸಬೇಕಾದ ಸ್ಥಿತಿಯೇ ಎಂಬ ವೈರುಧ್ಯ ನಮ್ಮ ಮುಂದಿದೆ. ದೇಶದ ಜಿಡಿಪಿ ನಿಜಕ್ಕೂ ಬೆಳೆಯುತ್ತಿದ್ದರೆ, ಜನರ ಆದಾಯ ಮಟ್ಟ ಏರುತ್ತಿಲ್ಲವೇಕೆ? ಯುವಜನತೆಗೆ ಸೂಕ್ತ ಉದ್ಯೋಗ ಸಿಗುತ್ತಿಲ್ಲವೇಕೆ? ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪೋಲಾಗುತ್ತಿರುವ ಸಾರ್ವಜನಿಕ ತೆರಿಗೆ ಹಣಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಜಿಡಿಪಿ ಪ್ರಗತಿ ಎಂದರೆ ಪ್ರತಿಯೊಬ್ಬರ ಆದಾಯ ಹೆಚ್ಚಳವೇ? ಖಂಡಿತವಾಗಿಯೂ ಅಲ್ಲ.

ವಾಸ್ತವದಲ್ಲಿ ಜಿಡಿಪಿ ಅಂಕಿ-ಅಂಶಗಳ ಈ ‘ವಿಕಾಸ’ದ ಕಥೆಗೂ, ಕಷ್ಟಪಟ್ಟು ದುಡಿಯುವ ಸಾಮಾನ್ಯ ಪ್ರಜೆಯ ಜೇಬಿಗೂ ಯಾವುದೇ ಸಂಬಂಧವಿಲ್ಲದಂತಾಗಿದೆ. ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂಬುದು ಸುಳ್ಳಲ್ಲದಿರಬಹುದು, ಆದರೆ ಆ ಬೆಳವಣಿಗೆಯ ಸ್ವರೂಪವೇ ತೀವ್ರ ಕಳವಳಕಾರಿ. ಸಾಮಾನ್ಯವಾಗಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳೆದರೆ ದೇಶದ ಸೌಹಾರ್ದ ಮತ್ತು ಜನರ ಆದಾಯ ಹೆಚ್ಚಾಗುತ್ತದೆ ಎಂಬ ಕಲ್ಪನೆ ಇದೆ. ಆದರೆ, ಭಾರತದಲ್ಲಿ ಪ್ರಸ್ತುತ ಕಂಡುಬರುತ್ತಿರುವುದು K-ಆಕಾರದ ಆರ್ಥಿಕ ಬೆಳವಣಿಗೆ. ಇದರರ್ಥ, ಸಮಾಜದ ಮೇಲ್ಮಟ್ಟದಲ್ಲಿರುವ ಶೇ. 10ರಷ್ಟು ಕೋಟ್ಯಧಿಪತಿಗಳು ಹಾಗೂ ಬೃಹತ್ ಕಾರ್ಪೊರೇಟ್ ಕಂಪೆನಿಗಳ ಆದಾಯವು ತೀವ್ರ ಗತಿಯಲ್ಲಿ ಏರುತ್ತಿದೆ (Kಯ ಮೇಲ್ಭಾಗ). ಆದರೆ, ಸಮಾಜದ ಶೇ.90ರಷ್ಟಿರುವ ಸಣ್ಣ ವ್ಯಾಪಾರಿಗಳು, ರೈತರು, ಶ್ರಮಿಕರು ಮತ್ತು ಯುವಜನರ ನೈಜ ಆದಾಯ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದೆ ಅಥವಾ ಸ್ಥಿರವಾಗಿದೆ (Kಯ ಕೆಳಭಾಗ). ಜಿಡಿಪಿಯ ಒಟ್ಟು ಮೊತ್ತ ಹೆಚ್ಚಾಗುತ್ತಿರುವುದು ಕೆಲವೇ ಕೆಲವು ವಲಯಗಳ ಜಿಗಿತದಿಂದ ಹೊರತು, ಪ್ರತಿಯೊಬ್ಬ ನಾಗರಿಕನ ಶ್ರಮದ ಫಲದಿಂದ ಅಲ್ಲ.

ಜಿಡಿಪಿ ಹೆಚ್ಚಾದಂತೆ ದೇಶದ ಜನರ ಸರಾಸರಿ ತಲಾ ಆದಾಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ‘ತಲಾ ಆದಾಯ’ದ ಸರಾಸರಿ ಲೆಕ್ಕಾಚಾರವು ಸಮಾಜದ ಕೆಳಹಂತದಲ್ಲಿರುವ ಕೋಟ್ಯಂತರ ಜನರ ನೈಜ ಕಷ್ಟಗಳನ್ನು ಮುಚ್ಚಿಹಾಕಲು ಸರಕಾರ ಬಳಸುವ ಮಾಯಾಜಾಲವಾಗಿದೆ. ಉದಾಹರಣೆಗೆ, ದೇಶದ ಒಬ್ಬ ಅತಿ ಶ್ರೀಮಂತ ಉದ್ಯಮಿಯ ಶತಕೋಟಿ ಆದಾಯವನ್ನು ಮತ್ತು ದಿನಗೂಲಿ ಮಾಡುವ ಒಬ್ಬ ಬಡ ಕಾರ್ಮಿಕನ ಸಣ್ಣ ಆದಾಯವನ್ನು ಒಟ್ಟಿಗೆ ಸೇರಿಸಿ ಭಾಗಿಸಿದಾಗ ಬರುವ ‘ಸರಾಸರಿ’ ಮೊತ್ತವು ಕಾಗದದ ಮೇಲೆ ಸುಂದರವಾಗಿ ಕಾಣಿಸುತ್ತದೆ. ಆದರೆ, ಪ್ರಾಯೋಗಿಕವಾಗಿ ಬಡ ಕಾರ್ಮಿಕನ ಜೇಬಿಗೆ ಆ ಹಣ ತಲುಪಿರುವುದಿಲ್ಲ. ನಿರಂತರವಾಗಿ ಏರುತ್ತಿರುವ ಹಣದುಬ್ಬರ ವಿಶೇಷವಾಗಿ ಅಡುಗೆ ಎಣ್ಣೆ, ಧಾನ್ಯಗಳು, ಹಣ್ಣು-ತರಕಾರಿ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳು ಸಾಮಾನ್ಯ ಜನರ ನೈಜ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿದೆ.

ಆಕ್ಸ್‌ಫ್ಯಾಮ್ ಹಾಗೂ ವರ್ಲ್ಡ್ ಇನ್‌ಈಕ್ವಾಲಿಟಿ ಲ್ಯಾಬ್‌ನಂತಹ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಸಂಪತ್ತಿನ ಸಿಂಹಪಾಲು ಅಂದರೆ ಶೇ. 65ಕ್ಕೂ ಹೆಚ್ಚು ಭಾಗ ಕೇವಲ ಶೇ. 10ರಷ್ಟು ಅತಿಶ್ರೀಮಂತರ ಕೈಯಲ್ಲಿದೆ. ಇನ್ನು ದೇಶದ ಶೇ. 50ರಷ್ಟಿರುವ ಕೆಳವರ್ಗದ ಬಡ ಹಾಗೂ ಮಧ್ಯಮ ಜನಸಂಖ್ಯೆಯ ಪಾಲಿಗೆ ಉಳಿದಿರುವುದು ಕೇವಲ ಶೇ. 3ರಿಂದ 5ರಷ್ಟು ಸಂಪತ್ತು ಮಾತ್ರ. ಆರ್ಥಿಕತೆಯ ಈ ತೀವ್ರತರವಾದ ಅಸಮಾನತೆ ಮತ್ತು ಆಸ್ತಿಯ ಏಕಸ್ವಾಮ್ಯದ ಕುರಿತು ದೇಶದ ಪ್ರಧಾನಮಂತ್ರಿಗಳಾಗಲಿ ಅಥವಾ ಕೇಂದ್ರ ಸರಕಾರದ ನೀತಿ ನಿರೂಪಕರಾಗಲಿ ಮಾತನಾಡುವುದಕ್ಕೇ ಹಿಂಜರಿಯುತ್ತಿರುವುದು ಇಂದಿನ ಅತ್ಯಂತ ದೊಡ್ಡ ವಿಪರ್ಯಾಸ.

ಇಂದಿನ ಭಾರತ ಎದುರಿಸುತ್ತಿರುವ ಅತ್ಯಂತ ಆತಂಕಕಾರಿ ಸವಾಲೆಂದರೆ ಉದ್ಯೋಗರಹಿತ ಬೆಳವಣಿಗೆ. ಉನ್ನತ ಪದವಿ, ಇಂಜಿನಿಯರಿಂಗ್, ಎಂಬಿಎ ಹಾಗೂ ಪಿಎಚ್.ಡಿ. ಮುಗಿಸಿದ ಲಕ್ಷಾಂತರ ಯುವಕ-ಯುವತಿಯರು ಇಂದು ಸೂಕ್ತ ಉದ್ಯೋಗವಿಲ್ಲದೆ ಬೀದಿ ಅಲೆಯುತ್ತಿದ್ದಾರೆ. ಸರಕಾರಿ ವಲಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿದ್ದರೂ ನೇಮಕಾತಿ ನಡೆಯುತ್ತಿಲ್ಲ; ಖಾಸಗಿ ವಲಯದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳು ಬಹುತೇಕ ಕಡಿಮೆ ವೇತನದ, ಯಾವುದೇ ಸುರಕ್ಷತೆಯಿಲ್ಲದ ಅಸಂಘಟಿತ ಸ್ವರೂಪದ ‘ಗಿಗ್’ ಕೆಲಸಗಳಾಗಿವೆ. ನೋಟು ಅಮಾನ್ಯೀಕರಣ ಮತ್ತು ಅವೈಜ್ಞಾನಿಕ ಜಿಎಸ್‌ಟಿ ಪದ್ಧತಿಯಿಂದ ಚೇತರಿಸಿಕೊಳ್ಳಲಾಗದೆ ಅಸಂಘಟಿತ ಮತ್ತು ಸಣ್ಣ ಉದ್ಯಮಗಳು ನಲುಗುತ್ತಿರುವ ಸ್ಥಿತಿ. ಉತ್ತಮ ಮೂಲಸೌಕರ್ಯ, ಸಂಶೋಧನಾ ಕ್ಷೇತ್ರಕ್ಕೆ ಬೆಂಬಲವಿಲ್ಲದೆ ಪತ್ರಿಭೆಗಳ ಪಲಾಯನ ನಿರಂತರವಾಗಿ ಹೆಚ್ಚುತ್ತಲೇ ಇದೆ.

ಇಂತಹ ಪರಿಸ್ಥಿತಿಯಲ್ಲಿ ದೇಶದ ನಿಜವಾದ ಆಸ್ತಿಯಾಗಿರುವ ‘ಪ್ರತಿಭೆ’ಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಪರಿಣಾಮವಾಗಿ, ಲಕ್ಷಾಂತರ ಉದ್ಯಮಿಗಳು, ವಿಜ್ಞಾನಿಗಳು, ವೈದ್ಯರು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಭಾರತೀಯ ಪೌರತ್ವವನ್ನು ತೊರೆದು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ‘‘ವಿದೇಶಕ್ಕೆ ಹೋಗಬೇಡಿ’’ ಎಂದು ಭಾಷಣ ಮಾಡುವ ಪ್ರಧಾನಿಗಳು, ದೇಶದ ಪ್ರತಿಭಾವಂತರು ಇಲ್ಲೇ ಉಳಿದುಕೊಳ್ಳಲು ಅಗತ್ಯವಿರುವ ವೈಜ್ಞಾನಿಕ, ಆವಿಷ್ಕಾರಕಾರಿ ಮತ್ತು ನ್ಯಾಯಯುತ ಉದ್ಯೋಗ ವಾತಾವರಣವನ್ನು ಏಕೆ ನಿರ್ಮಿಸುತ್ತಿಲ್ಲ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ದೇಶದ ಆರ್ಥಿಕ ನೀತಿಗಳನ್ನು ರೂಪಿಸುವ ಮತ್ತು ಜಾರಿಗೊಳಿಸುವ ಅಂತಿಮ ಹೊಣೆಗಾರಿಕೆ ಸರಕಾರದ್ದೇ ಹೊರತು ಪ್ರಜೆಗಳದ್ದಲ್ಲ.

ಜನಸಾಮಾನ್ಯರು ನೀಡುವ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷ ತೆರಿಗೆ ಹಣವನ್ನು ಅನಗತ್ಯ ಪ್ರಚಾರಗಳಿಗೆ ಮತ್ತು ರಾಜಕೀಯ ಲಾಭದ ಯೋಜನೆಗಳಿಗೆ ಪೋಲು ಮಾಡುತ್ತಿರುವುದಕ್ಕೆ ಯಾರು ಹೊಣೆ? ದೇಶದ ಶೇ. 90ರಷ್ಟು ಉದ್ಯೋಗ ಸೃಷ್ಟಿಸುವ ಎಂಎಸ್‌ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ) ವಲಯವನ್ನು ಬಲಪಡಿಸಲು ದೀರ್ಘಕಾಲೀನ ಯೋಜನೆಗಳ ಕೊರತೆಯಿಂದ ಬಹುತೇಕ ಉದ್ಯಮಗಳು ಮೂಲೆಗೂಂಪಾಗಿವೆ. ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳ ದುಸ್ಥಿತಿಯಿಂದಾಗಿ ಸಾಮಾನ್ಯ ಪ್ರಜೆ ತನ್ನ ಸಂಪಾದನೆಯ ಸಿಂಹಪಾಲನ್ನು ಖಾಸಗಿ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೇ ವ್ಯಯಿಸುವಂತಾಗಿದೆ.

ಇತ್ತೀಚಿನ ಜಿಡಿಪಿ ಹೆಚ್ಚಳಕ್ಕೆ ಮುಖ್ಯ ಕಾರಣ ಸರಕಾರ ಮೂಲಸೌಕರ್ಯಗಳಿಗೆ (ರಸ್ತೆ, ಬಂದರು, ಸೇತುವೆ) ಮಾಡುತ್ತಿರುವ ಬೃಹತ್ ಮೂಲಧನ ವೆಚ್ಚ (Capital Expenditure). ಆದರೆ, ದೇಶದ ಶೇಕಡಾ 50ಕ್ಕೂ ಹೆಚ್ಚು ಜಿಡಿಪಿಗೆ ಆಸರೆಯಾಗಬೇಕಿದ್ದ ‘ಖಾಸಗಿ ಉಪಭೋಗ’ (Private Consumption) ಅಥವಾ ಸಾಮಾನ್ಯ ಜನರ ಖರೀದಿ ಸಾಮರ್ಥ್ಯ ಮಂದಗತಿಯಲ್ಲಿದೆ. ಅಂದರೆ, ಜನರು ನಿತ್ಯಬಳಕೆಯ ವಸ್ತುಗಳನ್ನು ಕೊಳ್ಳುವ ಪ್ರಮಾಣದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ.

