×
Ad

ಯರಮರಸ್ ನಲ್ಲಿ ಹೈಟೆಕ್ ಕಸಾಯಿಖಾನೆ ನಿರ್ಮಾಣಕ್ಕೆ ನಿರ್ಧಾರ

ಸ್ಥಳೀಯರ ವಿರೋಧ: ಜಿಲ್ಲಾಡಳಿತ, ಪಾಲಿಕೆಗೆ ತಲೆನೋವು

Update: 2025-12-24 14:30 IST

ರಾಯಚೂರು ನಗರದ ಅಶೋಕ್ ಡಿಪೊ ಬಳಿಯ ಕಸಾಯಿ ಖಾನೆಯನ್ನು ಬೇರೆಡೆ ಸ್ಥಳಾಂತರ ಮಾಡಿ ಹೈಟೆಕ್ ಆಗಿ ನಿರ್ಮಾಣ ಮಾಡಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಸಹಕಾರ ಮುಂದಾಗಿದ್ದು, ಹಲವೆಡೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದು ಪಾಲಿಕೆಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ನಗರದ ಅಶೋಕ ಡಿಪೊ ಹತ್ತಿರವಿದ್ದ ಕಸಾಯಿ ಖಾನೆಯ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ಆಗದೆ ಮಾವಿನಕೆರೆಯ ಸುತ್ತಮುತ್ತ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ. ಇದರಿಂದ ಸುತ್ತಲೂ ದುರ್ವಾಸನೆ ಬೀರಿ ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ.ಆದ್ದರಿಂದ ಆದಷ್ಟು ಬೇಗ ಕಸಾಯಿಖಾನೆಯನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು.

ಜಿಲ್ಲಾಧಿಕಾರಿಯಾಗಿ ನಿತೀಶ್ ಕುಮಾರ್ ಹಾಗೂ ಜುಬೀನ್ ಮೊಹಾಪಾತ್ರ ಪಾಲಿಕೆಯ ಆಯುಕ್ತರಾಗಿ ವರ್ಗಾವಣೆಯಾಗಿ ಬಂದನಂತರ ಅವರ ವಿಶೇಷ ಕಾಳಜಿಯಿಂದ ಅನೇಕ ಸುಧಾರಣೆಯಾಗಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಹಾಗೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ ನಗರದಲ್ಲಿ ಒಂದು ಆಧುನಿಕ ಹೈಟೆಕ್ ಕಸಾಯಿ ಖಾನೆ ನಿರ್ಮಾಣ ಮಾಡಬೇಕು ಎಂದು ಆಲೋಚನೆಯಿಂದ ಹೊರವಲಯದ ಯರಮರಸ್ ಬಳಿ ಜಾಗ ಗುರುತಿಸಲಾಗಿತ್ತು. ಪಾಲಿಕೆಯ ಆಯುಕ್ತರು ಜಿಲ್ಲಾಡಳಿತದ ಮೂಲಕ 10 ಕೋಟಿ ರೂ. ಬಿಡುಗಡೆ ಮಾಡಿಸಿ ಇನ್ನೇನು ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನುವಷ್ಟರಲ್ಲಿ ಸ್ಥಳೀಯರ ವಿರೋಧದಿಂದ ಕಾಮಗಾರಿಗೆ ತಡೆಯಾಗಿದೆ.

ಇತ್ತೀಚೆಗೆ ಯರಮರಸ್‌ನಲ್ಲಿ ಜಾಗ ಗುರುತಿಸಿ ಭೂಮಿ ಪೂಜೆ ಮಾಡಲು ಮುಂದಾಗಿರುವ ಹೊತ್ತಲ್ಲೇ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಪ್ರದೇಶದಲ್ಲಿ ಖಾಸಾಯಿಖಾನೆ ಸ್ಥಾಪನೆ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು.

ಯರಮರಸ್‌ನಲ್ಲಿ ಕಸಾಯಿಖಾನೆಗೆ ವಿರೋಧ ಯಾಕೆ?: ಪ್ರಸ್ತುತ ಸ್ಥಾಪನೆ ಮಾಡಲು ಗುರುತಿಸಿದ ಯರಮರಸ್‌ನಲ್ಲಿ ಮೋರಾರ್ಜಿ, ಮೌಲಾನಾ ಅಬುಲ್ ಕಲಾಂ ವಸತಿ ಶಾಲೆ, ಅನೇಕ ದೇವಾಲಯಗಳು, ನ್ಯಾಯಾಧೀಶರ ಬಡಾವಣೆ, ಸುಮಾರು 250 ಎಕರೆ ವಿಸ್ತೀರ್ಣದ ಕೆಐಎಡಿಬಿ ಬಡಾವಣೆ ಇದೆ. ಆದ್ದರಿಂದ ಈ ಸ್ಥಳದಲ್ಲಿ ಕಸಾಯಿಖಾನೆ ಸ್ಥಾಪನೆ ಮಾಡಿದರೆ ಇಲ್ಲಿ ವಾಸಿಸುವ ಕುಟುಂಬಗಳಿಗೆ ಧಕ್ಕೆ ಆಗಲಿದೆ ಎಂಬುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯ. ಈ ಬಗ್ಗೆ ಕೆಲ ಸಂಘ ಸಂಸ್ಥೆಗಳೂ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಅಲ್ಲಿನ ಕಸಾಯಿಖಾನೆ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಮೌಖಿಕ ಆದೇಶದ ಮೇರೆ ಸ್ಥಗಿತಗೊಳಿಸಲಾಗಿದೆ.

ಯರಮರಸ್‌ಗಿಂದ ಮೊದಲು ಹಲವೆಡೆ ವಿರೋಧ: ಕಸಾಯಿ ಖಾನೆಗೆ ವಿರೋಧ ಮಾಡುತ್ತಿರುವುದು ಕೇವಲ ಯರಮರಸ್ ಗ್ರಾಮದ ನಿವಾಸಿಗಳಲ್ಲ. ಇದಕ್ಕೂ ಮೊದಲು ನಗರದ ಆಶಾಪುರ ರಸ್ತೆ, ಮಾಲಿಯಾಬಾದ್ ಗ್ರಾಮ ಯಕ್ಲಾಸಪೂರ ಹತ್ತಿರ ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸುವ ಪ್ರಯತ್ನ ನಡೆದರೂ, ಸಾರ್ವಜನಿಕರ ವಿರೋಧದಿಂದ ಅದನ್ನು ನಿಲ್ಲಿಸಬೇಕಾಯಿತು. ಈಗ ಯರಮರಸ್ ನಲ್ಲಿಯೂ ವಿರೋಧ ವ್ಯಕ್ತವಾಗುತ್ತಿದ್ದು, ಮುಂದೆ ಎಲ್ಲಿ ಸ್ಥಾಪನೆ ಮಾಡುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ನೂತನವಾಗಿ ನಿರ್ಮಾಣ ಮಾಡಲು ಮುಂದಾಗಿರುವ ಹೈಟೆಕ್ ಕಸಾಯಿಯಲ್ಲಿ ಜಾನುವಾರುಗಳನ್ನು ವೈಜ್ಞಾನಿಕವಾಗಿ ವಧೆ ಮಾಡುವ ಪ್ರತ್ಯೇಕ ಕೋಣೆ, ಯಾರಿಗೂ ಕಾಣದಂತೆ ಗಾಜಿನ ವ್ಯವಸ್ಥೆ, ಜಾನುವಾರುಗಳನ್ನು ವಧೆ ಮಾಡಿದ ಬಳಿಕ ರಕ್ತ ಹಾಗೂ ಇತರ ತ್ಯಾಜ್ಯ ವಿಲೇವಾರಿ ಮಾಡುವ ಘಟಕ, ಬೋರ್‌ವೆಲ್, ದೊಡ್ಡ ಸೇಫ್ಟಿಕ್ ಟ್ಯಾಂಕ್, ಲ್ಯಾಬ್ ಇತರ ಆಧುನಿಕ ಸೌಲಭ್ಯ ಇರಲಿದೆ.

-ಜುಬಿನ್ ಮೊಹಪಾತ್ರ, ಪಾಲಿಕೆಯ ಆಯುಕ್ತ

ಹಳೆಯ ಕಸಾಯಿಖಾನೆ ಅಭಿವೃದ್ಧಿಗೊಳಿಸಿ

ಪ್ರಸ್ತುತ ಅಶೋಕ ಡಿಪೊ ಬಳಿ ಇರುವ ಕಸಾಯಿ ಖಾನೆ ಅಧೋಗತಿಯಲ್ಲಿದೆ. ಶೌಚಾಲಯ, ಕುಡಿಯುವ ನೀರು, ಸ್ವಚ್ಛತೆಯ ನಿರ್ವಹಣೆ, ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ಇತರ ಮೂಲಸೌಕರ್ಯವಿಲ್ಲ, ಕಾಂಪೌಂಡ್ ಹಾಳಾಗಿದೆ. ಹಂದಿ,ನಾಯಿಗಳು ಒಳಗೆ ಬಂದು ಗಲೀಜು ಮಾಡುತ್ತಿವೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ. ಆಧುನಿಕ ಸೌಕರ್ಯಗಳಿಲ್ಲ, ಆದರೆ ಈಗ ಎರಡು ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ, ಒಂದು ಪೂರ್ಣವಾಗಿದ್ದು, ಉದ್ಘಾಟನೆ ಆಗಿಲ್ಲ, ಜಾನುವಾರುಗಳನ್ನು ಕಟ್ಟಿ ಹಾಕುವ ಕಟ್ಟಡ ದುರಸ್ತಿ ಮಾಡಲಾಗಿದೆ. ಸಣ್ಣಪುಟ್ಟ ಕೆಲಸಗಳು ಮಾಡಿದರೆ ಇಲ್ಲಿಯೇ ಮುದುವರಿಸಬಹುದು, ಈಗ ಎಲ್ಲೆಡೆ ಹೈಟೆಕ್ ಕಸಾಯಿ ಖಾನೆೆ ಜಾಗ ನೀಡಲು ಸ್ಥಳೀಯರು ವಿರೋಧ ಮಾಡುವ ಕಾರಣ ಕಿರಿಕಿರಿಯೂ ತಪ್ಪಲಿದೆ.

ಬಾಷ (ಜಾನುವಾರು ವ್ಯಾಪಾರಿ)

ಪ್ರಸ್ತುತ ಅಶೋಕ ಡಿಪೊ ಬಳಿ ಇರುವ ಕಸಾಯಿಖಾನೆ ಜನನಿಬಿಡ ಪ್ರದೇಶದಲ್ಲಿದೆ, ನಗರದ ಹೊರವಲಯದಲ್ಲಿ ಹೊಸದಾಗಿ ಹೈಟೆಕ್ ಕಸಾಯಿ ಖಾನೆ ನಿರ್ಮಾಣ ಮಾಡಲು ಸ್ಥಳೀಯರು ವಿರೋಧ ಮಾಡಿ ಹೋರಾಟಕ್ಕೆ ಮುಂದಾಗಿದ್ದರಿಂದ ಬೇರೆ ಕಡೆ ಸ್ಥಳ ಗುರುತಿಸಲಾಗುವುದು. ಎಲ್ಲಾ ಕಡೆ ವಿರೋಧ ಮಾಡಿದರೆ ಹೇಗೆ ನಿರ್ಮಾಣ ಮಾಡುವುದು, ಯಾವುದೇ ಪ್ರದೇಶದಲ್ಲೂ ದೇವಾಲಯ, ಚರ್ಚ್, ಮಸೀದಿ ಇರುತ್ತದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡಬೇಕು. ಮುಂದಿನ ತಿಂಗಳೊಳಗೆ ಹೊಸ ಜಾಗ ಗುರುತಿಸಿ ಕಸಾಯಿ ಖಾನೆ ನಿರ್ಮಾಣಕ್ಕೆ ಮುಂದಾಗುತ್ತೇವೆ.

-ಜುಬೀನ್ ಮೊಹಪಾತ್ರ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು.

ಯರಮರಸ್‌ನಲ್ಲಿ ಕಸಾಯಿ ಖಾನೆ ನಿರ್ಮಾಣ ಮಾಡುವುದರಿಂದ ಜಿಲ್ಲಾಡಳಿತ ಹಿಂದೆ ಸರಿದು ಬೇರೆಡೆ ಸ್ಥಳಾಂತರಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂಬ ವಿಚಾರಕ್ಕೆ ಸಾರ್ವಜನಿಕರು ಪಕ್ಷ ಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯರಮರಸ್‌ನಿಂದ ಬೇರೆಡೆ ಕಸಾಯಿಖಾನೆಯನ್ನು ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿ ಆಸಕ್ತಿತೋರಿಸಿದ್ದು ಸರಿಯಾದ ನಿರ್ಧಾರ.

-ಶಂಶಾಲಂ, ನಗರಸಭೆಯ ಮಾಜಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News