ಭಾರತದ ಗ್ರಾಮೀಣ ಉದ್ಯೋಗ ಖಾತರಿ ನೀತಿಯ ಸ್ಥಿತ್ಯಂತರ ಮತ್ತು ವಿಬಿ-ಜಿ ರಾಮ್ ಜಿ ಕಾಯ್ದೆಯ ಬಿಕ್ಕಟ್ಟು
ಸರಕಾರ ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆಯ ಜುಲೈ ತಿಂಗಳ ವರದಿ ಹೊರಬಂದಿದೆ. ಹಿಂದಿನ ವರ್ಷದ ಜುಲೈಗೆ ಹೋಲಿಸಿದರೆ ಸುಮಾರು ಶೇ. 50ರಷ್ಟು ಉದ್ಯೋಗ ಸೃಷ್ಟಿಯ ಕುಸಿತದ ವರದಿ ಬಂದಿದೆ. ಸರಕಾರ ಹೇಳಿಕೊಂಡಂತಹ ಸುಧಾರಣೆಯಾಗುವುದಕ್ಕಿಂತ, ಗ್ರಾಮೀಣ ಜನರಿಗಿದ್ದ ಒಂದು ಸಾಮಾಜಿಕ ಭದ್ರತೆಯ ನೆಲೆಯ ಬುನಾದಿ ಕುಸಿದಂತೆ ಕಾಣುತ್ತಿದೆ.
1. ಹಿನ್ನೆಲೆ ಮತ್ತು ನೀತಿ ಬದಲಾವಣೆ
ಭಾರತದ ಗ್ರಾಮೀಣ ಸಾಮಾಜಿಕ ಭದ್ರತೆಗಾಗಿ 2005ರಲ್ಲಿ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು (ಮನರೇಗಾ) ಜಾರಿಗೆ ತರಲಾಯಿತು. ಕಳೆದ ಎರಡು ದಶಕಗಳಿಂದ ಕಡುಬಡವರ ಜೀವನೋಪಾಯಕ್ಕೆ ಭದ್ರತೆ ನೀಡುವಲ್ಲಿ, ಅದರಲ್ಲೂ ಮುಖ್ಯವಾಗಿ 2009 ಮತ್ತು 2015ರ ತೀವ್ರ ಬರಗಾಲ ಹಾಗೂ ಕೋವಿಡ್ ಸಾಂಕ್ರಾಮಿಕದಂತಹ ಬಿಕ್ಕಟ್ಟುಗಳ ಸಂದರ್ಭದಲ್ಲಿ ಈ ಯೋಜನೆ ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿ ಕಾರ್ಯನಿರ್ವಹಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಇದರ ಬಗ್ಗೆ ಮೊದಲಿನಿಂದಲೂ ತಾತ್ಸಾರವಿದ್ದರೂ, ಅನಿವಾರ್ಯವಾಗಿ ಮುಂದುವರಿಸಿಕೊಂಡು ಬರಲಾಗಿತ್ತು.
ಆದರೆ, 2025ರ ಡಿಸೆಂಬರ್‌ನಲ್ಲಿ ಮನರೇಗಾವನ್ನು ರದ್ದುಪಡಿಸಿ, ಅದರ ಸ್ಥಾನದಲ್ಲಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಅಥವಾ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ತರಲಾಯಿತು. ಮೂಲ ಯೋಜನೆಯಂತೆ ಈ ಹೊಸ ಕಾಯ್ದೆಯು 2026ರ ಎಪ್ರಿಲ್ 1ರಿಂದಲೇ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕಿತ್ತು. ಆದರೆ ನಿಯಮಾವಳಿಗಳನ್ನು ಅಂತಿಮಗೊಳಿಸುವ ವಿಳಂಬ ಮತ್ತು ತಾಂತ್ರಿಕ ಸಿದ್ಧತೆಯ ಕೊರತೆಯಿಂದಾಗಿ (ಮೇ 22ರಂದು ಕರಡು ನಿಯಮ ಪ್ರಕಟವಾಗಿ, ಜೂನ್ ಕೊನೆಯವರೆಗೂ ಅಂತಿಮ ಅಧಿಸೂಚನೆ ಹೊರಬೀಳಲಿಲ್ಲ), ಮಧ್ಯದ ಅವಧಿಯಲ್ಲಿ ಮನರೇಗಾ ಮುಂದುವರಿದು ಅಂತಿಮವಾಗಿ 2026ರ ಜುಲೈ 1ರಿಂದ ವಿಬಿ-ಜಿ ರಾಮ್ ಜಿ ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿತು.
2. ಹೊಸ ಕಾಯ್ದೆಯ ಪ್ರಮುಖ ಲಕ್ಷಣಗಳು ಮತ್ತು ರಚನಾತ್ಮಕ ಬದಲಾವಣೆಗಳು
ಸರಕಾರದ ಪ್ರಕಾರ ಇದು ಹಳೆಯ ಮನರೇಗಾ ಯೋಜನೆಗಿಂತ ಉತ್ತಮ ಯೋಜನೆ. ಇದರಲ್ಲಿ 125 ದಿನಗಳ ಕೆಲಸ, ಹೆಚ್ಚಿನ ಬಜೆಟ್ ಮತ್ತು ಹೆಚ್ಚಿನ ಕೂಲಿ ಸಿಗುತ್ತದೆ ಎಂದು ಸರಕಾರ ಬಿಂಬಿಸಿತು. ಆದರೆ ಇದರ ಆಡಳಿತಾತ್ಮಕ ಮತ್ತು ಹಣಕಾಸು ಚೌಕಟ್ಟು ಉದ್ಯೋಗ ಖಾತರಿ ಯೋಜನೆಯ ತಳಮಟ್ಟದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ:
ಅನುದಾನ ಹಂಚಿಕೆಯ ಸೂತ್ರ ಬದಲಾವಣೆ: ಹಳೆಯ ಮನರೇಗಾದಲ್ಲಿ ಕೇಂದ್ರ ಸರಕಾರವೇ ಶೇ. 100 ಕೌಶಲ್ಯರಹಿತ ಕೂಲಿ ವೆಚ್ಚ ಮತ್ತು ಶೇ. 75 ಸಾಮಗ್ರಿ ವೆಚ್ಚವನ್ನು ಭರಿಸುತ್ತಿತ್ತು. ಆದರೆ ಹೊಸ ಯೋಜನೆಯಲ್ಲಿ ಒಟ್ಟು ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಹಂಚಿಕೊಳ್ಳಬೇಕಾಗಿದೆ. ಈಶಾನ್ಯ, ಹಿಮಾಲಯನ್ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರಕ್ಕೆ ಮಾತ್ರ ಶೇ. 90ರಷ್ಟು ಅನುದಾನ ಮುಂದುವರಿಯಲಿದ್ದು, ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ. 100 ಕೇಂದ್ರವೇ ಭರಿಸಲಿದೆ.
ಬೇಡಿಕೆ ಆಧಾರಿತ ವ್ಯವಸ್ಥೆಗೆ ಕತ್ತರಿ: ಹಿಂದೆ ತಳಮಟ್ಟದಲ್ಲಿ ಕೆಲಸದ ಬೇಡಿಕೆ ಹೆಚ್ಚಿದಂತೆಲ್ಲಾ ಕೇಂದ್ರವು ಮುಕ್ತವಾಗಿ ಅನುದಾನ ಬಿಡುಗಡೆ ಮಾಡುತ್ತಿತ್ತು. ಅದರೆ ಈಗ ಹೊಸ ಯೋಜನೆಯಲ್ಲಿ ಗ್ರಾಮೀಣ ಜನಸಂಖ್ಯೆ, ಗ್ರಾಮ ಪಂಚಾಯತ್‌ಗಳ ಸಂಖ್ಯೆ, ಮಹಿಳೆಯರ ಭಾಗವಹಿಸುವಿಕೆ ಹಾಗೂ ನಿರ್ಮಿಸಿದ ಆಸ್ತಿಗಳ ದಾಖಲೆ ಆಧರಿಸಿ ರಾಜ್ಯಗಳಿಗೆ ಮುಂಗಡವಾಗಿ ‘ಮಾನದಂಡ ಆಧಾರಿತ ಸೀಮಿತ ಅನುದಾನ’ವನ್ನು ನಿಗದಿಪಡಿಸಲಾಗುತ್ತದೆ.
ಆಯ್ದ ಕಾಮಗಾರಿಗಳು: ಈಗ ರಾಜ್ಯಗಳು ತಮ್ಮ ರಾಜ್ಯಗಳಿಗೆ ಬೇಕಾದ ಯೋಜನೆಗಳನ್ನು ಹಾಕಿಕೊಳ್ಳುವಂತಿಲ್ಲ. ಜಲ ಭದ್ರತೆ (ಮಳೆನೀರು ಕೊಯ್ಲು, ಜಲಾನಯನ ಅಭಿವೃದ್ಧಿ, ಹಳೆಯ ಜಲಮೂಲಗಳ ಪುನಶ್ಚೇತನ), ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಆಧಾರಿತ ಸ್ವತ್ತುಗಳು ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆಗೆ ಮಾತ್ರ ಅನುದಾನ ಸೀಮಿತಗೊಳಿಸಲಾಗಿದೆ.
ಕಾರ್ಮಿಕ ನಿಯಮಗಳು ಮತ್ತು ಸೌಲಭ್ಯಗಳು: ವರ್ಷಕ್ಕೆ 125 ದಿನಗಳ ಉದ್ಯೋಗ ಖಾತರಿ, ವಾರಕ್ಕೆ ಗರಿಷ್ಠ 48 ಗಂಟೆಗಳ ಕೆಲಸ, 40 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ತಪಾಸಣೆ, ಬೇಡಿಕೆ ಸಲ್ಲಿಸಿದ 15 ದಿನಗಳಲ್ಲಿ ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ತೆ, ಕೃಷಿ ವಿರಾಮದ ಹೊರತಾಗಿ ಕನಿಷ್ಠ 25 ದಿನಗಳ ಕಡ್ಡಾಯ ಕೆಲಸದ ಖಾತರಿ ಮತ್ತು ವೇತನ ವಿಳಂಬವಾದರೆ ಹೆಚ್ಚುವರಿ ಪರಿಹಾರದ ನಿಯಮಗಳನ್ನು ರೂಪಿಸಲಾಗಿದೆ. ವೇತನವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಬ್ಯಾಂಕ್/ಅಂಚೆ ಖಾತೆಗೆ ಜಮೆ ಮಾಡಲಾಗುತ್ತದೆ.
ಕೃಷಿ ವಿರಾಮದ ಅಧಿಕಾರ: ಕೃಷಿ ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ ಕೃಷಿ ಕಾರ್ಮಿಕರ ಲಭ್ಯತೆ ಕಾಪಾಡಲು ಯೋಜನೆಯನ್ನು ಗರಿಷ್ಠ 60 ದಿನಗಳ ಕಾಲ ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ.
