ಬೀದರ್: ಜಿಲ್ಲೆಯ ಬೀದರ್ (ದಕ್ಷಿಣ) ಕ್ಷೇತ್ರದ ಬಗದಲ್ ಗ್ರಾಮದ ಬೀದರ್-ಮನ್ನಾಏಖೇಳ್ಳಿ ಪ್ರಮುಖ ರಸ್ತೆಯಲ್ಲಿರುವ ಸೇತುವೆ ಬಿರುಕು ಬಿಟ್ಟಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು ಆತಂಕದಲ್ಲಿಯೇ ಪ್ರಯಾಣಿಸುವಂತಾಗಿದೆ.

ಕಾರಂಜಾ ನೀರಾವರಿ ಯೋಜನೆಯಡಿ 1998ರಲ್ಲಿ ಶಂಕುಸ್ಥಾಪನೆಗೊಂಡು, 1999ರಲ್ಲಿ ಉದ್ಘಾಟನೆಯಾದ ಈ ಸೇತುವೆ ನಿರ್ಮಾಣವಾಗಿ ಸುಮಾರು 27 ವರ್ಷಗಳು ಕಳೆದಿವೆ. ಇದೀಗ ಸೇತುವೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸೇತುವೆಯ ಸ್ಥಿರತೆ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಬೀದರ್-ಮನ್ನಾಏಖೇಳ್ಳಿ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಈ ಸೇತುವೆ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ-65ಕ್ಕೆ ಸಂಪರ್ಕ ಕಲ್ಪಿಸುವುದರಿಂದ ಲಾರಿ, ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಹೀಗಾಗಿ ಸೇತುವೆ ಮೇಲೆ ಹೆಚ್ಚಿನ ಭಾರ ಬೀಳುತ್ತಿದ್ದು, ಅಪಾಯದ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖ ಸೇತುವೆಗಳಲ್ಲಿ ಇದು ಒಂದಾಗಿದ್ದು, ಬೀಳುವ ಹಂತಕ್ಕೆ ತಲುಪಿದೆ. ಆದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತದ್ದು ಆತಂಕಕಾರಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಿರುಕುಗಳಿಗೆ ಸಿಮೆಂಟ್ ಹಚ್ಚಿ ಮುಚ್ಚುವಿಕೆ :

ಸೇತುವೆಯ ಕೆಳಭಾಗದಲ್ಲಿ ಹಲವು ಕಡೆ ಬಿರುಕುಗಳು ಕಾಣಿಸಿಕೊಂಡಿದ್ದು, ಅವುಗಳಿಗೆ ಸಿಮೆಂಟ್ ಹಾಗೂ ಕೆಮಿಕಲ್ ಮಿಶ್ರಣ ಹಚ್ಚಿ ಮುಚ್ಚಲಾಗಿದೆ. ಆದರೆ ಭಾರಿ ವಾಹನಗಳ ಸಂಚಾರದಿಂದ ಸೇತುವೆ ಮತ್ತಷ್ಟು ಬಿರುಕು ಬಿಡುತ್ತಿದ್ದು, ಸಮಸ್ಯೆ ಉಲ್ಬಣಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಬ್ಬಿಣದ ಸಲಾಕೆ, ಕಟ್ಟಿಗೆಯಿಂದ ಆಧಾರ :

ಬಿರುಕು ಬಿಟ್ಟಿರುವ ಕೆಲವು ಭಾಗಗಳಿಗೆ ಕಬ್ಬಿಣದ ಸಲಾಕೆಗಳನ್ನು ಜೋಡಿಸಿ, ಅದರ ಮೇಲೆ ಕಟ್ಟಿಗೆಯ ದಿಬ್ಬಗಳನ್ನು ಇಟ್ಟು ತಾತ್ಕಾಲಿಕವಾಗಿ ಆಧಾರ ನೀಡಲಾಗಿದೆ. ಆದರೆ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಮುಂದುವರಿದಿರುವುದರಿಂದ ಸೇತುವೆಯ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ.

ಸೇತುವೆಯ ಬಿರುಕುಗಳ ಬಗ್ಗೆ ಬಹುತೇಕ ಪ್ರಯಾಣಿಕರಿಗೆ ಮಾಹಿತಿ ಇಲ್ಲ. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ಪ್ರಯಾಣಿಕರೂ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಸೇತುವೆ ಕುಸಿದು ಯಾವುದೇ ದೊಡ್ಡ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಯಂತ್ರಿಸಬೇಕು. ಅಗತ್ಯವಿದ್ದರೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕು. ಅಲ್ಲದೆ, ಶಾಶ್ವತ ಪರಿಹಾರವಾಗಿ ಹೊಸ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೇತುವೆಯನ್ನು ಹೊಸದಾಗಿ ನಿರ್ಮಿಸಬೇಕು ಎಂದು ಚೀಫ್ ಎಂಜಿನಿಯರ್ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸದ್ಯ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ಸೇತುವೆ ಮೇಲೆ ಈಗ ಭಾರಿ ವಾಹನಗಳ ಸಂಚಾರ ಅಷ್ಟಾಗಿ ಇಲ್ಲ. ದುರಸ್ತಿ ಕಾರ್ಯ ಮುಂದುವರಿದಿದ್ದು, ಅದು ಪೂರ್ಣಗೊಂಡ ಬಳಿಕ ಹೊಸ ಸೇತುವೆ ನಿರ್ಮಾಣವಾಗುವವರೆಗೆ ಬಳಕೆಗೆ ಅನುಕೂಲವಾಗಲಿದೆ.

- ಬಸವರಾಜ್, ಇಇ, ಕೆಆರ್‌ಡಿಸಿಎಲ್ ಇಲಾಖೆ, ಬೀದರ್

ಸುಮಾರು 6ರಿಂದ 8 ತಿಂಗಳಿನಿಂದ ಬಗದಲ್ ಸೇತುವೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಈ ಸೇತುವೆ ಮೇಲೆ ಸಿಮೆಂಟ್ ಲಾರಿ ಸೇರಿದಂತೆ ಭಾರಿ ವಾಹನಗಳು ಸಂಚರಿಸುತ್ತವೆ. ಬಿರುಕುಗಳಿಂದ ಸೇತುವೆ ಸಂಪೂರ್ಣವಾಗಿ ವಾಲಿದೆ. ಜನರಿಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಸಿಮೆಂಟ್ ಹಾಗೂ ಕ್ಯಾಮಿಕಲ್ ಹಚ್ಚಿ ಬಿರುಕುಗಳನ್ನು ಮುಚ್ಚಲಾಗಿದೆ. ಈ ಕುರಿತು ಶಾಸಕರ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪರಿಹಾರವಾಗಿಲ್ಲ. ಹೊಸ ಸೇತುವೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.

-ಸೋಹೆಲ್, ಬಗದಲ್ ಗ್ರಾಮದ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor