‘ಎಸ್‌ಐಆರ್ ನೋಟಿಸ್’ ಸಂತ್ರಸ್ತರಲ್ಲಿ ಮಹಿಳೆಯರೇ ಹೆಚ್ಚು
► 29 ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಅಧಿಕ ಮತಕಾವಲು ಸಮಿತಿ ದತ್ತಾಂಶಗಳ ವಿಶ್ಲೇಷಣೆ ► 22.68 ಲಕ್ಷ ಮಹಿಳೆಯರಿಗೆ ನೋಟಿಸ್ ಅವಿವಾಹಿತ ಮಹಿಳೆಯರಲ್ಲಿ ನೋಟಿಸ್ ದರ ಶೇ.13.06
ಮನೋಜ್ ಆಜಾದ್
ಬೆಂಗಳೂರು, ಅ.5: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್)
ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದ ಮತದಾರರ ಲಿಂಗವಾರು ಅಂಕಿ-ಅಂಶಗಳನ್ನು ವಿಶ್ಲೇಷಿಸಿದಾಗ ಮಹಿಳೆಯರ ಮೇಲಿನ ನೋಟಿಸ್ ಪ್ರಕ್ರಿಯೆಯ ಪ್ರಮಾಣ ಪುರುಷರಿಗಿಂತ ಹೆಚ್ಚಿರುವುದು ಕಂಡುಬಂದಿದೆ. ನಾಗರಿಕ ಮತಕಾವಲು ಸಮಿತಿ ಸಂಗ್ರಹಿಸಿರುವ ದತ್ತಾಂಶಗಳ ಆಧಾರದ ಮೇಲೆ ರೂಪಿಸಲಾದ ವಿಶ್ಲೇಷಣೆಯಲ್ಲಿ 31 ಜಿಲ್ಲೆಗಳ ಪೈಕಿ 29 ಕಡೆ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಹೆಚ್ಚಿದೆ.
ಮತಕಾವಲು ಸಮಿತಿ ದತ್ತಾಂಶಗಳ ಪ್ರಕಾರ, ಒಟ್ಟು 43,54,570 ಮತದಾರರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 22,68,364 ಮಹಿಳೆಯರು ಮತ್ತು 20,85,573 ಪುರುಷರು. ಹೀಗಾಗಿ ಪುರುಷರಿಗಿಂತ 1,82,791 ಹೆಚ್ಚು ಮಹಿಳೆಯರು ನೋಟಿಸ್ ಪಡೆದಿದ್ದಾರೆ. ಒಟ್ಟು ನೋಟಿಸ್ ಪಡೆದವರಲ್ಲಿ ಮಹಿಳೆಯರ ಪಾಲು 52.09 ರಷ್ಟಿದ್ದರೆ, ಪುರುಷರ ಪಾಲು 47.89 ರಷ್ಟಿದೆ. ಇದು ಕೇವಲ ಒಟ್ಟು ಸಂಖ್ಯೆಯಲ್ಲಿನ ವ್ಯತ್ಯಾಸವಷ್ಟೇ ಅಲ್ಲ. ಆಯಾ ಲಿಂಗದ ಒಟ್ಟು ಮತದಾರರನ್ನು ಆಧಾರವಾಗಿಟ್ಟುಕೊಂಡು ನೋಡಿದಾಗಲೂ ಮಹಿಳೆಯರ ನೋಟಿಸ್ ದರವೇ ಹೆಚ್ಚಿದೆ.
ಮಹಿಳಾ ಮತದಾರರಲ್ಲಿ 10.24 ಪ್ರತಿಶತ ಮಂದಿಗೆ ನೋಟಿಸ್ ಬಂದಿದ್ದರೆ, ಪುರುಷ ಮತದಾರರಲ್ಲಿ ಈ ಪ್ರಮಾಣ 9.54 ಪ್ರತಿಶತ ಇದೆ. ಅಂದರೆ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಶೇ.0.70 ರಷ್ಟು ಹೆಚ್ಚಾಗಿದೆ.
ಮತಕಾವಲು ಸಮಿತಿ ದತ್ತಾಂಶದಲ್ಲಿ ಜಿಲ್ಲಾವಾರು ಚಿತ್ರಣವನ್ನು ಗಮನಿಸಿದಾಗ ಈ ವ್ಯತ್ಯಾಸ ಸ್ಪಷ್ಟವಾಗುತ್ತದೆ. 34 ಜಿಲ್ಲೆಗಳ ಪೈಕಿ 29ರಲ್ಲಿ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಹೆಚ್ಚಿದೆ. ಬೆಂಗಳೂರಿನ ಬಿಬಿಎಂಪಿ ಕೇಂದ್ರದಲ್ಲಿ ಮಹಿಳೆಯರ ನೋಟಿಸ್ ದರ 45.15 ಪ್ರತಿಶತವಿದ್ದರೆ, ಪುರುಷರದು 43.31 ಪ್ರತಿಶತ. ಬಿಬಿಎಂಪಿ ದಕ್ಷಿಣದಲ್ಲಿ ಮಹಿಳೆಯರ ದರ 41.23, ಪುರುಷರದು 39.74 ಪ್ರತಿಶತ. ಬಿಬಿಎಂಪಿ ಉತ್ತರದಲ್ಲಿ ಮಹಿಳೆಯರ ದರ 51.69 ಹಾಗೂ ಪುರುಷರದು 51.34 ಪ್ರತಿ
ಶತವಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೂ ಮಹಿಳೆಯರ ಪ್ರಮಾಣ ಸ್ವಲ್ಪಹೆಚ್ಚಿದೆ.
ಮಹಿಳೆಯರ ನೋಟಿಸ್ ದರ 44.56 ಪ್ರತಿಶತವಾಗಿದ್ದರೆ, ಪುರುಷರದು 44.35 ಪ್ರತಿಶತವಾಗಿದೆ. ಕೋಲಾರದಲ್ಲಿ ಮಹಿಳೆಯರ ನೋಟಿಸ್ ದರ 13.49, ಪುರುಷರದು 11.97 ಪ್ರತಿಶತವಾಗಿದೆ. ಕಲಬುರಗಿಯಲ್ಲಿ ಮಹಿಳೆಯರ ದರ 6.24, ಪುರುಷರದು 5.24, ಉತ್ತರ ಕನ್ನಡದಲ್ಲಿ ಮಹಿಳೆಯರ ದರ 6.25, ಪುರುಷರದು 5.30, ಬೆಂ.ಗ್ರಾಮಾಂತರದಲ್ಲಿ ಮಹಿಳೆಯರ ದರ 7.52 ಹಾಗೂ ಪುರುಷರದು 6.61, ತುಮಕೂರಿನಲ್ಲಿ ಮಹಿಳೆಯರ ದರ 5.84, ಪುರುಷರದು 4.95 ಪ್ರತಿಶತವಾಗಿದೆ.
ಮಹಿಳೆಯರಿಗೆ ಹೆಚ್ಚು ನೋಟಿಸ್ ಬಂದಿರುವುದರ ಹಿಂದಿರುವ ವರ್ಗಗಳನ್ನು ಗಮನಿಸಿದಾಗ, ಮತಕಾವಲು ಸಮಿತಿ ದತ್ತಾಂಶದಲ್ಲಿ ಗುರುತಿಸಿರುವ 9 ನೋಟಿಸ್ ವರ್ಗಗಳ ಪೈಕಿ 7 ವರ್ಗಗಳಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಅದರಲ್ಲೂ ಅತಿ ದೊಡ್ಡ ವರ್ಗ ಹಿಂದಿನ ಎಸ್‌ಐಆರ್‌ನೊಂದಿಗೆ ಮ್ಯಾಪ್ ಆಗದಿರುವುದು. ಈ ವರ್ಗದಲ್ಲಿ ಮಹಿಳೆಯರ ಸಂಖ್ಯೆ 12,58,396 ಇದ್ದರೆ, ಪುರುಷರ ಸಂಖ್ಯೆ 10,77,892 ಅಂದರೆ ಈ ಒಂದೇ ಕಾರಣದ ಅಡಿಯಲ್ಲಿ ಪುರುಷರಿಗಿಂತ 1,80,504 ಹೆಚ್ಚು ಮಹಿಳೆಯರಿದ್ದಾರೆ.
ಅದೇ ರೀತಿ ಸೆಲ್ಫ್ ನೇಮ್ ಮಿಸ್‌ಮ್ಯಾಚ್ ವಿಭಾಗದಲ್ಲಿ 2,99,567 ಮಹಿಳೆಯರು ಮತ್ತು 2,32,860 ಪುರುಷರು ಇದ್ದಾರೆ. ಇಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ 66,707ರಷ್ಟು ಹೆಚ್ಚಿದೆ. ಪೋಷಕರ ವಯಸ್ಸಿನ ಅಂತರ 15ಕ್ಕಿಂತ ಕಡಿಮೆ (Parent Age Difference <15) ವಿಭಾಗದಲ್ಲಿ ಮಹಿಳೆಯರು 2,50,511 ಮತ್ತು ಪುರುಷರು 2,25,630 ಇದ್ದಾರೆ. ಅಜ್ಜ-ಅಜ್ಜಿ ವಯಸ್ಸಿನ ಅಂತರ 40 ವರ್ಷಕ್ಕಿಂತ ಕಡಿಮೆ (Grandparent Age Difference <40) ವಿಭಾಗದಲ್ಲಿ ಮಹಿಳೆಯರು 1,54,988 ಮತ್ತು ಪುರುಷರು 1,13,131 ಇದ್ದಾರೆ. ಮಹಿಳೆಯರ ವೈವಾಹಿಕ ಸ್ಥಿತಿಯ ಆಧಾರದ ಮೇಲಿನ ವಿಶ್ಲೇಷಣೆ ಮತ್ತೊಂದು ಗಮನಾರ್ಹ ಅಂಶವಾಗಿದೆ. ಮತಕಾವಲು ಸಮಿತಿ ದತ್ತಾಂಶದ ಪ್ರಕಾರ ವಿವಾಹಿತ ಮಹಿಳೆಯರಿಗಿಂತ ಅವಿವಾಹಿತ ಮಹಿಳೆಯರಲ್ಲಿ ನೋಟಿಸ್ ದರ ಹೆಚ್ಚಿದೆ. ರಾಜ್ಯದಲ್ಲಿರುವ 1,77,75,121 ವಿವಾಹಿತ ಮಹಿಳೆಯರಲ್ಲಿ 16,95,278 ಮಂದಿಗೆ ನೋಟಿಸ್ ಬಂದಿದೆ. ಅಂದರೆ ವಿವಾಹಿತ ಮಹಿಳೆಯರ ನೋಟಿಸ್ ದರ 9.54 ಪ್ರತಿಶತ. ಇದಕ್ಕೆ ಹೋಲಿಸಿದರೆ 43,87,170 ಅವಿವಾಹಿತ ಮಹಿಳೆಯರಲ್ಲಿ 5,72,982 ಮಂದಿಗೆ ನೋಟಿಸ್ ಬಂದಿದೆ. ಅಂದರೆ ಅವಿವಾಹಿತ ಮಹಿಳೆಯರ ನೋಟಿಸ್ ದರ 13.06 ಪ್ರತಿಶತ. ಎರಡರ ನಡುವೆ ಶೇ.3.52 ರಷ್ಟು ವ್ಯತ್ಯಾಸವಿದೆ. ವಯೋಮಾನದ ಆಧಾರದ ಮೇಲಿನ ನೋಟಿಸ್‌ಗಳನ್ನು ಗಮನಿಸಿದಾಗ, 36 ರಿಂದ 45 ವರ್ಷದ ಮಹಿಳೆಯರಲ್ಲಿ ನೋಟಿಸ್ ದರ ಅತ್ಯಧಿಕವಾಗಿದ್ದು, 12.57 ಪ್ರತಿಶತ ಇದೆ. ಈ ವಯೋಮಾನದ ಒಟ್ಟು 50,79,858 ಮಹಿಳೆಯರಲ್ಲಿ 6,38,413 ಮಂದಿಗೆ ನೋಟಿಸ್ ಬಂದಿದೆ. 46 ರಿಂದ 55 ವರ್ಷದ ಮಹಿಳೆಯರಲ್ಲಿ ನೋಟಿಸ್ ದರ 10.88 ಪ್ರತಿಶತ, 26 ರಿಂದ 35ರಲ್ಲಿ 9.46 ಪ್ರತಿಶತ, 66 ರಿಂದ 79ರಲ್ಲಿ 9.21 ಪ್ರತಿಶತ, 56 ರಿಂದ 65 ರಲ್ಲಿ 9.12 ಪ್ರತಿಶತ, 18 ರಿಂದ 25ರಲ್ಲಿ 8.66 ಪ್ರತಿಶತ ಮತ್ತು 80 ವರ್ಷ ಮೇಲ್ಪಟ್ಟವರಲ್ಲಿ 7.70 ಪ್ರತಿಶತ ಇದೆ. ಪೀಳಿಗೆಯ ಆಧಾರದ ಮೇಲಿನ ವಿಶ್ಲೇಷಣೆಯಲ್ಲಿಯೂ ಇದೇ ರೀತಿಯ ವ್ಯತ್ಯಾಸ ಕಂಡುಬಂದಿದೆ. ಮಿಲ್ಲೇನಿಯಲ್ಸ್ (Millennials) ಮಹಿಳೆಯರಲ್ಲಿ ನೋಟಿಸ್ ದರ 11.62 ಪ್ರತಿಶತ, ಜೆನ್ ಎಕ್ಸ್ (Gen X) ನಲ್ಲಿ 10.36 ಪ್ರತಿಶತ, ಬೂಮರ್ಸ್ (Boomers) ನಲ್ಲಿ 9.10 ಪ್ರತಿಶತ, ಜೆನ್‌ಝೀ (Gen Z) ನಲ್ಲಿ 8.67 ಪ್ರತಿಶತ ಮತ್ತು ಸೈಲೆಂಟ್ ಜನರೇಷನ್ (Silent Generation) ನಲ್ಲಿ 7.41 ಪ್ರತಿಶತ ಇದೆ. ಮತಕಾವಲು ಸಮಿತಿ ದತ್ತಾಂಶಗಳ ಒಟ್ಟು ವಿಶ್ಲೇಷಣೆಯಿಂದ, ಎಸ್‌ಐಆರ್‌ನಲ್ಲಿ ನೋಟಿಸ್ ಪಡೆದವರ ಒಟ್ಟು ಸಂಖ್ಯೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. ವಿಶೇಷವಾಗಿ ಹಿಂದಿನ ಎಸ್‌ಐಆರ್ ನೊಂದಿಗೆ ಮ್ಯಾಪಿಂಗ್ ಆಗದಿರುವುದು, ಸ್ವಂತ ಹೆಸರಿನ ವ್ಯತ್ಯಾಸ, ಕುಟುಂಬದ ಸದಸ್ಯರ ವಯಸ್ಸಿನ ವ್ಯತ್ಯಾಸ ಮುಂತಾದ ವರ್ಗಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ಆಘಾತಕಾರಿ ಅಂಶವಾಗಿದೆ.