ವಿಶ್ವದಾದ್ಯಂತ ಮಹಿಳೆಯರು ಮತ್ತು ಪುರುಷರ ನಡುವಿನ ಸಮಾನತೆಯ ಮಟ್ಟವನ್ನು ಅಳೆಯುವ ಪ್ರಮುಖ ಮಾನದಂಡವೆಂದರೆ ಜಾಗತಿಕ ಲಿಂಗ ಅಂತರ ಸೂಚ್ಯಂಕ. ವಿಶ್ವ ಆರ್ಥಿಕ ವೇದಿಕೆ ಪ್ರತಿವರ್ಷ ಬಿಡುಗಡೆ ಮಾಡುವ ಈ ವರದಿಯು, ಲಿಂಗ ಸಮಾನತೆಯತ್ತ ಸಾಗುವಲ್ಲಿ ವಿಶ್ವದ ವಿವಿಧ ದೇಶಗಳ ಪ್ರಗತಿ ಮತ್ತು ಸವಾಲುಗಳನ್ನು ವಿಶ್ಲೇಷಿಸುತ್ತದೆ. ಈ ಸೂಚ್ಯಂಕವು ಮುಖ್ಯವಾಗಿ ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವಕಾಶ, ಶೈಕ್ಷಣಿಕ ಸಾಧನೆ, ಆರೋಗ್ಯ ಮತ್ತು ಜೀವಿತಾವಧಿ ಹಾಗೂ ರಾಜಕೀಯ ಸಬಲೀಕರಣ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿದೆ.

ಲಿಂಗ ಸಮಾನತೆ ಎನ್ನುವುದು ಮಹಿಳೆಯರ ಅಭಿವೃದ್ಧಿಗೆ ಮಾತ್ರ ಸೀಮಿತವಾದ ವಿಷಯವಲ್ಲ; ಅದು ದೇಶದ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ, ಮಾನವ ಸಂಪನ್ಮೂಲದ ಬಳಕೆ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಸೂಚಕವಾಗಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಲಿಂಗ ಅಂತರ ವರದಿ-2026ರಲ್ಲಿ ಭಾರತದ ಸ್ಥಿತಿಯನ್ನು ಗಮನಿಸಿದಾಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಮಟ್ಟದ ಲಿಂಗ ಸಮಾನತೆಯನ್ನು ಸಾಧಿಸಿದ್ದರೂ, ಆರ್ಥಿಕ ಭಾಗವಹಿಸುವಿಕೆ ಮತ್ತು ರಾಜಕೀಯ ನಿರ್ಧಾರ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಇನ್ನೂ ದೊಡ್ಡ ಅಂತರ ಉಳಿದಿರುವುದು ಸ್ಪಷ್ಟವಾಗುತ್ತದೆ.

2026ರ ವರದಿಯ ಪ್ರಕಾರ, ಭಾರತವು ಒಟ್ಟಾರೆ ಶೇ. 64.5ರಷ್ಟು ಲಿಂಗ ಸಮಾನತೆಯನ್ನು ಸಾಧಿಸಿದ್ದು, 145 ದೇಶಗಳ ಪೈಕಿ 131ನೇ ಸ್ಥಾನದಲ್ಲಿದೆ. 2025ರಲ್ಲಿಯೂ ಭಾರತದ ಸ್ಥಾನ 131ನೇ ಆಗಿತ್ತು. ಆದರೆ ಒಟ್ಟಾರೆ ಅಂಕ 0.644ರಿಂದ 0.645ಕ್ಕೆ ಸ್ವಲ್ಪ ಏರಿಕೆಯಾಗಿದೆ. 2006ರಿಂದ 2026ರವರೆಗೆ ಭಾರತದ ಒಟ್ಟಾರೆ ಪ್ರಗತಿ 4.3 ಶೇಕಡಾ ಅಂಕಗಳಷ್ಟಿದೆ. ಈ ಪ್ರಗತಿಯಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆ ಪ್ರಮುಖ ಪಾತ್ರ ವಹಿಸಿದೆ.

ಭಾರತದ ಲಿಂಗ ಸಮಾನತೆಯ ಚಿತ್ರಣದಲ್ಲಿ ಅತ್ಯಂತ ಗಮನಾರ್ಹವಾದ ಅಂಶವೆಂದರೆ ಶಿಕ್ಷಣ ಕ್ಷೇತ್ರ. 2026ರಲ್ಲಿ ಶೈಕ್ಷಣಿಕ ಸಾಧನೆಯ ಲಿಂಗ ಸಮಾನತಾ ಅಂಕ ಶೇ.96.6ರಷ್ಟಾಗಿದ್ದು. 145 ದೇಶಗಳ ಪೈಕಿ ಭಾರತ 112ನೇ ಸ್ಥಾನದಲ್ಲಿದೆ. ಪ್ರಾಥಮಿಕ ಶಿಕ್ಷಣದ ದಾಖಲಾತಿಯಲ್ಲಿ 99.7 ಶೇಕಡಾ ಸಮಾನತೆ ಕಂಡುಬಂದಿದ್ದು, ಪ್ರೌಢ ಮತ್ತು ತೃತೀಯ ಹಂತದ ಶಿಕ್ಷಣದ ದಾಖಲಾತಿಯಲ್ಲಿ ಶೇಕಡಾ 100ರ ಸಮಾನತೆಯನ್ನು ಭಾರತ ದಾಖಲಿಸಿದೆ. ಪ್ರೌಢ ಮತ್ತು ತೃತೀಯ ಶಿಕ್ಷಣದ ದಾಖಲಾತಿಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ಆದರೆ ಶಿಕ್ಷಣದ ಬಾಗಿಲು ಮಹಿಳೆಯರಿಗೆ ತೆರೆದಿರುವುದು ಮಾತ್ರ ಸಾಕಾಗುವುದಿಲ್ಲ. ಶಿಕ್ಷಣದ ನಂತರ ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ದೊರೆಯುವ ಅವಕಾಶಗಳು ಎಷ್ಟಿವೆ ಎಂಬುದೇ ಮುಂದಿನ ಪ್ರಮುಖ ಪ್ರಶ್ನೆಯಾಗಿದೆ. ವಯಸ್ಕರ ಸಾಕ್ಷರತೆಯಲ್ಲಿಯೇ ಲಿಂಗ ಸಮಾನತೆಯ ಅಂಕ ಶೇ.82.5ರಷ್ಟಾಗಿರುವುದು ಇನ್ನೂ ಅಂತರವಿರುವುದನ್ನು ಸೂಚಿಸುತ್ತದೆ. 2006ರಿಂದ ವಯಸ್ಕರ ಸಾಕ್ಷರತೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಶಿಕ್ಷಣದ ಸಂಪೂರ್ಣ ಫಲಿತಾಂಶವನ್ನು ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳಾಗಿ ಪರಿವರ್ತಿಸುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶಗಳ ಕ್ಷೇತ್ರದಲ್ಲಿ ಭಾರತದ ಸ್ಥಿತಿ ಹೆಚ್ಚು ಸವಾಲಿನದ್ದಾಗಿದೆ. ಈ ವಿಭಾಗದಲ್ಲಿ ಭಾರತದ ಸಮಾನತಾ ಅಂಕ ಶೇ.41.2 ಮಾತ್ರವಾಗಿದ್ದು, 145 ದೇಶಗಳ ಪೈಕಿ ಭಾರತ 143ನೇ ಸ್ಥಾನದಲ್ಲಿದೆ. ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯಲ್ಲಿ ಲಿಂಗ ಸಮಾನತಾ ಅಂಕ ಶೇ. 44.1 ಶೇಕಡಾ, ಸಮಾನ ಕೆಲಸಕ್ಕೆ ಸಮಾನ ವೇತನದ ಸೂಚಕದಲ್ಲಿ ಶೇ. 53.8 ಮತ್ತು ಮಹಿಳೆಯರ ಅಂದಾಜು ಗಳಿಸಿದ ಆದಾಯದ ಸೂಚಕದಲ್ಲಿ ಕೇವಲ ಶೇ. 35.1 ಇದೆ. ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ವ್ಯವಸ್ಥಾಪಕರ ಹುದ್ದೆಗಳಲ್ಲಿ ಸಮಾನತೆಯ ಅಂಕ ಇನ್ನೂ ಕಡಿಮೆ, ಕೇವಲ ಶೇ. 13.1. ಇದೇ ಸಂದರ್ಭದಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಮಹಿಳೆಯರ ಪ್ರಗತಿ ಗಮನಾರ್ಹವಾಗಿದೆ. 2006ರಲ್ಲಿ ಶೇ. 26.6 ಇದ್ದ ಲಿಂಗ ಸಮಾನತೆಯ ಮಟ್ಟವು 2026ರಲ್ಲಿ 49.9 ಶೇಕಡಾಕ್ಕೆ ಏರಿದೆ. ಅಂದರೆ ಶಿಕ್ಷಣದ ವಿಸ್ತರಣೆ ಮತ್ತು ವೃತ್ತಿಪರ ಅರ್ಹತೆಗಳು ಮಹಿಳೆಯರಿಗೆ ಕೆಲವು ಉದ್ಯೋಗ ಕ್ಷೇತ್ರಗಳ ಬಾಗಿಲು ತೆರೆದಿವೆ. ಆದರೆ ನಿರ್ಧಾರ ತೆಗೆದುಕೊಳ್ಳುವ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಇನ್ನೂ ಅತ್ಯಂತ ಕಡಿಮೆ ಇರುವುದು, ಶಿಕ್ಷಣದಿಂದ ಉದ್ಯೋಗಕ್ಕೆ ಮತ್ತು ಉದ್ಯೋಗದಿಂದ ನಾಯಕತ್ವಕ್ಕೆ ಸಾಗುವ ಹಾದಿಯಲ್ಲಿ ಇನ್ನೂ ಹಲವಾರು ಅಡೆತಡೆಗಳಿವೆ ಎಂಬುದನ್ನು ತೋರಿಸುತ್ತದೆ.

ಇಲ್ಲಿ ಭಾರತದ ಅಭಿವೃದ್ಧಿಯ ಕುರಿತು ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಪುರುಷರಿಗೆ ಸಮೀಪಿಸುತ್ತಿದ್ದರೂ, ಉದ್ಯೋಗ ಮತ್ತು ಆದಾಯದ ಕ್ಷೇತ್ರದಲ್ಲಿ ಅದೇ ಪ್ರಮಾಣದ ಸಮಾನತೆ ಏಕೆ ಕಾಣುತ್ತಿಲ್ಲ? ಮಹಿಳೆಯರ ಶಿಕ್ಷಣವನ್ನು ಕೇವಲ ದಾಖಲಾತಿ ಮತ್ತು ಪದವಿ ಗಳಿಸುವ ಮಟ್ಟದಲ್ಲಿ ನೋಡದೆ, ಅದನ್ನು ಉದ್ಯೋಗ, ಆದಾಯ, ಆಸ್ತಿ, ಉದ್ಯಮಶೀಲತೆ ಮತ್ತು ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಜೋಡಿಸುವ ಅಗತ್ಯವಿದೆ. ಶಿಕ್ಷಣದಲ್ಲಿ ಸಾಧಿಸಿದ ಪ್ರಗತಿ ಆರ್ಥಿಕ ಸ್ವಾವಲಂಬನೆಯಾಗಿ ಪರಿವರ್ತನೆಯಾದಾಗ ಮಾತ್ರ ಅದರ ಸಾಮಾಜಿಕ ಪರಿಣಾಮ ಇನ್ನಷ್ಟು ಆಳವಾಗುತ್ತದೆ.

ಆರೋಗ್ಯ ಮತ್ತು ಜೀವಿತಾವಧಿಯ ಕ್ಷೇತ್ರದಲ್ಲಿ ಭಾರತವು ಶೇ.95.6ರಷ್ಟು ಲಿಂಗ ಸಮಾನತೆಯನ್ನು ದಾಖಲಿಸಿ, 145 ದೇಶಗಳ ಪೈಕಿ ಭಾರತ 136ನೇ ಸ್ಥಾನದಲ್ಲಿದೆ. ಆರೋಗ್ಯಕರ ಜೀವಿತಾವಧಿಯ ಸೂಚಕದಲ್ಲಿ ಸಮಾನತೆಯ ಅಂಕ ಶೇ. 100.6 ಇದ್ದರೆ, ಜನನದ ಸಮಯದ ಲಿಂಗಾನುಪಾತದ ಅಂಕ ಶೇ.93.4 ಇದೆ. ಆರೋಗ್ಯ ಕ್ಷೇತ್ರದಲ್ಲಿ ಒಟ್ಟಾರೆ ಅಂತರ ಕಡಿಮೆಯಾಗಿದ್ದರೂ, ಜನನದ ಹಂತದಲ್ಲಿಯೇ ಕಂಡುಬರುವ ಲಿಂಗ ಅಸಮಾನತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ರಾಜಕೀಯ ಸಬಲೀಕರಣದ ವಿಷಯದಲ್ಲಿ ಭಾರತವು ನಾಲ್ಕು ಉಪಸೂಚ್ಯಂಕಗಳಲ್ಲಿ ಜಾಗತಿಕವಾಗಿ 67ನೇ ಸ್ಥಾನದಲ್ಲಿದೆ. ಆದರೆ ಸಮಾನತಾ ಅಂಕ ಕೇವಲ ಶೇ. 24.5. ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಸಮಾನತಾ ಅಂಕ ಶೇ. 16.1 ಮತ್ತು ಸಚಿವ ಸ್ಥಾನಗಳಲ್ಲಿ ಕೇವಲ ಶೇ. 5.9 ಇದೆ. ಕಳೆದ 50 ವರ್ಷಗಳ ಅವಧಿಯಲ್ಲಿ ಮಹಿಳೆ ಅಥವಾ ಪುರುಷ ರಾಷ್ಟ್ರಮುಖ್ಯಸ್ಥರಾಗಿದ್ದ ವರ್ಷಗಳ ಆಧಾರದ ಸೂಚಕದಲ್ಲಿ ಭಾರತದ ಅಂಕ 40.7 ಶೇಕಡಾ ಮತ್ತು ಜಾಗತಿಕ ಸ್ಥಾನ 12ನೇ ಆಗಿದೆ. ಈ ಅಂಕಿಅಂಶಗಳು ರಾಜಕೀಯ ಕ್ಷೇತ್ರದಲ್ಲಿಯೂ ಒಂದು ಮಹತ್ವದ ವಾಸ್ತವವನ್ನು ತೋರಿಸುತ್ತವೆ. ದೇಶದ ಅತ್ಯುನ್ನತ ಸಾಂವಿಧಾನಿಕ ಅಥವಾ ರಾಜಕೀಯ ಹುದ್ದೆಗಳಲ್ಲಿ ಮಹಿಳೆಯರ ಉಪಸ್ಥಿತಿ ಮಹತ್ವದ್ದಾದರೂ, ಅದು ಮಾತ್ರ ರಾಜಕೀಯ ಲಿಂಗ ಸಮಾನತೆಯ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ಸಂಸತ್ತು, ಸಚಿವ ಸಂಪುಟ, ಆಡಳಿತಾತ್ಮಕ ನಾಯಕತ್ವ ಮತ್ತು ನೀತಿ ನಿರ್ಧಾರ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯುವುದು ಅಗತ್ಯ. ಮಹಿಳೆಯರು ಮತದಾರರಾಗಿ ಮಾತ್ರವಲ್ಲದೆ ನೀತಿ ರೂಪಿಸುವವರು ಮತ್ತು ನಿರ್ಧಾರ ಕೈಗೊಳ್ಳುವವರಾಗಿಯೂ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಬೇಕಾಗಿದೆ.

2006ರಿಂದ 2026ರವರೆಗಿನ ಎರಡು ದಶಕಗಳ ಅಂಕಿಅಂಶಗಳನ್ನು ಗಮನಿಸಿದರೆ ಈ ವ್ಯತ್ಯಾಸ ಇನ್ನಷ್ಟು ಸ್ಪಷ್ಟವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಶೇ.14.7 ಅಂಕಗಳ ಪ್ರಗತಿ ಸಾಧಿಸಿದೆ. ಆದರೆ ಆರ್ಥಿಕ ಸಮಾನತೆಯಲ್ಲಿ ಎರಡು ದಶಕಗಳ ಒಟ್ಟು ಪ್ರಗತಿ ಕೇವಲ ಶೇ.1.5 ಅಂಕಗಳು, ರಾಜಕೀಯ ಸಬಲೀಕರಣದಲ್ಲಿ ಶೇ.1.8 ಅಂಕಗಳು ಮಾತ್ರ. ಹೀಗಾಗಿ ಭಾರತದ ಲಿಂಗ ಸಮಾನತೆಯ ಪ್ರಗತಿ ಏಕರೂಪವಾಗಿಲ್ಲ; ಶಿಕ್ಷಣದಲ್ಲಿ ವೇಗವಾಗಿ ಮುನ್ನಡೆದಿರುವಾಗ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅದೇ ವೇಗ ಕಾಣಿಸುತ್ತಿಲ್ಲ. ಆದ್ದರಿಂದ ಮುಂದಿನ ಹಂತದ ಲಿಂಗ ಸಮಾನತಾ ನೀತಿಗಳು ಮಹಿಳೆಯರಿಗೆ ಶಿಕ್ಷಣ ಎಂಬ ಗುರಿಯನ್ನು ಮೀರಿ ಶಿಕ್ಷಣದ ನಂತರ ಸಮಾನ ಅವಕಾಶದತ್ತ ಸಾಗಬೇಕಾಗಿದೆ. ಮಹಿಳಾ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆ ಹೆಚ್ಚಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನದ ಅನುಷ್ಠಾನ ಬಲಪಡಿಸುವುದು, ಮಹಿಳೆಯರ ಆದಾಯ ಮತ್ತು ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು, ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣವನ್ನು ಉದ್ಯೋಗಾವಕಾಶಗಳೊಂದಿಗೆ ಜೋಡಿಸುವುದು ಮತ್ತು ನಿರ್ವಹಣಾ ಹಾಗೂ ನಿರ್ಧಾರಾತ್ಮಕ ಹುದ್ದೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಅದೇ ರೀತಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ನಿರ್ಧಾರ ಪ್ರಕ್ರಿಯೆಯಲ್ಲಿ ಮಹಿಳೆಯರ ಪರಿಣಾಮಕಾರಿ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದು ಕೂಡ ಮುಖ್ಯ.

ಒಟ್ಟಿನಲ್ಲಿ, ಜಾಗತಿಕ ಲಿಂಗ ಅಂತರ ವರದಿ-2026 ಭಾರತದ ಲಿಂಗ ಸಮಾನತೆಯ ಕುರಿತು ಒಂದು ಮಿಶ್ರ ಚಿತ್ರಣವನ್ನು ನೀಡುತ್ತದೆ. ಶಿಕ್ಷಣದಲ್ಲಿ ಶೇ.96.6 ಮತ್ತು ಆರೋಗ್ಯದಲ್ಲಿ ಶೇ.95.6 ಶೇಕಡಾ ಸಮಾನತೆಯ ಮಟ್ಟ ತಲುಪಿರುವ ಭಾರತಕ್ಕೆ ಆರ್ಥಿಕ ಭಾಗವಹಿಸುವಿಕೆಯಲ್ಲಿ ಶೇ. 41.2 ಮತ್ತು ರಾಜಕೀಯ ಸಬಲೀಕರಣದಲ್ಲಿ ಶೇ. 24.5 ಮಾತ್ರ ಸಾಧಿಸಿರುವುದು ಮುಂದಿನ ಸವಾಲು ಎಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಮಹಿಳೆಯರು ಎಷ್ಟು ಓದುತ್ತಿದ್ದಾರೆ ಎಂಬುದರಿಂದ ಲಿಂಗ ಸಮಾನತೆಯ ಅಳತೆ ಮುಗಿಯುವುದಿಲ್ಲ; ಅವರು ಎಷ್ಟು ಸಂಪಾದಿಸುತ್ತಿದ್ದಾರೆ, ಎಷ್ಟು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ ಮತ್ತು ದೇಶದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಭಾಗವಹಿಸುತ್ತಿದ್ದಾರೆ ಎಂಬುದರಲ್ಲಿಯೇ ಸಮಾನತೆಯ ಮುಂದಿನ ಪರೀಕ್ಷೆ ಅಡಗಿದೆ. ಶಿಕ್ಷಣದಲ್ಲಿ ಸಾಧಿಸಿದ ಸಮಾನತೆಯನ್ನು ಆರ್ಥಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆಗೆ ಅವಕಾಶ ಮತ್ತು ರಾಜಕೀಯ ಅಧಿಕಾರವಾಗಿ ಪರಿವರ್ತಿಸುವುದೇ ಭಾರತದ ಮುಂದಿನ ಲಿಂಗ ಸಮಾನತೆಯ ಪ್ರಮುಖ ಕಾರ್ಯಸೂಚಿಯಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಸಿದ್ದರಾಜು ವಿ.ಜಿ., ಮೈಸೂರು

contributor