3. ಆರ್ಥಿಕ ಸವಾಲುಗಳು ಮತ್ತು ನೀತಿಯ ಮಿತಿಗಳು
ರಾಜ್ಯಗಳ ಮೇಲಿನ ಆರ್ಥಿಕ ಹೊರೆ: 2026-27ರ ಹಣಕಾಸು ವರ್ಷಕ್ಕೆ ಕೇಂದ್ರವು ದಾಖಲೆಯ ರೂ. 95,692.31 ಕೋಟಿ ಅನುದಾನ ಮೀಸಲಿಟ್ಟಿದೆ (ಉದಾಹರಣೆಗೆ: ಉತ್ತರ ಪ್ರದೇಶಕ್ಕೆ ರೂ. 9,721 ಕೋಟಿ, ಪಶ್ಚಿಮ ಬಂಗಾಳಕ್ಕೆ ರೂ. 8,508 ಕೋಟಿ, ಆಂಧ್ರಪ್ರದೇಶಕ್ಕೆ ರೂ. 7,707 ಕೋಟಿ, ತಮಿಳುನಾಡಿಗೆ ರೂ. 7,585 ಕೋಟಿ, ರಾಜಸ್ಥಾನಕ್ಕೆ ರೂ. 7,582 ಕೋಟಿ, ಬಿಹಾರಕ್ಕೆ ರೂ. 6,716 ಕೋಟಿ, ಮಧ್ಯಪ್ರದೇಶಕ್ಕೆ ರೂ. 6,252 ಕೋಟಿ). ಆದರೆ ರಾಜ್ಯಗಳು ತಮ್ಮ ಶೇ. 40 ಪಾಲನ್ನು ಭರಿಸಿದರೆ ಮಾತ್ರ ಒಟ್ಟು ಯೋಜನಾ ಗಾತ್ರವು ರೂ. 1.51 ಲಕ್ಷ ಕೋಟಿಯನ್ನು ತಲುಪಲು ಸಾಧ್ಯ. ದುರ್ಬಲ ಆರ್ಥಿಕ ಸ್ಥಿತಿಯಿರುವ ರಾಜ್ಯಗಳಿಗೆ ಶೇ. 40 ಪಾಲನ್ನು ಹೊಂದಿಸುವುದು ಹೊರೆಯಾಗಿದ್ದು, ಇದು ಸಂವಿಧಾನದ 258ನೇ ವಿಧಿಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಹಲವು ರಾಜ್ಯಗಳು ಆಕ್ಷೇಪಿಸಿವೆ.
ಅಸಮರ್ಪಕ ಕನಿಷ್ಠ ಕೂಲಿ: ದಿನಕ್ಕೆ ರೂ. 300 ಕನಿಷ್ಠ ಕೂಲಿ ನಿಗದಿಪಡಿಸಲಾಗಿದೆ. ಪ್ರಸ್ತುತ ಹಣದುಬ್ಬರಕ್ಕೆ ಹೋಲಿಸಿದರೆ ಇದು 2009-10ರ ರೂ. 100 ಮೌಲ್ಯಕ್ಕೆ ಸಮನಾಗಿದೆ. ಇದು ಬಹುತೇಕ ರಾಜ್ಯಗಳ ಕನಿಷ್ಠ ಕೂಲಿಗಿಂತ ಕಡಿಮೆಯಿದ್ದು, 2018ರ ಸತ್ಪತಿ ಸಮಿತಿ ಶಿಫಾರಸು ಮಾಡಿದ್ದ ರೂ. 375 ದಿನಗೂಲಿಗಿಂತಲೂ ತೀರಾ ಕಡಿಮೆಯಾಗಿದೆ.
ತಾಂತ್ರಿಕ ತೊಡಕುಗಳು: ಕಡ್ಡಾಯ ಇ-ಕೆವೈಸಿ, ಕೆಲಸದ ಸ್ಥಳದಲ್ಲಿ ದಿನಕ್ಕೆ ಎರಡು ಬಾರಿ ಮುಖ ಗುರುತಿಸುವಿಕೆ (facial recognition) ಮತ್ತು ಜಿಯೋಟ್ಯಾಗಿಂಗ್ ಕಡ್ಡಾಯಗೊಳಿಸಿರುವುದು ಇಂಟರ್‌ನೆಟ್ ಕೊರತೆಯಿರುವ ಸ್ಥಳಗಳಲ್ಲಿ ಗ್ರಾಮೀಣ ಕಾರ್ಮಿಕರಿಗೆ ಕೆಲಸ ಮತ್ತು ವೇತನ ಸಿಗುವುದು ಕಷ್ಟವಾಗುತ್ತದೆ.
4. ಉದ್ಯೋಗ ಸೃಷ್ಟಿಯಲ್ಲಿನ ಕುಸಿತ:
ಅಂಕಿಅಂಶಗಳ ತುಲೆ
ವಾಸ್ತವವಾಗಿ ಉದ್ಯೋಗ ಖಾತರಿ ಯೋಜನೆಯಲ್ಲಿನ ಕುಸಿತವು 2020-21ರಿಂದಲೇ ನಿರಂತರವಾಗಿ ದಾಖಲಾಗುತ್ತಿದೆ:
ವಾರ್ಷಿಕ ಕುಸಿತ (ಮನರೇಗಾ ಅವಧಿ):
ಸೃಷ್ಟಿಯಾದ ಒಟ್ಟು ಕೆಲಸ: 2021-22ರಲ್ಲಿ 3,630 ಮಿಲಿಯನ್ ಮಾನವ-ದಿನಗಳಿಂದ (MPD), 2023-24ರಲ್ಲಿ 3,090 MPDಗೆ ಮತ್ತು 2025-26ರಲ್ಲಿ 2,280 MPDಗೆ ಕುಸಿದಿದೆ.
ಕೆಲಸಕ್ಕೆ ಹಾಜರಾದ ಜನರ ಸಂಖ್ಯೆ: 2021-22ರಲ್ಲಿ 106.1 ಮಿಲಿಯನ್‌ನಿಂದ 2023-24ರಲ್ಲಿ 83.4 ಮಿಲಿಯನ್‌ಗೆ ಹಾಗೂ 2025-26ರಲ್ಲಿ 72 ಮಿಲಿಯನ್‌ಗೆ ಇಳಿಕೆಯಾಗಿದೆ.
ಫಲಾನುಭವಿ ಕುಟುಂಬಗಳು: 2021-22ರಲ್ಲಿ 72.5 ಮಿಲಿಯನ್‌ನಿಂದ 2025-26ರಲ್ಲಿ 53.4 ಮಿಲಿಯನ್‌ಗೆ ಕುಸಿದಿವೆ.
ಗರಿಷ್ಠ ಕೆಲಸದ ತ್ರೈಮಾಸಿಕದ ಬಿಕ್ಕಟ್ಟು (ಎಪ್ರಿಲ್ ಜೂನ್):
ಅರ್ಥಶಾಸ್ತ್ರಜ್ಞ ಹಿಮಾಂಶು ಅವರು ಗುರುತಿಸುವಂತೆ, ಗ್ರಾಮೀಣ ಪ್ರದೇಶಗಳಲ್ಲಿ ಬಿತ್ತನೆ, ಕೊಯ್ಲು ಇತ್ಯಾದಿ ಕೃಷಿ ಚಟುವಟಿಕೆಗಳು ಇಲ್ಲದ ಬೇಸಿಗೆಯ ಮೊದಲ ತ್ರೈಮಾಸಿಕದಲ್ಲೇ ಮನರೇಗಾದ ವಾರ್ಷಿಕ ಉದ್ಯೋಗದ ಶೇ. 40ರಿಂದ 44ರಷ್ಟು ಕೆಲಸ ಸೃಷ್ಟಿಯಾಗುತ್ತದೆ.
ಈ ಅವಧಿಯಲ್ಲಿ 2021ರಲ್ಲಿ 1,160 MPD, 2023ರಲ್ಲಿ 1,230 MPD, 2025ರಲ್ಲಿ 1,010 MPD ಕೆಲಸ ದಾಖಲಾಗಿದ್ದರೆ, 2026ರ ಇದೇ ಅವಧಿಯಲ್ಲಿ ಕೇವಲ 620 MPD ಕೆಲಸ ಸೃಷ್ಟಿಯಾಗಿದೆ (ಹಿಂದಿನ ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ. 60ರಷ್ಟು ಮಾತ್ರ). ಹಿಂದೆ ಮನರೇಗಾ ಇದ್ದಾಗ ಮತ್ತು ಕೇಂದ್ರವೇ ವೆಚ್ಚ ಭರಿಸುತ್ತಿದ್ದ ಅವಧಿಯಲ್ಲೇ ಈ ಕುಸಿತ ಆರಂಭವಾಗಿತ್ತು. ಹೊಸ ‘ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್’ ವಿತರಣೆಯ ಗೊಂದಲ ಮತ್ತು ಆಡಳಿತಾತ್ಮಕ ಅನಿಶ್ಚಿತತೆಯಿಂದಾಗಿ ಲಕ್ಷಾಂತರ ಕಾರ್ಮಿಕರು ಕೆಲಸ ವಂಚಿತರಾದರು.
ವಿಬಿ-ಜಿ ರಾಮ್ ಜಿ ಜಾರಿಯಾದ ಮೊದಲ ತಿಂಗಳ (ಜುಲೈ 2026) ಆಘಾತಕಾರಿ ಅಂಕಿಅಂಶಗಳು:
ಮಾನವ ದಿನಗಳ ಕುಸಿತ: ಜುಲೈ 2020ರಲ್ಲಿ 391 ಮಿಲಿಯನ್ ಮಾನವ ದಿನಗಳು ಇದ್ದುದು, ಜುಲೈ 2023ರಲ್ಲಿ 272 ಮಿಲಿಯನ್ ಆಯಿತು ಮತ್ತು ಜುಲೈ 2025ರಲ್ಲಿ 153 ಮಿಲಿಯನ್ ಮಾನವ ದಿನಗಳು ಇದ್ದುದು, ಜುಲೈ 2026ರಲ್ಲಿ ಕೇವಲ 76.7 ಮಿಲಿಯನ್ ಮಾನವ ದಿನಗಳಿಗೆ(ಅಧಿಕೃತ ಡ್ಯಾಶ್‌ಬೋರ್ಡ್ ಪ್ರಕಾರ 7.67 ಕೋಟಿ ಮಾನವ ದಿನಗಳು; ಸಚಿವಾಲಯ 9 ಕೋಟಿ ಎಂದು ಹೇಳಿಕೊಂಡಿದ್ದರೂ) ಇಳಿದಿದೆ. ಇದು ಹಿಂದಿನ ವರ್ಷದ ಜುಲೈಗೆ ಹೋಲಿಸಿದರೆ ಸುಮಾರು ಶೇ. 49.3ರಿಂದ ಶೇ. 49.94ರಷ್ಟು ತೀವ್ರ ಕುಸಿತ.
ಕುಟುಂಬಗಳ ಸಂಖ್ಯೆ: ಕಳೆದ ವರ್ಷದ ಜುಲೈನಲ್ಲಿ 1.42 ಕೋಟಿ ಕುಟುಂಬಗಳು ಕೆಲಸ ಪಡೆದಿದ್ದರೆ, ಈ ಬಾರಿ ಕೇವಲ 69 ಲಕ್ಷ ಜನರಿಗೆ (ಶೇ. 51ರಷ್ಟು ಕುಸಿತ) ಕೆಲಸ ಸಿಕ್ಕಿದೆ. (ಆದರೆ ಇದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ. 62ರಷ್ಟಿರುವುದು ಏಕೈಕ ಸಮಾಧಾನಕರ ಅಂಶ).
ರಾಜ್ಯವಾರು ಪರಿಸ್ಥಿತಿ: ಆಂಧ್ರಪ್ರದೇಶ ಮತ್ತು ತೆಲಂಗಾಣಗಳನ್ನು ಹೊರತುಪಡಿಸಿ, 19 ಪ್ರಮುಖ ರಾಜ್ಯಗಳ ಪೈಕಿ 10 ರಾಜ್ಯಗಳಲ್ಲಿ ಶೇ. 60ರಿಂದ 85ರಷ್ಟು ಉದ್ಯೋಗಾವಕಾಶಗಳ ಕುಸಿತವಾಗಿವೆೆ. ಪ್ರಮುಖವಾಗಿ ಉತ್ತರ ಪ್ರದೇಶ (12 MPD), ಮಧ್ಯಪ್ರದೇಶ (10 MPD), ಜಾರ್ಖಂಡ್ (9 MPD), ಮಹಾರಾಷ್ಟ್ರ (7 MPD), ಬಿಹಾರ (5 MPD), ಛತ್ತೀಸ್‌ಗಡ (4 MPD) ಮತ್ತು ಅಸ್ಸಾಂ (3 MPD) ರಾಜ್ಯಗಳಲ್ಲಿ ಕಾಮಗಾರಿಗಳು ತೀವ್ರವಾಗಿ ನೆಲಕಚ್ಚಿವೆ.
