×
Ad

ದೇಶ ಮರೆತ ಕ್ರಾಂತಿಕಾರಿ ಕಿಡಿ- ಅಂಬಿಕಾ ಚಕ್ರವರ್ತಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!

Update: 2025-12-22 12:12 IST

ಭಾಗ - 13

ಅಂಬಿಕಾ ಚಕ್ರವರ್ತಿ ಜನವರಿ 1892ರಲ್ಲಿ ಜನಿಸಿದರು. ತಾರುಣ್ಯದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ತೀವ್ರ ಸೆಳೆತ ಹೊಂದಿದ ಅಂಬಿಕಾ ಚಕ್ರವರ್ತಿ ಚಿತ್ತಗಾಂಗ್ ಜುಗಾಂತರ ಪಾರ್ಟಿ ಸೇರಿ ಸೂರ್ಯ ಸೇನ್ ಅವರ ಸಹವರ್ತಿಯಾದರು. ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿಯ ಮೇಲೆ ನಡೆದ ಚಾರಿತ್ರಿಕ ದಾಳಿಯಲ್ಲಿ ಅವರು ದಾಳಿಯ ನೇತೃತ್ವ ವಹಿಸಿದ್ದರು. ಈ ದಾಳಿಯಲ್ಲಿ ಗಾಯಗೊಂಡ ಅಂಬಿಕಾ ಚಕ್ರವರ್ತಿಯವರನ್ನು ಜಲಾಲಾಬಾದ್‌ನಲ್ಲಿ ಪೊಲೀಸರು ಸೆರೆಹಿಡಿದರು. ಆಸಲ ಪೊಲೀಸರಿಂದ ತಪ್ಪಿಸಿಕೊಂಡರೂ ಕೆಲವು ತಿಂಗಳ ಬಳಿಕ ಕೊನೆಗೂ ಪೊಲೀಸರಿಗೆ ಸೆರೆ ಸಿಕ್ಕರು. ಚಿತ್ತಗಾಂಗ್ ಪ್ರಕರಣದಲ್ಲಿ ಅವರಿಗೆ ಆರಂಭದಲ್ಲಿ ಗಲ್ಲು ಶಿಕ್ಷೆಯಾದರೂ ಹೈಕೋರ್ಟ್ ಆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ಅವರನ್ನು ಅಂಡಮಾನ್‌ಗೆ ರವಾನಿಸಿತು. ಅಂಡಮಾನ್‌ನಲ್ಲಿ 15 ವರ್ಷಗಳ ಕಾಲ ಭೀಕರ ಶಿಕ್ಷೆ ಅನುಭವಿಸಿದ ಅಂಬಿಕಾ ಚಕ್ರವರ್ತಿಯವರನ್ನು 1945ರಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಯ ಬಳಿಕ ಕಮ್ಯುನಿಸ್ಟ್ ಪಕ್ಷ ಸೇರಿದ ಅಂಬಿಕಾ, ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದಾಗ ಭೂಗತರಾಗಿದ್ದರು. 1952, 1957ರಲ್ಲಿ ಅವರು ಕಮ್ಯುನಿಸ್ಟ್ ಪಕ್ಷದ ಶಾಸಕರಾಗಿ ಬಂಗಾಳದ ಶಾಸನ ಸಭೆಗೆ ಆಯ್ಕೆಯಾಗಿದ್ದರು. 1962ರಲ್ಲಿ ಅವರು ಕಾರು ಅಪಘಾತದಲ್ಲಿ ಮರಣ ಹೊಂದಿದರು.

***

ಅವರ ಬಗ್ಗೆ ತಿಪ್ಪರಲಾಗ ಹಾಕಿ ಹುಡುಕಿದರೂ ಇಷ್ಟು ಕನಿಷ್ಠ ವಿವರ ಬಿಟ್ಟರೆ ಹೆಚ್ಚಿನ ಮಾಹಿತಿ ಕಮ್ಯುನಿಸ್ಟ್ ಪಕ್ಷದ ತಾಣದಲ್ಲೂ ಲಭ್ಯ ಇಲ್ಲ!!

