ಯಾದಗಿರಿ ರೈಲು ಮಾರ್ಗದ ಅಂತಿಮ ಸಮೀಕ್ಷೆಗೆ ಆದೇಶ ; ದಶಕಗಳ ಜನರ ಕನಸಿಗೆ ಮತ್ತೆ ಮೂಡಿವೆ ರೆಕ್ಕೆ
ಯಾದಗಿರಿಗೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ವಿಜಯಪುರ, ವಾಡಿ ಮಾರ್ಗವಾಗಿ ಸುಮಾರು 328 ಕಿ.ಮೀ. ದೂರ ಸಂಚರಿಸಬೇಕಾಗಿದೆ. ಆದರೆ ಆಲಮಟ್ಟಿ-ಯಾದಗಿರಿ ನೇರ ರೈಲು ಮಾರ್ಗ ನಿರ್ಮಾಣಗೊಂಡರೆ ದೂರವು 162 ಕಿ.ಮೀ.ಗೆ ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಸಮಯ ಹಾಗೂ ವೆಚ್ಚ ಉಳಿತಾಯವಾಗಲಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ರೂಪುಗೊಂಡು ನಂತರ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಆಲಮಟ್ಟಿ-ಯಾದಗಿರಿ ರೈಲು ಸಂಚಾರ ಮಾರ್ಗದ ಕನಸಿಗೆ ಮತ್ತೆ ಜೀವ ಬಂದಿದೆ. ಸುಮಾರು 162 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಿಸಲು ಅಂತಿಮ ಸ್ಥಳದ ಸರ್ವೇ ನಡೆಸಲು ರೈಲ್ವೆ ಇಲಾಖೆ ಆದೇಶಿಸಿ ಸಮೀಕ್ಷೆಗೆ 4.05 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಖಚಿತಪಡಿಸಿರುವುದು ಯೋಜನೆ ಕಾರ್ಯರೂಪಕ್ಕೆ ಬರುವ ಮುನ್ಸೂಚನೆಯಾಗಿದೆ.
ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಜನರ ದಶಕಗಳ ಬೇಡಿಕೆಗೆ ಸರಕಾರ ಕೊನೆಗೂ ಎಚ್ಚೆತ್ತಿದೆ. ಸುಮಾರು 15 ವರ್ಷಗಳಿಂದ ಈ ರೈಲು ಮಾರ್ಗಕ್ಕಾಗಿ ನಿರಂತರ ಹೋರಾಟಗಳು ನಡೆದಿವೆ. ಕಳೆದ ಡಿಸೆಂಬರ್‌ನಿಂದಲೇ ಆಲಮಟ್ಟಿ, ಹುಣಸಗಿ, ಸುರಪುರ, ಮುದ್ದೇಬಿಹಾಳ ಸೇರಿ ವಿವಿಧ ತಾಲೂಕುಗಳ ರೈಲ್ವೆ ಹೋರಾಟ ಸಮಿತಿಗಳು ರೈಲ್ವೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದವು. ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಮಂಡನೆಯಾದ ಕೇಂದ್ರ ಸರಕಾರದ ಬಜೆಟ್‌ನಲ್ಲಿ ಆಲಮಟ್ಟಿ-ಯಾದಗಿರಿಗೆ ರೈಲು ಸಂಪರ್ಕ ಕಲ್ಪಿಸುವ ಸ್ಪಷ್ಟ ಉಲ್ಲೇಖ ಇರಲಿಲ್ಲ. ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಹಾಗೂ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ರೈಲ್ವೆ ಸಚಿವರನ್ನು ಭೇಟಿಯಾಗಿ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ ಫಲವಾಗಿ ಇದೀಗ ಆಲಮಟ್ಟಿ-ಯಾದಗಿರಿ 162 ಕಿ.ಮೀ ಹಾಗೂ ಭದ್ರಾವತಿ-ಚಿಕ್ಕಜಾಜೂರು 73 ಕಿ.ಮೀ ಉದ್ದದ ಎರಡು ನೂತನ ರೈಲು ಮಾರ್ಗಗಳ ಅಂತಿಮ ಸರ್ವೇ ಕೈಗೊಳ್ಳಲು ಆದೇಶ ನೀಡಲಾಗಿದೆ.
ಯಾದಗಿರಿಗೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ವಿಜಯಪುರ, ವಾಡಿ ಮಾರ್ಗವಾಗಿ ಸುಮಾರು 328 ಕಿ.ಮೀ ದೂರ ಸಂಚರಿಸಬೇಕಾಗಿದೆ. ಆದರೆ ಆಲಮಟ್ಟಿ-ಯಾದಗಿರಿ ನೇರ ರೈಲು ಮಾರ್ಗ ನಿರ್ಮಾಣಗೊಂಡರೆ ದೂರವು 162 ಕಿ.ಮೀಗೆ ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರಿಗೆ ಸಮಯ ಹಾಗೂ ವೆಚ್ಚ ಉಳಿತಾಯವಾಗಲಿದೆ.
ಕೃಷಿ ಮತ್ತು ಕೈಗಾರಿಕೆ, ಸೇವೆ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದಲೂ ಈ ರೈಲು ಮಾರ್ಗ ವಿಜಯಪುರ-ಯಾದಗಿರಿ ಜನರಿಗೆ ಮಹತ್ವದ್ದಾಗಿದೆ. ಇಲ್ಲಿ ಕೃಷಿ ಉತ್ಪನ್ನಗಳ ಸಾಗಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ರೈಲು ಸಂಪರ್ಕ ದೊರೆತರೆ ಸರಕು ಸಾಗಣೆ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನಡೆಯಲಿದೆ. ಒಳನಾಡು ಮೀನುಗಾರಿಕೆಯಲ್ಲಿ ಕರ್ನಾಟಕದ ಪ್ರಮುಖ ಜಿಲ್ಲೆಗಳಾಗಿ ಯಾದಗಿರಿ ಮತ್ತು ವಿಜಯಪುರ ಗುರುತಿಸಿಕೊಂಡಿದ್ದು, ಮೀನು ಸಾಗಣೆಗೂ ಅನುಕೂಲವಾಗಲಿದೆ. ಜೊತೆಗೆ ಆಲಮಟ್ಟಿ ಜಲಾಶಯ ಆಧಾರಿತ ಪ್ರವಾಸೋದ್ಯಮಕ್ಕೂ ಈ ರೈಲು ಮಾರ್ಗ ಉತ್ತೇಜನ ನೀಡಲಿದೆ ಎಂಬುದು ಜನರ ಆಶಾಭಾವವಾಗಿದೆ.
ತೆವಳುತ್ತ ಸಾಗಿದ ಯೋಜನೆ:
ಆಲಮಟ್ಟಿ-ಯಾದಗಿರಿ ರೈಲು ಯೋಜನೆಗೆ ದೀರ್ಘ ಇತಿಹಾಸವಿದೆ. 1933ರಲ್ಲಿ ‘ದಿ ಗೈಡ್ ರೈಲ್ ರೋಡ್ ಫೀಡರ್ ಲೈನ್ಸ್ ಕಂಪನಿ’ಯ ವ್ಯವಸ್ಥಾಪಕ ನಿರ್ದೇಶಕ ಸಿ. ಸ್ಕೆಲ್ಚನ್ ಈ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿ ವಿಶೇಷ ಮಂಡಳಿ ರಚಿಸಿದ್ದರು. ಜತೆಗೆ ಷೇರು ಹಣ ಸಂಗ್ರಹಿಸಿ ರೈಲ್ವೆ ಬೋರ್ಡ್‌ಗೆ ಜಮಾ ಮಾಡಲಾಗಿತ್ತು. ಕಾಮಗಾರಿಗೆ 56,664 ರೂ. ಯೋಜನಾ ವೆಚ್ಚ ನಿಗದಿಪಡಿಸಲಾಗಿತ್ತು. ಆಲಮಟ್ಟಿಯಿಂದ ಒಂದು ಕಿ.ಮೀ ದೂರದಲ್ಲಿರುವ ಜಾಲಾಪುರ ಹಳ್ಳಕ್ಕೆ (ದೇವಲಾಪುರ) ಸೇತುವೆಯನ್ನೂ ನಿರ್ಮಿಸಲಾಗಿತ್ತು. ಆಲಮಟ್ಟಿ ಜಲಾಶಯದ ಹಿನ್ನೀರು ಕಡಿಮೆಯಾದಾಗ ಆ ಸೇತುವೆಯ ಮೇಲ್ಭಾಗ ಗೋಚರಿಸುವುದು ಈ ಯೋಜನೆಯ ಅಪೂರ್ಣವಾಗಿರುವುದಕ್ಕೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಿದ ಸಂದರ್ಭದಲ್ಲಿ ಸ್ಕೆಲ್ಚನ್ ಸ್ವದೇಶಕ್ಕೆ ಮರಳಿದ ನಂತರ ಈ ಕಾಮಗಾರಿಗೆ ತಿಲಾಂಜಲಿ ಬಿದ್ದಿದೆ ಎಂಬುದು ಪ್ರಜ್ಞಾವಂತರ ಮಾತಾಗಿದೆ.
ದಶಕಗಳ ನಂತರ ಇದೀಗ ಅಂತಿಮ ಸರ್ವೇ ಕೈಗೊಳ್ಳಲು ಆದೇಶ ನೀಡಿದ್ದಕ್ಕೆ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ವಿವರವಾದ ಯೋಜನಾ ವರದಿ ಸಿದ್ಧವಾಗಿ ಅನುದಾನ ಮಂಜೂರಾಗಿ ಕಾಮಗಾರಿ ಆರಂಭವಾಗುವವರೆಗೆ ಹೋರಾಟ ನಿಲ್ಲಬಾರದು ಎಂಬ ತೀರ್ಮಾನ ಹೋರಾಟಗಾರರದು. ಪಕ್ಷಬೇಧ ಮರೆತು ಎಲ್ಲ ಜನಪ್ರತಿನಿಧಿಗಳು, ಹೋರಾಟಗಾರರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಒತ್ತಡ ಹೇರಿದರೆ ರೈಲು ಮಾರ್ಗದ ಕನಸು ಸಾಕಾರವಾಗಲಿದೆ ಎಂಬ ವಿಶ್ವಾಸ ಈ ಭಾಗದ ಜನರಲ್ಲಿ ಗಟ್ಟಿಯಾಗುತ್ತಿದೆ.