ನಾಲ್ಕು ತಿಂಗಳ ಒಟ್ಟು ಚಿತ್ರಣ: 2026-27ರ ಮೊದಲ ನಾಲ್ಕು ತಿಂಗಳಲ್ಲಿ (ಎಪ್ರಿಲ್-ಜುಲೈ) ಒಟ್ಟಾರೆ 70 ಕೋಟಿ ಮಾನವ ದಿನಗಳಷ್ಟೇ ಸೃಷ್ಟಿಯಾಗಿದ್ದು, ಇದು ಹಿಂದಿನ ಎರಡು ವರ್ಷಗಳ ಸರಾಸರಿಗಿಂತ ಶೇ. 43ರಷ್ಟು ಕಡಿಮೆಯಾಗಿದೆ.
5. ಪ್ರಸ್ತುತ ಮುಂಗಾರು ಬಿಕ್ಕಟ್ಟು ಮತ್ತು ಗ್ರಾಮೀಣ ವಾಸ್ತವ
ಕೃಷಿ ಬಿತ್ತನೆಯ ಸಮಯದಲ್ಲಿ ಕೆಲಸ ನಿಲ್ಲಿಸಿದ್ದೇ ಜುಲೈ ತಿಂಗಳ ಕುಸಿತಕ್ಕೆ ಕಾರಣ ಎಂದು ಸರಕಾರ ವಾದಿಸುತ್ತಿದೆ (ಬಿಹಾರ, ಒಡಿಶಾ ಸೇರಿ 7 ರಾಜ್ಯಗಳು ಕೃಷಿ ವಿರಾಮ ಜಾರಿಗೊಳಿಸಿದ್ದವು). ಆದರೆ ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ವಿಶ್ಲೇಷಿಸಿದಂತೆ, ಕೆಲಸ ನಿಲ್ಲಿಸದ ರಾಜ್ಯಗಳನ್ನು ಪ್ರತ್ಯೇಕಿಸಿ ನೋಡಿದರೂ ಇಷ್ಟೇ ಪ್ರಮಾಣದ ಭಾರೀ ಕುಸಿತ ಕಂಡುಬರುತ್ತದೆ. ಹಿಂದೆ ಗಮನಿಸಿದಂತೆ ಕಳೆದ ಕೆಲವು ವರ್ಷಗಳಿಂದಲೇ ಈ ಕುಸಿತ ಪ್ರಾರಂಭವಾಗಿದೆ. ಜುಲೈ ತಿಂಗಳಿನಲ್ಲಿ ಕಾಣಿಸಿಕೊಂಡಿರುವುದು ಒಂದು ಆಕಸ್ಮಿಕವಲ್ಲ. ಇದು ಒಟ್ಟಾರೆ ಕುಸಿತದ ಮುಂದುವರಿಕೆಯಷ್ಟೆ.
