ಹುಮನಾಬಾದ್: ತಾಲೂಕಿನ ಐತಿಹಾಸಿಕ ಮತ್ತು ಸುಪ್ರಸಿದ್ಧ ಘೋಡವಾಡಿ ಗ್ರಾಮದ ಮಹಾನ್ ಸೂಫಿ ಸಂತ ಹಜರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾದ ಹತ್ತಿರವಿರುವ ಪ್ರಸಿದ್ಧ ಕೆರೆ ಹತ್ತಿರ ಸ್ವಚ್ಛತೆ ಮರೀಚಿಕೆಯಾಗಿದ್ದು, ದರ್ಗಾಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಈ ಘೋಡವಾಡಿ ಗ್ರಾಮವು ಒಂದಾಗಿದ್ದು, ಇಲ್ಲಿನ ಮಹಾನ್ ಸೂಫಿ ಸಂತ ಹಜರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ ದರ್ಗಾವು ಜಾತಿ, ಧರ್ಮ ಮೀರಿದ ಭಾವೈಕ್ಯತೆಯ ಸಂಕೇತವಾಗಿದೆ. ಪ್ರತಿ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಈ ದರ್ಗಾಕ್ಕೆ ಆಗಮಿಸುತ್ತಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ಭಕ್ತ ಸಾಗರವೇ ಹರಿದು ಬರುತ್ತದೆ. ಆದರೆ, ದರ್ಗಾದ ಸುತ್ತಲೂ ಸ್ವಚ್ಛತೆ ಕಾಪಾಡದೆ ಇದ್ದುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.

ಇಂತಹ ಪವಿತ್ರ ಕ್ಷೇತ್ರದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ದರ್ಗಾ ಆವರಣ ಮತ್ತು ಭಕ್ತರು ಓಡಾಡುವ ಸ್ಥಳದಲ್ಲಿ ದರ್ಗಾ ಕಮಿಟಿಯವರು ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಆದರೆ, ಗ್ರಾಪಂನಿಂದ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ.

ದರ್ಗಾಕ್ಕೆ ಸಂಬಂಧಿಸಿದ ಪವಿತ್ರ ಕೆರೆಯ ಪಕ್ಕದಲ್ಲಿಯೇ ಪ್ಲಾಸ್ಟಿಕ್, ಕಸ ಕಡ್ಡಿಗಳ ರಾಶಿ ಬಿದ್ದಿದ್ದು, ಗಬ್ಬು ನಾರುತ್ತಿದೆ. ಗ್ರಾಮದ ಚರಂಡಿ, ಕಾಲುವೆಗಳು ತುಂಬಿ ಹೊಲಸು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಒಂದು ವರ್ಷದಿಂದ ಕಾಲುವೆ ಸ್ವಚ್ಛತೆಯೇ ಆಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿ ವಾರ ಸಾವಿರಾರು ಜನ ಸೇರುವ ಈ ಪವಿತ್ರ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ನಮ್ಮ ಗ್ರಾಮದ ಕಾಲುವೆಗಳು ಗಬ್ಬೆದ್ದು ನಾರುತ್ತಿವೆ. ಒಂದು ವರ್ಷದಿಂದ ಸ್ವಚ್ಛತೆಯೇ ನಡೆದಿಲ್ಲ. ಅಲ್ಲಲ್ಲಿ ಪ್ಲಾಸ್ಟಿಕ್ ರಾಶಿ ಬಿದ್ದಿದೆ. ನಮ್ಮ ದರ್ಗಾದ ಮುತ್ತವಲಿ ಟ್ರಸ್ಟ್ ವತಿಯಿಂದ ನಾವು ಸ್ವಚ್ಛತೆ ಮಾಡುತ್ತೇವೆ. ಆದರೆ, ಗ್ರಾಪಂನಿಂದ ಸ್ವಚ್ಛತೆಯ ಕೆಲಸವಾಗುತ್ತಿಲ್ಲ. ಇದರಿಂದಾಗಿ ಬರುವ ಭಕ್ತಾದಿಗಳು ಮತ್ತು ಗ್ರಾಮಸ್ಥರಿಗೆ ರೋಗದ ಭೀತಿ ಎದುರಾಗಿದೆ.

-ಮೊಹಮ್ಮದ್ ಶಾಬೋದ್ದಿನ್, ಘೋಡವಾಡಿ ಗ್ರಾಮಸ್ಥ

ನಾನು ಅಧಿಕಾರ ವಹಿಸಿಕೊಂಡು ಒಂದು ವಾರ ಮಾತ್ರ ಆಗಿದೆ. ಈಗಾಗಲೇ ಹಂದಿಕೇರಾ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಹುಣಸನಾಳ ಮತ್ತು ಘೋಡವಾಡಿ ಗ್ರಾಮದಲ್ಲಿ ಮಾಡಬೇಕಿದೆ. ಆದರೆ, ನಮ್ಮಲ್ಲಿ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲ. ಈ ಕುರಿತು ಅಗತ್ಯ ಅನುಕೂಲ ಮಾಡಿಕೊಡುವಂತೆ ಕೋರಿ ತಹಶೀಲ್ದಾರ್ ಅವರಿಗೆ ಪತ್ರ ಬರೆಯುತ್ತಿದ್ದೇನೆ. ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ಮಾಡಿದ ನಂತರ ಕಸ ಸುರಿಯಲು ಸ್ಥಳವಾದರೂ ಬೇಕು. ಸ್ವಲ್ಪ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುತ್ತೇನೆ.

-ಜ್ಯೋತಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಘೋಡವಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor