ಜಾತಿ ಪದ್ಧತಿ, ಆರೆಸ್ಸೆಸ್ ಮತ್ತು ಅಂಬೇಡ್ಕರ್
ಬಿ.ಆರ್. ಅಂಬೇಡ್ಕರ್ ಅವರು ‘ಒಂದು ವೇಳೆ ಹಿಂದೂ ರಾಜ್ ಎನ್ನುವ ಸಿದ್ಧಾಂತ ಅನುಷ್ಠಾನಗೊಂಡರೆ ಇದು ಈ ದೇಶದ ಬಲು ದೊಡ್ಡ ದುರ್ಘಟನೆ. ಹಿಂದೂಗಳು ಏನಾದರೂ ಹೇಳಿಕೊಳ್ಳಲಿ ಹಿಂದೂಯಿಸಂ ಸ್ವಾತಂತ್ರ್ಯಕ್ಕೆ, ಸಮಾನತೆಗೆ, ಸಹೋದರತ್ವಕ್ಕೆ ಬಲು ದೊಡ್ಡ ಅಪಾಯ. ಹಿಂದೂ ರಾಜ್ ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಗಟ್ಟಬೇಕು’ ಎಂದು ಎಚ್ಚರಿಸುತ್ತಾರೆ.
ಭಾಗ - 1
ರಾಜಕೀಯ ಚಿಂತಕ ಜೆಫರಲಾಟ್ 1920ರ ದಶಕದಲ್ಲಿ ಹಿಂದೂ ಧರ್ಮದ ಜಾತಿ ಪದ್ಧತಿಯ ವಿರುದ್ಧ ದಮನಿತ ಸಮುದಾಯಗಳನ್ನು ಸಂಘಟಿಸುತ್ತಿದ್ದ ಅಂಬೇಡ್ಕರ್ ಅವರ ಎಸ್‌ಸಿ/ಎಸ್‌ಟಿ ಫೆಡರೇಶನ್ ವಿರುದ್ಧ ಮುಖಾಮುಖಿಯಾಗಲು ಮತ್ತು ಆರಂಭದಲ್ಲೇ ಮೊಟಕುಗೊಳಿಸಲು ಆರೆಸ್ಸೆಸ್ ಶಾಖೆಗಳು ಬ್ರಾಹ್ಮಣ ಯುವಕರನ್ನು ತರಬೇತುಗೊಳಿಸುತ್ತಿದ್ದವು ಎಂದು ಹೇಳುತ್ತಾರೆ. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾದ ಡಿಸೆಂಬರ್ 6 ದಿನಾಂಕವನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6ನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.
6 ಮೇ 1945ರಂದು ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಷನ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ‘‘ಇಂಡಿಯಾದಲ್ಲಿ ಬಹುಸಂಖ್ಯಾತರೆಂದರೆ ರಾಜಕೀಯ ಬಹುಸಂಖ್ಯಾತರಲ್ಲ. ಇಂಡಿಯಾದಲ್ಲಿ ಬಹುಸಂಖ್ಯಾತ ತತ್ವವನ್ನು ವ್ಯಕ್ತಿಯ ಹುಟ್ಟಿನ ನೆಲೆಯಿಂದ ನಿರ್ಧರಿಸಲಾಗುತ್ತದೆ. ಇದು ರಾಜಕೀಯ ಬಹುಸಂಖ್ಯಾತರು ಮತ್ತು ಮತೀಯ ಬಹುಸಂಖ್ಯಾತರ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ರಾಜಕೀಯ ಬಹುಸಂಖ್ಯಾತ ತತ್ವವು ಶಾಶ್ವತವಲ್ಲ. ಅದು ತಾತ್ಕಾಲಿಕವಾಗಿರುತ್ತದೆ. ಈ ಮಾದರಿಯ ಬಹುಸಂಖ್ಯಾತ ತತ್ವವು ಕಟ್ಟಲ್ಪಡುತ್ತದೆ, ಮುರಿಯಲ್ಪಡುತ್ತದೆ, ಮರಳಿ ಕಟ್ಟಲ್ಪಡುತ್ತದೆ. ಆದರೆ ಮತೀಯ ಬಹುಸಂಖ್ಯಾತ ತತ್ವವು ಒಂದು ನಿರ್ದಿಷ್ಟ ಗ್ರಹಿಕೆಯ ನೆಲೆಯಲ್ಲಿ ರೂಪಿಸಲಾಗುತ್ತದೆ ಮತ್ತು ಇದು ಶಾಶ್ವತವಾಗಿರುತ್ತದೆ. ಇದನ್ನು ನಾಶಪಡಿಸಬಹುದು ಆದರೆ ಪರಿವರ್ತಿಸಲಾಗುವುದಿಲ್ಲ. ಆದರೆ ನಿರಂಕುಶ (absolute) ಮಾದರಿಯ ಬಹುಸಂಖ್ಯಾತ ತತ್ವವನ್ನು ತಿರಸ್ಕರಿಸಿ ಸಾಪೇಕ್ಷತೆಯ (relative) ಆಧಾರದ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ನಾನು ಹಿಂದೂಗಳನ್ನು ಕೇಳಿಕೊಳ್ಳುತ್ತೇನೆ. ಇದನ್ನು ಒಪ್ಪಿಕೊಳ್ಳದೆ ಹೋದರೆ ಅಲ್ಪಸಂಖ್ಯಾತರು ಇಂಡಿಯಾದ ಸ್ವಾತಂತ್ರ್ಯವನ್ನು ತಡೆಹಿಡಿದಿದ್ದಾರೆ ಎನ್ನುವ ವಾದಕ್ಕೆ ಸಮರ್ಥನೆ ದೊರಕುವುದಿಲ್ಲ. ಈ ಮಾದರಿಯ ತಪ್ಪಾದ ಪ್ರಚಾರವು ಫಲ ಕೊಡಲಾರದು’’ ಎಂದು ಹೇಳುತ್ತಾರೆ
ತಮ್ಮ ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ(1940)’ ಪುಸ್ತಕದ ಮುನ್ನುಡಿಯಲ್ಲಿ ಅಂಬೇಡ್ಕರ್ ‘ನನ್ನ ಪ್ರಕಾರ ಪಾಕಿಸ್ತಾನದ ಬೇಡಿಕೆಯು ಕಾಲ ಕಳೆದಂತೆ ಅಳಿಸಿಹೋಗುವ ರಾಜಕೀಯ ಬಣ್ಣ ಬಳಿದುಕೊಂಡಿಲ್ಲ. ಪಾಕಿಸ್ತಾನದ ಬೇಡಿಕೆಯಿಂದ ನಾನು ಸ್ಥೈರ್ಯಗೆಡುತ್ತಿಲ್ಲ, ಕುಪಿತನಾಗುತ್ತಿಲ್ಲ, ಭಾರತದಲ್ಲಿ ಬಹುಸಂಖ್ಯಾತ ಮುಸ್ಲಿಮರ ಬೆಂಬಲವಿರುವ ಯಾವುದೇ ಯೋಜನೆಯನ್ನು ನಿರ್ಲಿಪ್ತತೆಯಿಂದ, ಎಲ್ಲಾ ದೃಷ್ಟಿಕೋನಗಳಿಂದ ಅಧ್ಯಯನ ಮಾಡಬೇಕು ಮತ್ತು ಇದರ ಒಳಾರ್ಥವನ್ನು ಬೌದ್ಧಿಕ ತಿಳುವಳಿಕೆಯಿಂದ ತೀರ್ಮಾನಿಸಬೇಕು. ಪಾಕಿಸ್ತಾನ ಯೋಜನೆಯನ್ನು ಪರಿಗಣಿಸಬೇಕು. ಇದರಿಂದ ಬಿಡುಗಡೆ ಇಲ್ಲ. ನನ್ನ ಮನಸ್ಸಿನಲ್ಲಿ ಬರುವ ಮೊದಲ ವಿಚಾರವೆಂದರೆ ಹಿಂದೂ-ಮುಸ್ಲಿಮರು ಈ ಪ್ರಶ್ನೆ ಕುರಿತು ನಿರ್ಧರಿಸಬೇಕು. ಬ್ರಿಟಿಷರು ತಮ್ಮ ಸೇನೆಯನ್ನು ಬಳಸಿಕೊಂಡು ಪಾಕಿಸ್ತಾನದ ಬೇಡಿಕೆಯನ್ನು ಹತ್ತಿಕ್ಕುತ್ತಾರೆ ಎಂದು ಹಿಂದೂಗಳು ಭಾವಿಸಿದರೆ ಅದು ಸಾಧ್ಯವಿಲ್ಲ. ಪಾಕಿಸ್ತಾನದ ಬೇಡಿಕೆಯನ್ನು ವಿರೋಧಿಸಲು ಬಲವಂತದ ಪ್ರಯೋಗವು ಪರ್ಯಾಯವಲ್ಲ. ಮುಸ್ಲಿಮರನ್ನು ಸ್ವಯಂ ನಿರ್ಣಯ ತೆಗೆದುಕೊಳ್ಳುವುದರಿಂದ ವಂಚಿತಗೊಳಿಸಬಾರದು. ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಯಂ ನಿರ್ಣಯವನ್ನು ಪ್ರತಿಪಾದಿಸುವ ರಾಷ್ಟ್ರೀಯವಾದಿಗಳು ಅಲ್ಪಸಂಖ್ಯಾತರಿಗೂ ಸಹ ಇದೇ ಮಾನದಂಡ ಅನ್ವಯಿಸಬೇಕು. ಬ್ರಿಟಿಷರು ಬಲವಂತದಿಂದ ಪಾಕಿಸ್ತಾನ ಬೇಡಿಕೆಯನ್ನು ಹತ್ತಿಕ್ಕುತ್ತಾರೆ ಎಂದು ನಂಬುವ ರಾಷ್ಟ್ರೀಯವಾದಿಗಳು ಸಾಮ್ರಾಜ್ಯಶಾಹಿಯಿಂದ ಸ್ವಾತಂತ್ರ್ಯ ಪಡೆದುಕೊಳ್ಳುವುದು ರಾಷ್ಟ್ರೀಯತೆಯ ಹಕ್ಕು ಎಂದು ಹೇಗೆ ಭಾವಿಸುತ್ತಾರೋ ಹಾಗೆಯೇ ಅಲ್ಪಸಂಖ್ಯಾತರೂ ಸಹ ತೀವ್ರವಾದಿ ಬಹುಸಂಖ್ಯಾತ ರಾಷ್ಟ್ರೀಯವಾದದಿಂದ ಸ್ವಾತಂತ್ರ್ಯ ಬಯಸುತ್ತಾರೆ ಎನ್ನುವುದನ್ನು ಮರೆಯುತ್ತಾರೆ. ಇವೆರಡೂ ಬೇರೆ ಬೇರೆ ಸಂಗತಿಗಳಲ್ಲ’ ಎಂದು ದೀರ್ಘವಾಗಿ ಬರೆಯುತ್ತಾರೆ. ಮುಧ್ಯಯುಗೀನ ಕಾಲದ ಮುಸ್ಲಿಮ್ ದಾಳಿಕೋರರ ಕುರಿತು ವಿವರವಾಗಿ ಬರೆಯುತ್ತಾರೆ.
ಅವರ ನಿಜದ ಉದ್ದೇಶವು ‘ಬಹುಸಂಖ್ಯಾತವಾದ ಮತಾಂಧತೆ ಇರುವ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಬದುಕುವುದಕ್ಕಿಂತ ಸಾಮರಸ್ಯ, ಸಹಬಾಳ್ವೆ ಇರುವ ಕಡೆ ಹೋಗುವುದು ಉತ್ತಮ’ ಎನ್ನುವ ಆಶಯವಾಗಿತ್ತು. ಈ ಅರ್ಥದಲ್ಲಿ ಪ್ರತ್ಯೇಕ ರಾಷ್ಟ್ರದ ಸಿದ್ಧಾಂತವನ್ನು ಬೆಂಬಲಿಸಿದ್ದರು. ಆದರೆ ಸಂಘ ಪರಿವಾರವು ಈ ಪುಸ್ತಕದಿಂದ ತಮ್ಮ ವಾದಕ್ಕೆ ಅನುಕೂಲವಾಗುವ ಸಾಲುಗಳನ್ನು ಮಾತ್ರ ಹೆಕ್ಕಿಕೊಂಡು ಅಂಬೇಡ್ಕರ್ ಅವರನ್ನು ಚಿಠಿಠಿಡಿoಠಿಡಿiಚಿಣioಟಿ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ.
ಅದೇ ಪುಸ್ತಕದ ಅಧ್ಯಾಯ 13, ಪುಟ: 354-355ರಲ್ಲಿ ಬರೆಯುತ್ತಾ ಬಿ.ಆರ್. ಅಂಬೇಡ್ಕರ್ ಅವರು ‘ಒಂದು ವೇಳೆ ಹಿಂದೂ ರಾಜ್ ಎನ್ನುವ ಸಿದ್ಧಾಂತ ಅನುಷ್ಠಾನಗೊಂಡರೆ ಇದು ಈ ದೇಶದ ಬಲು ದೊಡ್ಡ ದುರ್ಘಟನೆ. ಹಿಂದೂಗಳು ಏನಾದರೂ ಹೇಳಿಕೊಳ್ಳಲಿ ಹಿಂದೂಯಿಸಂ ಸ್ವಾತಂತ್ರ್ಯಕ್ಕೆ, ಸಮಾನತೆಗೆ, ಸಹೋದರತ್ವಕ್ಕೆ ಬಲು ದೊಡ್ಡ ಅಪಾಯ. ಹಿಂದೂ ರಾಜ್ ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಗಟ್ಟಬೇಕು’ ಎಂದು ಎಚ್ಚರಿಸುತ್ತಾರೆ.
ಈ ಕುರಿತು ಆರೆಸ್ಸೆಸ್ ಇದುವರೆಗೂ ಪ್ರತಿಕ್ರಿಯಿಸಿಲ್ಲ.
ಇದೇ ಪುಸ್ತಕದಲ್ಲಿ ಹಿಂದೂ ಮಹಾಸಭಾ ಮತ್ತು ಸಾವರ್ಕರ್ ಅವರ ‘ಹಿಂದೂ, ಹಿಂದೂಯಿಸಂ ಮತ್ತು ಹಿಂದುತ್ವ’ ಸಿದ್ಧಾಂತದ ಕುರಿತು ಅಂಬೇಡ್ಕರ್ ಅವರು ‘ಸಾವರ್ಕರ್ ಹಿಂದೂ ಶಬ್ದವನ್ನು ತಂತ್ರಗಾರಿಕೆಯಿಂದ, ಎರಡು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ. ಮೊದಲನೆಯದಾಗಿ ಭಾರತವು ಪುಣ್ಯಭೂಮಿ ಎಂದು ವರ್ಣಿಸಿ ಅದು ಹಿಂದೂಗಳಿಗೆ ಮಾತ್ರ ಎನ್ನುವ ಪ್ರಚಾರದ ಮೂಲಕ ಮುಸ್ಲಿಮ್, ಕ್ರಿಶ್ಚಿಯನ್, ಪಾರ್ಸಿ ಮತ್ತು ಜ್ಯೂಗಳನ್ನು ಇದರಿಂದ ಹೊರಗಿಡುವ ಯೋಜನೆ. ಎರಡನೆಯದಾಗಿ ವೇದಗಳ ಪಾವಿತ್ರ್ಯತೆ ಕುರಿತು ನಿಮ್ಮ ನಂಬಿಕೆಯನ್ನು ಸಾಬೀತುಪಡಿಸಬೇಕಿಲ್ಲ ಎಂದು ಹೇಳುತ್ತಾ ಬೌದ್ಧ, ಸಿಖ್, ಜೈನ ಧರ್ಮದವರನ್ನು ಹಿಂದೂ ತೆಕ್ಕೆಯೊಳಗೆ ಸೆಳೆದುಕೊಳ್ಳುವುದು. ಇದರಲ್ಲಿ ಸಮಸ್ಯೆಗಳಿವೆ. ಮುಖ್ಯವಾಗಿ ಹಿಂದೂಗಳು ಸ್ವಾಭಾವಿಕವಾಗಿ ಭಾರತೀಯರು ಎನ್ನುವ ವಿಚಾರದ ಕಾರಣ ಸಹಜವಾಗಿ ಮುಸ್ಲಿಮರು ಪ್ರತ್ಯೇಕ ದೇಶದವರು ಎಂದು ಪರಿಗಣಿಸಲ್ಪಡುತ್ತಾರೆ. ಒಂದು ದೇಶ ವರ್ಸಸ್ ಎರಡು ದೇಶ ಸಿದ್ಧಾಂತದ ಹಿನ್ನೆಲೆಯಲ್ಲಿ ಸಾವರ್ಕರ್ ಮತ್ತು ಜಿನ್ನಾ ವಿರುದ್ಧ ಧ್ರುವಗಳಲ್ಲಿ ನಿಲ್ಲಬೇಕಾಗುತ್ತದೆ, ಆದರೆ ವಿಚಿತ್ರವೆಂದರೆ ಇಬ್ಬರೂ ಈ ವಿಚಾರದಲ್ಲಿ ಒಮ್ಮತದಲ್ಲಿರುವುದು ಕಂಡುಬರುತ್ತದೆ. ಇವರಿಬ್ಬರೂ ಭಾರತದಲ್ಲಿ ಹಿಂದೂ ದೇಶ ಮತ್ತು ಮುಸ್ಲಿಮ್ ದೇಶ ಎನ್ನುವ ಎರಡು ದೇಶಗಳಿರುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಯಾರ ಮೇಲುಸ್ತುವಾರಿಯಲ್ಲಿ ಮತ್ತೊಬ್ಬರ ಅಸ್ತಿತ್ವ ನಿರ್ಣಯಿಸಲ್ಪಡುತ್ತದೆ ಎನ್ನುವ ವಾಗ್ವಾದ ಇವರಿಬ್ಬರ ನಡುವಿನ ವೈಮನಸ್ಯವಾಗಿದೆ. ಎರಡು ದೇಶಗಳ ಭಾರತವನ್ನು ವಿಭಜಿಸಬೇಕು ಎಂದು ಜಿನ್ನಾ ಬಯಸಿದರೆ ಸಾವರ್ಕರ್ ಒಂದು ದೇಶದಲ್ಲಿ ಹಿಂದೂ ಪರಂಪರೆ ಆಚರಣೆಯ ಸಂವಿಧಾನವು ಜಾರಿಯಲ್ಲಿರುತ್ತದೆ. ಇದರ ಅಡಿಯಲ್ಲಿ ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕು ಎಂದು ತಾಕೀತು ಮಾಡುತ್ತಾರೆ. ಆದರೆ ಸಾವರ್ಕರ್ ತಮ್ಮ ಇಂತಹ ಸಿದ್ಧಾಂತವನ್ನು ಬೋಧಿಸುವುದರ ಮೂಲಕ ಭಾರತದಲ್ಲಿ ಅಪಾಯಕಾರಿ, ಅಭದ್ರತೆಯ ವಾತಾವರಣ ಸೃಷ್ಟಿಸುತ್ತಾರೆ. ತಮ್ಮ ಈ ಯೋಜನೆಗೆ ಮುಸ್ಲಿಮರ ಪ್ರತಿಕ್ರಿಯೆ ಕುರಿತು ಸಾವರ್ಕರ್‌ಗೆ ಆಸಕ್ತಿ ಇಲ್ಲ. ಇದನ್ನು ‘ಬೇಕಿದ್ದರೆ ಸ್ವೀಕರಿಸಿ, ಬೇಡವಾಗಿದ್ದರೆ ಬಿಡಿ’ ಎನ್ನುವ ಧೋರಣೆಯನ್ನು ಅವರ ಮೇಲೆ ಹೇರಲಾಗುತ್ತದೆ’ ಎಂದು ಬರೆಯುತ್ತಾರೆ.
ಆದರೆ ಆರೆಸ್ಸೆಸ್ ಇದರ ಕುರಿತು ಬೇಕಂತಲೇ ಮೌನವಹಿಸುತ್ತದೆ.
ಅಂಬೇಡ್ಕರ್ ಅವರು ತಮ್ಮ ‘ಹಿಂದೂಯಿಸಂನ ಫಿಲಾಸಫಿ, ಇಂಡಿಯಾ ಮತ್ತು ಕಮ್ಯುನಿಸಂನ ಪೂರ್ವ ಕರಾರುಗಳು. ಕ್ರಾಂತಿ ಮತ್ತು ಪ್ರತಿ ಕ್ರಾಂತಿ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್’(ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, 3ನೇ ಸಂಪುಟ) ಪುಸ್ತಕದಲ್ಲಿ ‘ನನ್ನ ಮೂಲಭೂತ ಪ್ರಶ್ನೆ ಏನೆಂದರೆ ಹಿಂದೂಗಳು ಬದುಕಿನ ಸುಖ ಮತ್ತು ದುಃಖಗಳನ್ನು ಹಂಚಿಕೊಳ್ಳಲು ಏಕೆ ನಿರಾಕರಿಸುತ್ತಾರೆ? ಇದಕ್ಕೆ ಉತ್ತರವೂ ಸರಳ ಮತ್ತು ಸ್ಪಷ್ಟ. ಏಕೆಂದರೆ ಅವರ ಧರ್ಮವು ಹಂಚಿಕೊಳ್ಳಬಾರದೆಂದು ಬೋಧಿಸುತ್ತದೆ. ಹಾಗಿದ್ದರೆ ಹಿಂದೂಯಿಸಂ ಏನು ಬೋಧಿಸುತ್ತದೆ? ಅದು ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡಬಾರದು, ಅಂತರ್ಜಾತಿ ವಿವಾಹ ಆಗಬಾರದು, ಗೆಳೆತನ ಬೆಳೆಸಬಾರದು. ಇಂತಹ ತತ್ವಗಳನ್ನು ಬೋಧಿಸುತ್ತದೆ. ಬಂಧುತ್ವದ ನಿರಾಕರಣೆಯೇ ಹಿಂದೂಯಿಸಂನ ಫಿಲಾಸಫಿ’ ಎಂದು ಬರೆಯುತ್ತಾರೆ.
ಮೂಲದಲ್ಲಿ ಆರೆಸ್ಸೆಸ್ ಸಂಘಟನೆಯ ಮುಖಂಡರಿಗೆ ಅಂಬೇಡ್ಕರ್ ಕುರಿತು ಯಾವುದೇ ಗೌರವ ಭಾವನೆ ಇರಲಿಲ್ಲ. ನವೆಂಬರ್ 1949ರಂದು ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ನಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರನ್ನು ಉಲ್ಲೇಖಿಸುತ್ತಾ ‘ಋಷಿ ಅಂಬೇಡ್ಕರ್ ಮತ್ತು ಮಹರ್ಷಿ ನೆಹರೂ ಅವರ ಸುಧಾರಣೆಗಳು ಪ್ರತಿಯೊಂದು ಕುಟುಂಬದಲ್ಲೂ ಹಗರಣ, ಅನುಮಾನ, ಗೊಂದಲ ಸೃಷ್ಟಿ ಮಾಡುತ್ತದೆ’ ಎಂದು ಬರೆಯುತ್ತಾರೆ. ಪತ್ರಕರ್ತ ಅಶುತೋಷ್ ಭಾರದ್ವಾಜ್ ಜೊತೆಗೆ ಮಾತನಾಡುತ್ತಾ ಆರೆಸ್ಸೆಸ್‌ನ ಪ್ರಚಾರಕ, ‘ಪಾಂಚಜನ್ಯ’ದ ಸಂಪಾದಕರಾಗಿದ್ದ ದೇವೇಂದ್ರ ಸ್ವರೂಪ್ ಅವರು ‘‘ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಓಲೈಸಬೇಕಾಯಿತು. ಇದು ಅನಿವಾರ್ಯ. ಆದರೆ ಪ್ರತಿಯೊಬ್ಬ ಅಂಬೇಡ್ಕರ್‌ವಾದಿ ಮತ್ತು ಅಂಬೇಡ್ಕರ್ ಹಿಂದೂ ವಿರೋಧಿಗಳು’’ ಎಂದು ಹೇಳುತ್ತಾರೆ.
11 ಜನವರಿ 1950ರಲ್ಲಿ ಆರ್ಗನೈಸರ್ ಪತ್ರಿಕೆಯಲ್ಲಿ ‘ಅಂಬೇಡ್ಕರ್ ಅವರನ್ನು ಆಧುನಿಕ ಮನು ಎಂದು ಕರೆಯಲು ಸಾಧ್ಯವಿಲ್ಲ. ಇದು ಲಿಲಿಪುಟ್‌ನನ್ನು ಬ್ರಾಬಿಡಿಂಗ್ನಾಗ್(ಬೃಹತ್ ಗಾತ್ರದ ಮನುಷ್ಯರು ವಾಸಿಸುವ ಪ್ರದೇಶ) ಎಂದು ಬಿಂಬಿಸಿದಂತಾಗುತ್ತದೆ. ತಿಳುವಳಿಕೆಯುಳ್ಳ, ದೇವರಂತಹ ಮನು ಜೊತೆಗೆ ಅಂಬೇಡ್ಕರ್‌ನ್ನು ಹೋಲಿಸುವುದು ಹಾಸ್ಯಾಸ್ಪದ’ ಎಂದು ಬರೆಯುತ್ತಾರೆ.
ಇದರ ಕುರಿತೂ ಸಹ ಆರೆಸ್ಸೆಸ್ ಮೌನ ವಹಿಸಿದೆ. ಇಂತಹ ನೂರಾರು ಉದಾಹರಣೆಗಳಿವೆ, ದಾಖಲೆಗಳಿವೆ.
11, ಎಪ್ರಿಲ್, 1947ರಲ್ಲಿ ಅಂಬೇಡ್ಕರ್ ಅವರು ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಹಕ್ಕಿಗಾಗಿ ಹಿಂದೂ ಕೋಡ್ ಮಸೂದೆಯನ್ನು ಅಸೆಂಬ್ಲಿಯಲ್ಲಿ ಮಂಡಿಸುತ್ತಾರೆ. ಹಿಂದೂ ಸಮಾಜದ ಮಹಿಳೆಯರಿಗೆ ಆಸ್ತಿ, ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಪೋಷಣೆ, ಪಿತ್ರಾರ್ಜಿತ ಬಾಧ್ಯತೆಗಳ ಮೇಲೆ ಸಂಪೂರ್ಣ ಹಕ್ಕನ್ನು ಒದಗಿಸುವುದು ಈ ಕೋಡ್ ಮಸೂದೆಯ ಉದ್ದೇಶವಾಗಿತ್ತು. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಮತ್ತು ವೈಯುಕ್ತಿಕ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡಬೇಕೆನ್ನುವುದು ಮತ್ತು ಕುಟುಂಬದ ಇತರ ಸದಸ್ಯರಂತೆಯೇ ಮಹಿಳೆಯೂ ಅದರ ಎಲ್ಲಾ ಅವಕಾಶಗಳಿಗೂ ಬಾಧ್ಯಸ್ಥರಾಗಬೇಕೆನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸ್ಥಿರಾಸ್ತಿ ಮತ್ತು ಇನ್ನಿತರ ಪಿತ್ರಾರ್ಜಿತ ಆಸ್ತಿಯ ಮೇಲೆ ಮಹಿಳೆಗೆ ಸಮಾನ ಹಕ್ಕಿದೆ ಎನ್ನುವುದನ್ನು ಈ ಕೋಡ್ ಮಸೂದೆಯ ಮೂಲಕ ಸಂವಿಧಾನದಲ್ಲಿ ಅಳವಡಿಸಬೇಕೆಂದು ಅಂಬೇಡ್ಕರ್ ಬಯಸಿದ್ದರು. ಮದುವೆಯಾಗದ ಮಹಿಳೆಗೆ ಆಸ್ತಿಯ ಅರ್ಧಭಾಗವು ದೊರಕಬೇಕು, ಮದುವೆಯಾದ ಮಹಿಳೆಗೆ ಆಸ್ತಿಯ ಕಾಲು ಭಾಗ ದೊರಕಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಈ ಹಿಂದೂ ಕೋಡ್ ಮಸೂದೆಯನ್ನು 9 ಎಪ್ರಿಲ್ 1948ರಲ್ಲಿ ಆಯ್ಕೆ ಸಮಿತಿಗೆ ಸಲ್ಲಿಸಲಾಯಿತು. ಈ ಮಸೂದೆಯ ಕುರಿತಾಗಿ ಸಂಸತ್ತಿನಲ್ಲಿ ಸುಮಾರು 3 ವರ್ಷಗಳ ಕಾಲ ಚರ್ಚೆ ನಡೆಯಿತು. ಒಂದು ಮಸೂದೆಯ ಕುರಿತು ಸಂಸತ್ತಿನಲ್ಲಿ ಇಷ್ಟು ದೀರ್ಘ ಕಾಲ ಚರ್ಚೆ ನಡೆದದ್ದು ಇದೇ ಮೊದಲ ಬಾರಿಯಾಗಿತ್ತು. ಸನಾತನ ಧರ್ಮದಲ್ಲಿ ನಂಬಿಕೆಯಿದ್ದ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಹಿಂದೂ ಧರ್ಮದಲ್ಲಿ ಮಹಿಳೆಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ, ಆರ್ಥಿಕವಾಗಿ ಸಬಲೀಕರಣಗೊಳಿಸುವ ಈ ಪ್ರಗತಿಪರ ಮಸೂದೆಯ ವಿರುದ್ಧವಾಗಿದ್ದರು. ಅಸೆಂಬ್ಲಿ ಸ್ಪೀಕರ್ ಅನಂತಶಯನಂ ಅಯ್ಯಂಗಾರ್ ಸಹ ಈ ಮಸೂದೆಯ ವಿರುದ್ಧವಾಗಿದ್ದರು. ಸಂಸತ್ತಿನಲ್ಲಿ ಹಿಂದೂ ಮಹಾ ಸಭಾದ ಎನ್.ಸಿ. ಚಟರ್ಜಿ, ಆರೆಸ್ಸೆಸ್‌ನ ಶ್ಯಾಮ ಪ್ರಸಾದ ಮುಖರ್ಜಿ ಅವರು ಸನಾತನ ಮತ್ತು ಕರ್ಮಠ ಹಿಂದೂ ಧರ್ಮದ ಆಚರಣೆಗಳನ್ನು ಬೆಂಬಲಿಸುತ್ತಾ ಈ ಹಿಂದೂ ಕೋಡ್ ಬಿಲ್ ಹಿಂದೂ ಸಮಾಜವನ್ನು ಅಸ್ಥಿರಗೊಳಿಸುತ್ತದೆ ಮತ್ತು ಹಾನಿಕಾರಕ ಎಂದು ವಿರೋಧಿಸಿದ್ದರು. ಆದರೆ ಸರಕಾರದ ಮತ್ತು ರಾಜಕೀಯ ನಾಯಕರ ಮೂಲಭೂತವಾದ ಮತ್ತು ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಅಂಬೇಡ್ಕರ್ ಅವರು 27, ಸೆಪ್ಟಂಬರ್ 1951ರಂದು ಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತಾರೆ.
(ಆಧಾರ: ಡಾ.ಅಂಬೇಡ್ಕರ್ ಮತ್ತು ಹಿಂದೂ ಕೋಡ್ ಬಿಲ್, ಮೂನ್, ವಸಂತ್ (ಸಂಪಾದಕರು), ಸಂಪುಟ 14)
7 ಡಿಸೆಂಬರ್ 1949ರ ‘ಆರ್ಗನೈಸರ್’ ಪತ್ರಿಕೆಯಲ್ಲಿ ‘ನಾವು ಹಿಂದೂ ಕೋಡ್ ಬಿಲ್ ಅನ್ನು ವಿರೋಧಿಸುತ್ತೇವೆ.. ಅದು ಅನೈತಿಕತೆಯನ್ನು ಬೋಧಿಸುತ್ತದೆ.. ಇದು ಹಿಂದೂ ಕೋಡ್ ಬಿಲ್ ಅಲ್ಲ’ ಎಂದು ಟೀಕಿಸಲಾಯಿತು.
ಆರೆಸ್ಸೆಸ್ ಇದುವರೆಗೂ ಅಂಬೇಡ್ಕರ್ ಕುರಿತಾದ ಮೇಲಿನ ಟೀಕೆಗಳನ್ನು ನಿರಾಕರಿಸಿಲ್ಲ.