ಅವರ ಕ್ರಾಂತಿಕಾರಿ ಚಟುವಟಿಕೆಗಳ ಧೀರೋದಾತ್ತ ವಿವರಗಳು ದೊರಕುವುದು ಕಲ್ಪನಾ ದತ್ತ ಅವರು ಬರೆದ ಸ್ಮತಿಯಲ್ಲಷ್ಟೇ.

ತನ್ನದೇ ಸೈದ್ಧಾಂತಿಕ ಧಾರೆಯ ಕ್ರಾಂತಿಕಾರಿ ತದನಂತರ ಶಾಸಕ.. ಇಂಥಾ ಅಪೂರ್ವ ವ್ಯಕ್ತಿ ಬಗ್ಗೆ ಕಮ್ಯುನಿಸ್ಟ್ ಪಕ್ಷದಲ್ಲೂ ವಿಸ್ತೃತವಾದ ಮಾಹಿತಿ ಇಲ್ಲ!! ಅಂದಹಾಗೆ ಇದರೊಂದಿಗೆ ಅಂಬಿಕಾ ಚಕ್ರವರ್ತಿ ಅವರ ಒಂದು ರೇಖಾ ಚಿತ್ರ ಇದೆ. ಕಲ್ಪನಾ ದತ್ ಅವರ ಕೃತಿಯಲ್ಲಿ ಈ ಚಿತ್ರದೊಂದಿಗೆ ಪುಟ್ಟ ಉಲ್ಲೇಖ ಇದೆ. ಈ ಚಿತ್ರವನ್ನು ರಮೇಶ್ ಚಟರ್ಜಿ ಎಂಬ ಅಂಡಮಾನ್‌ನ ಜೈಲು ಸಂಗಾತಿ, ಕ್ರಾಂತಿಕಾರಿ ರಮೇಶ್ ಚಟರ್ಜಿ ಬರೆದಿದ್ದಾರೆ ಎಂಬ ಉಲ್ಲೇಖ ಇದೆ.

ಈ ರಮೇಶ್ ಚಟರ್ಜಿ ಅವರ ಬಗ್ಗೆಯೂ ಮಾಹಿತಿ ನನಗೆ ದೊರಕಲಿಲ್ಲ.

ಎಂಥಾ ಚಿತ್ರಕಲಾಕಾರ! ಎಂಥಾ ಪ್ರತಿಭೆ!

***

ಅಂಬಿಕಾ ಚಕ್ರವರ್ತಿಯವರ ಹೋರಾಟದ ಕೆಚ್ಚಿನ ವಿವರ ಕಲ್ಪನಾ ದತ್ ಅವರು ಬರೆದ ಸ್ಮತಿಯಲ್ಲಿ ದೊರಕುತ್ತದೆ. ತನ್ನ ಸಂಗಾತಿಗಳ ಬಗ್ಗೆ ಕಲ್ಪನಾ ಬರೆದ ವ್ಯಕ್ತಿ ಚಿತ್ರಗಳು ಅಪೂರ್ವ ದಾಖಲೆ. ಆಕೆ ಅಂಬಿಕಾ ಚಕ್ರವರ್ತಿಯವರ ಬಗ್ಗೆ ಬರೆದ ಭಾಗದ ಸಂಗ್ರಹಾನುವಾದ ಇಲ್ಲಿದೆ:

ಚಿತ್ತಗಾಂಗ್ ಶಸ್ತ್ರಾಸ್ತ್ರ ಕೋಠಿ ಮೇಲೆ ದಾಳಿ ನಡೆಸಿದ ಹಲವಾರು ನಾಯಕರನ್ನು ಆರಂಭದಲ್ಲಿ ನಾನು ನೋಡಿಯೇ ಇರಲಿಲ್ಲ. ಅಂಬಿಕಾ ಚಕ್ರವರ್ತಿ ಅವರಲ್ಲೊಬ್ಬರು. ಆಮೇಲೆ ಕಂಡಾಗ ಅವರು ಉದ್ದ ಗಡ್ಡ ಬಿಟ್ಟಿದ್ದರು.

ಅಂಬಿಕಾ ದಾ ಬಗ್ಗೆ ಸೂರ್ಯ ಸೆನ್ ಅವರು, ‘‘ನಮ್ಮ ನಡುವಿನ ಉಕ್ಕಿನ ಕ್ರಾಂತಿಕಾರಿ ಅವರು. ಕಿಂಚಿತ್ತೂ ಉದಾಸೀನ ಮಾಡಲ್ಲ, ಭಾವಾವೇಶ ತೋರಲ್ಲ’’ ಎಂದಿದ್ದರು. ಅವರ ಸಾಹಸದ ಬಗ್ಗೆ ಕತೆಗಳೇ ಇದ್ದವು.

1924- 26ರ ನಡುವೆ, ಸೂರ್ಯ ಸೆನ್, ಅಂಬಿಕಾ ದಾ ಬಾಂಬು ತಯಾರಿಕೆಗಾಗಿ ಮನೆಯೊಂದರಲ್ಲಿ ಕೆಲಸ ಆರಂಭಿಸಿದ್ದರು. ಇವರು ಅಡಗಿದ್ದ ಮನೆಯನ್ನು ಪೊಲೀಸರು ಸುತ್ತುವರಿದು ಗುಂಡಿನ ಮಳೆಗರೆದಾಗ, ಅಂಬಿಕಾ ದಾ ರೈಫಲ್ ಮತ್ತು ಬಾಂಬುಗಳ ಮೂಲಕ ಉತ್ತರಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಓಡುವಾಗ ಪೊಲೀಸರ ಗುಂಡೇಟು ತಿಂದು ಘಾಸಿಗೊಂಡ ಸ್ಥಿತಿಯಲ್ಲೇ ಓಡುವಾಗ ಜಾರಿ ಒಂದು ಕಾಲುವೆಗೆ ಬಿದ್ದಿದ್ದರು. ಅವರಿಗೆ ಬಿದ್ದಿದ್ದ ಗುಂಡೇಟಿಗೆ ಅವರು ಸತ್ತೇ ಹೋಗಿದ್ದಾರೆ ಅಂದುಕೊಂಡಿದ್ದೆವು. ಆಮೇಲೆ ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಂಡರು. ಆದರೆ ತಾನು ಹಾದಿಹೋಕ, ತನ್ನಮೇಲೆ ಪೊಲೀಸ್ ಗುಂಡು ಬಿತ್ತು ಎಂದು ಅವರು ಕೋರ್ಟಲ್ಲಿ ವಾದಿಸಿ ಗೆದ್ದಿದ್ದರು! ಮನೆ ಮೇಲೆ ದಾಳಿಯಾಗುವಾಗ ತಾನು ಬೇರೆಲ್ಲೋ ಇದ್ದೆ ಎಂದು ವಾದಿಸಿದ ಅಂಬಿಕಾ ಪರವಾಗಿ ಗಣ್ಯರೊಬ್ಬರು ಸಾಕ್ಷಿ ನುಡಿದ ಕಾರಣ ಪೊಲೀಸ್ ವಾದ ಬಿದ್ದು ಹೋಯಿತು! ಅಂಬಿಕಾ ಚಕ್ರವರ್ತಿಯವರ ಬಗ್ಗೆ ಸಾರ್ವಜನಿಕರಿಗೆ ಇದ್ದ ಅಭಿಮಾನ ಅಂಥದ್ದು.

ಜಲಾಲಾಬಾದ್‌ನ ಕಾಳಗದಲ್ಲೂ ಅಂಬಿಕಾ ಗಂಭೀರವಾಗಿ ಗಾಯಗೊಂಡಿದ್ದರು. ಅವರ ತಲೆಗೂ ಗುಂಡೇಟು ಬಿದ್ದಿತ್ತು. ಹಾಗೂ ಹೀಗೂ ಮುಗ್ಗರಿಸಿ ನಡೆಯುತ್ತಾ ಅಂಬಿಕಾ ದಾ ತಪ್ಪಿಸಿಕೊಂಡಿದ್ದರು. ಕೆಲವು ವಾರಗಳ ಬಳಿಕ ಪೊಲೀಸರು ಅವರನ್ನು ಪಾಟಿಯಾ ಗ್ರಾಮದಿಂದ ಬಂಧಿಸಿದಾಗ ನಮಗೇ ಅಚ್ಚರಿಯಾಗಿತ್ತು.

ಪೊಲೀಸರು ಅವರು ಇದ್ದ ಮನೆಯನ್ನು ಸುತ್ತುವರಿದಾಗ ಅಂಬಿಕಾ ದಾ ಮೆಲ್ಲಗೆ ತಪ್ಪಿಸಿಕೊಂಡು ಪಕ್ಕದ ಕೆರೆಯಲ್ಲಿ ಕಂಠಮಟ ನೀರಿನಲ್ಲಿ ರಾತ್ರಿ ಇಡೀ ಕಳೆದಿದ್ದರು. ಆಗ ಅವರು ಎಷ್ಟು ಕಾಯಿಲೆ ಬಿದ್ದಿದ್ದರೆಂದರೆ ಅವರಿಗೆ ರಕ್ತ ವಾಂತಿಯಾಗುತ್ತಿತ್ತು. ಅವರಿಗೆ ಕ್ಷಯ ಇರಬಹುದೇನೋ ಎಂಬ ಭಯ ನಮಗೆಲ್ಲಾ ಇತ್ತು. ಆದರೆ ಅಂಬಿಕಾ ದಾ ಮಾತ್ರ ನಮಗೇ ಗದರುತ್ತಿದ್ದರು.

ಅವರ ಪ್ರಕರಣ ವಿಚಾರಣೆಗೆ ಬಂದಾಗ ಅವರಿಗೆ ಗಲ್ಲು ಶಿಕ್ಷೆ ಆಗಬಹುದು ಎಂಬ ಆತಂಕ ನಾವು ವ್ಯಕ್ತಪಡಿಸಿದಾಗ ಸೂರ್ಯ ದಾ, ‘‘ಸಾಧ್ಯವೇ ಇಲ್ಲ, ಅವನು ಅದೆಷ್ಟು ಬಾರಿ ಸಾವಿನಿಂದ ತಪ್ಪಿಸಿಕೊಂಡಿದ್ದಾನೆಂದರೆ ಈ ಬಾರಿಯೂ ಏನಾಗಲ್ಲ’’ ಎಂದಿದ್ದರು.

ಅಂಬಿಕಾಗೆ ಕ್ಷಯ ಇದೆ ಎಂದು ವೈದ್ಯರು ಹೇಳಿದ ಕಾರಣ ವಿಚಾರಣೆ ಮುಂದಕ್ಕೆ ಹೋಯಿತು.

ಚಿತ್ತಗಾಂಗ್ ದಾಳಿ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು. ಆದರೆ ಅಪೀಲ್ ಹೋದಾಗ ವಿಚಿತ್ರ ಪುರಾವೆ ಕಾರಣಕ್ಕೆ ಹೈಕೋರ್ಟ್ ಅವರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತು. ಈ ಹಿಂದೆ ಸರಕಾರ ಅಂಬಿಕಾ ಪೊಲೀಸ್ ಕಾರ್ಯಾಚರಣೆಯಲ್ಲಿ ಸತ್ತಿದ್ದಾರೆ ಎಂದು ಘೋಷಿಸಿತ್ತು. ಸತ್ತವನನ್ನು ಮತ್ತೆ ಗಲ್ಲಿಗೇರಿಸುವುದು ಹೇಗೆ?

ಅಂಬಿಕಾ ಚಕ್ರವರ್ತಿ ಜೀವಾವಧಿ ಶಿಕ್ಷೆಗೊಳಗಾಗಿ ಅಂಡಮಾನ್‌ಗೆ ರವಾನೆಯಾದದ್ದು ಹೀಗೆ.

***

ನಾನು ಹುಡುಕುತ್ತಾ ಹೋದಾಗ ಸಿಕ್ಕಿದ ಬಹುತೇಕ 1920ರ ಬಳಿಕದ ಕ್ರಾಂತಿಕಾರಿಗಳು ಎಡ ಸಿದ್ಧಾಂತಕ್ಕೆ ಒಲಿದಿದ್ದು ಆಕಸ್ಮಿಕ ಅಲ್ಲ. ಧಾರ್ಮಿಕ ರಾಷ್ಟ್ರೀಯತೆ ತರುವ ಅಪಾಯಗಳನ್ನು ಅವರು ಸ್ಪಷ್ಟವಾಗಿ ಕಂಡಿದ್ದರು, ಮನಗಂಡಿದ್ದರು.

ಇಂಥಾ ಕ್ರಾಂತಿಕಾರಿಗಳ ಬಗ್ಗೆ; ಅವರು ಒಪ್ಪಿ ಕೆಲಸ ಮಾಡಿದ ಸಿದ್ಧಾಂತದ ಪಕ್ಷಕ್ಕೇ ಇವರ ಬಗ್ಗೆ ಪೂರ್ಣ ಮಾಹಿತಿ ದಾಖಲಿಸುವ ವ್ಯವಧಾನವೇ ಇರಲಿಲ್ಲವೆಂಬುದನ್ನು ಕಂಡರೆ ವಿಷಾದವಾಗುತ್ತದೆ.

ಇಂಥಾ ಅವಜ್ಞೆ ಇದ್ದರೆ ಆ ನಿರ್ವಾತವನ್ನು ಏನಾದರೂ ತುಂಬಲೇ ಬೇಕಲ್ಲ. ಆರೆಸ್ಸೆಸ್ ತಾನು ವಿರೋಧಿಸುವ ಸಿದ್ಧಾಂತಕ್ಕೊಲಿದ ಕ್ರಾಂತಿಕಾರಿಗಳನ್ನು ನಮ್ಮ ಅರಿವಿನಿಂದ ಮರೆ ಮಾಡುತ್ತಾ ಬಂದದ್ದು ಹೀಗೆ.

ಇವರೆಲ್ಲಾ ಪಠ್ಯಗಳಲ್ಲಿ ಜಾಗ ಪಡೆಯುತ್ತಾರೋ ಗೊತ್ತಿಲ್ಲ. ಯಾಕೆಂದರೆ ಪಠ್ಯಗಳೆಲ್ಲಾ ಸ್ಥೂಲ ಘಟನಾವಳಿಗಳ ಸೂಚಿ ಮಾತ್ರ. ಆದರೆ ಸ್ವಾತಂತ್ರ್ಯದ ಮಹಾನದಿಗೆ ಇಂಥಾ ಕಿರುತೊರೆಗಳೇ ಆಳ ಅಗಲ ನೀಡಿದ್ದಷ್ಟೆ.

ನಮ್ಮ ಆಸಕ್ತಿಯ ಓದಷ್ಟೇ ಈ ನಕ್ಷತ್ರಗಳನ್ನು ಮರಳಿ ಹುಡುಕಿ ತರಲು ಸಾಧ್ಯ.

 

 

ರಮೇಶ್ ಚಟರ್ಜಿ ಎಂಬ ಅಂಡಮಾನ್‌ನ ಜೈಲು ಸಂಗಾತಿ ಬರೆದ ಅಂಬಿಕಾ ಚಕ್ರವರ್ತಿಯವರ ರೇಖಾ ಚಿತ್ರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News