ಕೇವಲ ಜಿಡಿಪಿಯ ಶೇ. 7.8 ಎಂಬ ಅಂಕಿಯನ್ನು ನೋಡಿ ಸಂಭ್ರಮಿಸುವುದು ಅಥವಾ ಅದನ್ನು ಸಂಪೂರ್ಣವಾಗಿ ನಿಕೃಷ್ಟವಾಗಿ ಕಾಣುವುದು ಎರಡೂ ಆರ್ಥಿಕ ಅಪಚಾರವಾಗುತ್ತದೆ. ಜಿಡಿಪಿ ಪ್ರಗತಿಯು ದೇಶದ ಸಾಮರ್ಥ್ಯವನ್ನು ಎತ್ತಿಹಿಡಿಯುತ್ತದೆ ನಿಜ, ಆದರೆ ಬಳಕೆಯಾಗದ ಜಿಡಿಪಿ ಬಡವನ ಹೊಟ್ಟೆ ತುಂಬಿಸುವುದಿಲ್ಲ. ಯಾವಾಗ ದೇಶದ ಕಟ್ಟಕಡೆಯ ಪ್ರಜೆಗೂ ನೈಜ ಆದಾಯ ಹೆಚ್ಚಾಗುತ್ತದೆಯೋ, ಪ್ರತಿಯೊಬ್ಬ ಅರ್ಹ ಯುವಕನಿಗೆ ಗೌರವಯುತ ಉದ್ಯೋಗ ಸಿಗುತ್ತದೆಯೋ, ಕೃಷಿಕನಿಗೆ ನ್ಯಾಯಯುತ ಬೆಲೆ ಸಿಗುತ್ತದೆಯೋ ಮತ್ತು ಪ್ರಜೆಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆಯೋ ಆಗ ಮಾತ್ರ ದೇಶ ನಿಜವಾದ ಅರ್ಥದಲ್ಲಿ ಪ್ರಗತಿ ಸಾಧಿಸಿದೆ ಎಂದು ಹೇಳಬಹುದು.

ಸರಕಾರಕ್ಕೆ ನಿಜಕ್ಕೂ ಆರ್ಥಿಕ ಸುಭದ್ರತೆಯ ಕಾಳಜಿ ಇದ್ದರೆ, ಕೇವಲ ಜಿಡಿಪಿ ಅಂಕಿ-ಅಂಶಗಳ ಪ್ರಚಾರವನ್ನು ನಿಲ್ಲಿಸಿ, ನೈಜ ಉದ್ಯೋಗ ಸೃಷ್ಟಿ, ಸಮಾನ ಆದಾಯ ಹಂಚಿಕೆ, ಸಣ್ಣ ಉದ್ಯಮಗಳ ಉತ್ತೇಜನ ಹಾಗೂ ಕೃಷಿ ವಲಯದ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕಿದೆ. ಜಿಡಿಪಿಯ ಲಾಭವು ಕಾರ್ಪೊರೇಟ್‌ಗಳ ಬಾಟಮ್‌ಲೈನ್‌ನಿಂದ ದಾಟಿ ಸಾಮಾನ್ಯ ಪ್ರಜೆಯ ತಟ್ಟೆಗೆ ತಲುಪಿದಾಗ ಮಾತ್ರ ಈ ಶೇ. 7.8 ಪ್ರಗತಿಗೆ ನೈಜ ಅರ್ಥ ಸಿಗಲು ಸಾಧ್ಯ. ದೇಶದ ಪ್ರತಿಯೊಂದು ಸಮುದಾಯದ ಕಟ್ಟಕಡೆಯ ಪ್ರಜೆಯ ಆದಾಯ ಮಟ್ಟ ಏರದಿದ್ದರೆ ಮತ್ತು ಯುವಜನತೆಗೆ ಸುಭದ್ರ ಭವಿಷ್ಯ ಸಿಗದಿದ್ದರೆ, ದೇಶವು ಆರ್ಥಿಕವಾಗಿ ಸುಭದ್ರವಾಗಿದೆ ಎಂಬ ಮಾತು ಬರೀ ಬೂಟಾಟಿಕೆಯಾಗಿ ಉಳಿಯುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಂದ್ರ ಪೈ ಭಟ್ಕಳ

contributor