ಸರಕಾರದಿಂದ ‘ಮಂಜೂರಾದ’ ಮನೆ ಅಡಿಪಾಯ ಕೆಡವಿದ ತಾಲೂಕಾಡಳಿತ
ಹೊಲಗಳಿಗೆ ಹೋಗಲೂ ದಾರಿಯಿಲ್ಲ : ಮಳಚಾಪುರ್ ಗ್ರಾಮದಲ್ಲಿ ದಲಿತ ಫಲಾನುಭವಿಗಳ ಗೋಳು
ಬೀದರ್: ಭಾಲ್ಕಿ ತಾಲೂಕಿನ ಮಳಚಾಪುರ್ ಗ್ರಾಮದಲ್ಲಿ ದಲಿತರಿಗೆ ಸರಕಾರದಿಂದ ಮನೆ ಮಂಜೂರಾಗಿ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿದೆ. ಆದರೆ, ಆ ಮನೆಯನ್ನು ಸರಕಾರದ ಜಾಗದಲ್ಲಿ ಕಟ್ಟಲಾಗಿದೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ತಾಲೂಕು ಆಡಳಿತದಿಂದ ಮನೆ ಕಟ್ಟಲು ನಿರ್ಮಿಸಿದ ಅಡಿಪಾಯ ಕೆಡವಲಾಗಿದೆ.
ಭಾಲ್ಕಿ ತಾಲೂಕಿನ ಮಳಚಾಪರ್ ಗ್ರಾಮದ ನಿವಾಸಿಗಳಾದ ಮಾಯಾದೇವಿ, ಶಕುಂತಲಾ, ಪಾರ್ವತಿ ಹಾಗೂ ತೇಜಮ್ಮಾ ಅವರಿಗೆ ೨೦೨೪-೨೫ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಿಂದ ಪಿಎಂಎವೈ(ಜಿ) ಅಡಿಯಲ್ಲಿ ಮನೆ ಮಂಜೂರಾಗಿತ್ತು. ಸಂಸದ ಸಾಗರ್ ಖಂಡ್ರೆ ಅವರು ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ನೀಡಿದ್ದರು. ಸರಕಾರದಿಂದ ಮೊದಲ ಕಂತಿನ ೩೦ ಸಾವಿರ ರೂ. ಹಣ ಕೂಡ ಬಿಡುಗಡೆಯಾಗಿತ್ತು. ಆದರೆ, ನಮ್ಮ ಮನೆಯ ಅಡಿಪಾಯ ಕೆಡವಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೊದಲ ಕಂತಿನ ಹಣ ಬಿಡುಗಡೆಯಾದ ನಂತರ ಫಲಾನುಭವಿಗಳು ಅಡಿಪಾಯದ ಮೇಲೆ ಕಟ್ಟಲು ತಯಾರಿ ನಡೆಸಿದ್ದರು. ಆದರೆ, ಆ ಮನೆಗಳು ಕಟ್ಟುವ ಜಾಗ ಸರಕಾರಿ ಜಮೀನಾಗಿದೆ ಎಂದು ತಾಲೂಕು ಆಡಳಿತದಿಂದ ಮನೆ ಕಟ್ಟುವುದಕ್ಕೆ ತಡೆ ಹಿಡಿದಿದ್ದು, ಅದರಲ್ಲಿ ಒಂದು ಮನೆಯನ್ನು ತಹಶೀಲ್ದಾರ್, ಪಿಎಸ್‌ಐ ಹಾಗೂ ಸಿಪಿಐ ಸಮ್ಮುಖದಲ್ಲಿಯೇ ಜೆಸಿಬಿಯಿಂದ ಕೆಡವಲಾಗಿದೆ ಎಂದು ಫಲಾನುಭವಿಗಳು ದೂರಿದ್ದಾರೆ.
ನಾವು ಬಡವರಾಗಿದ್ದೇವೆ. ನಮಗೆ ಸರಕಾರದಿಂದ ಮನೆ ಮಂಜೂರಾತಿಯಾಗಿದೆ. ಸಾಗರ್ ಖಂಡ್ರೆ ಅವರೇ ನಮಗೆ ಮಂಜೂರಾತಿ ಪತ್ರ ನೀಡಿದ್ದಾರೆ. ಇದೀಗ ಸರಕಾರದವರೇ ಬಂದು ನಮ್ಮ ಮನೆಯನ್ನು ಒಡೆದು ಹಾಕಿದ್ದಾರೆ. ನಮಗೆ ತುಂಬಾ ಮೋಸವಾಗಿದೆ ಎಂದು ಫಲಾನುಭವಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗ್ರಾಮದ ಸರ್ವೇ ನಂ.೯೯ ರಲ್ಲಿ ಸುಮಾರು ೧೦ ಎಕರೆ ಕ್ಕಿಂತಲೂ ಹೆಚ್ಚು ಭೂಮಿ ಗೈರಾಣ ಜಮೀನು ಇತ್ತು. ಸುಮಾರು ೩ ತಲೆಮಾರಿನಿಂದ ಈ ಭೂಮಿಯನ್ನು ನಾವು ರಕ್ಷಣೆ ಮಾಡುತ್ತಾ ಬಂದಿದ್ದೇವೆ. ಆದರೆ, ಈ ಗೈರಾಣ ಭೂಮಿಯನ್ನು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತದವರು ಕೂಡಿಕೊಂಡು ಕೆಲ ತಿಂಗಳ ಹಿಂದಷ್ಟೆ ಕಾರ್ಮಿಕ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. ಈ ಜಾಗದಲ್ಲಿ ಕಾರ್ಮಿಕ ಮಕ್ಕಳಿಗಾಗಿ ಶಾಲೆಯ ಬಿಲ್ಡಿಂಗ್ ಮತ್ತು ಕಂಪೌಂಡ್ ಕಟ್ಟುತ್ತಿದ್ದಾರೆ. ನಮ್ಮ ಹೊಲಗಳಿಗೆ ಹೋಗುವುದಕ್ಕೂ ಕೂಡ ದಾರಿ ಬಿಡುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇಡೀ ಮಳಚಾಪುರ್ ಗ್ರಾಮವೇ ಸರಕಾರಿ ಜಮೀನಿನಲ್ಲಿ!: ಇಡೀ ಮಳಚಾಪುರ್ ಗ್ರಾಮವೇ ಸರಕಾರಿ ಭೂಮಿಯಲ್ಲಿದ್ದು, ಗ್ರಾಮದ ಎಲ್ಲ ಮನೆಗಳು ಸರಕಾರಿ ಜಮೀನಿನಲ್ಲಿರುವ ಗ್ರಾಮದ ಎಲ್ಲ ಮನೆಗಳು ನೆಲಸಮಗೊಳಿಸಬೇಕು. ಆವಾಗ ನಮ್ಮ ಮನೆ ಕೂಡ ನೆಲಸಮಗೊಳಿಸಬೇಕು. ಇಲ್ಲದಿದ್ದರೆ, ನಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಫಲಾನುಭವಿಗಳು ಎಚ್ಚರಿಕೆ ನೀಡಿದ್ದಾರೆ.
ಸರಕಾರಿ ಜಾಗದಲ್ಲಿ ಮುಂದುವರಿದ ಗಣಿಗಾರಿಕೆ :ಮಳಚಾಪುರ್ ಗ್ರಾಮದ ಸರ್ವೇ ನಂ.೯೯ ರ ಪಕ್ಕದಲ್ಲಿರುವ ಸರಕಾರಿ ಜಮೀನಿನಲ್ಲಿಯೇ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು, ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡು, ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ನಿಲ್ಲಿಸುತ್ತಿಲ್ಲ. ಆ ಗಣಿಗಾರಿಕೆಯಿಂದ ನಮ್ಮ ಊರಿನ ಇಡೀ ಭೂಮಿ ನಾಶವಾಗುತ್ತಿದೆ. ಆದರೆ, ಬದುಕಲು ಮನೆ ಕಟ್ಟಿಕೊಂಡರೆ, ಅದನ್ನು ಕೆಡವಿ ಅಮಾನವೀಯತೆ ಮೆರೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಶಾಲಾ ಕಟ್ಟಡ ಸ್ಥಳಾಂತರಿಸಬೇಕು. ಇಲ್ಲವಾದರೆ, ನಮಗೆ ಮನೆಗಳು ಕಟ್ಟಿಕೊಡುವುದಕ್ಕೆ ಅನುವು ಮಾಡಿಕೊಟ್ಟು, ನಮ್ಮ ಹೊಲಗಳಿಗೆ ದಾರಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮದ ಸರ್ವೇ ನಂಬರ್ ೯೯ ಸರಕಾರಿ ಜಮೀನಾಗಿದ್ದು, ಅನಧಿಕೃತವಾಗಿ ಅಲ್ಲಿ ಮನೆ ಕಟ್ಟಲಾಗುತ್ತಿತ್ತು. ಆ ಮನೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿಯೇ ತೆರವುಗೊಳಿಸಲಾಗಿದೆ. ಮಳಚಾಪುರ್ ಗ್ರಾಮವೇ ಸಂಪೂರ್ಣವಾಗಿ ಸರಕಾರಿ ಜಮೀನಿನಲ್ಲಿದೆ.
-ಓಂಕಾರ್, ಗ್ರಾಮ ಲೆಕ್ಕಾಧಿಕಾರಿ, ಮಳಚಾಪುರ್
ಮಳಚಾಪುರ್ ಗ್ರಾಮದ ಪಕ್ಕದಲ್ಲಿಯೇ ಸರಕಾರಿ ಜಮೀನಿನಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ವಿರುದ್ಧ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ತಹಶೀಲ್ದಾರ್, ಪಿಎಸ್‌ಐ ಮತ್ತು ಸಿಪಿಐ ಅವರ ಸಮ್ಮುಖದಲ್ಲಿಯೇ ಬಡವರ ಮನೆ ಕೆಡವಲಾಗಿದ್ದು, ಆ ಜಾಗದಲ್ಲಿ ಶಾಲಾ ಕಟ್ಟಡ ಕಟ್ಟಲಾಗುತ್ತಿದೆ. ನಮ್ಮ ಹೊಲಗಳಿಗೆ ಹೋಗುವುದಕ್ಕೆ ದಾರಿ ಕೂಡ ಇಲ್ಲದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಮೇಲೆ ನಮಗೆ ನಂಬಿಕೆ ಇದ್ದು, ಅವರೇ ನಮಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ.
-ಪ್ರಲ್ಹಾದ್ ದೊಡ್ಡಿ,
ಗ್ರಾಮದ ನಿವಾಸಿ
ನಾವು 3 ತಲೆಮಾರಿನಿಂದ ಇಲ್ಲಿಯೇ ಇದ್ದೇವೆ. ಇದೀಗ ಶಾಲೆ ಕಟ್ಟುತ್ತೇವೆ ಎಂದು ಹೇಳಿ ನಾವು ಕಟ್ಟುತ್ತಿರುವ ಮನೆ ಕೆಡುವುತ್ತಿದ್ದಾರೆ. ಇಡೀ ನಮ್ಮ ಊರು ಸರಕಾರಿ ಜಮೀನಿನಲ್ಲಿದೆ. ಊರಲ್ಲಿರುವ ಎಲ್ಲ ಮನೆಗಳು ಕೆಡವಿದ ನಂತರ ನಮ್ಮ ಮನೆಗಳನ್ನು ಕೆಡವಬೇಕು. ನಮಗೆ ತಹಶೀಲ್ದಾರ್, ಪಿಎಸ್‌ಐ ಅವರು ಹೆದರಿಸಿ ಮನೆ ಕೆಡವಿದ್ದಾರೆ. ಮನೆ ಉಳಿಸಿಕೊಳ್ಳಲು ನಾವು ಪ್ರಾಣ ನೀಡಲು ಕೂಡ ಸಿದ್ಧರಿದ್ದೇವೆ.
-ತೇಜಮ್ಮಾ, ಮಳಚಾಪುರ್,
ಗ್ರಾಮಸ್ಥೆ
ಕಟ್ಟುವ ಮನೆ ಕೆಡವಲಿಲ್ಲ. ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆಯ ಅಡಿಪಾಯ ಹಾಕಿದ್ದರು. ಸರಕಾರಿ ಜಮೀನಿನಲ್ಲಿ ಮನೆ ಕಟ್ಟುತ್ತಿದ್ದರೆ ಸುಮ್ಮನಿರುವುದಿಲ್ಲ. ಗ್ರಾಪಂನಿಂದ ಮನೆ ಮಂಜೂರಾದರೆ ಪಂಚಾಯತ್‌ನವರಿಗೆ ಕೇಳಬೇಕು. ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಸ್ಥಳದ ಮೇಲೆ ಕೆಲವು ಸಲ ದಾಳಿ ನಡೆಸಲಾಗಿದೆ.
<ಮಲ್ಲಿಕಾರ್ಜುನ್ ವಡ್ಡನಕೇರೆ, ತಹಶೀಲ್ದಾರರು, ಭಾಲ್ಕಿ