ಒಡಕು ಬಯಲುಮಾಡಿದ ಪಾದಯಾತ್ರೆ!
ನಾಗೇಂದ್ರರ ರಾಜೀನಾಮೆ ‘ಪ್ರಹಸನ’ಕ್ಕೆ ಮುನ್ನವೇ ಲಿಂಗಸುಗೂರಿನಿಂದ ಬಳ್ಳಾರಿಗೆ ಸೆಪ್ಟಂಬರ್ 1ರಿಂದ 10ವರೆಗೆ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಪ್ರಕಟಿಸಿತ್ತು. ಸಚಿವರ ರಾಜೀನಾಮೆಯಿಂದ ಪಾದಯಾತ್ರೆ ಮಹತ್ವ ಕಳೆದುಕೊಂಡಿದೆ. ಅಷ್ಟೇ ಅಲ್ಲ, ಆರಂಭದಲ್ಲೇ ‘ವಿಘ್ನ’ಗಳು ಎದುರಾಗಿವೆ. ಪಕ್ಷದೊಳಗೆ ಮತ್ತು ಹೊರಗೆ (ದೋಸ್ತಿಗಳ ನಡುವೆ) ಅಸಮಾಧಾನ ಹೊಗೆಯಾಡುತ್ತಿದೆ. ಎಲ್ಲ ನಾಯಕರನ್ನು ಒಗ್ಗೂಡಿಸಿ, ಎರಡೂ ಪಕ್ಷಗಳನ್ನು ಬಲಪಡಿಸಬೇಕಿದ್ದ ಯಾತ್ರೆ ಒಳಜಗಳ, ಗುಂಪುಗಾರಿಕೆ ಬಯಲು ಮಾಡಿದೆ. ಆಡಳಿತ ಪಕ್ಷವನ್ನು ಹಣಿಯಲು ರೂಪಿಸಿದ ಕಾರ್ಯಕ್ರಮ ಬಿಜೆಪಿಗೇ ಮುಜುಗರ ತಂದಿದೆ.
ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಒಮ್ಮೆ ಒಂದು ಮಾತು ಹೇಳಿದ್ದರು. ‘ಕಾಂಗ್ರೆಸ್ ಸೀಮೆಎಣ್ಣೆ ಇದ್ದಂತೆ. ಬಿಜೆಪಿ ಬೆಂಕಿಪೊಟ್ಟಣ ಇದ್ದಂತೆ’. ಕಾಂಗ್ರೆಸ್ ವಿವಾದ ಸೃಷ್ಟಿಸುತ್ತದೆ. ಬಿಜೆಪಿ ಸವಾರಿ ಮಾಡುತ್ತದೆ ಎಂಬುದು ಈ ಮಾತಿನ ಅರ್ಥ. ಹೆಚ್ಚುಕಡಿಮೆ ಮೂರು ದಶಕದ ಹಿಂದೆ ಹುಬ್ಬಳ್ಳಿ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಪಟೇಲರು ಆಡಿದ್ದ ಮಾತು ಇಂದು ಹೆಚ್ಚು ಸೂಕ್ತವಾಗಿ ಕಾಣುತ್ತಿದೆ.
ಮೊನ್ನೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ,‘ಎಲ್ಲ ಧರ್ಮಕ್ಕಿಂತ ಇಸ್ಲಾಮ್ ಧರ್ಮ ಶ್ರೇಷ್ಠ’ ಎಂದು ಹೇಳಿ ವಿವಾದ ಸೃಷ್ಟಿಸಿದರು. ಅವರ ಹೇಳಿಕೆ ಹಿಡಿದುಕೊಂಡು ಬಿಜೆಪಿ ನಾಯಕರು ಹಿಗ್ಗಾಮುಗ್ಗ ಜಗ್ಗಾಡಿದರು. ಸಚಿವರಾದವರು ಅನಗತ್ಯ ವಿವಾದಗಳನ್ನು ಸೃಷ್ಟಿಸಬಾರದು. ಏನೇ ಹೇಳಿದರೂ ಅದನ್ನು ಸಮರ್ಥಿಸಿಕೊಳ್ಳುವ ತಾಕತ್ತಿರಬೇಕು. ಬಾಯಿ ಚಪಲಕ್ಕೆ ಏನೇನೋ ಮಾತನಾಡುವುದು, ಆಮೇಲೆ ಉಲ್ಟಾ ಹೊಡೆಯುವುದು ಸರಿಯಲ್ಲ. ಪ್ರತೀ ಮಾತು ಆಡುವ ಮುನ್ನ ಅಳೆದು, ತೂಗಬೇಕು. ಹಿಂದೆ ಬಸವಲಿಂಗಪ್ಪನವರು ‘ಕನ್ನಡ ಸಾಹಿತ್ಯ ಬೂಸಾ’ ಎಂದು ಹೇಳಿ ವಿವಾದ ಸೃಷ್ಟಿಸಿದರು. ಅವರು ಹೇಳಿಕೆಗೆ ಬದ್ಧರಾದರು. ಹೇಳಿದ್ದನ್ನು ಅರಗಿಸಿಕೊಳ್ಳುವ ತಾಕತ್ತು ಅವರಿಗಿತ್ತು. ಅದಕ್ಕಾಗಿ ಸಚಿವ ಸ್ಥಾನ ಹೋದರೂ ಚಿಂತಿಸಲಿಲ್ಲ. ರಾಯರೆಡ್ಡಿ ಅವರಿಗೆ ಹೇಳಿದ್ದನ್ನು ಸಮರ್ಥಿಸಿಕೊಳ್ಳಲು ಆಗಲಿಲ್ಲ. ಪಕ್ಷ ಮತ್ತು ಸರಕಾರವೂ ಬೆಂಬಲಕ್ಕೆ ಬರಲಿಲ್ಲ. ‘ಎಲ್ಲ ಧರ್ಮಗಳಂತೆ ಇಸ್ಲಾಮ್ ಧರ್ಮವೂ ಶ್ರೇಷ್ಠ’ ಎಂದಿದ್ದರೆ ವಿವಾದ ಆಗುತ್ತಿರಲಿಲ್ಲ. ಕಾಂಗ್ರೆಸ್ ನಾಯಕರ ಚೇಷ್ಟೆಗೆ ಇದೂ ಒಂದು ಉದಾಹರಣೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಪ್ರಕರಣ ಕಾಂಗ್ರೆಸ್ ಅವಾಂತರಕ್ಕೆ ಮತ್ತೊಂದು ನಿದರ್ಶನ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ನಾಗೇಂದ್ರ ‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ’ದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಹೊಸದಾಗಿ ಅಸ್ತಿತ್ವಕ್ಕೆ ಬಂದ ಡಿಕೆಶಿ ಸಂಪುಟ ಸೇರಿದ್ದರು. ಸಿಬಿಐ, ಈ.ಡಿ.ಯಲ್ಲಿ ಪ್ರಕರಣಗಳಿದ್ದರೂ, ಯಾರ ಒತ್ತಡವೋ ಏನೋ ಸಚಿವ ಸ್ಥಾನ ಗಿಟ್ಟಿಸಿಕೊಂಡರು. ಈ ಬೆಳವಣಿಗೆ ಮಕಾಡೆ ಮಲಗಿದ್ದ ಬಿಜೆಪಿ ನಾಯಕರನ್ನು ಬಡಿದೆಬ್ಬಿಸಿತು. ‘ವಿರೋಧ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ’ ಎಂಬ ಟೀಕೆಗಳು ಕೇಳುವಾಗಲೇ, ಕಾಂಗ್ರೆಸ್ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಿತು. ನಾಗೇಂದ್ರ ಸಂಪುಟಕ್ಕೆ ಸೇರ್ಪಡೆ ಆಗದಿದ್ದರೆ ಬಿಜೆಪಿ ಪ್ರತಿಭಟನೆಗೆ ಅವಕಾಶವೇ ಇರುತ್ತಿರಲಿಲ್ಲ.
ಆಗಸ್ಟ್ 13ರಿಂದ ಆರಂಭವಾಗಿ, ನಿಗದಿತ ಅವಧಿಗಿಂತ ಎರಡು ದಿನ ಮೊದಲೇ ಕೊನೆಗೊಂಡ ವಿಧಾನಮಂಡಲದ ಉಭಯ ಸದನಗಳ ಇಡೀ ಕಲಾಪ ನಾಗೇಂದ್ರರ ರಾಜೀನಾಮೆ ಗದ್ದಲದಲ್ಲಿ ಕೊಚ್ಚಿಹೋಯಿತು. ಬಿಜೆಪಿ ಮತ್ತು ಜೆಡಿಎಸ್ ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದು ಅವರು ರಾಜೀನಾಮೆ ಕೊಟ್ಟಿದ್ದಾಯಿತು. ರಾಜ್ಯಪಾಲರು ಅಂಗೀಕರಿಸಿದ್ದಾಯಿತು. ಆದರೆ, ರಾಜೀನಾಮೆ ‘ಪ್ರಹಸನ’ಕ್ಕೆ ಮುನ್ನವೇ ಲಿಂಗಸುಗೂರಿನಿಂದ ಬಳ್ಳಾರಿಗೆ ಸೆಪ್ಟಂಬರ್ 1ರಿಂದ 10ವರೆಗೆ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಪ್ರಕಟಿಸಿತ್ತು. ಸಚಿವರ ರಾಜೀನಾಮೆಯಿಂದ ಪಾದಯಾತ್ರೆ ಮಹತ್ವ ಕಳೆದುಕೊಂಡಿದೆ. ಅಷ್ಟೇ ಅಲ್ಲ, ಆರಂಭದಲ್ಲೇ ‘ವಿಘ್ನ’ಗಳು ಎದುರಾಗಿವೆ. ಪಕ್ಷದೊಳಗೆ ಮತ್ತು ಹೊರಗೆ (ದೋಸ್ತಿಗಳ ನಡುವೆ) ಅಸಮಾಧಾನ ಹೊಗೆಯಾಡುತ್ತಿದೆ. ಎಲ್ಲ ನಾಯಕರನ್ನು ಒಗ್ಗೂಡಿಸಿ, ಎರಡೂ ಪಕ್ಷಗಳನ್ನು ಬಲಪಡಿಸಬೇಕಿದ್ದ ಯಾತ್ರೆ ಒಳಜಗಳ, ಗುಂಪುಗಾರಿಕೆ ಬಯಲು ಮಾಡಿದೆ. ಆಡಳಿತ ಪಕ್ಷವನ್ನು ಹಣಿಯಲು ರೂಪಿಸಿದ ಕಾರ್ಯಕ್ರಮ ಬಿಜೆಪಿಗೇ ಮುಜುಗರ ತಂದಿದೆ.
ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಮುಖಂಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘‘ಯಾವ ಉದ್ದೇಶ ಇಟ್ಟುಕೊಂಡು ಬಿಜೆಪಿ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ. ನಾಗೇಂದ್ರರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸುವ ಉದ್ದೇಶವಿತ್ತು. ಉದ್ದೇಶ ಈಡೇರಿದೆ. ಪಾದಯಾತ್ರೆ ಬಗ್ಗೆ ನನ್ನ ಬಳಿ ಚರ್ಚಿಸಿಲ್ಲ’’ ಎಂದಿದ್ದಾರೆ. ಬಿಜೆಪಿ ಮುಖಂಡ, ಕೇಂದ್ರ ಸಚಿವ ವಿ. ಸೋಮಣ್ಣ, ‘‘ಪಾದಯಾತ್ರೆ ಬಗ್ಗೆ ನನಗೆ ಗೊತ್ತಿಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯೊಳಗೆ ಇನ್ನೂ ಕೆಲವರು ಇಂತಹದೇ ನಿಲುವು ಹೊಂದಿದ್ದರೂ ಬಹಿರಂಗವಾಗಿ ಹೇಳುತ್ತಿಲ್ಲ.
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷಗಳು ಪ್ರಬಲವಾಗಿರಬೇಕು. ವಿರೋಧ ಪಕ್ಷಗಳು ಜಾಗೃತವಾಗಿದ್ದರೆ ಸರಕಾರ ಕಣ್ಣು, ಕಿವಿ ತೆರೆದುಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಸದ್ಯ, ಆಡಳಿತ ಪಕ್ಷದಲ್ಲಿ ಒಂದು ರೀತಿಯ ಇಕ್ಕಟ್ಟಿದ್ದರೆ, ವಿರೋಧ ಪಕ್ಷದಲ್ಲಿ ಮತ್ತೊಂದು ಬಗೆಯ ಬಿಕ್ಕಟ್ಟಿದೆ. ಭಿನ್ನಾಭಿಪ್ರಾಯ ಹಾಗೂ ಗುಂಪುಗಾರಿಕೆ ಎರಡೂ ಪಕ್ಷಗಳಲ್ಲಿರುವ ಸಮಾನ ಅಂಶಗಳು. ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗದವರ ಅತೃಪ್ತಿ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೇ ಕಾಣುತ್ತಿದೆ. ಬಿಜೆಪಿಯಲ್ಲಿ ವಿಜಯೇಂದ್ರ ನಾಯಕತ್ವ ವಿರೋಧಿಸುವ ಹಿರಿಯ ನಾಯಕರ ದೊಡ್ಡ ಗುಂಪೇ ಇದೆ. ಅವರ ಕಡೆಗಣನೆ ಸಮಸ್ಯೆಯ ಮೂಲ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವ ಒಪ್ಪಿಕೊಂಡಿದ್ದ ಹಿರಿಯರು ಅವರ ಮಗನನ್ನು ನಾಯಕನೆಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವ ಛಾತಿ ವಿಜಯೇಂದ್ರ ಅವರಿಗೂ ಇದ್ದಂತಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ನಡುವೆ ಸಣ್ಣ ವ್ಯತ್ಯಾಸವಿದೆ. ಮಾಜಿ ಮುಖ್ಯಮಂತ್ರಿ ತಳ ಮಟ್ಟದಿಂದ ಬೆಳೆದು ಬಂದವರು. ವಿಜಯೇಂದ್ರ ಮೇಲಿಂದ ಹೇರಲ್ಪಟ್ಟವರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯಿದೆ. ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ, ಸಂಘ ಪರಿವಾರದ ನಾಯಕರಿಗೆ ಆಪ್ತರಾಗಿರುವ ಕೆಲವರು ತೆರೆಮರೆಯಲ್ಲಿ ಆಟವಾಡುತ್ತಿದ್ದಾರೆ. ವಿಜಯೇಂದ್ರ ಅವರ ಪದಚ್ಯುತಿಗೆ ತಂತ್ರ ರೂಪಿಸುತ್ತಿದ್ದಾರೆ. ಅವರಿಗೆ ಕುಮಾರಸ್ವಾಮಿ ಅವರ ಬೆಂಬಲವೂ ಇರಬಹುದು.
ವಿಜಯೇಂದ್ರ ನಾಯಕತ್ವದಲ್ಲಿ ಬಿಜೆಪಿ ದುರ್ಬಲವಾಗಿರುವುದಂತೂ ನಿಜ. 2023ರ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿರುವ ಪಕ್ಷಕ್ಕೆ ಚೇತರಿಸಿಕೊಂಡು ಮೇಲೇಳಲು ಆಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಮುಡಾ’ ಹಗರಣದ ವಿರುದ್ಧ ಬೆಂಗಳೂರು-ಮೈಸೂರು ನಡುವೆ ನಡೆಸಿದ ಪಾದಯಾತ್ರೆ ಬಿಟ್ಟರೆ ಮತ್ತೊಂದು ದೊಡ್ಡ ಕಾರ್ಯಕ್ರಮ ಆಗಿಲ್ಲ. ಬಹುಶಃ ಅದೇ ಕಾರಣಕ್ಕೆ ಈ ಪಾದಯಾತ್ರೆ ರೂಪಿಸಿರಬಹುದು. ತಮ್ಮ ನಾಯಕತ್ವ ಬಲಪಡಿಸಿಕೊಳ್ಳುವ ಉದ್ದೇಶ ಹಿಂದಿರಬಹುದು. ವಿಧಾನಸಭೆ ಚುನಾವಣೆಗೆ ಇನ್ನು ಒಂದೂವರೆ ವರ್ಷವಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ. ಅದರಲ್ಲೂ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ನಡೆಯುತ್ತಿದೆ.
ಬಿಜೆಪಿ-ಜೆಡಿಎಸ್ ದೋಸ್ತಿಗಳು ಮೇಲು ನೋಟಕ್ಕೆ ಒಂದಾಗಿರುವಂತೆ ಕಾಣುತ್ತಾರೆ. ಒಳಗೊಳಗೇ ಶೀತಲ ಸಮರವಿದೆ. ಪರಸ್ಪರ ಸಹಕಾರ-ಹೊಂದಾಣಿಕೆಯಿಂದ ಹೋಗಬೇಕಿದ್ದ ಮಿತ್ರರು ಬೆನ್ನು ತಿರುಗಿಸಿದ್ದಾರೆ. ಮುಖ್ಯಮಂತ್ರಿ ಡಿಕೆಶಿ ಅವರ ಮಹತ್ವಾಕಾಂಕ್ಷೆಯ ‘ಬಿಡದಿ ಟೌನ್‌ಶಿಪ್’ ವಿರುದ್ಧ ಜೆಡಿಎಸ್ ನಾಯಕರು ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಳ್ಳಲಿಲ್ಲ. ವಿಜಯೇಂದ್ರ ಅದಕ್ಕೆ ತಮ್ಮದೇ ಕಾರಣ ಕೊಟ್ಟರು. ಬಹುಶಃ ಇಂತಹದೇ ಕಾರಣಕ್ಕೆ ಜೆಡಿಎಸ್ ನಾಯಕರು ಬಿಜೆಪಿ ಪಾದಯಾತ್ರೆಗೆ ಗೈರಾಗಿರಬಹುದು.
ಕುಮಾರಸ್ವಾಮಿ ಅವರ ಸಿಟ್ಟಿಗೆ ಇದಕ್ಕಿಂತಲೂ ದೊಡ್ಡ ಕಾರಣವಿದೆ. ಈಚೆಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸುಮಾರು 12 ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಗೆಲುವಿಗೆ ನೆರವಾದರು. ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು, ಮಿತ್ರ ಪಕ್ಷಕ್ಕೆ ಹೆಚ್ಚುವರಿ ಮತಗಳನ್ನು ವರ್ಗಾವಣೆ ಮಾಡಿಸದೆ ತಟಸ್ಥರಾದರು. ಇದರಿಂದ ಶಿವಕುಮಾರ್ ಕೈ ಮೇಲಾಯಿತು. ವಿಜಯೇಂದ್ರ ನಾಯಕತ್ವ ದುರ್ಬಲವಾಯಿತು. ಇದು ವಿಜಯೇಂದ್ರ ಅವರ ಪದಚ್ಯುತಿಗೆ ಕಾರ್ಯತಂತ್ರ ಹೆಣೆಯಲು ಅವರ ವಿರೋಧಿಗಳಿಗೆ ದೊಡ್ಡ ಅಸ್ತ್ರ ಕೊಟ್ಟಿದೆ. ಅಡ್ಡ ಮತದಾನ ಪ್ರಕರಣವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮಿತ್ರರು ರಾಜ್ಯ ರಾಜಕೀಯದ ಮೇಲೆ ಪ್ರಾಬಲ್ಯ ಸಾಧಿಸಲು ಪೈಪೋಟಿಗಿಳಿದಿದ್ದಾರೆ. ಬಿಜೆಪಿಯಲ್ಲಿ ಪ್ರಬಲ ನಾಯಕರಿಲ್ಲದೆ ಇರುವುದು ಕುಮಾರಸ್ವಾಮಿ ಅವರಿಗೆ ಅನುಕೂಲ. ಆದರೆ, ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಮಾತ್ರ ಹಿಡಿತ ಹೊಂದಿದೆ. ಒಕ್ಕಲಿಗರ ಪ್ರಾಬಲ್ಯದ ಪ್ರದೇಶದಲ್ಲಿ ಎಚ್‌ಡಿಕೆಗೆ ಡಿಕೆಶಿ ತೀವ್ರ ಸ್ಪರ್ಧೆ ಒಡ್ಡುತ್ತಿದ್ದಾರೆ. ಅಕಸ್ಮಾತ್ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದರೆ ‘ಮುಖ್ಯಮಂತ್ರಿ ಯಾರು?’ ಎಂಬ ವಿಷಯದಲ್ಲೂ ದೋಸ್ತಿಗಳ ಮಧ್ಯೆ ಮುಸುಕಿನ ಗುದ್ದಾಟವಿದೆ. ಹಲವು ಬಿಜೆಪಿ ನಾಯಕರು, ‘ಎಚ್‌ಡಿಕೆ ಆದರೂ ಪರವಾಗಿಲ್ಲ, ವಿಜಯೇಂದ್ರ ಬೇಡ’ ಎನ್ನುವ ಮನಃಸ್ಥಿತಿ ಹೊಂದಿದ್ದಾರೆ. ಅದಕ್ಕೆ ಬಿಜೆಪಿ ವರಿಷ್ಠರು ಅಂಕಿತ ಹಾಕಬೇಕು. ವಿಜಯೇಂದ್ರ ಪ್ರಬಲ ಲಿಂಗಾಯತ ಸಮಾಜಕ್ಕೆ ಸೇರಿರುವುದರಿಂಧ ಅವರನ್ನು ಸುಲಭವಾಗಿ ಪಕ್ಕಕ್ಕೆ ಸರಿಸಲಾಗದು. ಏಕೆಂದರೆ, ಅವರಿಗೆ ಯಡಿಯೂರಪ್ಪನವರ ಆಶೀರ್ವಾದವಿದೆ. ಬಿಜೆಪಿ ಪಾದಯಾತ್ರೆ ವಿಜಯೇಂದ್ರರ ಕೈ ಬಲಪಡುವುದೇ ಅಥವಾ ಪಕ್ಷದೊಳಗೆ ಮತ್ತು ಹೊರಗಿರುವ ಒಳಜಗಳ ಉಲ್ಬಣಿಸುವುದೇ ನೋಡಬೇಕು.
ಒಟ್ಟಿನಲ್ಲಿ ನಾಗೇಂದ್ರರ ರಾಜೀನಾಮೆ ಕ್ರೆಡಿಟ್ ದೋಸ್ತಿಗಳಿಗೆ ಸಲ್ಲಬೇಕು.