ಕಾಡುಗೊಲ್ಲರು ಹಿಂದೂಗಳಲ್ಲವೇ? ಕನ್ನಡಿಗರಲ್ಲವೇ?
ಕರ್ನಾಟಕದ ಕುರುಬರು, ಕಾಡು ಗೊಲ್ಲರು, ಕೋಲಿ ಅಥವಾ ಕಬ್ಬಲಿಗರು, ಹಾಲಕ್ಕಿ ಒಕ್ಕಲು, ಕುಣಬಿ ಮುಂತಾದ ಸಮುದಾಯಗಳು ಕೇಂದ್ರ ಸರಕಾರದ ಟ್ರೈಬಲ್ ಅಫೇರ್ ಇಲಾಖೆಯ ಮುಂದೆ ಪರಿಶಿಷ್ಟ ಪಂಗಡ(ಎಸ್.ಟಿ.)ಕ್ಕೆ ಸೇರಲು ಸಾಲುಗಟ್ಟಿ ನಿಂತಿವೆ. ಈ ಸಮುದಾಯಗಳನ್ನು ಈಗಾಗಲೇ ಕರ್ನಾಟಕ ರಾಜ್ಯ ಸರಕಾರ(ಬಿಜೆಪಿ ಮತ್ತು ಕಾಂಗ್ರೆಸ್) ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸು ಮಾಡಿದೆ.
ಇದೀಗ ಕುರುಬ ಸಮುದಾಯದ ಪ್ರಕರಣ ಚರ್ಚೆಯಲ್ಲಿದೆ. ದಿನಾಂಕ 14.08.2025ರಂದು ಕೇಂದ್ರ ಸರಕಾರದ ‘ಮಿನಿಸ್ಟ್ರಿ ಆಫ್ ಟ್ರೈಬಲ್ ಅಫೇರ್’ ಇಲಾಖೆ ಕರ್ನಾಟಕ ಸರಕಾರದ ಶೆಡ್ಯೂಲ್ ಟ್ರೈಬಲ್ ವೆಲ್ಫೇರ್’ ಇಲಾಖೆಗೆ ಪತ್ರವೊಂದನ್ನು ಬರೆದು ಎರಡು ಪ್ರಸ್ತಾವಗಳನ್ನು ಇಟ್ಟು ಸ್ಪಷ್ಟೀಕರಣವನ್ನು ಕೇಳಿದೆ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೀದರ್, ಕಲಬುರಗಿ ಮತ್ತು ಯಾದಗಿರಿಯಲ್ಲಿರುವ ಗೊಂಡರೊಂದಿಗೆ ಸೇರಿಸುವುದೋ ಅಥವಾ ಕೊಡಗಿನ ಕುರುಬ ಸಮುದಾಯದ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೋ ಎಂಬುದು. ಈ ಪ್ರಸ್ತಾವಗಳಿಗೆ ಉತ್ತರಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಸದ್ಯಕ್ಕೆ ಕೇಂದ್ರದ ಟ್ರೈಬಲ್ ಅಫೇರ್ ಇಲಾಖೆ ಕುರುಬ ಸಮುದಾಯದ ಧರ್ಮ ಮತ್ತು ಭಾಷೆ ಕುರಿತು ಇನ್ನೂ ಪ್ರಶ್ನೆಗಳನ್ನೆತ್ತಿಲ್ಲ.
ಈ ಮಧ್ಯೆ ಈಗಾಗಲೇ ಕರ್ನಾಟಕದಿಂದ ಬಹಳ ಹಿಂದೆಯೇ ಶಿಫಾರಸಿಗೆ ಒಳಗಾಗಿ ಕೇಂದ್ರ ಸರಕಾರದ ಮುಂದೆ ಇರುವ ಕಾಡುಗೊಲ್ಲ, ಅಡವಿಗೊಲ್ಲ, ಹಟ್ಟಿಗೊಲ್ಲ ಸಮುದಾಯವನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರಕಾರದ ಟ್ರೈಬಲ್ ಇಲಾಖೆ ಇಲ್ಲೂ ಕೆಲವು ಪ್ರಶ್ನೆಗಳನ್ನು ಎತ್ತಿದೆ. ದಿನಾಂಕ 22-09-2022 ಮತ್ತು 10-03-2023 ರಂದು ಕೇಂದ್ರ ಸರಕಾರದ ಟ್ರೈಬಲ್ ಅಫೇರ್ ಇಲಾಖೆ, ರಾಜ್ಯದ ಟ್ರೈಬಲ್ ವೆಲ್ಫೇರ್ ಇಲಾಖೆಗೆ ಸುದೀರ್ಘ ಪತ್ರವೊಂದನ್ನು ಬರೆದು ಅನೇಕ ಸಂದೇಹಗಳನ್ನು ವ್ಯಕ್ತಪಡಿಸುತ್ತಾ ಪ್ರಮುಖವಾಗಿ ಧರ್ಮ ಮತ್ತು ಭಾಷೆಗೆ ಸಂಬಂಧಪಟ್ಟಂತೆ ಕೆಲ ಪ್ರಶ್ನೆಗಳನ್ನು ಪರೋಕ್ಷವಾಗಿ ಎತ್ತಲಾಗಿದೆ! ಕಾಡುಗೊಲ್ಲ ಸಮುದಾಯ ತನ್ನ ಬುಡಕಟ್ಟು ಆಚಾರವಿಚಾರಗಳೊಂದಿಗೆ ಹಿಂದೂ ಧರ್ಮದ ಆಚಾರವಿಚಾರ ಗಳನ್ನು, ಹಿಂದೂ ದೈವಗಳನ್ನೂ ಪೂಜಿಸುತ್ತಾ ಹಿಂದೂ ಧರ್ಮೀಯ ಸಂಪ್ರದಾಯಗಳನ್ನು ಪಾಲಿಸುತ್ತಿದೆ. ಇದರೊಂದಿಗೆ ಈ ಸಮುದಾಯ ಎಮ್ಮೆ, ದನಗಳನ್ನು ಮೇಯಿಸುತ್ತಾ ಹಾಲು ಮಾರುತ್ತದೆ ಮತ್ತು ಕನ್ನಡ ಭಾಷೆ ಮಾತನಾಡುತ್ತದೆ. ಈ ಕಾರಣಗಳಿಂದಾಗಿ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಡಚಣೆಗಳಿವೆ ಎಂಬ ಅರ್ಥವನ್ನು ಸೂಚಿಸುವಂತೆ ಬರೆಯಲಾಗಿದೆ. ಇದು ಅತ್ಯಂತ ಸೂಕ್ಷ್ಮ ಮತ್ತು ವಿವಾದಾತ್ಮಕ
ಪ್ರಶ್ನೆಯಾಗಿದೆ.
ಕಾಡುಗೊಲ್ಲ ಸಮುದಾಯ ಬಹುತೇಕ ತನ್ನ ಬುಡಕಟ್ಟಿಗೆ ಸಂಬಂಧಿಸಿದ ಪೂಜೆ, ಹಬ್ಬ ಮತ್ತು ಆಚರಣೆಗಳನ್ನು ಇಂದಿಗೂ ಅನುಸರಿಸುತ್ತಾ ತಮ್ಮ ದೈವಗಳಾದ ಎತ್ತಪ್ಪ, ಜುಂಜಪ್ಪ, ಕರಡಿಬುಳ್ಳಪ್ಪಗಳನ್ನು ಪೂಜಿಸುತ್ತಾ ಅವು ಇಂದು ಅಪ್ರಸ್ತುತ ಮತ್ತು ಅವೈಜ್ಞಾನಿಕ ಅನಿಸಿದರೂ ಕೆಲವು ಹಳೆಯ ಕರ್ಮಠ ಪದ್ಧತಿಗಳನ್ನು ಇಂದಿಗೂ ಪಾಲಿಸುತ್ತಾ ಹಟ್ಟಿಗಳಲ್ಲೇ ಜೀವಿಸುತ್ತಿರುವ ಹಟ್ಟಿಗೊಲ್ಲರ ಮೇಲೆ ಈಚೆಗೆ ಹಿಂದೂ ಧರ್ಮದ ಹಬ್ಬ ಹರಿದಿನಗಳು ಕೊಂಚ ಪ್ರಭಾವ ಬೀರಿರಬಹುದು. ಇದೊಂದೇ ಕಾರಣಕ್ಕೆ ಇವರನ್ನು ಬುಡಕಟ್ಟುಗಳಲ್ಲ ಎಂದು ಅನುಮಾನಿಸುವುದು ಕುಲಶಾಸ್ತ್ರೀಯ ಹಿನ್ನೆಲೆಯಿಂದ ಅವೈಜ್ಞಾನಿಕ ಅನಿಸುತ್ತದೆ.
ಹಾಗೆ ನೋಡಿದರೆ ಕುರುಬ ಸಮುದಾಯವೂ ತಮ್ಮ ಬಂಡಿದ್ಯಾವರೆ, ಬೀರಪ್ಪನ ಪೂಜೆಗಳನ್ನು ಮಾಡುತ್ತಲೇ ಆಯಾ ಪರಿಸರದ ಪ್ರಭಾವದಿಂದಾಗಿ ಹಿಂದೂ ಧರ್ಮದ ಆಚರಣೆಗಳನ್ನೂ ಅನುಸರಿಸುತ್ತಿದೆ. ಶಂಭಾ ಜೋಷಿಯವರ ಹಾಲುಮತ ದರ್ಶನ ಸಂಶೋಧನಾ ಗ್ರಂಥ ಕುರುಬ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆಯನ್ನು ದಾಖಲಿಸುತ್ತದೆ. ಕಾಡುಗೊಲ್ಲರಿಗೆ ಎತ್ತಿದ ಪ್ರಶ್ನೆಗಳನ್ನೇ ಕೇಂದ್ರದ ಟ್ರೈಬಲ್ ಇಲಾಖೆ ಕುರುಬ ಸಮುದಾಯಕ್ಕೂ ಮುಂದೊಂದು ದಿನ ಎತ್ತುವ ಸಾಧ್ಯತೆ ಇಲ್ಲದಿಲ್ಲ.
ಈ ಕಾರಣದಿಂದಾಗಿ ಇದೀಗ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಕಾಡುಗೊಲ್ಲ ಸಮುದಾಯ ಜಾತಿ ಕಾಲಂನಲ್ಲಿ ಕಾಡುಗೊಲ್ಲ ಅಡವಿಗೊಲ್ಲ, ಹಟ್ಟಿಗೊಲ್ಲ ಎಂದು ಬರೆಸಿ, ಧರ್ಮದ ಕಾಲಂನಲ್ಲಿ ‘ಹಿಂದೂ ಧರ್ಮ’ ಎಂದು ಬರೆಸಬೇಕೋ ಅಥವಾ ‘ಬುಡಕಟ್ಟು ಧರ್ಮ’ ಎಂದು ಬರೆಸಬೇಕೋ ಎಂಬ ಗೊಂದಲದಲ್ಲಿ ಬಿದ್ದಿದೆ!
ಬುಡಕಟ್ಟುಗಳು ಮೂಲತಃ ಆದಿಮ ಬುಡಕಟ್ಟು ಧರ್ಮಕ್ಕೇ ಸೇರಿರುವುದು ವಾಸ್ತವ. ಜಗತ್ತಿನ ಪ್ರಖ್ಯಾತ ಇತಿಹಾಸಕಾರ ಯುವೆಲ್ ನೊವ್ ಹರಾರಿ ಹೇಳುವಂತೆ ಬುಡಕಟ್ಟುಗಳು ಯಾವುದೇ ಸ್ಥಾಪಿತ ಧರ್ಮಕ್ಕೂ, ರಾಷ್ಟ್ರೀಯತೆಗೂ ಸೇರುವುದಿಲ್ಲ. ಇವರದ್ದು ಬುಡಕಟ್ಟು ಧರ್ಮ ಮತ್ತು ರಾಷ್ಟ್ರೀಯತೆಯಷ್ಟೇ. ಆಯಾ ದೇಶ ಪ್ರದೇಶಗಳಿಗೆ ಅನುಗುಣವಾಗಿ ಅವರು ಮುಖ್ಯವಾಹಿನಿಗೆ ಸೇರಲು ಅಲ್ಲಿನ ಸ್ಥಾಪಿತ ಧರ್ಮಗಳನ್ನು ರಾಷ್ಟ್ರೀಯತೆಗಳನ್ನು ಕೆಲವೊಮ್ಮೆ ಅನಿವಾರ್ಯವಾಗಿ ಅನುಸರಿಸುತ್ತಾರೆ.
ಡಾ.ಅಂಬೇಡ್ಕರ್ ಅವರು ಗುರುತಿಸಿದಂತೆ ಹಿಂದೂ ಧರ್ಮ ಎಂದೂ ಆದಿವಾಸಿಗಳನ್ನು ಮತ್ತು ಅಸ್ಪೃಶ್ಯರನ್ನು ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡಿರಲಿಲ್ಲ. 1881ರ ಜನಗಣತಿಯಲ್ಲಿ ಹಿಂದೂ ಧರ್ಮೀಯರ ಸಂಖ್ಯೆ ಮುಸ್ಲಿಮರಿಗೆ ಹೋಲಿಸಿದರೆ ಕಡಿಮೆಯಾಗಿಬಿಡುತ್ತದೆ ಎಂಬ ಆತಂಕದಿಂದಾಗಿ ಆದಿವಾಸಿ ಬುಡಕಟ್ಟುಗಳನ್ನು ಮತ್ತು ಅಸ್ಪೃಶ್ಯರನ್ನು ಹಿಂದೂ ಧರ್ಮದ ತೆಕ್ಕೆಗೆ ಸೇರಿಸಿಕೊಳ್ಳಬೇಕಾಯಿತು ಎಂದು ದಾಖಲಿಸುತ್ತಾರೆ.
ಇದಕ್ಕೆ ಪೂರಕವೆಂಬಂತೆ ಖ್ಯಾತ ಮಾನವಶಾಸ್ತ್ರಜ್ಞ ಗಣೇಶದೇವಿಯವರು ಒಂದು ಪ್ರಹಸನವನ್ನು ನೆನೆಸುತ್ತಾರೆ. ಗುಜರಾತಿನ ಲಿಮ್ಡಿ ಬಝಾರ್ ಎಂಬಲ್ಲಿ ಸುಮಾರು 100 ವರ್ಷ ವಯಸ್ಸಿನ ಹಳೆಯ ಕಹಿಬೇವಿನ ಮರವೊಂದಿತ್ತು, ಗುಜರಾತಿ ಭಾಷೆಯಲ್ಲಿ ಇದನ್ನು ಲಿಮ್ಡಾ ಎನ್ನುತ್ತಾರೆ. ಗುಜರಾತ್ ಕೋಮು ಗಲಭೆಯಲ್ಲಿ ಗಲಭೆಕೋರರು ಆ ಮರಕ್ಕೆ ಬೆಂಕಿ ಹಚ್ಚಿದರು. ಆ ಬೃಹತ್ ಮರ 10 ದಿನಗಳ ಕಾಲ ಉರಿಯಿತು. ಅದನ್ನು ದುಖಃತಪ್ತನಾಗಿ ನೋಡುತ್ತಿದ್ದ ಅರ್ಜುನ ರಾತ್ವ ಎಂಬ ಆದಿವಾಸಿ ದಾರಿ ಹೋಕರಿಗೆ ನೆರಳನ್ನು ನೀಡುವುದನ್ನು ಬಿಟ್ಟರೆ, ಈ ಲಿಮ್ಡಿ ವೃಕ್ಷಕ್ಕೆ ಯಾವುದೇ ಧಾರ್ಮಿಕ ಅಂಶ ಇದೆಯೇ..? ಅದು ಹಿಂದೂವೂ ಅಲ್ಲ ಮುಸ್ಲಿಮೂ ಅಲ್ಲದ ಆ ಮರ ಆದಿವಾಸಿಯಲ್ಲವೇ? ಅದಕ್ಕೆ ಯಾಕೆ ಬೆಂಕಿ ಹಚ್ಚಿ ನಾಶಪಡಿಸಿದರು? ನಾವು ಆದಿವಾಸಿಗಳು, ನಮ್ಮದು ಆದಿವಾಸಿ ಧರ್ಮ. ಹೀಗಿರುವಾಗ ಅವರು ನಮ್ಮ ಬದುಕುಗಳನ್ನು ಯಾಕೆ ನಾಶಪಡಿಸುತ್ತಾರೆ..ಎಂದು ಮುಗ್ಧವಾಗಿ ಕೇಳುತ್ತಾನೆ.
ಆದಿವಾಸಿಗಳ ಅನನ್ಯತೆಯ ಪ್ರತೀಕವಾಗಿ ಹಿಂದಿನಿಂದಲೂ ಆದಿವಾಸಿ ಧರ್ಮ ಬಳಕೆಯಲ್ಲಿತ್ತು. 1871ರಿಂದ 1941ರವರೆಗಿನ ಜನಗಣತಿಗಳು ಆದಿವಾಸಿಗಳನ್ನು ಸ್ಥಾಪಿತ ಧರ್ಮಗಳಿಗಿಂತ ಭಿನ್ನ ಎಂದು ವಿಭಿನ್ನವಾಗಿಯೇ ದಾಖಲಿಸಿದ್ದವು. 1951ರಿಂದ ಪರಿಶಿಷ್ಟ ವರ್ಗವೆಂದು ಪರಿಗಣಿಸಿ ಆದಿವಾಸಿ ಧರ್ಮದ ಕಾಲಂ ಅನ್ನೇ ಕಣ್ಮರೆ ಮಾಡಲಾಯಿತು!. ಹೀಗಾಗಿ ಆದಿವಾಸಿಗಳು ಅನಿವಾರ್ಯವಾಗಿ ಅನ್ಯ ಧರ್ಮೀಯ ಕಾಲಂಗಳಲ್ಲಿ ದಾಖಲಿಸುತ್ತಿದ್ದಾರೆ. ಈ ನೆಪದಿಂದ ಆದಿವಾಸಿಗಳನ್ನು ಮತಾಂತರಗೊಳಿಸುವಲ್ಲಿ ಅನ್ಯ ಧರ್ಮಗಳು ಪೈಪೋಟಿಗಿಳಿದಿವೆ. ವಾಸ್ತವದಲ್ಲಿ ಆದಿವಾಸಿಗಳು ಸರ್ವಚೇತನವಾದಿಗಳಾಗಿದ್ದು, ಪ್ರಕೃತಿ ಸಂಕೇತಾರಾಧಕರಾಗಿದ್ದಾರೆ. ತಮ್ಮ ಪೂರ್ವಿಕರ ಚೇತನಗಳನ್ನು ಆಹ್ವಾನಿಸಿ ಪರಿಹಾರಗಳನ್ನು ಕಂಡುಕೊಳ್ಳುವ ರೂಢಿ-ಪದ್ಧತಿಗಳು ಇಂದಿಗೂ ಆದಿವಾಸಿಗಳಲ್ಲಿ ಕಂಡುಬರುತ್ತವೆ.
ಆದಿವಾಸಿಗಳು ಮೂಲತಃ ತಮ್ಮ ರೂಢಿ ಪರಂಪರೆಯಿಂದ ಜೀವಿಸುತ್ತಾರೆ. ಆದರೆ, ಅನ್ಯ ಧರ್ಮೀಯರ ಪ್ರಭಾವಕ್ಕೆ ಒಳಗಾಗಿ ಮತಾಂತರವಾದ ಆದಿವಾಸಿಗಳು ಗಣತಿ ಸಂಧರ್ಭದಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಮ್ ಮುಂತಾಗಿ ನಮೂದಿಸುವ ಕಾರಣ ತಮ್ಮ ಬುಡಕಟ್ಟು ಅಸ್ಮಿತೆಗೇ ಸಂಚಕಾರ ತಂದುಕೊಳ್ಳುವ ಸಾಧ್ಯತೆಯಿದೆ. ಈ ಕಾರಣಕ್ಕೆ ತಮ್ಮ ಅನನ್ಯತೆಗಾಗಿ ಆದಿವಾಸಿ ಧರ್ಮ ಕೋಡ್ ಸಿಗುವವರೆಗೂ ಆದಿವಾಸಿಗಳು ತಮ್ಮ ಬುಡಕಟ್ಟಿನ ಹೆಸರನ್ನೇ ಧರ್ಮದ ಕಾಲಂನಲ್ಲಿ ನಮೂದಿಸುವುದು ಸೂಕ್ತ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಗೌರವಾದ್ಯಕ್ಷ ಡಾ.ಕೆ.ಎಂ.ಮೇತ್ರಿ ಅಭಿಪ್ರಾಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಮುಂತಾದ ಧರ್ಮಗಳ ಪ್ರಭಾವಕ್ಕೆ ಅನಿವಾರ್ಯವಾಗಿ ಒಳಗಾದ ಆದಿವಾಸಿ ಸಮುದಾಯಗಳನ್ನು ಇದೇ ಕಾರಣಕ್ಕೆ ಅವರ ಬುಡಕಟ್ಟು ಸಂಸ್ಕೃತಿಗಳಿಂದ ಬೇರ್ಪಡಿಸಿ ನೋಡುವುದು ಅಕ್ಷಮ್ಯವೆನಿಸುತ್ತದೆ. ಹಾಗೆ ನೋಡಿದರೆ, ಕಾಡುಗೊಲ್ಲ, ಕುರುಬ, ಕುಣಬಿ, ಕೋಲಿ ಅಥವಾ ಕಬ್ಬಲಿಗರನ್ನು ಇದೇ ನೆಪದಿಂದ ನಿರಾಕರಿಸುವುದು ಸಮಂಜಸವೆನಿಸಲ್ಲ.
ಇನ್ನು ಭಾಷೆಗೆ ಸಂಬಂಧಿಸುವುದಾದರೆ 2011ರ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ಭಾರತೀಯ ಆದಿವಾಸಿಗಳ ಮಾತೃಭಾಷೆಗಳು ಅಳಿವಿನಂಚಿನಲ್ಲಿವೆ. ಕರ್ನಾಟಕ ರಾಜ್ಯದಲ್ಲಿರುವ ಪಾರ್ಧಿ, ಅಡ್ವಿಚೆಂಚರ್, ಹರಣಿಶಿಖಾರಿ, ಹಕ್ಕಿಪಿಕ್ಕಿ ಬುಡಕಟ್ಟುಗಳ ಮಾತೃಭಾಷೆ ವಾಗ್ರಿ, ಗೊಂಡ ರಾಜಗೊಂಡರ ಭಾಷೆ ಗೊಂಡಿ, ಡುಂಗ್ರಿ ಗರಾಸಿಯ ಬುಡಕಟ್ಟು ಭಾಷೆ ಗರಾಸಿಯ, ಜೇನುಕುರುಬರ ಭಾಷೆ ಜೇನುನುಡಿ, ಅಂತೆಯೇ ಸೋಲಿಗರು, ಇರುಳಿಗರು, ಕೊಕಣಗಳದ್ದು ತಮ್ಮದೇ ಭಾಷೆಗಳಿವೆ. ಆದರೆ ಆಧುನೀಕರಣ, ಅಭಿವೃದ್ಧೀಕರಣಗಳ ಹಿನ್ನೆಲೆಯಲ್ಲಿ ಈ ಭಾಷೆಗಳು ನಶಿಸಿ ಹೋಗುತ್ತಿವೆ. ತಮ್ಮ ಬದುಕಿನ ಅನಿವಾರ್ಯತೆಯ ಕಾರಣಕ್ಕೆ ಆದಿವಾಸಿಗಳು ಪ್ರಾದೇಶಿಕವಾಗಿ ಕನ್ನಡ ಮಾತನಾಡುತ್ತಾರೆ. ತಮ್ಮ ಮಕ್ಕಳ ಶಿಕ್ಷಣದ ದೃಷ್ಟಿಯಿಂದಲೂ ಇದು ಅನಿವಾರ್ಯ.
ಭಾರತದ ಸಂವಿಧಾನದ ಅನುಚ್ಛೇದ 344(1) ಮತ್ತು 351ರ ಪ್ರಕಾರ 22 ಭಾಷೆಗಳು ಇದುವರೆಗೂ ಎಂಟನೇ ಅನುಸೂಚಿಯಲ್ಲಿ ಸೇರ್ಪಡೆಗೊಂಡಿವೆ. ಭಾರತ ಸರಕಾರವು 2003ರಲ್ಲಿ ಶ್ರೀ ಸೀತಾಕಾಂತ ಮಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಭಾಷೆಗಳನ್ನು ಅಧ್ಯಯನ ಮಾಡಿ ಸಂವಿಧಾನದ ಅನುಸೂಚಿ 8ರಲ್ಲಿ ಸೇರಿಸಲು ಸಮಿತಿಯೊಂದನ್ನು ರಚಿಸಿತು. ಈ ಸಮಿತಿ 2004ರಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಅದರಲ್ಲಿ 38 ಭಾಷೆಗಳನ್ನು ಸಂವಿಧಾನದ ಅನುಸೂಚಿ 8ರಲ್ಲಿ ಸೇರಿಸಲು ಶಿಫಾರಸು ಮಾಡಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕರ್ನಾಟಕದ ಕಾಡುಗೊಲ್ಲರು, ಕುರುಬರು, ಕುಣಬಿ, ಕಬ್ಬಲಿಗ ಕೋಲಿಗಳು ಕನ್ನಡಿಗರು ಅಂತೆಯೇ ಅವರ ಬುಡಕಟ್ಟು ಹಿನ್ನೆಲೆಯಿಂದ ಆದಿವಾಸಿಗಳೂ ಹೌದು ಎನ್ನುವುದು ಸ್ಪಷ್ಟ.