×
Ad

ಜಾತಿ ಪದ್ಧತಿ, ಆರೆಸ್ಸೆಸ್ ಮತ್ತು ಅಂಬೇಡ್ಕರ್

Update: 2025-10-20 09:55 IST

ಭಾಗ - 2

ಮೀನಾಕ್ಷಿಪುರಂ ಘಟೆ

ಆದರೆ 1981ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ನೂರಾರು ಸಂಖ್ಯೆಯ ದಲಿತರು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಾಗ ಆರೆಸ್ಸೆಸ್‌ಗೆ ಆಘಾತವಾಯಿತು. ಆಗ ಅನಿವಾರ್ಯವಾಗಿ ಅಂಬೇಡ್ಕರ್ ಅವರನ್ನು appropriation ಮಾಡಿಕೊಳ್ಳಲು ಮುಂದಾದರು ಮತ್ತು ಈ ಮತಾಂತರವು ರಾಮಜನ್ಮಭೂಮಿ ಚಳವಳಿಗೆ ಮುನ್ನುಡಿ ಬರೆಯಿತು. ಬ್ರಾಹ್ಮಣ-ಬನಿಯಾ ಸಂಘಟನೆಯಾಗಿದ್ದ ಆರೆಸ್ಸೆಸ್ ಕ್ರಮೇಣ ಹಿಂದುಳಿದ ವರ್ಗ ಮತ್ತು ದಲಿತರ ಕಡೆಗೆ ತಿರುಗಿ ನೋಡುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಿಸಿತು. ಅಂದಿನಿಂದಲೂ ತನ್ನ ಸಿದ್ಧಾಂತಗಳಾದ ವೇದಗಳ ಕರ್ಮಠತನ, ಮನುವಿನ ಜೀವವಿರೋಧಿ ತತ್ವ, ಚಾತುರ್ವರ್ಣ ವ್ಯವಸ್ಥೆ ಮತ್ತು ಬ್ರಾಹ್ಮಣ-ಫ್ಯೂಡಲ್ ದಬ್ಬಾಳಿಕೆಯನ್ನು ವಿದೇಶಿ ದಾಳಿಕೋರರ ಹೆಗಲಿಗೆ ವರ್ಗಾಯಿಸಲು ಹವಣಿಸುತ್ತಿರುವ ಸಂಘ ಪರಿವಾರ ಮೀನಾಕ್ಷಿಪುರಂ ಘಟನೆಯ ನಂತರ ಎರಡು ದೋಣಿಯಲ್ಲಿ ಪಯಣಿಸಲು ಕಸರತ್ತು ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ರಾಮಜನ್ಮಭೂಮಿ ಚಳವಳಿ ಮೂಲಕ ಮತ್ತು ಬಾಬರಿ ಮಸೀದಿ ಧ್ವಂಸದ ನಂತರ ಹಿಂದುಳಿದ ವರ್ಗಗಳ ಯುವಕರನ್ನು ಸೆಳೆಯತೊಡಗಿತು. ಹಿಂದುತ್ವ ಸಿದ್ಧಾಂತದ ಹೆಸರಿನಲ್ಲಿ ಮುಸ್ಲಿಮ್‌ದ್ವೇಷವನ್ನು ಬಿತ್ತಿದ ಆರೆಸ್ಸೆಸ್‌ನ ಜಾಲಕ್ಕೆ ನಿರುದ್ಯೋಗಿ ಹಿಂದುಳಿದ ಯುವಕರು ಬಲಿಯಾದರು.

ತೊಂಭತ್ತರ ದಶಕದವರೆಗೂ ತಳ ಸಮುದಾಯಗಳ ಪ್ರಾತಿನಿಧ್ಯ, ಸಬಲೀಕರಣ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಆರಂಭದ ಮೆಟ್ಟಿಲಾದ ಮೀಸಲಾತಿಯನ್ನು ಆರೆಸ್ಸೆಸ್ ತೀವ್ರವಾಗಿ ವಿರೋಧಿಸುತ್ತಿತ್ತು. ಮಂಡಲ್ ವರದಿಯ ಸಂದರ್ಭದಲ್ಲಿ ಇವರ ನಿಜ ಬಣ್ಣ ಬಯಲಾಯಿತು. 1990ರಲ್ಲಿ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಅವರು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರಕಾರದ ಹುದ್ದೆಗಳಲ್ಲಿ ಶೇ.27ರಷ್ಟು ಮೀಸಲಾತಿ ಕಲ್ಪಿಸುವ ಮಂಡಲ್ ಕಮಿಷನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಆದೇಶ ಹೊರಡಿಸಿದರು. ಸಾಮಾಜಿಕ ನ್ಯಾಯದ ಈ ಆದೇಶವನ್ನು ಆರೆಸ್ಸೆಸ್ ಕಟುವಾಗಿ ಟೀಕಿಸಿತ್ತು. ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ‘ರಾಜಕೀಯ ಮೀಸಲಾತಿಯ ಈ ವಿಧ್ವಂಸಕ ನೀತಿಯು ಸಾಮಾಜಿಕ ಪದ್ಧತಿಯೊಂದಿಗೆ ಚೆಲ್ಲಾಟವಾಡುತ್ತಿದೆ. ಇದು ಸಾಮಾನ್ಯ ಗುಣಮಟ್ಟವನ್ನು ಪ್ರೋತ್ಸಾಹಿಸುತ್ತದೆ. ಪ್ರತಿಭಾ ಪಲಾಯನಕ್ಕೆ ನಾಂದಿ ಹಾಡುತ್ತದೆ. ಜಾತಿ-ಭೇದವನ್ನು ಬಲಗೊಳಿಸುತ್ತದೆ’ ಎಂದು ಬರೆಯಲಾಗಿತ್ತು. 1994ರಲ್ಲಿ ಆರೆಸ್ಸೆಸ್ ಸರಸಂಚಾಲಕರಾಗಿದ್ದ ರಾಜೇಂದ್ರ ಸಿಂಗ್(ರಜ್ಜೂ ಭಯ್ಯಾ) ಪರಿಶಿಷ್ಟ ಜಾತಿಗಳನ್ನೂ ಒಳಗೊಂಡಂತೆ ಮೀಸಲಾತಿಯನ್ನು ಕ್ರಮೇಣ ಕಡಿತಗೊಳಿಸಬೇಕು ಎಂದು ಹೇಳಿದ್ದರು. ಮಂಡಲ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಆಗಿನ ಬಿಜೆಪಿ ಪಕ್ಷವು ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆಯನ್ನು ಹಮ್ಮಿಕೊಂಡಿತು. ಇದು ಹಿಂದುತ್ವ ಅಸ್ಮಿತೆಯನ್ನು ಉಗ್ರರೂಪದಲ್ಲಿ ಪ್ರತಿಪಾದಿಸಲು ರಾಮ ಜನ್ಮಭೂಮಿಯ ವಿವಾದವನ್ನು ಪ್ರಮುಖ ಅಜೆಂಡವನ್ನಾಗಿ ಮಾಡಿಕೊಂಡಿತ್ತು. ಹಿಂದೂಗಳು ಮತ್ತು ಹಿಂದೂ ಅಸ್ಮಿತೆಯನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಈ ರಾಮ ಜನ್ಮಭೂಮಿ ಚಳವಳಿಯೊಳಗೆ ಒಬಿಸಿ ಸಮುದಾಯವನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಅಂಬೇಡ್ಕರ್ ಅವರ 125ನೇ ಜನ್ಮ ದಿನದ ಸಂದರ್ಭದಲ್ಲಿ 200 ಪುಟಗಳ ಅಂಬೇಡ್ಕರ್ ಕುರಿತಾದ ಕೃತಿಗಳನ್ನು ತನ್ನ ಪ್ರಕಾಶನದ ಮೂಲಕ ಹೊರತರಲು ಆರೆಸ್ಸೆಸ್ ನಿರ್ಧರಿಸಿತ್ತು. 14, ಎಪ್ರಿಲ್ 2020ರಂದು ಅರುಣ್ ಆನಂದ್ ‘ಯಾಕೆ ಆರೆಸ್ಸೆಸ್ ಅಂಬೇಡ್ಕರ್ ಅವರನ್ನು ತನ್ನ ಐಕಾನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸುತ್ತದೆ?’ ಎನ್ನುವ ಲೇಖನ ಬರೆದರು. ಇದು ಆರೆಸ್ಸೆಸ್‌ನ ದತ್ತೋಪಂತ್ ತೇಂಗ್ಡಿಯವರ ‘ಡಾ.ಅಂಬೇಡ್ಕರ್ ಮತ್ತು ಸಾಮಾಜಿಕ ಕ್ರಾಂತಿಯ ಯಾತ್ರ’ ಪುಸ್ತಕವನ್ನು ಆಧರಿಸಿತ್ತು. ಪ್ರೊ. ಎನ್. ಸುಕುಮಾರ್ ಮತ್ತು ಶೈಲಜಾ ಮೆನನ್ ಅವರು ‘ಆ ಲೇಖನದಲ್ಲಿ ಎಸ್‌ಸಿ/ಎಸ್‌ಟಿ ಒಕ್ಕೂಟದ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ತೇಂಗ್ಡಿಯವರನ್ನು ಕಾರ್ಯದರ್ಶಿಯಾಗಿ ನೇಮಿಸಿದ್ದರು ಎಂದು ಬರೆಯುತ್ತಾರೆ. ಆದರೆ ಹೆಸರೇ ಸೂಚಿಸುವಂತೆ ಪ.ಜಾತಿ ಮತ್ತು ಪ.ಪಂಗಡದವರು ಮಾತ್ರ ಆ ಸಂಘಟನೆಯ ಪದಾಧಿಕಾರಿಗಳಾಗಲು ಸಾಧ್ಯ, ಅದು ಹೇಗೆ ಆ ಸಮುದಾಯದವರಲ್ಲದ ತೇಂಗ್ಡಿ ಕಾರ್ಯದರ್ಶಿಗಳಾಗಲು ಸಾಧ್ಯ? ಅಧಿಕೃತ ಮಾಹಿತಿಯ ಪ್ರಕಾರ ಪಿ.ಎನ್. ರಾಜಬೋಜ್ ಎಸ್‌ಸಿ/ಎಸ್‌ಟಿ ಒಕ್ಕೂಟದ ಮೊದಲ ಕಾರ್ಯದರ್ಶಿಯಾಗಿರುತ್ತಾರೆ. ಮತ್ತೊಂದು ಕಡೆ ಗುರೂಜಿಯವರ ನಿರ್ದೇಶನದ ಮೇರೆಗೆ ನೂರಾರು ಸ್ವಯಂಸೇವಕರು ಅಂಬೇಡ್ಕರ್ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದರು. ದಲಿತರ ಮತಗಳಿಗಿಂತಲೂ ಮೇಲ್ಜಾತಿಗಳ ಮತಗಳು ಹೆಚ್ಚಾಗಿದ್ದವು ಎಂದು ತೇಂಗ್ಡಿ ಬರೆಯುತ್ತಾರೆ. ಆದರೆ ಲೇಖಕರು ಇದಕ್ಕೆ ಪೂರಕವಾದ ಅಂಕಿಅಂಶಗಳನ್ನು ಕೊಡುವುದಿಲ್ಲ. ಯಾವ ಆಧಾರದಲ್ಲಿ ಬರೆದರು ಎನ್ನುವ ಸುಳಿವು ಸಿಗುವುದಿಲ್ಲ’ ಎಂದು ಬರೆಯುತ್ತಾರೆ. ತೇಂಗ್ಡಿಯವರ ಪ್ರಕಾರ ಅಂಬೇಡ್ಕರ್ ಅವರಿಗೆ ಮುಂದುವರಿದ ಜಾತಿಗಳ ಸಂಪೂರ್ಣ ಬಹುಮತ ದೊರಕಿದ್ದರೆ ಅವರೇಕೆ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸುತ್ತಿದ್ದರು? ಆರೆಸ್ಸೆಸ್ ಈ ಪ್ರಶ್ನೆಗೆ ನೇರವಾಗಿ ಉತ್ತರಿಸದೆ ‘ಬುದ್ಧಿಸಂ ಸಹ ಹಿಂದೂ ಧರ್ಮದ ಉಪ ಧರ್ಮ’ ಎನ್ನುವ ನೆರೇಶನ್ ತೇಲಿ ಬಿಡುತ್ತಿದೆ.

