ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ: ನಗರವಾಸಿಗಳಿಗೆ ಆಪ್ತವಾದ ರೈತಸಂತೆ
ರಾಯಚೂರು: ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಮಾಲ್‌ಗಳು, ಮಾಲ್‌ಗ ಸೂಪರ್‌ಮಾರ್ಕೆಟ್‌ಗಳು, ಮಾರ್ಟ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ವ್ಯಾಪಾರ ಮಳಿಗೆಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿವೆ. ಇದರ ಪರಿಣಾಮವಾಗಿ ಸ್ಥಳೀಯ ರೈತರು ಬೆಳೆದ ತರಕಾರಿ, ಹಣ್ಣುಹಂಪಲು ಹಾಗೂ ವಿವಿಧ ಆಹಾರ ಉತ್ಪನ್ನಗಳನ್ನು ಗ್ರಾಹಕರು ರೈತರಿಂದಲೇ ನೇರವಾಗಿ ಖರೀದಿಸುವ ಪ್ರಮಾಣ ಕಡಿಮೆಯಾಗುತ್ತಿದೆ.
ರೈತರು ಬೆಳೆದ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಹಾಗೂ ಗ್ರಾಹಕರಿಗೆ ತಾಜಾ ಕೃಷಿ ಉತ್ಪನ್ನಗಳನ್ನು ರೈತರಿಂದಲೇ ಖರೀದಿಸುವ ಅವಕಾಶ ಒದಗಿಸುವ ಉದ್ದೇಶದಿಂದ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೈತ ಸಂತೆ ಎಂಬ ಹೊಸ ಯೋಜನೆ ಹಾಕಿಕೊಂಡಿದೆ.
ಕೃಷಿ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶನಾಲಯದ ಅಡಿಯಲ್ಲಿನ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ರಾಯಚೂರಿನ ವತಿಯಿಂದ ತಿಂಗಳಲ್ಲಿ ಎರಡು ವಾರ ರೈತರ ಸಂತೆ ಆಯೋಜಿಸುತ್ತಿದೆ.
ರೈತರಿಂದ ನೇರ ಗ್ರಾಹಕರಿಗೆ ಎಂಬ ಆಶಯದೊಂದಿಗೆ ಆರಂಭವಾದ ರೈತ ಸಂತೆ, ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದರ ಜೊತೆಗೆ, ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಿ ಮಾರಾಟ ಮಾಡುವ ವೇದಿಕೆಯಾಗಿ ರೂಪುಗೊಂಡಿದೆ. ರೈತ ಸಂತೆ ಇದೀಗ 10 ಯಶಸ್ವಿ ಸಂತೆಗಳನ್ನು ಪೂರ್ಣಗೊಳಿಸಿದೆ.
ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರ ಕೃಷಿ ವಿವಿಯ ಎರಡನೇ ಗೇಟ್ ಬಳಿ ರೈತ ಸಂತೆ ಆಯೋಜಿಸಲಾಗುತ್ತಿದ್ದು, ರೈತರು ಹಾಗೂ ಗ್ರಾಹಕರಿಂದ ದೊರೆತ ಉತ್ತಮ ಸ್ಪಂದನೆ ಮತ್ತು ನಿರಂತರ ಬೇಡಿಕೆಯ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಪ್ರತೀ ಶನಿವಾರ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಕುಲಪತಿ ಡಾ.ಎಂ. ಹನುಮಂತಪ್ಪ ಮತ್ತು ವಿಸ್ತರಣಾ ನಿರ್ದೇಶನಾಲಯದ ನಿರ್ದೇಶಕ ಡಾ. ಎ. ಆರ್. ಕುರುಬರ ಮಾರ್ಗದರ್ಶನದಲ್ಲಿ ಕೆವಿಕೆ ರೈತ ಸಂತೆ ಆಯೋಜಿಸುತ್ತಿದೆ.
ರೈತರು, ಗ್ರಾಹಕರು ಹಾಗೂ ವಿಶ್ವವಿದ್ಯಾಲಯದ ವಿವಿಧ ಘಟಕಗಳ ಸಮನ್ವಯದೊಂದಿಗೆ ಪ್ರತಿ ಸಂತೆಯೂ ಯಶಸ್ವಿಯಾಗಿ ನಡೆಯುತ್ತಿದ್ದು, ಆರಂಭದಲ್ಲಿ ಪ್ರಯೋಗಾತ್ಮಕವಾಗಿ ಕೈಗೊಂಡಿದ್ದ ಈ ಪ್ರಯತ್ನ ಇದೀಗ ನಿರಂತರವಾಗಿ ನಡೆಯುವ ಮಾರುಕಟ್ಟೆ ವೇದಿಕೆಯಾಗಿ ಬೆಳೆಯುತ್ತಿದೆ.
ಈವರೆಗೆ ನಡೆದ 10 ರೈತ ಸಂತೆಗಳಲ್ಲಿ ಸುಮಾರು 30 ರಿಂದ 35 ರೈತರು, ಸ್ವಸಹಾಯ ಸಂಘದ ಸದಸ್ಯರು, ರೈತ ಉತ್ಪಾದನಾ ಕಂಪೆನಿಗಳು ತಮ್ಮ ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಸುಮಾರು 4 ರಿಂದ 5 ಸಾವಿರ ಗ್ರಾಹಕರು ಭೇಟಿ ನೀಡಿದ್ದು ಪ್ರತಿಯೊಂದು ಸಂತೆಯಲ್ಲಿಯೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹತ್ತು ಸಂತೆಗಳಲ್ಲಿ ಸುಮಾರು 14 ರಿಂದ 15 ಲಕ್ಷ ರೂ.ದಷ್ಟು ವಹಿವಾಟು ದಾಖಲಾಗಿದೆ. ಈ ಅಂಶಗಳು ರೈತ ಸಂತೆಗೆ ದೊರೆಯುತ್ತಿರುವ ಮಾರುಕಟ್ಟೆ ಸ್ವೀಕಾರವನ್ನು ತೋರಿಸುತ್ತದೆ.
ರೈತ ಸಂತೆ ಮೂಲಕ ತರಕಾರಿ, ಹಣ್ಣು, ಸಿರಿಧಾನ್ಯಗಳು, ಬೇಳೆಕಾಳುಗಳು, ಸಂಸ್ಕರಿತ ಆಹಾರ ಉತ್ಪನ್ನಗಳು ಹಾಗೂ ಇತರ ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಗ್ರಾಹಕರಿಗೆ ನೇರವಾಗಿ ಲಭ್ಯವಾಗುತ್ತಿವೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಸ್ಥಳೀಯವಾಗಿ ಗ್ರಾಹಕರನ್ನು ತಲುಪುವ ಅವಕಾಶ ದೊರೆಯುವುದರ ಜೊತೆಗೆ, ಗ್ರಾಹಕರಿಗೂ ಉತ್ಪನ್ನದ ಮೂಲವನ್ನು ತಿಳಿದುಕೊಂಡು ಖರೀದಿಸುವ ಅವಕಾಶ ಸಿಗುತ್ತಿದೆ.
ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆ ಬಲಪಡಿಸಿದರೆ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವುದರ ಜತೆಗೆ, ಗ್ರಾಹಕರಿಗೂ ತಾಜಾ ಹಾಗೂ ಗುಣಮಟ್ಟದ ತರಕಾರಿ, ಹಣ್ಣುಹಂಪಲು ಮತ್ತು ಆಹಾರ ಪದಾರ್ಥಗಳು ತುಸು ಕಡಿಮೆ ದರದಲ್ಲಿ ದೊರೆಯುವ ಅವಕಾಶ ಸಿಗಲಿದೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ಎಂಬ ಪರಿಕಲ್ಪನೆ ಬಲಪಡಿಸುವ ಅಗತ್ಯವಿದೆ. ರೈತ ಸಂತೆಗಳು, ರೈತ ಉತ್ಪಾದಕರ ಸಂಸ್ಥೆಗಳು, ಸ್ಥಳೀಯ ಮಾರುಕಟ್ಟೆಗಳು ಹಾಗೂ ನೇರ ಮಾರಾಟ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ರೈತ ಮತ್ತು ಗ್ರಾಹಕರ ನಡುವಿನ ಅಂತರ ಕಡಿಮೆ ಮಾಡಬಹುದು ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ನಮ್ಮ ಕೃಷಿ ವಿಜ್ಞಾನಗಳ ವಿದ್ಯಾಲಯವು ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರನ್ನು ಸಂತೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ವಿವಿಧ ಕೃಷಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಿಗೆ ಅವಕಾಶ ಕಲ್ಪಿಸುವುದು ಮತ್ತು ರೈತ-ಗ್ರಾಹಕ ನೇರ ಮಾರುಕಟ್ಟೆ ವ್ಯವಸ್ಥೆ ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
-ಡಾ.ಎಂ. ಹನುಮಂತಪ್ಪ, ಕುಲಪತಿಗಳು, ಕೃಷಿ ವಿ.ವಿ, ರಾಯಚೂರು
ಹತ್ತು ರೈತ ಸಂತೆಯು ರಾಯಚೂರಿನಲ್ಲಿ ರೈತರ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಕಲ್ಪಿಸುವ ನಿರಂತರ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.
-ಡಾ.ಎ.ಆರ್. ಕುರುಬರ, ವಿಸ್ತರಣಾ ನಿರ್ದೇಶಕರು, ಕೃಷಿ ವಿ.ವಿ, ರಾಯಚೂರು