ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ನಿಂದ ಕ್ಷೇತ್ರ ಕಸಿದುಕೊಂಡವರೇ ಈಗ ಪಕ್ಷದ ಅಭ್ಯರ್ಥಿ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ : ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧವಾಗಿದ್ದು, ಈ ಹಿಂದೆ ಕಾಂಗ್ರೆಸ್ ನಿಂದ ಕ್ಷೇತ್ರವನ್ನು ಕಸಿದುಕೊಂಡವರೇ ಈಗ ಪಕ್ಷದ ಅಭ್ಯರ್ಥಿಯಾಗಿರುವುದು ಈ ಬಾರಿಯ ವಿಶೇಷವಾಗಿದೆ. ಇನ್ನು ಬಿಜೆಪಿ ಈಗಾಗಲೇ ಎರಡು ಬಾರಿ ಗೆಲುವು ಸಾಧಿಸಿದ್ದು, ಮೂರನೇ ಬಾರಿ ಕ್ಷೇತ್ರ ವಶಪಡಿಸಿಕೊಳ್ಳುವ ತವಕದಲ್ಲಿದೆ.
ಪಶ್ಚಿಮ ಪದವೀಧರ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಿಸಿ ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ನಿಂದ ಮೋಹನ ಲಿಂಬಿಕಾಯಿ ಹಾಗೂ ಬಿಜೆಪಿಯಿಂದ ಪ್ರೊ.ಎಸ್.ವಿ. ಸಂಕನೂರು ಕಣದಲ್ಲಿದ್ದಾರೆ.
3ನೇ ಬಾರಿ ಸಂಕನೂರು ಅದೃಷ್ಟ ಪರೀಕ್ಷೆ: ಈಗಾಗಲೇ ಎರಡು ಬಾರಿ ಕ್ಷೇತ್ರದಿಂದ ಗೆದ್ದು ಎಂಎಲ್ಸಿ ಆಗಿರುವ ಪ್ರೊ.ಎಸ್.ವಿ.ಸಂಕನೂರ ಅವರನ್ನು ಬಿಜೆಪಿ ಕಣಕಿಳಿಸಿದೆ. ಬಿಜೆಪಿಯಿಂದ ಸರಿಸುಮಾರು 10ಕ್ಕೂ ಹೆಚ್ಚು ಜನರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ, ವರಿಷ್ಠರು ಈ ಬಾರಿಯೂ ಹಾಲಿ ಸದಸ್ಯ ಸಂಕನೂರ ಅವರಿಗೆ ಮಣೆ ಹಾಕಿದ್ದಾರೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರನ್ನು ಈಗಾಗಲೇ ಪರಿಷತ್ ಸದಸ್ಯರೆಂದು ಆಯ್ಕೆ ಮಾಡುವ ಮೂಲಕ ಪಕ್ಷ ಅಸಮಾಧಾನ ಶಮನ ಮಾಡಿದೆ. ಕಳೆದ ಎರಡು ಅವಧಿಯಲ್ಲಿ ಪರಿಷತ್ ಸದಸ್ಯರಾಗಿದ್ದು, ಶಿಕ್ಷಕರು ಹಾಗೂ ಪದವೀಧರ ಸದಸ್ಯರ ಸಂಪರ್ಕದಲ್ಲಿರುವ ಸಂಕನೂರು ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.
ಎರಡು ಅವಧಿಯಲ್ಲಿ ಪರಿಷತ್ ಸದಸ್ಯನಾಗಿ ಎಲ್ಲ ಪದವೀಧರರ ಸಮಸ್ಯೆಗೆ ಸ್ಪಂದಿಸಿದ್ದೇನೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ಮೇಲೆ ಯುವಕರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವೆಲ್ಲವುಗಳನ್ನು ಮತದಾರರ ಮುಂದಿಟ್ಟು ಮತಯಾಚನೆ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದರೂ ಪ್ರಜ್ಞಾವಂತ ಮತದಾರರು ನನ್ನ ಎರಡು ವರ್ಷಗಳ ಸಾಧನೆ ಗಮನಿಸಿ ಮತ ಹಾಕಲಿದ್ದಾರೆ ಎನ್ನುತ್ತಾರೆ ಸಂಕನೂರು.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಶಂಕರ ಚನ್ನಪ್ಪ ಕಲ್ಲೂರು ಅವರು ,102 ಮತಗಳನ್ನಷ್ಟೇ ಪಡೆದಿದ್ದರು. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹೀಗಾಗಿ ಜೆಡಿಎಸ್ ಬೆಂಬಲವೂ ಬಿಜೆಪಿಗೆ ಸಿಗಲಿದೆ. ಇದು ಬಿಜೆಪಿಗೆ ಫ್ಲಸ್ ಪಾಯಿಂಟ್ ಆಗಲಿದೆ.
ಲಿಂಬಿಕಾಯಿ ಕಾಂಗ್ರೆಸ್ ಅಭ್ಯರ್ಥಿ: 2008ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಎಚ್.ಕೆ. ಪಾಟೀಲ ಅವರನ್ನು ಸೋಲಿಸಿ ಕ್ಷೇತ್ರ ಕಸಿದುಕೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಲಿಂಬಿಕಾಯಿ ಅವರು ಮೊದಲಿಗೆ ವಿಧಾನ ಸಭೆ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅವರನ್ನೇ ವಿಪ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಈ ಹಿಂದೆ ಕ್ಷೇತ್ರವನ್ನು ಕಸಿದುಕೊಂಡಿದ್ದ ಅವರು ಇದೀಗ ಬಿಜೆಪಿಯಿಂದ ಮರಳಿ ತರುವ ವಿಶ್ವಾಸದಲ್ಲಿದ್ದಾರೆ.
24 ವಿಧಾನಸಭಾ ಕ್ಷೇತ್ರಗಳ ಪೈಕಿ 17ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅಲ್ಲದೆ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು 6 ಶಾಸಕರಷ್ಟೇ ಬಿಜೆಪಿಯವರಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಿರುವ ಕಾರಣ ಗೆಲುವಿಗೆ ಅನುಕೂಲಕರ ವಾತಾವರಣವಿದೆ.
ಕಳೆದ 6 ತಿಂಗಳಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಶಿಕ್ಷಕರು ಹಾಗೂ ಪದವೀಧರನ್ನು ಭೇಟಿಯಾಗಿದ್ದು, ಸರಕಾರ 74 ಸಾವಿರ ಖಾಲಿ ಹುದ್ದೆ ತುಂಬಿಕೊಳ್ಳುತ್ತಿದೆ. 24 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಕೈಗೊಂಡಿದೆ. ಯುವನಿಧಿ, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಯುವ ಸಮುದಾಯ ಕಾಂಗ್ರೆಸ್ ಪಕ್ಷದ ಪರವಾಗಿದೆ ಎಂಬ ವಿಶ್ವಾಸ ಲಿಂಬಿಕಾಯಿ ಅವರದ್ದು.
ಇನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್.ಎಂ.ಕುಬೇರಪ್ಪ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ನಾಯಕರು ಮನವೊಲಿಸಿದ್ದರಿಂದ ಅವರು ನಾಮಪತ್ರ ಹಿಂಪಡೆದಿದ್ದಾರೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಬಸವರಾಜ ಗುರಿಕಾರ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದು, ಇದೆಲ್ಲ ಕಾಂಗ್ರೆಸ್ಗೆ ವರವಾಗಲಿದೆ ಎನ್ನುತ್ತಾರೆ ಕಾರ್ಯಕರ್ತರು.
ಮತ ವಿಭಜನೆ ಆತಂಕ :
ಈ ಬಾರಿ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದೆ. ಚುನಾವಣಾ ಅಂತಿಮ ಕಣದಲ್ಲಿ ಪಕ್ಷೇತರರನ್ನೂ ಒಳಗೊಂಡು 14ಜನರಿದ್ದಾರೆ. ಹೀಗಾಗಿ, ಸ್ವಾಭಾವಿಕವಾಗಿ ಮತವಿಭಜನೆ ಆತಂಕ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರನ್ನು ಕಾಡುತ್ತಿದೆ.
88,087 ಪದವೀಧರ ಮತದಾರರು :
ಪ್ರಸಕ್ತ ಚುನಾವಣೆಯಲ್ಲಿ ಮತದಾರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 88,087 ಮತದಾರರಿದ್ದಾರೆ. ಇದರಲ್ಲಿ 51,599 ಪುರುಷರು ಮತ್ತು 36,488 ಮಹಿಳೆಯರು ಇದ್ದಾರೆ.
ಅಕ್ಟೋಬರ್ 23ಕ್ಕೆ ಮತದಾನ ನಡೆಯಲಿದ್ದು, ಅ.27ಕ್ಕೆ ಮತ ಎಣಿಕೆ ನಡೆಯಲಿದೆ. ಸಂಕನೂರು ಕಳೆದ 2 ಬಾರಿಯ ಪದವೀಧರರ ಸಂಪರ್ಕ ಮತ್ತು ಲಿಂಬಿಕಾಯಿ ಕಾಂಗ್ರೆಸ್ ಗ್ಯಾರಂಟಿ ಮತ್ತು ಸರಕಾರದ ಸಾಧನೆಗಳ ಮೇಲೆ ಮತ ಕೇಳುತ್ತಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ ಕಾದು ನೋಡಬೇಕಿದೆ.