ಇದೇ ಲೇಖನದಲ್ಲಿ ಅರುಣ್ ಆನಂದ್ ‘ಈ ಸೋಲಿನ ನಂತರದ ಕೆಲವೇ ದಿನಗಳಲ್ಲಿ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ಬರೆಯುತ್ತಾರೆ. ಆದರೆ ಅಂಬೇಡ್ಕರ್ ಅವರು ಸ್ಪರ್ಧಿಸಿದ ಬಂಡಾರ ಉಪಚುನಾವಣೆ ನಡೆದದ್ದು 1954ರಲ್ಲಿ, ಅಂಬೇಡ್ಕರ್ ಬೌದ್ಧ ಧರ್ಮದ ದೀಕ್ಷೆ ತೆಗೆದುಕೊಂಡಿದ್ದು 14 ಡಿಸೆಂಬರ್ 1956ರಲ್ಲಿ. ಚುನಾವಣೆ ಮತ್ತು ದೀಕ್ಷೆಯ ನಡುವೆ ಎರಡು ವರ್ಷಗಳಿಗೂ ಮೇಲ್ಪಟ್ಟ ಅಂತರವಿದೆ. ಲೇಖಕರು ಕೆಲವೇ ದಿನಗಳ ನಂತರ ಎನ್ನುವುದಕ್ಕೆ ಅರ್ಥವಿಲ್ಲ. ಆದರೂ ನೂರು ಸುಳ್ಳುಗಳನ್ನು ಹೇಳಿ ಅದನ್ನು ಸತ್ಯವೆಂದು ನಂಬಿಸು ಎನ್ನುವ ತಂತ್ರ ಅನುಸರಿಸುತ್ತಿದ್ದಾರೆ. ಸುಕುಮಾರ್ ಅವರು ‘ಆರ್ಗನೈಸರ್’ ಪತ್ರಿಕೆಯಲ್ಲಿ ದತ್ತೋಪಂತ್ ತೇಂಗ್ಡಿಯವರು 12 ವರ್ಷಗಳ ಕಾಲ ಎಸ್‌ಸಿ/ಎಸ್‌ಟಿ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು ಎಂದು ಬರೆಯುತ್ತಾರೆ. ವಾಸ್ತವದಲ್ಲಿ ಈ ಒಕ್ಕೂಟವು 1942-1956ರವರೆಗೆ ಸಕ್ರಿಯವಾಗಿತ್ತು. ಅದರ 14 ವರ್ಷಗಳ ಅವಧಿಯಲ್ಲಿ 12 ವರ್ಷಗಳು ತೇಂಗ್ಡಿ ಕಾರ್ಯದರ್ಶಿಗಳಾಗಲು ಸಾಧ್ಯವೇ? ಮತ್ತು ಇವರ ಮಾಹಿತಿಯ ಪ್ರಕಾರವೇ ತೇಂಗ್ಡಿ ಮತ್ತು ಅಂಬೇಡ್ಕರ್ ನಡುವೆ 1952-56ರ ಅವಧಿಯಲ್ಲಿ ಸಂಪರ್ಕವಿತ್ತು.

ಹನ್ನೆರಡು ವರ್ಷಗಳ ಕಾಲ ಕಾರ್ಯದಶಿಗಳಾಗಿದ್ದರೆ ಯಾಕೆ ಕೇವಲ ನಾಲ್ಕು ವರ್ಷಗಳ ಕಾಲ ಮಾತ್ರ ಜೊತೆಗಿರುತ್ತಾರೆ?’ ಎಂದು ಪ್ರಶ್ನಿಸುತ್ತಾರೆ

ಬಿಜೆಪಿಯ ವಕ್ತಾರ ವಿಜಯ್ ಸೋನ್ಕರ್ ಅವರು ಬರೆದ ‘ಹಿಂದೂ ಚರ್ಮಕಾರ್ ಜಾತಿ’, ‘ಹಿಂದೂ ಖಾತಿಕ್ ಜಾತಿ’, ‘ಹಿಂದೂ ವಾಲ್ಮೀಕಿ ಜಾತಿ’ ಎನ್ನುವ ಮೂರು ಪುಸ್ತಕಗಳನ್ನು ಸೆಪ್ಟಂಬರ್ 2014ರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಡುಗಡೆಗೊಳಿಸಿದರು. 22, ಸೆಪ್ಟಂಬರ್ 2014ರ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯ ವರದಿಯ ಪ್ರಕಾರ ಸಂಘ ಪರಿವಾರದ ನಾಯಕರು ವಿದೇಶಿ ದಾಳಿಕೋರರಿಂದಾಗಿ ಜಾತಿ ಪದ್ಧತಿ ಹುಟ್ಟಿಕೊಂಡಿದೆ, ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿ ಇರಲಿಲ್ಲ ಎಂದು ಆ ಸಂದರ್ಭದಲ್ಲಿ ಮತ್ತು ಆ ಮೂರು ಪುಸ್ತಕಗಳಲ್ಲಿ ಪ್ರತಿಪಾದಿಸಿದ್ದಾರೆ. ಆರೆಸ್ಸೆಸ್ ನಾಯಕ ಭೈಯಾ ಜೋಶಿಯವರು ಮುನ್ನುಡಿ ಬರೆಯುತ್ತಾ ‘ಹಿಂದೂ ಹಸ್ತಪ್ರತಿಗಳ ಅನುಸಾರ ಶೂದ್ರರು ಅಸ್ಪಶ್ಯರಾಗಿರಲಿಲ್ಲ. ಮಧ್ಯಯುಗೀನ ಭಾರತದಲ್ಲಿ ಇಸ್ಲಾಮ್ ದೌರ್ಜನ್ಯದಿಂದಾಗಿ ಅಸ್ಪಶ್ಯರು, ದಲಿತರು ಮತ್ತು ಇಂಡಿಯನ್ ಮುಸ್ಲಿಮರು ಜನ್ಮ ತಾಳಿದರು. ಹಿಂದೂ ಸ್ವಾಭಿಮಾನವನ್ನು ಧಿಕ್ಕರಿಸಲು ಅರಬ್ ಮತ್ತು ಮುಸ್ಲಿಮ್ ರಾಜರು ಮತ್ತು ಬೀಫ್ ತಿನ್ನುವವರು ಶೂದ್ರ ಮತ್ತು ದಲಿತರನ್ನು ಗೋವುಗಳನ್ನು ಕೊಂದು ಅದರ ಚರ್ಮ ಸುಲಿದು ಅದರ ಮಾಂಸ ತಿನ್ನುವುದಕ್ಕೆ ಬಲಾತ್ಕಾರಗೊಳಿಸಿದರು. ಈ ವಿದೇಶಿ ದಾಳಿಕೋರರು ‘ಧರ್ಮ-ಕರ್ಮ’ ಎನ್ನುವ ಜಾತಿಯನ್ನು ಸೃಷ್ಟಿಸಿದರು’ ಎಂದು ಹೇಳಿದ್ದಾರೆ. ಮತ್ತೊಬ್ಬ ಆರೆಸ್ಸೆಸ್ ಸಂಚಾಲಕ ಸುರೇಶ್ ಸೋನಿ ಅವರು ‘ಮಧ್ಯಯುಗೀನ ಕಾಲದ ಮೊಗಲರ ಆಡಳಿತ ಸಂದರ್ಭದಲ್ಲಿ ಅವರು ಬ್ರಾಹ್ಮಣರು ಮತ್ತು ಕ್ಷತ್ರಿಯರ ಮೇಲೆ ಶೋಷಣೆ, ದೌರ್ಜನ್ಯ ನಡೆಸಿದ್ದರಿಂದ ವಾಲ್ಮೀಕಿ ಮತ್ತು ಇತರ 624 ಉಪ ಜಾತಿಗಳು ಹುಟ್ಟಿಕೊಂಡವು’ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಈ ಮೂರು ಪುಸ್ತಕಗಳ ಮೂಲಕ 2,000 ವರ್ಷಗಳ ಜಾತಿ ಪದ್ಧತಿಯ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಮರೆಮಾಚಿ ಅದು ತೀರಾ ಇತ್ತೀಚಿನದು ಮತ್ತು ಇಸ್ಲಾಮ್ ದಾಳಿಕೋರರಿಂದ ಹುಟ್ಟಿದ್ದು ಎಂದು ಬಿತ್ತನೆ ಮಾಡುತ್ತಿದೆ. ಸಂಘ ಪರಿವಾರ ಇತಿಹಾಸವನ್ನು ತಮ್ಮ ಮತೀಯವಾದಿ ಸಿದ್ಧಾಂತಗಳಿಗೆ ಅನುಗುಣವಾಗಿ ತತ್ವಗಳನ್ನು ಉತ್ಪಾದಿಸುವುದರಲ್ಲಿ ಪರಿಣತಿಯನ್ನು ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ. ಶ್ರೀಪಾದ ಭಟ್

contributor

Similar News