ವಿಜಯಪುರ: ಈ ಹಿಂದೆ ಇದ್ದ ವಸ್ತು ವಿನಿಮಯ ಪದ್ಧತಿ ಈಗ ಮತ್ತೆ ಜಾರಿಯಲ್ಲಿದೆಯೇ ಎಂಬ ಅನುಮಾನ ಮೂಡಿಸುವ ರೀತಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯ ಅಕ್ರಮ ವಹಿವಾಟು ನಡೆಯುತ್ತಿದೆ. ಹಣದ ಬದಲಿಗೆ ಒಂದು ವಸ್ತು ನೀಡಿ ಮತ್ತೊಂದು ವಸ್ತು ಪಡೆಯುವ ಪದ್ಧತಿಯನ್ನೇ ಹೋಲುವಂತೆ, ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕೆಲ ಮಧ್ಯವರ್ತಿಗಳು ಖರೀದಿಸಿ, ಅದರ ಬದಲಿಗೆ ಸೋನಾ ಮಸೂರಿ ಅಕ್ಕಿ ಅಥವಾ ಹಣ ನೀಡುತ್ತಿದ್ದಾರೆ. ಈ ಮೂಲಕ ಸರಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯಡಿ ದೊರೆಯುವ ಪಡಿತರ ಅಕ್ಕಿ ವಿವಿಧ ಮಾರ್ಗಗಳ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಒಂದು ಕಡೆ ಸಣ್ಣಪುಟ್ಟ ಏಜೆಂಟರು ಫಲಾನುಭವಿಗಳಿಂದ ಅಕ್ಕಿ ಖರೀದಿಸಿ ಮಿಲ್‌ಗಳಿಗೆ ನೀಡುತ್ತಿದ್ದರೆ, ಮತ್ತೊಂದೆಡೆ ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಫಲಾನುಭವಿಗಳಿಗೆ ಅಕ್ಕಿಯ ಬದಲಿಗೆ ಹಣ ನೀಡಿ, ದಾಸ್ತಾನು ಮಾಡಿರುವ ಅಕ್ಕಿಯನ್ನು ಅಕ್ರಮವಾಗಿ ಮಿಲ್‌ಗಳಿಗೆ ಸಾಗಿಸುತ್ತಿದ್ದಾರೆ.

ಇನ್ನೂ ಕೆಲವರು ಮನೆ ಮನೆಗೆ ತೆರಳಿ ಕೆ.ಜಿ.ಗೆ 18ರಿಂದ 20 ರೂ.ರಂತೆ ಪಡಿತರ ಅಕ್ಕಿ ಖರೀದಿಸುತ್ತಿದ್ದಾರೆ. ಈ ರೀತಿ ಸಂಗ್ರಹಿಸಲಾಗುವ ಅಕ್ಕಿಯನ್ನು ಮಿಲ್‌ಗಳಿಗೆ ಮಾರಾಟ ಮಾಡುವ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವ ಆರೋಪ ಕೇಳಿಬಂದಿದೆ.

‘ರೇಷನ್ ಅಕ್ಕಿ ಅದಾವೇನ್ರಿ..!’

ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸುವ ಸಣ್ಣಪುಟ್ಟ ಏಜೆಂಟರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಭಯವಿಲ್ಲದೆ ಮನೆ ಮನೆಗೆ ತೆರಳಿ ರೇಷನ್ ಅಕ್ಕಿ ಖರೀದಿಸುತ್ತಿದ್ದಾರೆ. ಗ್ರಾಮಗಳಲ್ಲಿ ಪಡಿತರ ವಿತರಣೆ ಪೂರ್ಣಗೊಂಡ ತಕ್ಷಣವೇ ಇವರ ಖರೀದಿ ಭರಾಟೆ ಜೋರಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.

ಹೊಟೇಲ್ ಉದ್ಯಮದಲ್ಲಿ ದೋಸೆಗೆ ಹೆಚ್ಚಿನ ಬೇಡಿಕೆ. ಕೆಲ ಹೊಟೇಲ್‌ಗಳಲ್ಲಿ ತಯಾರಾಗುವ ದೋಸೆಗೆ ಈ ಪಡಿತರ ಅಕ್ಕಿಯೇ ಬಳಕೆಯಾಗುತ್ತಿದೆ ಎಂಬ ಆರೋಪವಿದೆ. ಹೊಟೇಲ್ ಮಾಲೀಕರು ಏಜೆಂಟರಿಂದ ಕೆ.ಜಿ.ಗೆ ಸುಮಾರು 30 ರೂ.ರಂತೆ ಈ ಅಕ್ಕಿ ಖರೀದಿಸುತ್ತಾರೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇತರೆ ಅಕ್ಕಿಯ ಬೆಲೆ ಕೆ.ಜಿ.ಗೆ 55ರಿಂದ 70 ರೂ.ವರೆಗೆ ಇರುವುದರಿಂದ, ಹೆಚ್ಚಿನ ಬೆಲೆಗೆ ಅಕ್ಕಿ ಖರೀದಿಸಿ ದೋಸೆ ತಯಾರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಕಾಳಸಂತೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಪಡಿತರ ಅಕ್ಕಿಯತ್ತ ಕೆಲವರು ಮುಖ ಮಾಡುತ್ತಿದ್ದಾರೆ.

ಈ ರೀತಿಯಲ್ಲಿ ಸಂಗ್ರಹಿಸುವ ಪಡಿತರ ಅಕ್ಕಿ ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ಮಹಾರಾಷ್ಟ್ರಕ್ಕೂ ಅಕ್ರಮವಾಗಿ ಸಾಗಾಟವಾಗುತ್ತಿದೆ ಎನ್ನಲಾಗಿದೆ

ನ್ಯಾಯಬೆಲೆ ಅಂಗಡಿ ಮಾಲೀಕರೇ ಕಾಳಸಂತೆಯ ರೂವಾರಿಗಳು?

ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರೇ ಪಡಿತರ ಅಕ್ಕಿಯ ಕಾಳಸಂತೆ ದಂಧೆಯ ಪ್ರಮುಖ ಕೊಂಡಿಗಳಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಫಲಾನುಭವಿಗಳು ಅಂಗಡಿಗೆ ಬಂದು ಹೆಬ್ಬೆರಳ ಗುರುತು ನೀಡಿದ ಬಳಿಕ, ಅಕ್ಕಿಯ ಬದಲಿಗೆ ಹಣ ನೀಡಿ ಪಡಿತರ ದಾಸ್ತಾನನ್ನು ಅಕ್ರಮವಾಗಿ ಮಿಲ್‌ಗಳಿಗೆ ರವಾನಿಸಲಾಗುತ್ತಿದೆ ಎನ್ನಲಾಗಿದೆ. ಯಾರಾದರೂ ಇದನ್ನು ಪ್ರಶ್ನಿಸಿದರೆ, ‘ಈ ಬಾರಿ ನಿಮಗೆ ಅಕ್ಕಿ ಬಂದಿಲ್ಲ’ ಅಥವಾ ‘ನಿಮ್ಮ ಬೆರಳಚ್ಚು ಸ್ವೀಕಾರವಾಗುತ್ತಿಲ್ಲ’ ಎಂದು ಹೇಳಿ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ರೇಷನ್ ಅಕ್ಕಿ ಮಾರಿ ಸೋನಾ ಮಸೂರಿ ಖರೀದಿ

ನಗರ ಪ್ರದೇಶಗಳಲ್ಲಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಬಡವರ ಹೆಸರಿನಲ್ಲಿ ಅಕ್ಕಿ ಪಡೆಯುವ ಕೆಲವರು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಪಾಲಿಶ್ ಮಾಡಿದ ಸೋನಾ ಮಸೂರಿ ಅಕ್ಕಿಯನ್ನು ಖರೀದಿಸುತ್ತಿದ್ದಾರೆ ಎನ್ನಲಾಗಿದೆ.

ವಾಸ್ತವವಾಗಿ ಸೋನಾ ಮಸೂರಿ ಅಥವಾ ಪಾಲಿಶ್ ಮಾಡಿದ ಅಕ್ಕಿಗಿಂತ ಸರಕಾರ ವಿತರಿಸುವ ಪಡಿತರ ಅಕ್ಕಿಯಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಸರಕಾರ ನೀಡುವ ಅಕ್ಕಿಯನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ, ಇಂತಹ ಅಕ್ರಮ ವಹಿವಾಟಿನಲ್ಲಿ ತೊಡಗಿರುವವರ ರೇಷನ್ ಕಾರ್ಡ್ ರದ್ದುಪಡಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

ಪಡಿತರ ಧಾನ್ಯಗಳ ಅಕ್ರಮ ತಡೆಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

ಕಾಳಸಂತೆಕೋರರ ಹಾವಳಿ ತಡೆಯಲು ವಿಜಯಪುರ ಜಿಲ್ಲಾಡಳಿತ ಹಾಗೂ ಆಹಾರ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಜನವರಿ 2026ರಿಂದ ಅಕ್ಟೋಬರ್ 2026ರವರೆಗೆ ಒಟ್ಟು 45 ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಪ್ರಕರಣಗಳಲ್ಲಿ 93,91,104 ರೂ. ಮೌಲ್ಯದ 3,894.13 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ 2,42,505 ರೂ. ಮೌಲ್ಯದ 95.1 ಕ್ವಿಂಟಲ್ ಗೋಧಿ ಜಪ್ತಿ ಮಾಡಲಾಗಿದೆ. ಅಕ್ರಮ ಸಾಗಾಟಕ್ಕೆ ಬಳಸುತ್ತಿದ್ದ ಲಾರಿ, ಟ್ರಕ್, ಟಾಟಾ ಏಸ್, ಬಜಾಜ್ ಮ್ಯಾಕ್ಸಿಮೊ ಸೇರಿದಂತೆ ಸುಮಾರು 2.10 ಕೋಟಿ ರೂ. ಮೌಲ್ಯದ ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸುವುದು, ಸಾಗಣೆ ಮಾಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಾನೂನುಬಾಹಿರ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

<ವಿನಯಕುಮಾರ ಪಾಟೀಲ, ಉಪನಿರ್ದೇಶಕರು, ಆಹಾರ ಇಲಾಖೆ, ವಿಜಯಪುರ.

ಹೊಟೇಲ್ ಮಾಲೀಕರು ಮತ್ತು ಸಣ್ಣಪುಟ್ಟ ಏಜೆಂಟರು ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಕಾಳಸಂತೆಯ ಅಕ್ಕಿಯನ್ನು ಖರೀದಿಸುತ್ತಿದ್ದಾರೆ. ಇದರಿಂದ ನಿಜವಾದ ಬಡವರಿಗೆ ಸರಕಾರದ ಯೋಜನೆ ತಲುಪದಂತೆ ತಡೆಯಾಗುತ್ತಿದೆ. ಇಲಾಖೆಯವರು ಕೇವಲ ದಾಸ್ತಾನು ವಶಪಡಿಸಿಕೊಳ್ಳುವುದಷ್ಟೇ ಅಲ್ಲದೆ, ಅಕ್ರಮವಾಗಿ ಖರೀದಿಸುವವರ ಮೇಲೂ ನಿಗಾ ಇಡಬೇಕು.

<ಶೋಭಾ ಅಂಗಡಿ,

ಮಹಿಳಾ ಸಂಘಟನೆಯ ಕಾರ್ಯಕರ್ತೆ.

ಸರಕಾರ ನಮಗೆ ಹಸಿವು ನೀಗಿಸಲೆಂದು ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಕೆಲವರು ಹಣದ ಆಸೆಗೆ ಬಿದ್ದು ಆ ಅಕ್ಕಿಯನ್ನು ಹೊರಗಡೆ ಮಾರಾಟ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇಂತಹವರನ್ನು ಗುರುತಿಸಿ ಮೊದಲು ರೇಷನ್ ಕಾರ್ಡ್ ರದ್ದುಪಡಿಸಬೇಕು.

<ಅಬ್ಬಾಸ್ ಬಸರಗಿ, ಸ್ಥಳೀಯ ನಿವಾಸಿ, ವಿಜಯಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor