×
Ad

ಒಗಟಾಗಿ ಕಾಡುವ ಅನಂತ್ ಸಿಂಗ್ ಎಂಬ ಕ್ರಾಂತಿಕಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!

Update: 2025-12-24 12:09 IST

ಭಾಗ - 14

1920ರಲ್ಲಿ ಚಿತ್ತಗಾಂಗ್‌ನಲ್ಲಿ ರಾಮಮೂರ್ತಿ ಸರ್ಕಸ್ ಎಂಬ ಕಂಪೆನಿ ಬಿಡಾರ ಹೂಡಿತ್ತು. ಅದರಲ್ಲಿ ಒಬ್ಬ ಬ್ರಿಟಿಷ್ ಪೈಲ್ವಾನ್ ಎರಡು ಕೈಯಲ್ಲಿ ಕಬ್ಬಿಣದ ಸರಪಳಿಯನ್ನು ತುಂಡು ಮಾಡಿ, ಬಳಿಕ ಆನೆಯನ್ನು ತನ್ನ ಎದೆ ಮೇಲೆ ಹತ್ತಿಸುವ ಪ್ರದರ್ಶನ ನೀಡುತ್ತಿದ್ದ. ಪ್ರದರ್ಶನ ಮುಗಿದ ತಕ್ಷಣ ‘‘ಯಾರಾದರೂ ಭಾರತೀಯ ಈ ಸಾಹಸ ಮಾಡಲು ಮುಂದೆ ಬರುತ್ತೀರಾ?’’ ಎಂದು ಸವಾಲು ಹಾಕುತ್ತಿದ್ದ. ಒಂದು ದಿನ ಆತ ಈ ಸವಾಲು ಹಾಕಿದ್ದೇ 17ರ ಹರೆಯದ ಒಬ್ಬ ದಾಂಡಿಗ ಯುವಕ ಮುಂದೆ ಬಂದು ಒಂದೇ ಕೈಯಲ್ಲಿ ಕಬ್ಬಿಣದ ಸರಪಳಿ ತುಂಡು ಮಾಡಿದ್ದಲ್ಲದೆ ಆನೆಯನ್ನೂ ತನ್ನೆದೆ ಮೇಲೆ ಹತ್ತಿಸಿಕೊಂಡ. ಆನೆ ಇಳಿದು ಹೋದ ಮೇಲೆ ನಿರಾಮಯವಾಗಿ ಎದ್ದ ಈತ ಧೂಳು ಕೊಡವಲೂ ನೆನಪಾಗದೇ ನಡೆದು ಬಿಟ್ಟಿದ್ದ. ಅನಂತ್ ಸಿಂಗ್ ಎಂಬ ಬಲ ಭೀಮ ಜನರಿಗೆ ಪರಿಚಯ ಆಗಿದ್ದು ಹೀಗೆ.

ಅನಂತ್ ಸಿಂಗ್ ಡಿಸೆಂಬರ್ 1, 1903ರಲ್ಲಿ ಜನಿಸಿದರು. ಮೂಲತಃ ಪಂಜಾಬಿ ಮಾತೃಭಾಷೆಯ ರಜಪೂತ ಕುಟುಂಬಕ್ಕೆ ಸೇರಿದ್ದ ಅನಂತ್ ಸಿಂಗ್ ಕುಟುಂಬ ಚಿತ್ತಗಾಂಗ್‌ನಲ್ಲಿ ನೆಲೆ ಊರಿದ್ದರು. ಶಾಲೆ ಓದುವಾಗಲೇ ಸೂರ್ಯ ಸೆನ್ ಪರಿಚಯವಾಗಿ ಕ್ರಾಂತಿಕಾರಿ ಸಂಘಟನೆಗೆ ಅನಂತ್ ಸಿಂಗ್ ಸೇರಿದ್ದರು. ಈತನ ಸಹೋದರಿ, ಇಂದುಮತಿ ಸಿಂಗ್ ಕೂಡಾ ಸ್ವಾತಂತ್ರ್ಯ ಹೋರಾಟಗಾರ್ತಿ.

ಸಿಂಗ್ ಮೊದಲು ಭಾಗವಹಿಸಿದ್ದು ಅಸಹಕಾರ ಚಳವಳಿಯಲ್ಲಿ. ಆದರೆ ಈ ಚಳವಳಿ ಬಗ್ಗೆ ಅನಂತ್ ಸಿಂಗ್‌ಗೆ ನಂಬಿಕೆ ಇರಲಿಲ್ಲ. ಬಳಿಕ ಸೂರ್ಯಸೆನ್ ಅವರ ಸಂಘಟನೆ ಸೇರಿದ ಅನಂತ್ ಸಿಂಗ್ 1924ರಲ್ಲಿ ಅಸ್ಸಾಂ ರೈಲ್ವೆ ಖಜಾನೆಯನ್ನು ಲೂಟಿ ಮಾಡಿ, ಭೂಗತರಾದರು. ಬಳಿಕ ಪೊಲೀಸರು ಅನಂತ್ ಸಿಂಗ್ ಅವರನ್ನು ಬಂಧಿಸಿದರೂ ಅವರ ಬಿಡುಗಡೆಯಾಯಿತು. ಆದರೆ 1924ರಲ್ಲಿ ಮತ್ತೆ ಬಂಧಿತರಾದ ಅನಂತ್ ಸಿಂಗ್ ನಾಲ್ಕು ವರ್ಷ ಜೈಲು ವಾಸ ಅನುಭವಿಸಿದರು.

ಬಿಡುಗಡೆಯ ಬಳಿಕ ವ್ಯಾಯಾಮ ಶಾಲೆಯೊಂದನ್ನು ಆರಂಭಿಸಿ ಅದರ ಮೂಲಕ ಯುವಕರನ್ನು ಕ್ರಾಂತಿಕಾರಿ ಸಂಘಟನೆಗೆ ತಯಾರು ಮಾಡಿದರು. ಎಪ್ರಿಲ್ 18, 1930ರ ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿ ಮೇಲೆ ನಡೆದ ದಾಳಿಯಲ್ಲಿ ಅನಂತ್ ಸಿಂಗ್ ಮುಖ್ಯ ಪಾತ್ರ ವಹಿಸಿದರು. ಅಲ್ಲಿಂದ ತಪ್ಪಿಸಿಕೊಂಡು ಫ್ರೆಂಚ್ ಕಾಲನಿಯಲ್ಲಿ ಆಶ್ರಯ ಪಡೆದರೂ ಅವರ ಸಂಗಾತಿಗಳನ್ನೆಲ್ಲಾ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡುತ್ತಿರುವ ಮಾಹಿತಿ ಸಿಕ್ಕಿದ್ದೇ ಅನಂತ್ ಸಿಂಗ್ ಜೂನ್ 28, 1930ರಂದು ಪೊಲೀಸರಿಗೆ ಶರಣಾಗಿ ವಿಚಾರಣೆ ಎದುರಿಸಿದರು. ಅಲ್ಲಿ ಜೀವಾವಧಿ ಶಿಕ್ಷೆ ಘೋಷಣೆಯಾಗಿ ಅನಂತ್ ಸಿಂಗ್ ಅವರನ್ನು ಅಂಡಮಾನ್‌ಗೆ ರವಾನಿಸಲಾಯಿತು. ಗಾಂಧಿ ಮತ್ತಿತರ ಧುರೀಣರ ಒತ್ತಡದ ಕಾರಣಕ್ಕೆ ಅಂಡಮಾನ್‌ನ ಕೈದಿಗಳನ್ನು ಬ್ರಿಟಿಷ್ ಸರಕಾರ ಅಂಡಮಾನ್‌ನಿಂದ ಕರೆ ತಂದು ಭಾರತದ ಜೈಲುಗಳಲ್ಲಿ ಕೂಡಿ ಹಾಕಿತು. ಕೆಲವರನ್ನು ಬಿಡುಗಡೆ ಮಾಡಲಾಯಿತು. ಅಂಡಮಾನ್ ಜೈಲಲ್ಲಿ ಅನಂತ್ ಸಿಂಗ್ ಕಮ್ಯುನಿಸ್ಟ್ ಚಿಂತನೆಗಳ ಪ್ರಭಾವಕ್ಕೊಳಗಾದರು. 1946ರಲ್ಲಿ ಬಿಡುಗಡೆಯಾದ ಬಳಿಕ ಅವರು ಕಮ್ಯುನಿಸ್ಟ್ ಪಕ್ಷ ಸೇರಿದರು.

***

ಸ್ವಾತಂತ್ರ್ಯ ಬಂದ ಬಳಿಕದ ಅನಂತ್ ಸಿಂಗ್ ಜೀವನ ವಿಚಿತ್ರ ತಿರುವುಗಳನ್ನು ಪಡೆದುಕೊಂಡಿತು.

ಸಿನೆಮಾ ನಿರ್ಮಾಣ, ಹಂಚಿಕೆ, ಕಾರು ಮಾರಾಟಗಳಲ್ಲಿ ತೊಡಗಿಸಿಕೊಂಡ ಅನಂತ್ ಸಿಂಗ್ ಕೆಲವು ಸಿನೆಮಾಗಳನ್ನು ನಿರ್ಮಿಸಿದ್ದರು. ಅವರ ಸಿನೆಮಾಗಳು ತೀರಾ ನಷ್ಟ ಉಂಟು ಮಾಡಿರಲಿಲ್ಲ. ಒಂದರ್ಥದಲ್ಲಿ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದದ್ದರು. 60ರ ದಶಕದ ಅಂತ್ಯದ ವೇಳೆಗೆ ಅನಂತ್ ಸಿಂಗ್ ಸಿಪಿಎಂ ಬಗ್ಗೆ ಭ್ರಮನಿರಸನಗೊಂಡು ಒಚಿಟಿ ಒoಟಿeಥಿ ಉuಟಿ ಎಂಬ ತೀವ್ರ ಎಡಪಂಥೀಯ ಸಂಘಟನೆಯನ್ನು ಕಟ್ಟಿದ್ದರು. (ನಕ್ಸಲ್ ಬಾರಿ ಚಳವಳಿಯ ಒಂದು ಭಾಗ ಇದು) ಶಶ್ತ್ರಾಸ್ತ್ರ ಹೊಂದಿಸಲು ಈ ಗುಂಪು ಕೋಲ್ಕತಾದಲ್ಲಿ ಹಲವು ದರೋಡೆಗಳನ್ನು ಮಾಡಿತು. ಈ ದರೋಡೆಗಳಲ್ಲಿ ಅನಂತ್ ಸಿಂಗ್ ಹೆಸರು ಪ್ರಸ್ತಾಪವಾಗಿದ್ದೇ ಬಂಗಾಳದ ಭದ್ರಲೋಕಕ್ಕೆ ಆಘಾತವಾಯಿತು. 1969ರಲ್ಲಿ ಅನಂತ್ ಸಿಂಗ್ ತನ್ನ ಸಹಚರರ ಜೊತೆ ಛತ್ತೀಸ್‌ಗಡದ ಜಾದೂಗುಡಾದಲ್ಲಿ ಪೊಲೀಸರಿಗೆ ಸೆರೆ ಸಿಕ್ಕರು. 1977ರ ವರೆಗೂ ಜೈಲಲ್ಲೇ ಇದ್ದ ಅನಂತ್ ಸಿಂಗ್ ಹೃದಯಸಂಬಂಧಿ ಕಾಯಿಲೆಯ ಕಾರಣಕ್ಕೆ ಬಿಡುಗಡೆಯಾದರು. ಭೀಮನಂತಿದ್ದ ಅನಂತ್ ಸಿಂಗ್ ಕಾಲದ ಹೊಡೆತಕ್ಕೆ ಸಿಕ್ಕಿ ಜರ್ಜರಿತರಾಗಿದ್ದರು. ಅನತಿ ಕಾಲದಲ್ಲಿ ಅವರು ತೀರಿಕೊಂಡರು.

ಅವರ ವಿವಾದಾತ್ಮಕ ಆತ್ಮ ಚರಿತ್ರೆ, ‘ಕೆಲವರು ದರೋಡೆಗಾರ ಅನ್ನುತ್ತಾರೆ, ಕೆಲವರು ಕ್ರಾಂತಿಕಾರಿ ಅನ್ನುತ್ತಾರೆ’ ಆ ಕಾಲದಲ್ಲಿ ಬಹು ಚರ್ಚಿತ ಕೃತಿಯಾಗಿತ್ತು. ಚಿತ್ತಗಾಂಗ್‌ನ ಯುವ ಕ್ರಾಂತಿ, ಸೂರ್ಯ ಸೆನ್ ಕುರಿತೂ ಅವರು ಪುಸ್ತಕಗಳನ್ನು ಬರೆದಿದ್ದರು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಣಕಾಸಿನ ಪ್ರಶ್ನೆ ಬಂದಾಗ ಅನಂತ್ ಸಿಂಗ್, ‘‘ಅದನ್ನು ನನಗೆ ಬಿಡಿ, ನೀವು ಕೆಲಸ ಮಾಡಿ’’ ಎನ್ನುತ್ತಿದ್ದರಂತೆ. ಕಾಸು ಹೊಂದಿಸಲು ನಡೆಸಿದ ಬಹುಪಾಲು ಲೂಟಿ ಪ್ರಕರಣಗಳು ಅನಂತ್ ಸಿಂಗ್ ನೇತೃತ್ವದಲ್ಲೇ ನಡೆದಿತ್ತು. ಎಂಥಾ ತಿಜೋರಿ ಪೆಟ್ಟಿಗೆಯನ್ನೂ ಅನಾಮತ್ತಾಗಿ ಅನಂತ್ ಸಿಂಗ್ ಒಡೆಯುತ್ತಿದ್ದರು ಎಂಬ ಪ್ರತೀತಿ ಇತ್ತಂತೆ!

ನಕ್ಸಲ್ ಚಳವಳಿ ಆರಂಭವಾದಾಗಲೂ ಅನಂತ್ ಸಿಂಗ್ ತಣ್ಣಗಿದ್ದಂತಿದ್ದರೂ ಕ್ರಮೇಣ ಸಿಪಿಎಂನಿಂದ ದೂರವಾದರು. ವರ್ಷದೊಳಗೆ ಕೋಲ್ಕತಾದಲ್ಲಿ ಸರಣಿ ದರೋಡೆಗಳಾದಾಗ ಪೊಲೀಸರೇ ಸುಳಿವು ಸಿಗದೆ ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಇದಾದ ಕೆಲವು ತಿಂಗಳುಗಳ ಬಳಿಕ ಎಡ ಸರಕಾರ ಅನಂತ್ ಸಿಂಗ್ ಅವರನ್ನು ಬಂಧಿಸಿ ಅವರೇ ಈ ದರೋಡೆಗಳ ಸೂತ್ರಧಾರ ಎಂದು ಘೋಷಿಸಿತು. ‘‘ಸ್ವಂತಕ್ಕೆ ನಾನೇನು ಇಟ್ಟುಕೊಳ್ಳಲ್ಲ..! ಬೇಕಾದವರಿಗೆ ಕೊಡ್ತೀನಿ’’ ಎಂದು ಅನಂತ್ ಸಿಂಗ್ ಒಣವಾಗಿ ಹೇಳಿದ್ದರಂತೆ.

ಅವರ ಮಟ್ಟಿಗೆ ಸಶಸ್ತ್ರ ಕ್ರಾಂತಿಯೇ ಮುಖ್ಯ ಸಾಧನ ಅನ್ನಿಸಿತ್ತು. ಕಾಂಗ್ರೆಸ್, ಎಡಪಕ್ಷಗಳೆರಡೂ ಅವರನ್ನು ಬಿಡುಗಡೆ ಮಾಡಬಾರದು, ಅವರೊಬ್ಬ ಡಕಾಯಿತ ಎಂದು ಘೋಷಿಸಿದ್ದವು.

ಕ್ರಾಂತಿಯ ತೊಟ್ಟಿಲಲ್ಲೇ ಬೆಳೆದ ಒಬ್ಬ ಕ್ರಾಂತಿಕಾರಿಗೆ ಸ್ವಾತಂತ್ರ್ಯಾನಂತರದ ಭಾರತವೂ ಭ್ರಮ ನಿರಸನ ಹುಟ್ಟಿಸಿ ಹಳೇ ವಿಧಾನವೇ ಸರಿ ಅನ್ನಿಸಿದ್ದು ಯಾಕೆ? ಆರಾಮವಾಗಿ ಬದುಕುತ್ತಿದ್ದ ಜೀವ ಹಠಾತ್ತಾಗಿ ಮತ್ತೆ ಹೋರಾಟದ ಹಾದಿ ಹಿಡಿದದ್ದು ಯಾಕೆ?

ಕಾಂಗ್ರೆಸ್ ಬಿಡಿ, ಎಡಪಕ್ಷಗಳ ಬಗ್ಗೆಯೂ ಭ್ರಮನಿರಸನಗೊಂಡ ಆ ಕಾಲಘಟ್ಟದಲ್ಲಿ ನಕ್ಸಲ್ ಚಳವಳಿಯನ್ನು ಸಾಮಾಜಿಕ ರೋಗ ನಿದಾನವಾಗಿಯೇ ನೋಡಲಾಗಿತ್ತು. ಈ ಸ್ವಾತಂತ್ರ್ಯ ಸೇನಾನಿಗೂ ಮತ್ತೆ ಈ ಹಾದಿ ತುಳಿಯಬೇಕೆಂದು ಅನ್ನಿಸಿದ್ದು ಯಾಕೆ?. ಸ್ಥೂಲವಾಗಿ ನಾವು ಈ ಹಾದಿಯನ್ನು ಒಪ್ಪದೆ ಇರಬಹುದು. ಆದರೂ ಯಾವುದೋ ಲ್ಯಾಟಿನ್ ಅಮೆರಿಕೆಯ ಕಾದಂಬರಿಯ ಪಾತ್ರ ದುತ್ತನೆ ವಾಸ್ತವದ ದೇಶ ಕಾಲದಲ್ಲಿ ಪ್ರತ್ಯಕ್ಷವಾದಂತೆ ಅನಂತ್ ಸಿಂಗ್ ಕಾಣಿಸುತ್ತಾರೆ. ಒಗಟಾಗಿ ಕಾಡುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News