ಇನ್ನೊಂದೆಡೆ ಪ್ರಸ್ತುತ ಸಾಲಿನಲ್ಲಿ ಮುಂಗಾರು ಮಳೆಯು ತೀವ್ರವಾಗಿ ಕೈಕೊಟ್ಟಿದೆ. ಆಗಸ್ಟ್ 18ರ ವೇಳೆಗೆ ದೇಶದಲ್ಲಿ ಶೇ. 13ರಷ್ಟು ಒಟ್ಟಾರೆ ಮಳೆ ಕೊರತೆಯಾಗಿದ್ದು, ದೇಶದ ಶೇ. 50ರಷ್ಟು ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ. ಪ್ರಮುಖವಾಗಿ ಬಿಹಾರ (ಶೇ. 40), ಅಸ್ಸಾಂ (ಶೇ. 36), ಪೂರ್ವ ಉತ್ತರ ಪ್ರದೇಶ (ಶೇ. 24), ಸೌರಾಷ್ಟ್ರ (ಶೇ. 24) ಮತ್ತು ವಿದರ್ಭಗಳಲ್ಲಿ (ಶೇ. 21) ತೀವ್ರ ಮಳೆ ಕೊರತೆಯಿದೆ. ಜೊತೆಗೆ ‘ಎಲ್ ನಿನೋ’ ಪ್ರಭಾವದಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮುನ್ಸೂಚನೆಯಿದೆ. ಮಳೆ ಕೊರತೆಯಿಂದಾಗಿ ಖಾರಿಫ್ ಬಿತ್ತನೆ ಪ್ರದೇಶವು ಜುಲೈ ಅಂತ್ಯಕ್ಕೆ ಶೇ. 26.50ರಷ್ಟು ಕುಸಿದಿದೆ. ಈಗ ನಿಜವಾಗಿ ರೈತರಿಗೆ ಹೆಚ್ಚಿನ ಸಾಮಾಜಿಕ ಭದ್ರತೆ ಬೇಕಿತ್ತು.
ಗ್ರಾಮೀಣ ಭಾಗದಲ್ಲಿ ನೈಜ ವೇತನ ಬೆಳವಣಿಗೆಯು ದಶಕದಿಂದ ಸ್ಥಗಿತಗೊಂಡಿರುವಾಗ ಹಾಗೂ ಕೃಷಿ ಬಿಕ್ಕಟ್ಟು ತೀವ್ರವಾಗಿರುವಾಗ, ಉದ್ಯೋಗ ಖಾತರಿ ಯೋಜನೆಯೇ ಕಡುಬಡವರ ಏಕೈಕ ಆಸರೆಯಾಗಬೇಕಿತ್ತು. ಮಳೆ ಕೊರತೆಯ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರಕಾರವು ಈ ಯೋಜನೆಯನ್ನು ಮತ್ತಷ್ಟು ಬಲಪಡಿಸಬೇಕಿತ್ತು. ಹಾಗೆ ಮಾಡಿದ್ದರೆ ಗ್ರಾಮೀಣ ಜನರಿಗೆ ಆರ್ಥಿಕ ರಕ್ಷಣೆ ಸಿಗುವುದರ ಜೊತೆಗೆ, ಭಾರತೀಯ ಆರ್ಥಿಕತೆಗೆ ಅತ್ಯಗತ್ಯವಾಗಿರುವ ಗ್ರಾಮೀಣ ಜನರ ಕೊಳ್ಳುವ ಶಕ್ತಿ ಹಾಗೂ ಬಳಕೆ ಬೇಡಿಕೆ ಹೆಚ್ಚಲು ನೆರವಾಗುತ್ತಿತ್ತು.
ಆದರೆ, 125 ದಿನಗಳ ಆಕರ್ಷಕ ಭರವಸೆಯ ಹೊರತಾಗಿಯೂ, 60:40ರ ಆರ್ಥಿಕ ಹಂಚಿಕೆ, ‘ಮಾನದಂಡ ಆಧಾರಿತ ಸೀಮಿತ ಅನುದಾನ’, ತಾಂತ್ರಿಕ ನಿರ್ಬಂಧಗಳು ಮತ್ತು ಅನುಷ್ಠಾನದ ಗೊಂದಲಗಳಿಂದಾಗಿ ಹೊಸ ವ್ಯವಸ್ಥೆಯು ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿದೆ. ಬಡ ರಾಜ್ಯಗಳಲ್ಲಿ ತಿಂಗಳುಗಟ್ಟಲೆ ಜನರಿಗೆ ಕೆಲಸ ಸಿಗದಿರುವುದು ಆತಂಕಕಾರಿಯಾಗಿದ್ದು, ಭಾರತದ ಗ್ರಾಮೀಣ ಕಾರ್ಮಿಕರ ಸಾಮಾಜಿಕ ಸುರಕ್ಷತೆಯು ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆ.