×
Ad

ಕಲ್ಯಾಣ ಕರ್ನಾಟಕ ದಲಿತ-ಬಂಡಾಯ ಸಾಹಿತ್ಯ: ಟಿಪ್ಪಣಿ

ಸಿದ್ದಲಿಂಗಯ್ಯ, ದೇವನೂರ ಮಹಾದೇವ, ವಿ.ಮುನಿವೆಂಕಟಪ್ಪ, ಮೊದಲಾದವರು ದಲಿತ ಸಾಹಿತ್ಯಕ್ಕೆ ಸಂವೇದನೆಯೊಂದಿಗೆ ಕಾವ್ಯ, ಕಥೆ, ಕಾದಂಬರಿಯನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹುಟ್ಟಿದ ಬಂಡಾಯ ಸಾಹಿತ್ಯದೊಂದಿಗೆ ದಲಿತ ಸಾಹಿತ್ಯ ಒಂದಾಗಿ ಹೋಯಿತು. ಒಂದೇ ನಾಣ್ಯದ ಎರಡು ಮುಖಗಳಾಗಿ ಹೊರಬಂದು ಸಮಾಜಮುಖಿ ಚಿಂತನೆಯಲ್ಲಿ ತೊಡಗಿತು. ದಲಿತ ಸಂವೇದನೆ, ಮಹಿಳಾ ಸಂವೇದನೆ, ಮುಸ್ಲಿಮ್ ಸಂವೇದನೆ, ಗ್ರಾಮೀಣ ಸಂವೇದನೆ ಇಲ್ಲಿ ಏಕಕಾಲಕ್ಕೆ ರಚನೆಗೊಂಡಿತು. ಇದರಿಂದಾಗಿ ಇದುವರೆಗೂ ಯಾರು ಮುಖ್ಯ ವಾಹಿನಿಗೆ ಬರಲಿಲ್ಲವೋ ಅವರೆಲ್ಲರೂ ಏಕಕಾಲಕ್ಕೆ ಮುಖ್ಯ ವಾಹಿನಿಗೆ ಬಂದಿದ್ದು, ದಲಿತ -ಬಂಡಾಯ ಸಾಹಿತ್ಯದ ವೈಶಿಷ್ಟ್ಯವಾಗಿದೆ.

Update: 2025-12-24 11:12 IST

ಕಲ್ಯಾಣ ಕರ್ನಾಟಕ ಪ್ರದೇಶ ಹತ್ತು ಹಲವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ನಾಂದಿ ಹಾಡಿದೆ. ಇಲ್ಲಿಯ ದಲಿತ ಮತ್ತು ಬಂಡಾಯ ಸಾಹಿತ್ಯಕ್ಕೆ ಒಂದು ಹೊಸ ಮಾರ್ಗ ಸೂಚಿಸಿದೆ. ಅದಕ್ಕೆ ಶ್ರೀವಿಜಯನ ಕವಿರಾಜಮಾರ್ಗ, ಶರಣರ ವಚನಗಳು, ದಾಸರ ಕೀರ್ತನೆಗಳು, ತತ್ವಪದಕಾರರ ಮತ್ತು ಸೂಫಿಗಳ ಅನುಭವ ಸಾಹಿತ್ಯ ಸೇರಿ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ದಲಿತ-ಬಂಡಾಯದ ಆಶಯಗಳು ಬೇರೂರಿರುವುದು ಕಾರಣ. ಹೈದರಾಬಾದ್ ಸಂಸ್ಥಾನದ ನಿಜಾಮನ ಆಳ್ವಿಕೆಯಿಂದ ಕನ್ನಡ ಭಾಷೆ ಮುಗಿಲ ಮಲ್ಲಿಗೆಯಾಗಿತ್ತು. ಉರ್ದು, ಮೋಡಿ, ಹಿಂದಿ, ಇಂಗ್ಲಿಷ್ ಭಾಷೆ ಜೊತೆಗೆ ಮರಾಠಿ ತೆಲುಗು ಮಿಶ್ರಣದೊಂದಿಗೆ ಉರ್ದು ಪ್ರಾಬಲ್ಯ ಹೊಂದಿತು. ಇಂತಹ ನೆಲದಲ್ಲಿ ನವೋದಯ, ಪ್ರಗತಿಶೀಲ, ನವ್ಯ ಕಾಲಘಟ್ಟದಲ್ಲಿ ಸಾಹಿತ್ಯ ರಚನೆ ಮಾಡಿದ್ದು ಒಂದು ಪವಾಡವೆಂದು ಕರೆಯಬೇಕು.

1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರು ಆಯ್ಕೆಯಾಗಿದ್ದರು. ಆ ಹೊತ್ತಿಗೆ ದಲಿತ ಗೋಷ್ಠಿಯನ್ನು ಆಯೀಜಿಸಬೇಕೆಂದು ರಾಯಚೂರಿನಿಂದ ಡಾ.ಚನ್ನಣ್ಣ ವಾಲಿಕಾರ, ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ ಒತ್ತಾಯಿಸಿದರು. ಆಗ ‘ಕನ್ನಡ ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎನ್ನುವುದು ಇಲ್ಲ’ ಎಂಬ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಹೇಳಿಕೆ ಎಲ್ಲರನ್ನೂ ಕೆರಳಿಸಿತು. ಆಗ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಸಮ್ಮೇಳನದ ದಿನವೇ ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ನೆಡಸಲಾಯಿತು. ಆ ಸಂದರ್ಭದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಲು ಪ್ರಾರಂಭವಾಯಿತು. ಡಾ.ಚನ್ನಣ್ಣ ವಾಲಿಕಾರ ಅವರ ಈ ಕಾರ್ಯ ಮುಂದೆ ಪ್ರೊ.ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಅಲ್ಲಮಪ್ರಭು ಬೆಟ್ಟದೂರು, ಅಗ್ರಹಾರ ಕೃಷ್ಣಮೂರ್ತಿ, ಡಿ.ಆರ್.ನಾಗರಾಜ್ ಮೊದಲಾದ ಸಾಹಿತಿಗಳು, ಪ್ರಗತಿಪರ ಲೇಖಕರು, ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದೆ ಏಕಕಾಲಕ್ಕೆ ಬಂಡಾಯ ಸಾಹಿತ್ಯ ಮತ್ತು ಚಳವಳಿಗೆ ನಾಂದಿ ಹಾಡಿದರು.

ಡಿ.ಆರ್.ನಾಗರಾಜ ಅವರು ಖಡ್ಗವಾಗಲಿ ಕಾವ್ಯ ಎಂದರೆ, ಕಾಳೇಗೌಡ ನಾಗವಾರ ಅವರು ಜನರ ನೋವಿಗೆ ಮಿಡಿಯುವ ಪ್ರಾಣ ಮಿತ್ರ ಎಂದು ಸೇರಿಸಿದರು. ಆಗ ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಘೋಷ ವಾಕ್ಯದೊಂದಿಗೆ ಬಂಡಾಯ ಸಾಹಿತ್ಯ ಸಂಘಟನೆ ರೂಪುಗೊಂಡು ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿತು.

ಆಗಾಗಲೇ 1973ರಲ್ಲಿ ಬಿ.ಬಸಲಿಂಗಪ್ಪ ಅವರ ಕನ್ನಡ ಸಾಹಿತ್ಯದಲ್ಲಿ ಬೂಸಾ ಪ್ರಕರಣ ಮುನ್ನೆಲೆಗೆ ಬಂದಿತ್ತು. ಅಂದಿಗೆ ಕರ್ನಾಟಕದ ಎಲ್ಲ ದಲಿತ ಸಾಹಿತ್ಯ ಮುನ್ನೆಲೆಗೆ ಬರಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಪ್ರೇರಣೆಯಾದವು. ಆ ಹೊತ್ತಿಗಾಗಲೇ ಬೀದರದಲ್ಲಿ ಶೇರ್-ಎ-ದಖ್ಖನ್ ಎಂಬ ಬಿರುದನ್ನು ಪಡೆದ ಬಿ.ಶಾಮಸುಂದರ ಭೀಮಸೇನೆ ಪ್ರಚಾರದಲ್ಲಿತ್ತು. ಕರ್ನಾಟಕದ ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ ಜನ್ಮ ಪಡೆಯಿತು. ಪ್ರೊ.ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತ ಲೇಖಕರ ಬಳಗ, ದಲಿತ ಕಲಾವಿದರ ಒಕ್ಕೂಟ, ದಲಿತ ವಿದ್ಯಾರ್ಥಿ ಒಕ್ಕೂಟಗಳು ರಚನೆಯಾದವು.

ಆಗ ಉತ್ತರ ಕರ್ನಾಟಕದಲ್ಲಿ ದೇವರಾಯ ಇಂಗಳೆ, ಕುಮಾರ ಕಕ್ಕಯ್ಯ ಪೋಳ, ಮೈಸೂರು-ಬೆಂಗಳೂರು ಕಡೆಗೆ ಸೊಸಲೇ ಸಿದ್ದಪ್ಪ, ಡಿ.ಗೋವಿಂದದಾಸ, ಜಿ.ವೆಂಕಟಯ್ಯ, ಎನ್.ನರಸಿಂಹಯ್ಯ, ಸಾಹಿತ್ಯ ರಚನೆಗೆ ತೊಡಗಿದರೆ ಬೀದರದಲ್ಲಿ ಬಿ. ಶಾಮಸುಂದರ, ತ್ರಿಪುರಾಂತಿ ಮಾಸ್ಟರ್, ಪಂಚಶೀಲ ಗವಾಯಿಗಳು ದಲಿತ ಸಾಹಿತ್ಯದ ಮೊದಲ ತಲೆಮಾರಿನ ಲೇಖಕರಾಗಿ ಪ್ರಚಾರ-ಪ್ರಸಾರ ಕಾರ್ಯವನ್ನು ಕೈಗೊಂಡರು.

ಬೀದರದ ಹಿಲಾಲಪುರದ ಪಂಚಶೀಲ ಗವಾಯಿಗಳು ಹುಟ್ಟುಗುರುಡಾರಾದರೂ ಅವರ ಅಂತರಂಗದ ಜ್ಞಾನ ಶಕ್ತಿಯಿಂದ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಹಾಡಿನ ಮೂಲಕ ಬೀದರ ಮತ್ತು ಕಲಬುರಗಿ ಭಾಗದಲ್ಲಿ ಜನಮಾನಸಕ್ಕೆ ತಲುಪಿಸಿದರು. ಬುದ್ಧ ವಚನಾಮೃತ, ಬುದ್ಧ- ಬಸವ-ಅಂಬೇಡ್ಕರ್, ತತ್ವಜ್ಞಾನ ಅವರ ಎರಡು ಕೃತಿಗಳು.

ವಿ.ಶಾಮಸುಂದರ ಹಾಗೂ ಗವಾಯಿಯವರು ದೇವರು, ಧರ್ಮವನ್ನು ನಿರಾಕರಿಸಿ ಆ ಮೂಲಕ ತತ್ವಪದ, ಭಜನೆ ಪದ, ಕ್ರಾಂತಿ ಗೀತೆಗಳನ್ನು ರಚನೆ ಮಾಡುವ ಮೂಲಕ ಜನರಲ್ಲಿ ಹೊಸ ಸಂವೇದನೆಗಳನ್ನು ಬಿತ್ತಿದರು. ಮಾಣಿಕರಾವ್ ಜ್ಯೋತಿ ಅವರು ಭಜನೆ, ತತ್ವಪದ, ನಾಟಕದ ಮೂಲಕ ದಲಿತ ಆಶಯಗಳಿಗೆ ಉತ್ತೇಜನ ನೀಡಿದರು. ಚಂದ್ರಪ್ಪ ಹೆಬ್ಬಾಳಕರ್ ಕಾವ್ಯ, ವಚನ, ಜಾನಪದ, ಚಿಂತನ, ಲೇಖನ ಸಂಕಲನ ಹೊರತಂದರು. ಎಸ್.ಎಂ.ಜನವಾಡಕರ ಕಾವ್ಯ, ಕಥೆ, ನಾಟಕ, ಕಾದಂಬರಿ, ಜಾನಪದ, ಬೌದ್ಧ ಸಾಹಿತ್ಯ, ಪ್ರವಾಸ ಕಥೆ,ತಥಾಗತ ಗಾಥೆಗಳ ಮಹಾ ಕಾವ್ಯ, ಈಶ್ವರರಾವ್ ಕರುಣಾಸಾಗರ ಅವರು ಧಮ್ಮ ಸಂದೇಶ ಗೀತೆಗಳು, ಪ್ರಭುಶೆಟ್ಟಿ ಸೈನಿಕಾರರ ಪ್ರೇಮ ಜ್ಯೋತಿ, ಚಿಂತನ ಜ್ಯೋತಿ ಕಾವ್ಯ ಸಂಕಲನ, ಮಲ್ಲಿಕಾರ್ಜುನ ಆಮ್ಣೆಯವರು ಕೆಂಪು ಸೂರ್ಯ ಮತ್ತು ಇತರ ಕವನಗಳು, ನಾನು-ನೀನು, ಮೂರು ಸಮಾಂತರ ನಾಟಕ ಪ್ರವಾಸ ಸಾಹಿತ್ಯದ ಮೂಲಕ ಹೆಸರಾದವರು. ಬಸವರಾಜ ಮಯೂರ, ಮನ್ಮಥ ಡೋಳೆ, ಮಚ್ಛೇಂದ್ರ ಅಣಕಲ್‌ರ ಕಾವ್ಯ, ಕಥೆ ಭರವಸೆ ಮೂಡಿಸುತ್ತವೆ.

ಪ್ರಖರ ಕಾವ್ಯ, ಶಾಹಿರಿ, ಗಜಲ್‌ಗಳಲ್ಲಿ ಸಮಾಜಮುಖಿ ಚಿಂತನೆಗಳಲ್ಲಿ ಭೀಮಸೇನ ಗಾಯಕ ವಾಡ, ಶಿವರಾಜ ಮೇತ್ರೆ, ಬಸವರಾಜ ದಯಾಸಾಗರ, ಸೂರ್ಯಕಾಂತ ಸಸಾನೆ, ಗೌತಮ ಬಕ್ಕಪ್ಪ, ಚಂದ್ರಕಾಂತ ಪೋಸ್ತೆ, ಸತೀಶಕುಮಾರ ಹೊಸಮನಿ ಈಶ್ವರ ತಡೋಳಾ, ಎಂ.ಆರ್.ಶ್ರೀಕಾಮನತ, ಶಿರೋಮಣಿ ತಾರೆ, ದಯಾಮಣಿ ರಾಜಪಗಪ, ನಿನ್ನೇಕರ್, ಗಂಧರ್ವಸೇನ, ಶಂಭುಲಿಂಗ ವಾಲ್ದೊಡ್ಡಿ, ನಾಗೇಂದ್ರ ಗಾಯಕವಾಡ, ಅಶೋಕ ಎಂಬಿ.ಸುಮನ್, ಪೀರಪ್ಪ ಸಜ್ಜನ, ಮಾಯಾದೇವಿ ಗೋಖಲೆ, ಎಂ.ಎಸ್.ಮನೋಹರ, ಅಜಿತ್ ನೇಳಗೆ ಪ್ರಮುಖರು.

ಯಾದಗಿರಿ ಜಿಲ್ಲೆಯಲ್ಲಿ ಕುಪೇಂದ್ರ ವಟಾರ, ಗಾಳೆಪ್ಪ ಪೂಜಾರಿ ಇದೊಂದು ಬದುಕು, ರಕ್ತ ಹೀರುವ ರಕ್ಕಸರು, ಲಿಂಗಪ್ಪ ಗೊನಾಲ, ಸಿದ್ದಪ್ಪ ಮುಷ್ಟೂರು ಇವರು ಬಹುಮುಖಿ ನೆಲೆಯ ಶೋಷಣೆ ಹಿಡಿದಿಟ್ಟವರು. ಬಸವರಾಜ ಕಲೆಗಾರ ಚಿತ್ರ- ಕಾವ್ಯದ ಮೂಲಕ ದಲಿತ ಸಂವೇದನೆ ಹೊರ ಹಾಕಿದ್ದಾರೆ. ಮರಿಯಪ್ಪ ನಾಟಿಕಾರ ಈಶ್ವರ ಕಟ್ಟೀಮನಿ ಅವರು ತಮ್ಮ ಸಮುದಾಯದ ಭಾವನೆ ಹೊರ ಹಾಕಿದ್ದಾರೆ. ಅಶೋಕಕುಮಾರ ಮಟ್ಟಿ, ಉಮಾದೇವಿ ಮಟ್ಟಿ, ಮರೆಪ್ಪ ಇಟಗಿ, ಭೀಮರಾಯ ಲಿಂಗೇರಿ, ನಿಂಗಣ್ಣ ಕುರಕುಮದಿ,ಶಂಕರವ ಕಾವಲಿ ಮೊದಲಾದವರ ಬರಹಗಳು ಪ್ರಖರವಾಗಿವೆ.

ಕಲಬುರಗಿ ಜಿಲ್ಲೆಯ ದಲಿತ ಸಾಹಿತ್ಯ ಹರವು ವಿ.ಆರ್.ಚಾಂಬಾಳರ ಮೂಲಕ ಆರಂಭವಾಗಿದೆ. ಭೀಮಗೀತೆ, ಭೀಮನ ಹೆಸರಿನಿಂದಲೇ ಎಲ್ಲಾ ಕಾವ್ಯ ಸಂಕಲನ ಬಂದಿವೆ. ಡಾ.ಹನುಮಂತರಾವ ದೊಡ್ಡಮನಿಯವರ ನೊಂದವರ ಹಾಡು, ಆಕ್ರೋಶ, ಪಂಚಾಯತಿ, ಸೊಲ್ಲೆತ್ತಿ ಹಾಡೇನ ಹಲವು ಕಾವ್ಯ ಜನಪರವಾಗಿವೆ. ಟಿ.ಎಂ.ಭಾಸ್ಕರ್ ಅವರ ಹೊಸದಾರಿ, ಮಾತಾಡುವ ಎಲಬುಗಳು, ನೀರ ಮೇಲಿನ ಗುಳ್ಳೆ, ಅಲಗಲದೇ ಬುದ್ಧ ಭಾರತ ಮಹಾ ಕಾವ್ಯ, ಬುದ್ಧ ಮತ್ತು ಬಡವರ ನೋವಿಗೆ ಮಿಡಿಯುವ ಕಾವ್ಯವಾಗಿದೆ. ಎಸ್.ಪಿ.ಸುಳ್ಳದ್ ಅವರ ರೊಚ್ಚು, ಗರ್ದಿಗಮ್ಮತ್, ನೊಂದವರ ಹಾಡು ಕಾವ್ಯಗಳು ಆವೇಶ ಭರಿತ ಸೂಕ್ಷ್ಮಸಂವೇದನೆ ಹೊಂದಿವೆ. ಮಲ್ಲಿಕಾರ್ಜುನ ಕೋಟೆ, ಪ್ರಭುಲಿಂಗ ನಿಲೂರೆ, ಸಿದ್ದಣ್ಣ ಕನ್ನಡಗಿ, ಕೆ.ಎಸ್.ಬಂಧು, ಎಚ್.ಎಸ್ಬೇನಾಳ, ಸಂತೋಷಕುಮಾರ ಕರಹರಿ, ರಾಜಕುಮಾರ ಮಾಂಗ, ಮುಂತಾದ ಕವಿಗಳು. ಪ್ರೊ.ಎಚ್.ಟಿ.ಪೋತೆ ಅವರ ಕಥನ ಸಾಹಿತ್ಯಕ್ಕೆ ಆರು ಕಥಾಸಂಕಲನ ಐವತ್ತು ಕಥೆಗಳು, ಮೂರು ಕಾದಂಬರಿಗಳು ದಲಿತ ಮೂರು ತಲೆ ಮಾರು ಕಥೆಯಾದರೆ, ಬುದ್ಧನ ತತ್ವ ಆಧಾರಿತ, ಅಂಬೇಡ್ಕರ್ ಕುರಿತು ಮಹಾಯಾನ ವಿಭಿನ್ನ ನೆಲೆಯ ಕಾದಂಬರಿಗಳು ವೈಚಾರಿಕ, ಪ್ರವಾಸ,ಚಿಂತನ, ಮೊದಲಾದ ಪ್ರಕಾರದ ಬರಹಗಳು ದಿಕ್ಸೂಚಿಯಾಗಿವೆ.

ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯದಲ್ಲಿ ಬೋಳ ಬಂಡೆಪ್ಪ ಚಳವಳಿ ಸಾಹಿತ್ಯ ರಚಿಸಿದರು. ದಲಿತ ದೌರ್ಜನ್ಯ ವಿರುದ್ಧ ಹೋರಾಟಗಾರ ಸೋಮಯ್ಯ ವಲ್ಲಭ, ಏಡಿಗಳು ಕಾದಂಬರಿ, ಪಾರಿವಾಳ ಕಾವ್ಯ, ಆಂಜನೇಯ ಜಾಲಿಬೆಂಚಿ ಕೆಂಪು ರೆಕ್ಕೆಯ ಹಕ್ಕಿ, ಕಥೆ, ಹಾಯಿಕು, ವೀರ ಹನುಮಾನರ ಕಥೆ, ಹಾಯಿಕು, ಕಾವಯ, ಹಲವು ಪ್ರಕಾರದ ವೈಶಿಷ್ಟ್ಯ ಕೃತಿ ರಚಿಸಿದವರು.

ಬಾಬು ಭಂಡಾರಿಗಲ್ ಅವರ ಕಾವ್ಯ, ವೈಚಾರಿಕ ಲೇಖನಗಳ ಸಂಕಲನ ಇಲ್ಲಿನ ಚರಿತ್ರೆ ಬಿಚ್ಚಿಡುತ್ತವೆ. ವೇಣು ಜಾಲಿಬೆಂಚಿ, ಈರಣ್ಣ ಕೋಸಗಿ ಅವರ ಕಾವ್ಯ, ಕಾದಂಬರಿ ದಮನಿತರ ಸಮುದಾಯದ ಮೇಲೆ ಮಾನವೀಯ ಮೌಲ್ಯಗಳನ್ನು ಹೊಂದಿದೆ. ತಾಯ ರಾಜ ಮರ್ಚಟನಾಳ, ಲಕ್ಷ್ಮಿರೆಡ್ಡಿ, ಮಲ್ಲೇಶ ಭೈರವ್, ರಮೇಶ ಆರೋಲಿ ಭರವಸೆಯ ಲೇಖಕರು. ಅಮರೇಶ ಬಲ್ಲಿದವ, ರಾಮಣ್ಣ ಆರ್ಹೆಜ್ಜೆ, ಜೆ.ಎಲ್.ಈರಣ್ಣ, ವೆಂಕಟೇಶ ಬೇವಿನ ಬೆಂಚಿ, ಶರಣಪ್ಪ ಚಲವಾದಿ, ಸುರೇಶ ಬಾಬು, ಮಲ್ಲಯ್ಯ ಮೊದಲಾದವರು. ಆರ್.ಮಾಸಯ್ಯ,ಸಿ.ದಾನಪ್ಪ ಇಬ್ಬರು ಹೋರಾಟ ಮನೋಭಾವ ಹೊಂದಿದ ಅಂತಃಸತ್ವ ಕವಿ, ಚಳವಳಿಗಾರರು. ಈ ರೀತಿಯಲ್ಲಿ ದಲಿತ ಚಳವಳಿ ಸಾಹಿತ್ಯ ಮೂಲಕ ಕಾವ್ಯ, ಗಜಲ್, ಹಾಯಿಕು, ತಾಂಕಾ,ಆಧುನಿಕ ವಚನ, ಕಥೆ, ಕಾದಂಬರಿ, ಅನುವಾದ, ವಚನ, ಜಾನಪದ, ರಂಗ, ವೈಚಾರಿಕ, ಆತ್ಮಕಥನ, ನಾಟಕ, ಪ್ರಬಂಧ, ಸಂಶೋಧನೆ, ಸಂಪಾದನೆ ಮೊದಲಾದ ಕ್ಷೇತ್ರದಲ್ಲಿ ಕೃಷಿಮಾಡಿದ್ದಾರೆ.

ಡಾ. ಚನ್ನಣ್ಣ ವಾಲಿಕಾರ ಅವರು ಇಲ್ಲಿ ಬಂಡಾಯ ಸಾಹಿತ್ಯ ಹುಟ್ಟಲು ಕಾರಣರಾಗಿದ್ದಾರೆ. ಇಲ್ಲಿಯ ಕಾವ್ಯ, ಕಥೆ, ಕಾದಂಬರಿ, ವಚನ, ಪ್ರವಾಸ, ಜಾನಪದ, ಸಂಶೋಧನೆ, ದೇವದಾಸಿ ಪದ್ಧತಿ ಸೇರಿ ಹೀಗೆ ಹಲವಾರು ಸಾಹಿತ್ಯದ ಪ್ರಕಾರಗಳಲ್ಲಿ ಕೃಷಿ ಮಾಡಿದಂತೆ ಮಹಾಕಾವ್ಯವನ್ನೂ ರಚಿಸಿದ್ದಾರೆ. ಅವರ ಕಾವ್ಯದ ಶೈಲಿ ಹರಿತವಾಗಿದ್ದು, ‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನರಿಗಾದ ಎದೆಯ ಬ್ಯಾನಿ’ ಎನ್ನುವ ಕಾವ್ಯದ ಮೂಲಕ ದಲಿತಪ್ರಜ್ಞೆ, ಬಂಡಾಯ ಚಿಂತನೆ ಕೊಟ್ಟಿದ್ದಾರೆ.

ಅದರಂತೆ ಕನ್ನಡದ ಬಹು ಮುಖ್ಯ ಕಾದಂಬರಿಕಾರರಲ್ಲಿ ನಾಡೋಜ ಗೀತಾ ನಾಗಭೂಷಣ ಒಬ್ಬರು. ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ‘ಅವ್ವ ಮತ್ತು ಇತರ ಕಥೆಗಳು’, ಜ್ವಲಂತ ಎಂಬ ಎರಡು ಕಥಾಸಂಕಲನದ ಮೂಲಕ ‘ಕಿಚ್ಚ ಇಲ್ಲದ ಬೇಗೆಯಲ್ಲಿ ಬೆಂದೇನವ್ವ’ ಎಂಬ ಸಮಗ್ರ ಕಥೆಗಳ ಮೂಲಕ ಶೋಷಿತ ಬಡವರ, ನಿರ್ಗತಿಕರ ಅದರಲ್ಲೂ ಮಹಿಳೆಯರ ಬಗೆಗಿನ ಚಿಂತನೆ ವ್ಯಕ್ತಪಡಿಸಿದ ಅವರ ಕಥನ ಸಾಹಿತ್ಯ ಒಂದು ಹೊಸ ಮಾರ್ಗವನ್ನು ರೂಪಿಸಿದೆ.

ಪ್ರೊ.ಕಾಶಿನಾಥ ಅಂಬಲಗೆ ಬಂಡಾಯದ ಮುಂಚೂಣಿಯಲ್ಲಿರುವ ಕವಿ. ಅವರ ಹನಿಗವನ, 35 ಕವನಗಳು, ಕಾವ್ಯ, ಅನುವಾದ ಮೊದಲಾದವುಗಳು ಕಾವ್ಯದ ಶಕ್ತಿಯನ್ನು ಬಳಸಿಕೊಂಡು ಪ್ರಕಟಿಸಿದ ಕೃತಿಗಳಾಗಿವೆ. ಬೀದರ ಜಿಲ್ಲೆಯ ಘಾಟು ಭಾಷೆಯನ್ನು ಬಳಸಿಕೊಂಡವರ ಬಂಡಾಯದ ಕಹಳೆ ನಾವು ನೋಡಬಹುದು. ಅಲ್ಲಮಪ್ರಭು ಬೆಟ್ಟದೂರು ಅವರು ಬಂಡಾಯದ ಹೋರಾಟಗಾರರಾಗಿ ರಾಜ್ಯ ಸಂಚಾಲಕರಾಗಿ ‘ಕುದುರಿಮೋತಿ ಮತ್ತು ನೀಲಗಿರಿ’, ‘ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು’, ಇದು ನನ್ನ ಭಾರತ, ಗುಲಗಂಜಿ, ದ್ರಾವಿಡರು ನಾವು ದ್ರಾವಿಡರು ಎಂಬ ಕಾವ್ಯದ ಮೂಲಕ ಬಂಡಾಯದ ಧೋರಣೆ ಹೊಂದಿದ್ದಾರೆ. ಅದರಂತೆ ಗೋಕಾಕ್ ಚಳವಳಿ, ಕುದುರಿಮೋತಿ ಮೊದಲಾದ ಹೋರಾಟದ ಜೊತೆಗೆ ಬುಲ್ಡೋಟ ವಿರುದ್ಧ ಈಗಲೂ ಅವರು ಹೋರಾಟವನ್ನು ಮಾಡುತ್ತಿದ್ದಾರೆ. ಅವರ ಕಾವ್ಯ ಅಷ್ಟೇ ಪ್ರಖರ ಮತ್ತು ವೈಚಾರಿಕತೆಯಿಂದ ಕೂಡಿವೆ.

ವಿಠ್ಠಪ್ಪ ಗೊರಂಟ್ಲಿ, ಸಿ.ಎಂ. ಚೆನ್ನಬಸಪ್ಪ, ಎ.ಎಂ. ಮದರಿ, ಡಾ.ಬಸವರಾಜ ಸಬರದ ಬಂಡಾಯದ ಮುಂಚೂಣಿಯಲ್ಲಿರುವ ಕವಿ ಹೋರಾಟಗಾರ. ಅವರ ಕವಿತೆಗಳು ಹೇಳುವುದರ ಜೊತೆಗೆ ಜನಪರ ನಿಲುವನ್ನು ಹೊಂದಿದ್ದಾರೆ. ಇವರು ಸಹ ಕಾವ್ಯ, ಆಧುನಿಕ ವಚನ, ವಿಮರ್ಶೆ, ಜಾನಪದ, ನಾಟಕ, ವೈಚಾರಿಕತೆ ಸೇರಿ ಮೊದಲಾದ ಪ್ರಕಾರಗಳಲ್ಲಿ ಕೃಷಿ ಮಾಡಿದ ಅವರು ಪ್ರಗತಿಪರ ವಿಚಾರಧಾರೆಯ ಲೇಖಕರು. ಜಂಬಣ್ಣ ಅಮರಚಿಂತ ಅವರ ಕಾವ್ಯ, ಹಾಯಿಕು, ರುಬಾಯಿ, ಗಜಲ್, ಮೊದಲಾದ ಕಾವ್ಯ ಸಂಕಲನ, ಕುರುಮಯ್ಯ ಮತ್ತು ಅಂಕುಶದೊಡ್ಡಿ, ಬೂಟುಗಾಲಿನ ಸದ್ದು ಎರಡು ಕಾದಂಬರಿಗಳು ಕೊರಚ ಜನಾಂಗದ ಚಿತ್ರಣ, ಹೈದರಾಬಾದ್ ನಿಜಾಮನ ಆಡಳಿತದ ವಸ್ತುಗಳ ಮೂಲಕ ಕಲಾತ್ಮಕತೆಯಿಂದ ರಚಿಸಿದವರು.

ಪ್ರಭು ಖಾನಾಪುರೆ ಅವರು ಕಾವ್ಯ, ವಚನ, ಗಜಲ್, ಕತೆ, ನಾಟಕ, ಲೇಖನಗಳ ಮೂಲಕ ನೇರ ನಿರ್ಭೀತಿಯ ಬರಹಗಾರರು. ಆರ್.ಕೆ.ಹುಡುಗಿ, ಕೆ.ನೀಲಾ, ಮೀನಾಕ್ಷಿ ಬಾಳಿ, ಕೆ.ಷರೀಫಾ, ಶಶಿಕಲಾ ವಸ್ತ್ರದ, ನಾವು ನಿಮ್ಮವರೇ ಸ್ವಾಮಿಯ ಸರಸ್ವತಿ ಚಿಮ್ಮಲಗಿ, ವಿಜಯಶ್ರೀ ಸಬರದ, ಮಲ್ಲಿಕಾ ಘಂಟಿ, ಈರಪ್ಪ ಕಂಬಳಿ, ಪ್ರಭುದೇವ ಹಾದಿಮನಿ, ಜಯದೇವಿ ಗಾಯಕವಾಡ ಇವರ ಮಧ್ಯದಲ್ಲಿ ದಲಿತ- ಬಂಡಾಯದ ಪ್ರಜ್ಞೆ ಹೊಂದಿದ ಲೇಖಕರಿವರು. ಕಾವ್ಯ,ಗಜಲ್, ಹಾಯಿಕು, ರುಬಾಯಿ, ಆಧುನಿಕ ವಚನ, ಕಾದಂಬರಿ ಮೊದಲಾದ ಕ್ಷೇತ್ರದಲ್ಲಿ ಕೃಷಿ ಮಾಡಿದ ವೈಚಾರಿಕ ಚಿಂತಕರು. ಇವರಲ್ಲದೇ ಇನ್ನೂ ಅನೇಕ ಯುವ ಬರಹಗಾರರು ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ.ಜಯದೇವಿ ಗಾಯಕವಾಡ

ಕನ್ನಡ ಪ್ರಾಧ್ಯಪಕರು, ಸ.ಪ. ಮಹಾವಿದ್ಯಾಲಯ, ಯಾದಗಿರಿ

Similar News