×
Ad

ಅಮೃತ ಸರೋವರದಲ್ಲಿ ಬೋಟಿಂಗ್: ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿರುವ ‘ಭೀಮಕೋಲ’

Update: 2025-10-06 13:59 IST

ಕಾರವಾರ: ಒಂದೊಮ್ಮೆ ಮೌನವಾಗಿ ನಿಂತಿದ್ದ ಕೆರೆ ಪ್ರಸಕ್ತ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಮೃತ ಸರೋವರವಾಗಿ ಅಭಿವೃದ್ಧಿಯಾದ ನಂತರ ಇಂದು ಜನಜಂಗುಳಿಯಿಂದ ಕಂಗೊಳಿಸುತ್ತಿದೆ. ಪ್ರವಾಸೋದ್ಯಮಕ್ಕೆ ಹೊಸರೂಪ ನೀಡಲು ಇಲ್ಲಿ ಬೋಟಿಂಗ್ ಆರಂಭಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮ ಪಂಚಾಯತ್‌ನ ಹೋಟೆಗಾಳಿ ಗ್ರಾಮದ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಮೃತ ಸರೋವರ ಅಭಿವೃದ್ಧಿ ಮಾಡಿ ಅದಕ್ಕೆ ‘ಭೀಮಕೋಲ’ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿಯ ಗ್ರಾಮ ಪಂಚಾಯತ್ ಹಾಗೂ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಅವರ ಸಹಕಾರದಿಂದ ಸರೋವರದಲ್ಲಿ ಬೋಟಿಂಗ್ ವ್ಯವಸ್ಥೆ ಆರಂಭಿಸಲಾಗಿದೆ. ಪ್ರವಾಸಿಗರು ಈ ಗ್ರಾಮಕ್ಕೆ ಬರುವಂತೆ ಮಾಡಲು ಸರೋವರದ ಸುತ್ತಮುತ್ತ ಸ್ವಚ್ಛತೆ, ಕುಳಿತುಕೊಳ್ಳಲು ಆಸನ, ಸೌಂದರ್ಯ ವರ್ಧನೆ ಮಾಡಲಾಗಿದೆ.

ಪ್ರಕೃತಿಯ ಮಡಿಲಿನಲ್ಲಿ ಅಭಿವೃದ್ಧಿಯಾಗಿರುವ ಈ ಸರೋವರವು ಪ್ರವಾಸಿಗರನ್ನು ಸೆಳೆಯುತ್ತಿದೆ ಹಾಗೂ ಅದು ವೀಕೆಂಡ್ ಟೂರಿಸಂ ಸ್ಪಾಟ್ ಆಗಿ ಪರಿವರ್ತನೆ ಹೊಂದಿದೆ. ಕಾರವಾರ ನಗರದಿಂದ ಕೆಲವೇ ದೂರ ಇರುವುದರಿಂದ ಈ ಸರೋವರಕ್ಕೆ ಸಾಕಷ್ಟು ಜನ ಪ್ರವಾಸಿಗರು ಶನಿವಾರ, ರವಿವಾರ ಮತ್ತು ರಜಾ ದಿನಗಳಲ್ಲಿ ಬಂದು, ಬೋಟಿಂಗ್‌ನಂತಹ ಜಲ ಕ್ರೀಡೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಬೋಟಿಂಗ್ ಪ್ರಾರಂಭವಾದ ಬಳಿಕ ಹಳ್ಳಿ ಮಾತ್ರವಲ್ಲ, ಹತ್ತಿರದ ಬೇರೆ ಬೇರೆ ಪಟ್ಟಣಗಳಿಂದಲೂ ಜನರು ಭೇಟಿ ನೀಡುತ್ತಿದ್ದಾರೆ.

ಬೋಟಿಂಗ್ ಟಿಕೆಟ್ ದರದಿಂದ ಗ್ರಾಮ ಪಂಚಾಯತ್‌ಗೆ ಆದಾಯ ಹೆಚ್ಚಾಗಿದೆ ಮತ್ತು ಬೋಟಿಂಗ್ ನಿರ್ವಹಣೆಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಿದೆ. ಪ್ರವಾಸಿಗರು ಬರುವುದರಿಂದ ಹಳ್ಳಿಯ ಹೊಟೇಲ್, ಚಹಾ ಅಂಗಡಿ, ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ. ಅಮೃತ ಸರೋವರದಲ್ಲಿ ಬೋಟಿಂಗ್ ಪ್ರಾರಂಭವಾದ ನಂತರ ಹಳ್ಳಿ ಜನರಿಗೆ ಸ್ವಾಭಿಮಾನ, ಒಗ್ಗಟ್ಟು ಮತ್ತು ಸ್ವಾವಲಂಬನೆ ಬೆಳೆಯತೊಡಗಿದೆ ಹಾಗೂ ಯುವಕರು ತಮ್ಮ ಊರಲ್ಲೇ ಅವಕಾಶ ಹುಡುಕುವ ದಾರಿಯನ್ನು ಕಂಡುಕೊಂಡಿದ್ದಾರೆ. ಬೋಟಿಂಗ್ ಯಶಸ್ಸಿನಿಂದ ಗ್ರಾಮಸ್ಥರು ಸರೋವರವನ್ನು ಪರ್ಯಟನಾ ಕೇಂದ್ರವಾಗಿ ರೂಪಿಸಲು ಉತ್ಸಾಹದಿಂದ ಮುಂದಾಗಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಬೋಟ್‌ಗಳು, ಮಕ್ಕಳಿಗಾಗಿ ಆಟದ ಸ್ಥಳ ಹಾಗೂ ರಾತ್ರಿ ಬೆಳಕು ಅಳವಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳಲಾಗುತ್ತಿದೆ.

ಅಮೃತ ಸರೋವರದಲ್ಲಿ ಬೋಟಿಂಗ್ ಪ್ರಾರಂಭವಾಗಿರುವುದು ಹಳ್ಳಿಯ ಪ್ರವಾಸೋದ್ಯಮಕ್ಕೆ ಮಹತ್ತರ ಹೆಜ್ಜೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಿಕ್ಕಂತೆಯೇ, ಹಳ್ಳಿಯ ಆರ್ಥಿಕತೆಗೂ ಹೊಸ ಚೈತನ್ಯ ಬಂದಿದೆ. ಈ ಯೋಜನೆ ಇನ್ನಷ್ಟು ಯಶಸ್ವಿಯಾಗಲು ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಯೂ ಮುಂದಿದೆ.

-ಕರೀಂ ಅಸದಿ, ಯೋಜನಾ ನಿರ್ದೇಶಕ (ಡಿಆರ್‌ಡಿಎ), ಉತ್ತರ ಕನ್ನಡ ಜಿಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News