ಬಿಹಾರ ಫಲಿತಾಂಶ: ಓಟಿನಷ್ಟೇ ಸೀಟು ಬರದಿರಲು ಚುನಾವಣಾ ಆಯೋಗ ಕಾರಣವೋ?, ಚುನಾವಣಾ ವ್ಯವಸ್ಥೆ ಕಾರಣವೋ?
"ಶೇ. 23 ಓಟು ಸಿಕ್ಕರೂ ಆರ್‌ಜೆಡಿಗೆ ಕೇವಲ 25 ಸ್ಥಾನ, ಕೇವಲ ಶೇ. 20 ರಷ್ಟು ಓಟು ಪಡೆದ ಬಿಜೆಪಿಗೆ 89 ಸ್ಥಾನ"
Photo credit: PTI
ಬಿಹಾರದ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗವು ಬಿಜೆಪಿಯ extended ಶಾಖೆಯಾಗಿ ಕೆಲಸ ಮಾಡಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಚುನಾವಣೆ ಘೋಷಣೆಯಾಗುವ ಹತ್ತು ದಿನಗಳ ಮುನ್ನ ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಗಳಿಗೆ 10 ಸಾವಿರ ರೂ. ವರ್ಗಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಹಾಗೂ ಇತರ ಕಲ್ಯಾಣ ವೆಚ್ಚಗಳನ್ನೂ 30 ಸಾವಿರ ಕೋಟಿಗೆ ಹೆಚ್ಚಿಸಿದ್ದನು ಅನುಮತಿಸಿದ್ದು, SIR ಮೂಲಕ ವಿರೋಧಿ ಓಟುಗಳ ಕಡಿತಕ್ಕೆ ಪ್ರಯತ್ನಿಸಿದ್ದು, ಬಿಜೆಪಿ ಮಿತ್ರಪಕ್ಷಗಳ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಕುರುಡಾಗಿದ್ದು .. ಇವೆ ಇತ್ಯಾದಿ.
ಆದರೆ ಓಟು ಶೇರಿಗೆ ತಕ್ಕಂತೆ ಸೀಟುಗಳು ಬರದಿರುವುದರ ಹಿಂದೆ ಚುನಾವಣಾ ಆಯೋಗದ ಕರಾಮತ್ತಿದೇಯೇ? ಅಥವಾ ಎಲ್ಲಾ ಪಕ್ಷಗಳು ಸರ್ವ ಸಮ್ಮತಿಯಿಂದ ಸ್ವಾತಂತ್ರ್ಯ ಬಂದಾಗಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ First Past The Post System ಎಂಬ ಬಲಿಷ್ಠ ಪಕ್ಷಗಳಿಗೆ ಮಾತ್ರ ಅನುಕೂಲ ಮಾಡಿಕೊಡುವ ಚುನಾವಣಾ ವ್ಯವಸ್ಥೆಯಲ್ಲೆ ದೋಷವಿದೆಯೇ?
ಉದಾಹರಣೆಗೆ ಹಾಲಿ ಬಿಹಾರದ ಚುನಾವಣೆಯಲ್ಲಿ ಇತರ ಎಲ್ಲಾ ಪಕ್ಷಗಳಿಗಿಂತ RJD ಪಕ್ಷಕ್ಕೆ ಶೇ. 23 ಓಟು ಸಿಕ್ಕರೂ ಕೇವಲ 25 ಸೀಟು ಬಂದಿದೆ. ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಕೇವಲ ಶೇ. 20 ರಷ್ಟು ಓಟುಗಳನ್ನು ಪಡೆದರೂ 89 ಸೀಟುಗಳನ್ನು ಹಾಗೂ ಶೇ. 19.25ರಷ್ಟು ಸೀಟುಗಳನ್ನು ಪಡೆದ JDU 85 ಸೀಟುಗಳನ್ನು ಪಡೆದಿದೆ. ಆದರೆ ಈ ಪರಿಣಾಮದ ಹಿಂದೆಯೂ ಚುನಾವಣಾ ಆಯೋಗದ ಕರಾಮತ್ತಿದೆ ಎಂಬ ಆರೋಪ ಸೂಕ್ತವಲ್ಲ. ಇದು ನೈಜ ಆರೋಪಿಗಳನ್ನು ಬಚಾವ್ ಮಾಡಿಬಿಡುತ್ತದೆ.
ಏಕೆಂದರೆ ಒಂದು ಪಕ್ಷಕ್ಕೆ ರಾಜ್ಯ ಮಟ್ಟದಲ್ಲಿ ಎಷ್ಟು ಓಟು ಸಿಕ್ಕಿತು ಎಂಬುದರ ಆಧಾರದಲ್ಲಿ ಆ ಪಕ್ಷದ ಪ್ರತಿ ಸೀಟುಗಳ ಗೆಲುವು ತೀರ್ಮಾನವಾಗುವುದಿಲ್ಲ. ಬದಲಿಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಆಯಾ ಪಕ್ಷಕ್ಕೆ ಇರುವ ಶಕ್ತಿ ಸಾಮರ್ಥ್ಯ, ಆ ಕ್ಷೇತ್ರದಲ್ಲಿ ಪ್ರತಿಪಕ್ಷಗಳ ಶಕ್ತಿ ಸಾಮರ್ಥ್ಯ, ಓಟು ವಿಭಜನೆಯಿಂದ ಉಂಟಾಗುವ ಪ್ರಭಾವ ಇತ್ಯಾದಿಗಳನ್ನು ಆಧರಿಸಿ ಪ್ರತಿ ಸೀಟಿನ ಓಟು ಗೆಲುವು ತೀರ್ಮಾನವಾಗುತ್ತದೆ.
ರಾಜ್ಯಮಟ್ಟದಲ್ಲಿ ಒಟ್ಟಾರೆ ಓಟುಗಳ ಸಂಖ್ಯೆ ಹೆಚ್ಚಾದರೂ ಆಯಾ ಕ್ಷೇತ್ರದಲ್ಲಿ ಆ ಪಕ್ಷದ ಓಟು ಇತರ ಅಥವಾ ಗೆದ್ದ ಪಕ್ಷಕ್ಕಿಂತ ಹೆಚ್ಚಾಗದಿರಬಹುದು.
ಸಾಮಾನ್ಯವಾಗಿ ಒಂದೆರೆಡು ಜಾತಿಗಳು ಮತ್ತು ಒಂದೆರೆಡು ಪ್ರದೇಶಗಳಿಗೆ ಸೀಮಿತವಾದ ಪಕ್ಷಗಳಿಗೆ, ರಾಜ್ಯವಾರು ಅಂಕಿಅಂಶಗಳಿಗೆ ಹೋಲಿಸಿದಾಗ, ಕಡಿಮೆ ಓಟುಗಳು ಸಿಕ್ಕಿದ್ದರೂ, ಆಯಾ ಜಾತಿಗಳ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಸೀಟುಗಳು ಸಿಕ್ಕಿರುತ್ತದೆ. ಹಾಗೆಯೇ ರಾಜ್ಯದ್ಯಂತ ಹರಡುಕೊಂಡಿರುವ ಪಕ್ಷವೊಂದು ಹೆಚ್ಚಿನ ಓಟು ಷೇರು ಪಡೆದ ಮಾತ್ರಕ್ಕೆ ಆಯಾ ಕ್ಷೇತ್ರದಲ್ಲೂ ಇತರರಿಗಿಂತ ಹೆಚ್ಚು ಓಟು ಪಡೆಯದಿದ್ದರೆ ಗೆಲ್ಲಲಾಗದು.
ಅಂತಹ ಪಕ್ಷಗಳ ಓಟು ಷೇರು ಕಡಿಮೆಯಾದರೆ, ಪ್ರದೇಶ ಸೀಮಿತ ಅಥವಾ ಜಾತಿ ಸೀಮಿತ ಪಕ್ಷಗಳಿಗಿಂತ ತೀವ್ರವಾಗಿ ಸೀಟುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.
ಈ FPTP ವ್ಯವಸ್ಥೆಯಲ್ಲಿ ಇರುವ ಅತಿ ದೊಡ್ಡ ಸಮಸ್ಯೆ ಏನೆಂದರೆ, ಹಲವು ಪಕ್ಷಗಳು ಸ್ಪರ್ಧಿಸುವಾಗ ಶೇ. 30-35 ರಷ್ಟು ಓಟುಗಳನ್ನು ಸೆಳೆಯುವ ಪಕ್ಷವೂ ಗೆಲ್ಲಬಹುದು. ಹಾಗೂ ಕ್ಷೇತ್ರದ ಬಹುಮತದ ಆಯ್ಕೆಯಾಗದಿರಬಹುದು. ಹಾಗೂ ಉಳಿದ 65-70ರಷ್ಟು ಬಹುಮತದ ಓಟುಗಳಿಗೆ ಪ್ರಾತಿನಿಧ್ಯವೇ ಇಲ್ಲವಾಗುತ್ತದೆ.
ಇದಕೆ ತದ್ವಿರುದ್ಧವಾಗಿ Proportionate Representation (PR - ಪದ್ಧತಿ - ಪ್ರಮಾಣವಾರು ಪ್ರಾತಿನಿಧ್ಯ ) . ಇದರ ಪ್ರಕಾರ ಪ್ರತಿ ಸಾವಿರ ಅಥವಾ ಲಕ್ಷ ಒಟ್ಟಿಗೆ ಇಂತಿಷ್ಟು ಸೀಟು ಎಂದು ನಿಗದಿ ಪಡಿಸಿ, ರಾಜ್ಯ ಅಥವಾ ದೇಶಮಟ್ಟದಲ್ಲಿ ಪ್ರತಿಯೊಂದು ಪಕ್ಷಗಳೂ ಎಷ್ಟು ಓಟು ಪಡೆಯುತ್ತಾರೋ ಅದಕ್ಕೆ ತಕ್ಕಂತೆ ಆಯಾ ಪಕ್ಷಗಳ ಸೀಟುಗಳನ್ನು ನಿಗದಿ ಪಡಿಸುವುದು. ಇದು FPTP ಪದ್ಧತಿಗಿಂತ ಸುಧಾರಿತ ಪ್ರಜಾತಾಂತ್ರಿಕ ಪದ್ಧತಿ.
ಆದರೂ ಈ ವ್ಯವಸ್ಥೆಯಲ್ಲಿ ಗೆದ್ದ ಅಭ್ಯರ್ಥಿ ತನಗೆ ಓಟು ಹಾಕಿದ ಜನರಿಗಿಂತ ತನ್ನನ್ನೇ ನೇಮಕ ಮಾಡುವ ಪಕ್ಷಕ್ಕೆ ಋಣಿಯಾಗಬೇಕಾದ ಸಮಸ್ಯೆ ಇದೆ. ಆದರೂ ಇದು ಹಾಲಿ ವ್ಯವಸ್ಥೆ ಗಿಂತ ಎಷ್ಟೋ ಮೇಲು.
ಅದೇನೇ ಇರಲಿ ಭಾರತದಲ್ಲಿ PR ಪದ್ಧತಿಯನ್ನು ಜಾರಿಗೆ ತರಲು ಕಾಂಗ್ರೆಸ್- ಬಿಜೆಪಿ ಯಾವುದಕ್ಕೂ ಸಮ್ಮತವಿಲ್ಲ. ಏಕೆಂದರೆ ಎಲ್ಲಾ ಪಕ್ಷಗಳು FPTP ಪದ್ಧತಿಯ ಮೂಲಕ ಕ್ಷೇತ್ರವಾರು ಪಾಳೆಪಟ್ಟು ನಿರ್ಮಿಸಿಕೊಳ್ಳುವ ರಾಜಕಾರಣ ಮಾಡುವರೇ. ಅದೇನೇ ಇರಲಿ ಈಗ ಬಿಹಾರ ಚುನಾವಣೆಗಾಗಿ ಈ ಪ್ರಕ್ರಿಯೆಯ ಶೋಧವಾಗಿದ್ದಲ್ಲ. ಹಾಗೆ ನೋಡಿದರೆ ಕಡಿಮೆ ಓಟು ಪಡೆದರೂ ಹೆಚ್ಚು ಸೀಟುಗಳನ್ನು ಅಥವಾ ಹೆಚ್ಚು ಓಟು ಪಡೆದರೂ ಕಡಿಮೆ ಸೀಟುಗಳನ್ನು ಪಡೆಯುವುದೂ ಈ ಚುನಾವಣೆಗೆ ಸೀಮಿತವಲ್ಲ.
ಕೆಳಗಿನ ಕೋಷ್ಟಕದಲ್ಲಿ ಕರ್ನಾಟಕದ ರಾಜ್ಯ ಶಾಸನಸಭಾ ಚುನಾವಣೆಯಲ್ಲಿ 1952-2013ರ ವರೆಗೆ ಪಕ್ಷಗಳು ಪಡೆದ ಓಟುಗಳು ಮತ್ತು ಸೀಟುಗಳ ಕೋಷ್ಠಕವಿದೆ.ಆ ಅಂಕಿಅಂಶಗಳು ಸ್ಪಷ್ಟಪಡಿಸುವಂತೆ:
ಕಾಂಗ್ರೆಸ್ ಪಕ್ಷವು 2004 ರಲ್ಲಿ 35% ಓಟು ಪಡೆದರೂ ಕೇವಲ 65 ಸೀಟುಗಳನ್ನು ಪಡೆಯಿತು. 2008 ರಲ್ಲಿ ಅದಕ್ಕಿಂತ 1% ಕಡಿಮೆ ಎಂದರೆ 34.% ಓಟು ಪಡೆದರೂ 2004ಕ್ಕಿಂತ 15 ಸೀಟುಗಳನ್ನು ಜಾಸ್ತಿ- 80 ಸೀಟುಗಳನ್ನು ಪಡೆಯಿತು. ಆದರೆ 2018 ರಲ್ಲಿ 38% ಓಟುಗಳನ್ನು ಪಡೆದರೂ ಸೀಟುಗಳ ಸಂಖ್ಯೆ ಮಾತ್ರ ಹೆಚ್ಚಾಗದೇ 80 ಕ್ಕೆ ಕುಸಿಯಿತು.
ಅದೇ ರೀತಿ ಬಿಜೆಪಿ ಪಕ್ಷವು 2004ರ ಕರ್ನಾಟಕದ ಶಾಸನಾಸಭಾ ಚುನಾವಣೆಯಲ್ಲಿ 28.33% ಓಟುಗಳನ್ನು ಮಾತ್ರ ಪಡೆದಿದ್ದರೂ 79 ಸೀಟುಗಳನ್ನು ಪಡೆದಿತ್ತು. 2008 ರಲ್ಲಿ 33% ಓಟುಗಳನ್ನು ಪಡೆದು 110 ಸೀಟುಗಳನ್ನು ಪಡೆದಿತ್ತು. ಆದರೆ 2023 ರ ಚುನಾವಣೆಯಲ್ಲಿ 2008 ರ ಓಟುಗಳಿಗಿಂತ ಶೇ. 3 ರಷ್ಟು ಜಾಸ್ತಿ ಎಂದರೆ ಶೇ. 36 ರಷ್ಟು ಓಟುಗಳನ್ನು ಪಡೆದರೂ ಸೀಟುಗಳು ಮಾತ್ರ 50 ರಷ್ಟು ಕಡಿಮೆಯಾಗಿ 66 ಕ್ಕಿಳಿಯಿತು.
ಹೆಚ್ಚಿನ ವಿವರಗಳಿಗೆ ಕೋಷ್ಟಕವನ್ನು ಗಮನಿಸಬಹುದು.
ಹೀಗಾಗಿ ಈ ಬಾರಿ ಬಿಹಾರದಲ್ಲಿ ಬಿಜೆಪಿ-ಜೆಡಿಯು ಗಳಿಗೆ ಆರ್ ಜೇಡಿ ಗಿಂತ ಓಟುಗಳು ಕಡಿಮೆ ಬಂದರೂ ಸೀಟು ಜಾಸ್ತಿಯಾಗಿರುವುದರ ಹಿಂದೆ ಚುನಾವಣಾ ಆಯುಕ್ತರ ಕರಾಮತ್ತಿಲ್ಲ. ಎಲ್ಲಾ ಪಕ್ಷಗಳೂ ಒಪ್ಪಿಕೊಂಡಿರುವ ಚುನಾವಣಾ ವ್ಯವಸ್ಥೆಯ ದೋಷವಿದೆ.
ಇದಲ್ಲದೆ ಬಿಹಾರ ಚುನಾವಣೆಯಲ್ಲಿ ಒಟ್ಟಾರೆ ವಿರೋಧಿ ಪಕ್ಷಗಳ ಮಹಾಘಟ್ ಬಂನ್ ಗಿಂತ ,NDA ಒಕ್ಕೂಟ ವಿಸ್ತೃತವಾದ ಜಾತಿ ಸಮೀಕರಣವನ್ನು ಕ್ರೂಢೀಕರಿಸಿತ್ತು ಎಂಬುದನ್ನು ಮರೆಯಬಾರದು.
ಹೀಗಾಗಿಯೇ RJD ಪಕ್ಷಕ್ಕೆ BJP ಗಿಂತ ಹೆಚ್ಚು ಓಟು ಸಿಕ್ಕಿದ್ದರೂ ಒಟ್ಟಾರೆ NDA ಒಕ್ಕೂಟಕ್ಕೆ ಮಹಾಘಟ್ ಬಂಧನ್ ಒಕ್ಕೂಟಕ್ಕಿಂತ ಶೇ. 10 ರಷ್ಟು ಹೆಚ್ಚುವರಿ ಓಟುಗಳು ಸಿಕ್ಕಿವೆ.
ಆದ್ದರಿಂದಲೇ NDA ಅಭ್ಯರ್ಥಿಗಳು ಗೆದ್ದಿರುವ 202 ಸೀಟುಗಳಲ್ಲಿ 100 ಸೀಟುಗಳಲ್ಲಿ ಸೋತ ಅಭ್ಯರ್ಥಿಗಿಂತ ಶೇ. 10ಕ್ಕಿಂತ ಹೆಚ್ಚುವರಿ ಮತಗಳನ್ನು, 50 ಸೀಟುಗಳಲ್ಲಿ ಶೇ. 5-10 ರಷ್ಟು ಹೆಚ್ಚುವರಿ ಮತಗಳನ್ನು ಪಡೆದುಕೊಂಡು ಅವಿವಾದಾಸ್ಪದ ಗೆಲುವನ್ನು ಸಾಧಿಸಿದ್ದಾರೆ.
ಜೊತೆಗೆ ಬಿಜೆಪಿ 2005 ರ ಚುನಾವಣೆ ಯಿಂದ ತನ್ನ ಓಟು ಶೇರನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ... ಅದಕ್ಕೆ ಬೇಕಾದ ತಂತ್ರ- ವ್ಯೂಹ ತಂತ್ರ ಗಳನ್ನು ಯಶಸ್ವಿಯಾಗಿ ರೂಪಿಸುತ್ತ ಬಂದಿದೆ ಎಂಬುದನ್ನು ಒಪ್ಪಿಕೊಳ್ಳದಿದ್ದರೆ, ಅದನ್ನು ಸೋಲಿಸಲು ಬೇಕಾದ ಪ್ರತಿವ್ಯೂಹ ವನ್ನು ರಚಿಸಲಾಗದು..
NDA ಬಗೆಯ ವಿಶಾಲ ಜಾತಿ -ಸಮುದಾಯಗಳ ಚುನಾವಣಾ ಮೈತ್ರಿಕೋಟವನ್ನು ಅಥವಾ ಜನಸಂಘಟನೆ, ವಿಶ್ವಾಸಗಳನ್ನು ಮಹಾಘಾಟ್ ಬಂಧನ್ ಏಕೆ ಕೊಡಲಾಗಲಿಲ್ಲ ಎಂಬ ಆತ್ಮ ವಿಶ್ಲೇಷಣೆ , ಉತ್ತರದಾಯಿತ್ವ ಗಳಿಗೆ ಯತ್ನಿಸದೆ....
ಮೋದಿ ಭಕ್ತರ ರೀತಿ ಇಲ್ಲದ ಕಾರಣಗಳನ್ನು ಮತ್ತು ಸಲ್ಲದ ನೆಪಗಳನ್ನೂ ಹುಡುಕುತ್ತಾ ಹೋದರೆ ಫ್ಯಾಶಿಷ್ಟರ ಚುನಾವಣಾ ದಿಗ್ವಿಜಯಕ್ಕೆ ವಿರೋಧ ಪಕ್ಷಗಳೇ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣವಾಗುತ್ತವೆ.
-ಶಿವಸುಂದರ್