ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಪ್ರತಿವರ್ಷ ಸರಾಸರಿ 1.88 ಲಕ್ಷ ಪ್ರಕರಣ ದಾಖಲು
ಶೇ.68.38ರಷ್ಟು ಐಪಿಸಿ, ಬಿಎನ್ಎಸ್, ಶೇ.31.62ರಷ್ಟು ಎಸ್ಎಲ್ಎಲ್ ಪ್ರಕರಣ
ಸಾಂದರ್ಭಿಕ ಚಿತ್ರ | Photo credit : AI chatgpt
ಬೆಂಗಳೂರು : ರಾಜ್ಯದಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ವರ್ಷ ಸರಾಸರಿ 1,88,801 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ವರ್ಷಗಳಲ್ಲಿ 5.16 ಲಕ್ಷ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಭಾರತೀಯ ದಂಡ ಸಂಹಿತೆ(ಐಪಿಸಿ) ಪ್ರಕರಣಗಳು ಹಾಗೂ 2.38 ಲಕ್ಷ ವಿಶೇಷ ಮತ್ತು ಸ್ಥಳೀಯ ಕಾನೂನುಗಳಡಿ(ಎಸ್ಎಲ್ಎಲ್) ದಾಖಲಾದ ಪ್ರಕರಣಗಳು ಸೇರಿ 7.55 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಐಪಿಸಿ ಮತ್ತು ಬಿಎನ್ಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಡಕಾಯಿತಿ, ದರೋಡೆ, ಕಳ್ಳತನ ಮತ್ತು ಗಲಭೆ ಪ್ರಕರಣಗಳ ಸಂಖ್ಯೆಯೇ 1,19,230ರಷ್ಟಿದೆ. 4,313 ಕೊಲೆ ಪ್ರಕರಣಗಳು, 15,185 ಪೊಕ್ಸೊ ಪ್ರಕರಣಗಳು, 63,447 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಒಳಗೊಂಡಂತೆ ಮತ್ತಿತರ ಪ್ರಕರಣಗಳು ಸೇರಿ ಒಟ್ಟು 5,16,435 ಐಪಿಸಿ ಮತ್ತು ಬಿಎನ್ಎಸ್ ಪ್ರಕರಣಗಳು ದಾಖಲಾಗಿದೆ. ಇದು ಒಟ್ಟು ಪ್ರಕರಣಗಳಲ್ಲಿ ಶೇ.68.38ರಷ್ಟಿರುತ್ತದೆ.
ಎಸ್ಎಲ್ಎಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ 8,069 ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು, 25,196 ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ(ಎನ್ಡಿಪಿಎಸ್) ಪ್ರಕರಣಗಳು, 65 ಸಾವಿರಕ್ಕೂ ಅಧಿಕ ಸೈಬರ್ ಅಪರಾಧ ಪ್ರಕರಣಗಳು, 52 ಸಾವಿರಕ್ಕೂ ಅಧಿಕ ಗ್ಯಾಂಬ್ಲಿಂಗ್ ಪ್ರಕರಣಗಳು ಸೇರಿ 2,38,772 ಎಸ್ಎಲ್ಎಲ್ ಪ್ರಕರಣಗಳು ದಾಖಲಾಗಿದೆ. ಇದು ಒಟ್ಟು ಪ್ರಕರಣಗಳಲ್ಲಿ ಶೇ.31.62ರಷ್ಟಿರುತ್ತದೆ.
2023ರಿಂದ ಇಲ್ಲಿಯವರೆಗೆ ರಾಜ್ಯಾದ್ಯಂತ ದಾಖಲಾದ ಒಟ್ಟು 7,55,207 ಪ್ರಕರಣಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ ಶೇ.29ರಷ್ಟು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 2,19,062 ಪ್ರಕರಣಗಳು ದಾಖಲಾಗಿದ್ದರೆ, ಮೈಸೂರು ನಗರ 11,851, ಹುಬ್ಬಳ್ಳಿ-ಧಾರವಾಡ ಅವಳಿ ನಗರ 10,451, ಬೆಳಗಾವಿ ನಗರ 8,282, ಕಲಬುರಗಿ ನಗರ 9,550, ಕೆಜಿಎಫ್ನಲ್ಲಿ 4,357 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರ ಹೊರತುಪಡಿಸಿ ಬೆಂಗಳೂರು ಜಿಲ್ಲೆಯಲ್ಲಿ 30,592 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರು ದಕ್ಷಿಣ(ರಾಮನಗರ) 17,634, ತುಮಕೂರು 30,435, ಕೋಲಾರ 10,769, ಚಿಕ್ಕಬಳ್ಳಾಪುರ 14,851, ಚಿತ್ರದುರ್ಗ 21,717, ದಾವಣಗೆರೆ 17,274, ಹಾವೇರಿ ಜಿಲ್ಲೆಯಲ್ಲಿ 12,869 ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ 25,940 ಪ್ರಕರಣಗಳು ದಾಖಲಾಗಿದ್ದರೆ, ಬಾಗಲಕೋಟೆ 12,811, ವಿಜಯಪುರ 17,703, ಧಾರವಾಡ 6,354, ಗದಗ 8,097, ಕಲಬುರಗಿ 13,441, ಬೀದರ್ 15,279, ಯಾದಗಿರಿ 9,398, ಮೈಸೂರು ಜಿಲ್ಲೆ 21,430, ಮಂಡ್ಯ 22,391, ಚಾಮರಾಜನಗರ 10,398, ಬಳ್ಳಾರಿ 13,129, ಕೊಪ್ಪಳ 10,879, ರಾಯಚೂರು 16,264, ವಿಜಯನಗರ 11,587, ಕರ್ನಾಟಕ ರೈಲ್ವೆನಲ್ಲಿ 3,202 ಪ್ರಕರಣಗಳು ದಾಖಲಾಗಿವೆ.
ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 1.17 ಲಕ್ಷ ಪ್ರಕರಣ ದಾಖಲು :
2023ರಿಂದ ಈವರೆಗೆ ಮಂಗಳೂರು ನಗರದಲ್ಲಿ 12,869, ಪ್ರಕರಣಗಳು ದಾಖಲಾಗಿದ್ದರೆ, ಮಂಗಳೂರು ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,205, ಉಡುಪಿ 11,399, ಉತ್ತರ ಕನ್ನಡ 13,747, ಚಿಕ್ಕಮಗಳೂರು 15,188, ಹಾಸನ 23,115, ಕೊಡಗು 8,094, ಶಿವಮೊಗ್ಗ ಜಿಲ್ಲೆಯಲ್ಲಿ 24,593 ಪ್ರಕರಣಗಳು ಸೇರಿ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ 1,17,210 ಪ್ರಕರಣಗಳು ದಾಖಲಾಗಿವೆ.