ಮಾನವಿ ಬಂದೋಪಾಧ್ಯಾಯ ಬಂಗಾಳಿಯಲ್ಲಿ ಎಂಎ ಪೂರ್ಣಗೊಳಿಸಿ ನಂತರ ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಆಧರಿಸಿಯೇ ಪಿಎಚ್.ಡಿ. ಸಂಶೋಧನೆ ಪೂರ್ಣಗೊಳಿಸುತ್ತಾರೆ. ಹೀಗಾಗಿ ಪಿಎಚ್.ಡಿ. ಪಡೆದ ಪಶ್ಚಿಮ ಬಂಗಾಳದ ಮೊದಲ ಟ್ರಾನ್ಸ್‌ಜೆಂಡರ್ ವ್ಯಕ್ತಿಯಾದರು. 1990ರ ದಶಕದ ಅಂತ್ಯದಲ್ಲಿ ಜಾರ್‌ಗ್ರಾಮ್‌ನ ವಿವೇಕಾನಂದ ಶತಮಾನೋತ್ಸವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿದಾಗ ಪಶ್ಚಿಮ ಬಂಗಾಳದ ಮೊದಲ ಟ್ರಾನ್ಸ್‌ಜೆಂಡರ್ ಪ್ರಾಧ್ಯಾಪಕರಾದರು.

ಭಾರತದಲ್ಲಿ ಲಿಂಗಾಂತರಿ ಸಾಹಿತ್ಯದ (ಟ್ರಾನ್ಸ್ ಜೆಂಡರ್ ಲಿಟರೇಚರ್) ಚರ್ಚೆ ಮುನ್ನೆಲೆಗೆ ಬರುತ್ತಿದೆ. ಹಲವು ಲಿಂಗಾಂತರಿಗಳ ಆತ್ಮಕಥನಗಳನ್ನು ಆಧರಿಸಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇವರ ಅನುಭವಗಳು ಶಾಲಾ ಕಾಲೇಜುಗಳಲ್ಲಿ ಪಠ್ಯಗಳಾಗಿ ಮಕ್ಕಳಿಗೆ ತಲುಪುತ್ತಿವೆ. ಮೇಲುನೋಟಕ್ಕೆ ಟ್ರಾನ್ಸ್ ಕಮ್ಯುನಿಟಿಯ ಎಲ್ಲರ ಅನುಭವಗಳೂ ಒಂದೇ ತೆರನಾದವು ಅನ್ನಿಸುತ್ತವೆ. ಆದರೆ ಭಾಷೆ, ಪ್ರದೇಶ, ಜಾತಿ, ಧರ್ಮದ ನೆಲೆಯಲ್ಲಿ ಟ್ರಾನ್ಸ್ ಜೆಂಡರ್ ಅನುಭವಗಳಲ್ಲಿ ಫರಕಿದೆ. ಹೇಗೆ ಮನುಷ್ಯರಲ್ಲಿ ಸಹಜ ಭಿನ್ನತೆಗಳಿರುತ್ತವೆಯೋ ಹಾಗೆಯೇ ಟ್ರಾನ್ಸ್‌ಜೆಂಡರ್ ಸಮುದಾಯ ಗಳಲ್ಲಿಯೂ ಭಿನ್ನತೆಗಳಿವೆ, ಬಹುತ್ವವಿದೆ. ಅಂತೆಯೇ ಅವರ ಅನುಭವಲೋಕವೂ ಒಬ್ಬರಿಗಿಂತ ಮತ್ತೊಬ್ಬರದು ವಿಶಿಷ್ಟವಾಗಿದೆ.

ಈಗಾಗಲೇ ಕನ್ನಡದಲ್ಲಿ ತಮಿಳುನಾಡಿನ ಲಿವಿಂಗ್‌ಸ್ಮೈಲ್ ವಿದ್ಯಾ ಅವರ ಡಾ.ತಮಿಳು ಸೆಲ್ವಿ ಅನುವಾದಿಸಿದ ‘ನಾನು ಅವನಲ್ಲ ಅವಳು’ ಆತ್ಮಕಥನ ಸಾಕಷ್ಟು ಚರ್ಚೆಯಾಗಿದೆ. ಇದು ಬಿ.ಎಸ್.ಲಿಂಗದೇವರು ನಿರ್ದೇಶಿಸಿ, ಸಂಚಾರಿ ವಿಜಯ್ ನಟಿಸಿದ ಸಿನೆಮಾವಾಗಿಯೂ ಜನಪ್ರಿಯವಾಗಿದೆ. ಅಂತೆಯೇ ತಮಿಳುನಾಡಿನ ಮತ್ತೊಬ್ಬ ಟ್ರಾನ್ ಸಮುದಾಯದ ರೇವತಿಯವರ ‘ಬದುಕು ಬಯಲು’ ಆತ್ಮಕಥನವನ್ನು ದು.ಸರಸ್ವತಿ ಅನುವಾದಿಸಿ, ಗೌರಿ ಲಂಕೇಶ್ ಪ್ರಕಟಿಸಿದ್ದರು. ಉಳಿದಂತೆ ಕನ್ನಡದ್ದೇ ಆದ ಅನುಭವಲೋಕವೆಂದರೆ ಮಂಜಮ್ಮ ಜೋಗತಿಯ ‘ನಡುವೆ ಸುಳಿವ ಹೆಣ್ಣು’ (ನಿರೂಪಣೆ: ಅರುಣ್ ಜೋಳದಕೂಡ್ಲಿಗಿ) ಮತ್ತು ಅಕ್ಕೈ ಪದ್ಮಶಾಲಿ ಅವರ ‘ಅಕ್ಕಯ್’ (ನಿರೂಪಣೆ: ಡಾ.ಡೊಮಿನಿಕ್ ಡಿ.) ತರಹದ ಕಥನಗಳಿವೆ. ಚಾಂದಿನಿಯವರು ಬರೆದ ‘ಮನದ ಕಣ್ಣು’ (2015) ಮತ್ತು ‘ಇಟ್ಟಿಗೆ ಗೂಡಿನ ಕಾವು’ (2026) ಎರಡೂ ಕವನ ಸಂಕಲನಗಳು ಕಾವ್ಯಾತ್ಮಕ ಆತ್ಮಕಥನದಂತಿವೆ.

ಸದ್ಯಕ್ಕೆ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಆತ್ಮಕಥನಗಳು ಪ್ರಕಟವಾಗುತ್ತಿವೆ. ಹೀಗೆ ಪಶ್ಚಿಮ ಬಂಗಾಳದ ಬೆಂಗಾಳಿ ಅನುಭವ ಕಥನವೊಂದು ಕನ್ನಡಕ್ಕೆ ಬಂದಿದೆ. ಅದು ದೇಶದ ಮೊದಲ ಟ್ರಾನ್ಸ್‌ಜೆಂಡರ್ ಪ್ರಿನ್ಸಿಪಲ್ ಆದ ಮಾನವಿ ಬಂದೋಪಾಧ್ಯಾಯ ಅವರ ಆತ್ಮಕಥನ. ಮೂಲ ಇಂಗ್ಲಿಷ್‌ನಲ್ಲಿರುವ ‘ಎ ಗಿಪ್ಟ್ ಆಫ್ ಗಾಡೆಸೆಸ್ ಲಕ್ಷಿ’್ಮ ಎಂಬ ಆತ್ಮಕಥನವನ್ನು ಬಿ.ಎಸ್.ಜಯಪ್ರಕಾಶ ನಾರಾಯಣ ಅವರು ‘ಗಂಡು ಜೀವ ಹೆಣ್ಣು ಭಾವ’ (2021) ಎನ್ನುವ ಹೆಸರಲ್ಲಿ ವಂಶಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಈ ಆತ್ಮಕಥನವು ಹಲವು ಕಾರಣಗಳಿಗೆ ಮುಖ್ಯವಾಗಿದೆ.

ಕನ್ನಡದಲ್ಲಿ ಈ ತನಕ ಬಂದ ಆತ್ಮಕಥನಗಳಲ್ಲಿ ಅಭಿವ್ಯಕ್ತಿಗೊಂಡ ಟ್ರಾನ್ಸ್‌ಜೆಂಡರ್ ಅನುಭವ ಹಿಜಿಡಾ ಸಂಪ್ರದಾಯ, ಜೋಗತಿ ಪರಂಪರೆ, ಬೆಗ್ಗಿಂಗ್ ಮತ್ತು ಸೆಕ್ಸ್‌ವರ್ಕ್ ಜತೆಗೆ ತಳುಕುಹಾಕಿಕೊಂಡಿವೆ. ಆದರೆ ಮಾನವಿ ಅವರ ಆತ್ಮಕಥನ ಶೈಕ್ಷಣಿಕ ವಲಯದ ಏರಿಳಿತದ ಕಥೆಯನ್ನು ಹೊಂದಿದೆ. ಈ ತನಕದ ಕಥನಗಳಲ್ಲಿ ಸಮುದಾಯ ಪ್ರಜ್ಞೆಯ ಬದುಕಿದೆ. ಆದರೆ ಈ ಕಥನವು ವೈಯಕ್ತಿಕ ನೆಲೆಯಲ್ಲಿ ಬೆಳೆದು ಸಮುದಾಯ ಪ್ರಜ್ಞೆಗೆ ರೂಪಾಂತರಗೊಂಡಿದೆ. ಅಂತೆಯೇ ಈ ಕಥನ ಬೆಂಗಾಳಿ ಸಾಹಿತ್ಯ, ರವೀಂದ್ರನಾಥ ಟಾಗೋರರ ಅಪಾರ ಪ್ರಭಾವ, ಉಳಿದಂತೆ ಸಾಹಿತಿಗಳು, ಬೆಂಗಾಳಿ ಶಿಕ್ಷಣ ಪದ್ಧತಿ, ವಿಶ್ವವಿದ್ಯಾನಿಲಯಗಳ ಅಕಾಡಮಿಕ್ ವಲಯದ ವಿದ್ಯಮಾನಗಳು ಮತ್ತು ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತ್ಯಂತರಗಳ ತನಕ ಚಾಚಿಕೊಂಡಿದೆ. ಒಟ್ಟಾರೆ ಕಲಿತ ಸುಶಿಕ್ಷಿತ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಬೆಳೆದ ಸೋಮನಾಥ ಎಂಬ ಹುಡುಗನು ಮಾನಬಿ ಬಂದೋಪಾಧ್ಯಾಯ (ಕನ್ನಡದಲ್ಲಿ ಮನಾಬಿ ಬಂದೋಪಾಧ್ಯಾಯ)ಆದದ್ದು ದುಃಖದ ಕಥನವೂ ಹೌದು ಅಂತೆಯೇ ದುಸ್ಸಾಹಸದ ಕತೆ ಕೂಡ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಚಂದ್ರನಾಗೂರಿನಲ್ಲಿ 1964ರ ಸೆಪ್ಟಂಬರ್ 23ರಂದು ಹುಟ್ಟುವ ಸೋಮನಾಥನ ತಂದೆ ಚಿತ್ತರಂಜನ್ ಬಂದೋಪಾಧ್ಯಾಯ ಮತ್ತು ತಾಯಿ ರೇಖಾ. ಮನೆಯಲ್ಲಿ ಎರಡು ಹೆಣ್ಣಿನ ನಂತರ ಗಂಡು ಹುಟ್ಟಿತೆಂದು ಸಂಭ್ರಮಿಸಿದ್ದರು. ವಿಪರ್ಯಾಸವೆಂದರೆ ಮುಂದೆ ಇದೇ ಹುಡುಗ ಹೆಣ್ಣಾಗಿ ರೂಪಾಂತರ ಹೊಂದುತ್ತಾನೆ. ಬಾಲ್ಯದಲ್ಲಿ ಹೆಣ್ಣಿನ ನಡವಳಿಕೆಗಳಿಂದ ತೀವ್ರ ತಾತ್ಸಾರಕ್ಕೆ ಒಳಗಾದ ಹುಡುಗ ಶಿಕ್ಷಣದಲ್ಲಿ ಸದಾ ಚುರುಕಿದ್ದು ಒಳ್ಳೆಯ ಅಂಕಗಳಿಸುತ್ತಾ ಮುಂದೆ ಸಾಗುತ್ತಾನೆ. ಈ ಅಂಶವು ಅವನ ಹೆಣ್ಣುತನದ ನಡೆಗಳನ್ನು ಮುಚ್ಚಿಹಾಕುತ್ತದೆ. ಬಾಲ್ಯದಲ್ಲಿ ಮಾವನಿಂದಲೇ ಲೈಂಗಿಕ ಶೋಷಣೆಗೆ ಒಳಗಾಗುವ ಹುಡುಗ ಹೈಸ್ಕೂಲಿನಲ್ಲಿಯೇ ಸಹಪಾಠಿಗಳ ಜತೆ ಒಲವು ಬೆಳೆಸಿಕೊಳ್ಳುತ್ತಾನೆ. ಹುಡುಗರ ಜತೆಗಿನ ಪ್ರೀತಿ, ಪ್ರೇಮ, ಪ್ರಣಯದಲ್ಲಿ ತೊಡಗುತ್ತಾನೆ. ಈ ಎಲ್ಲಾ ಅನುಭವಗಳನ್ನು ಮುಕ್ತವಾಗಿ ದಾಖಲಿಸಿದ್ದಾರೆ.

ಸೋಮನಾಥನಾಗಿ ಜನಿಸಿ ಮಾನವಿ ಬಂದೋಪಾಧ್ಯಾಯ ಆದ ಪಯಣ ಸುಲಭದ್ದಲ್ಲ. ‘ನಾನು ಬಾಲ್ಯದಲ್ಲಿ ಕಳೆದುಕೊಂಡ ಎಲ್ಲಾ ಗೌರವಗಳನ್ನು ಮರಳಿ ಪಡೆಯಬೇಕೆಂದರೆ ನನಗಿರುವ ಒಂದೇ ಕೀಲಿಕೈ ಶಿಕ್ಷಣ ಎಂದು ಅರಿತುಕೊಂಡೆ’ ಎನ್ನುತ್ತಾರೆ. ಬಹಳ ಮುಖ್ಯವಾಗಿ ಹುಡುಗ ಹುಡುಗಿಯಾಗಿ ಬದಲಾಗುತ್ತಿದ್ದಾನೆ ಎಂದು ಗೊತ್ತಿದ್ದೂ ಮನೆಯವರು ಆರಂಭಕ್ಕೆ ಒಂದಷ್ಟು ತಾತ್ಸಾರ ತೋರಿಸಿದರೂ ನಂತರ ಈ ಹುಡುಗನ ಶಿಕ್ಷಣವನ್ನು ಬೆಂಬಲಿಸುತ್ತಾರೆ. ಮನೆಯಿಂದ ಹೊರದಬ್ಬದೆ ಮನೆಯಲ್ಲಿಟ್ಟುಕೊಂಡೇ ಬೆಚ್ಚನೆಯ ಪ್ರೀತಿ ಕೊಟ್ಟು ಓದಿಸುತ್ತಾರೆ. ಇದರಿಂದಾಗಿ ಮಾನವಿ ಒಂದು ಕಾಲೇಜಿನ ಪ್ರಾಂಶುಪಾಲೆಯಾಗುವ ತನಕ ಬೆಳೆಯುತ್ತಾಳೆ. ಆದರೆ ಬಹುಪಾಲು ಭಾರತದ ಸಾಂಪ್ರದಾಯಿಕ ಪುರುಷಪ್ರಧಾನ ಕುಟುಂಬಗಳು ಟ್ರಾನ್ಸ್‌ಜೆಂಡರ್‌ಗಳನ್ನು ಮನೆಯಿಂದ ಹೊರ ಹಾಕುತ್ತಾರೆ. ಹೀಗಾಗಿಯೇ ಅವರ ಬದುಕು ಅನಾಥ ಪ್ರಜ್ಞೆಯಲ್ಲಿ ಆಸರೆ ಇಲ್ಲದೆ ದಿಕ್ಕಾಪಾಲಾಗುತ್ತದೆ. ಮುಂದೆ ತನ್ನ ಹಾಗೆಯೇ ಬದುಕುವ ಸಮುದಾಯದ ಆಶ್ರಯ ಪಡೆದು ಭಿಕ್ಷೆ ಮತ್ತು ಸೆಕ್ಸ್‌ವರ್ಕರ್ಸ್‌ ಆಗಿ ಬದಲಾಗುತ್ತಾರೆ. ಈ ನೆಲೆಯಲ್ಲಿ ಮಾನವಿ ಅವರ ಕುಟುಂಬ ಮಾದರಿಯಾಗಿದೆ.

ಓದಿನಲ್ಲಿ ಮುಂದಿದ್ದು ಎಲ್ಲಾ ಪದವಿಗಳಲ್ಲಿ ಒಳ್ಳೆಯ ಅಂಕ ಗಳಿಸಿದ ಕಾರಣ ಶಿಕ್ಷಣ ಮುಗಿಯುತ್ತಲೇ ಹೈಸ್ಕೂಲ್ ಶಿಕ್ಷಕನ ಹುದ್ದೆ ಸಿಗುತ್ತದೆ. 23 ವರ್ಷಗಳ ಕಾಲ ಹೈಸ್ಕೂಲ್ ಶಿಕ್ಷಕನಾಗಿ ಗಂಡುವೇಷದ ಹೆಣ್ಣು ಜೀವವಾಗಿಯೇ ಶೈಕ್ಷಣಿಕ ಸೇವೆ ಸಲ್ಲಿಸುತ್ತಾರೆ. ಅಂತಿಮವಾಗಿ ಗಂಡಿನ ದೇಹವನ್ನು ತೊರೆಯಬೇಕೆಂದು ನಿಶ್ಚಯಿಸಿ ತಜ್ಞ ವೈದ್ಯರ ಸಲಹೆಯಂತೆ ಹಾರ್ಮೋನ್ಸ್ ಥೆರಪಿಯನ್ನು ಆರಂಭಿಸುತ್ತಾರೆ. ಇಡೀ ದೇಹವನ್ನು ಹೊರಗಿನಿಂದಲೂ ಹೆಣ್ಣಾಗಿಸಿಕೊಳ್ಳಲು ಈ ಥೆರಪಿ ನೆರವಾಗುತ್ತದೆ. ನಂತರ ಅಂತಿಮವಾಗಿ 2003ರಲ್ಲಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಬದಲಾದ ಸ್ತ್ರೀ ದೇಹಕ್ಕೆ ‘ಮನಾಬಿ’ ಎಂದು ಹೆಸರಿಟ್ಟುಕೊಳ್ಳುತ್ತಾರೆ. ಬೆಂಗಾಳಿಯಲ್ಲಿ ಮನಾಬಿ ಎಂದರೆ ‘ಸುಂದರ ಮಹಿಳೆ’ ಎಂದು ಅರ್ಥ. ಇದೀಗ ಮನಾಬಿ ಅದ್ಭುತ ಸುಂದರಿಯಾಗಿಯೇ ಎಲ್ಲರ ಗಮನಸೆಳೆಯುತ್ತಿದ್ದಾರೆ.

ಮಾನವಿ ಬಂದೋಪಾಧ್ಯಾಯ ಬಂಗಾಳಿಯಲ್ಲಿ ಎಂಎ ಪೂರ್ಣಗೊಳಿಸಿ ನಂತರ ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಆಧರಿಸಿಯೇ ಪಿಎಚ್.ಡಿ. ಸಂಶೋಧನೆ ಪೂರ್ಣಗೊಳಿಸುತ್ತಾರೆ. ಹೀಗಾಗಿ ಪಿಎಚ್.ಡಿ. ಪಡೆದ ಪಶ್ಚಿಮ ಬಂಗಾಳದ ಮೊದಲ ಟ್ರಾನ್ಸ್‌ಜೆಂಡರ್ ವ್ಯಕ್ತಿಯಾದರು. 1990ರ ದಶಕದ ಅಂತ್ಯದಲ್ಲಿ ಜಾರ್‌ಗ್ರಾಮ್‌ನ ವಿವೇಕಾನಂದ ಶತಮಾನೋತ್ಸವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿದಾಗ ಪಶ್ಚಿಮ ಬಂಗಾಳದ ಮೊದಲ ಟ್ರಾನ್ಸ್‌ಜೆಂಡರ್ ಪ್ರಾಧ್ಯಾಪಕರಾದರು.

ಸೋಮನಾಥ ಒಳಗಿಂದ ಹೆಣ್ಣಾಗಿದ್ದರೂ ಗಂಡಿನಂತೆ ಬದುಕಬೇಕಾದ ಬಿಕ್ಕಟ್ಟಿನ ಹಿಂಸೆಯನ್ನು ಅನುಭವಿಸಿದ್ದರು. ಹಾಗಾಗಿಯೇ ತನ್ನಂತೆಯೇ ಗಂಡು ಹೆಣ್ಣಾಗುವ ಬಿಕ್ಕಟ್ಟನ್ನು ಎದುರಿಸುವ ಸಮುದಾಯವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ನೋವಿಗೆ ದನಿಯಾಗಲು 1995ರಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿದಳು. ಇದು ಭಾರತದ ಮೊದಲ ಟ್ರಾನ್ಸ್ ಜೆಂಡರ್ ನಿಯತಕಾಲಿಕ ‘ಓಬ್-ಮನಾಬ್’ (ಅಧೀನ-ಮಾನವ) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಈ ಪತ್ರಿಕೆಗೆ ಇಟ್ಟ ಹೆಸರಿನ ಬಗ್ಗೆ ಹೇಳುತ್ತಾ, ‘‘ನಾನು ನಿಯತಕಾಲಿಕೆಗೆ ‘ಮಹಾ-ಮನಾಬ್ (ಮಹಾನ್ ಮಾನವರು) ಎಂದು ಹೆಸರಿಸಿದ್ದರೆ, ಸಮಾಜವು ಟ್ರಾನ್ಸ್‌ಜೆಂಡರ್ ಸಮುದಾಯವನ್ನು ನಡೆಸಿಕೊಳ್ಳುವ ರೀತಿಯಲ್ಲಿ ಏನಾದರೂ ಬದಲಾವಣೆಯಾಗುತ್ತಿತ್ತೇ? ಸಮಾಜವು ಟ್ರಾನ್ಸ್ ಜೆಂಡರ್ ಸಮುದಾಯವನ್ನು ಹೇಗೆ ನಡೆಸಿಕೊಳ್ಳುತ್ತದೆಯೋ ಹಾಗೆಯೇ ನಾನು ನಿಯತಕಾಲಿಕಕ್ಕೆ ಹೆಸರಿಟ್ಟೆ. ಲೋಕ ಟ್ರಾನ್ಸ್ ಜೆಂಡರ್ ಸಮುದಾಯವನ್ನು ತಮಗಿಂತ ಕೆಳಗಿನವರು, ಕೀಳಾ ದವರು ಎಂಬ ಭಾವನೆಯಲ್ಲಿ ‘ಅಧೀನ-ಮಾನವ’ರನ್ನಾಗಿ ನಡೆಸಿಕೊಳ್ಳುತ್ತಿದೆ. ಹಾಗಾಗಿಯೇ ಅವರ ಸಮಸ್ಯೆಯ ಮುಖವಾಣಿಯಾಗಿ ‘ಓಬ್-ಮನಾಬ್’ ಅಂದರೆ, ‘ಅಧೀನ-ಮಾನವ’ ಎಂಬ ಹೆಸರನ್ನಿಟ್ಟೆ’’ ಎನ್ನುತ್ತಾರೆ.

ಪಶ್ಚಿಮ ಬಂಗಾಳದಲ್ಲಿ 2011ರ ಚುನಾವಣೆಯಲ್ಲಿ ಸತತವಾಗಿ 34 ವರ್ಷಗಳ ಕಾಲ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಭಾರತೀಯ ಕಮುನಿಸ್ಟ್ ಪಕ್ಷವು (ಸಿಪಿಎಂ) ಸಂಪೂರ್ಣ ಸೋಲನ್ನು ಅನುಭವಿಸಿತು. ಆಗ ಮಮತಾ ಬ್ಯಾನರ್ಜಿ ಅವರ ನಾಯಕತ್ವದ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹೆಸರು ಬದಲಿಸಿಕೊಂಡ ಮಾನವಿ ಕಾನೂನುಬದ್ಧವಾಗಿ ತನ್ನ ಹೆಸರು ಬದಲಾವಣೆಗಾಗಿ ನೂತನ ಸರಕಾರಕ್ಕೆ ಮನವಿ ಮಾಡಿದರು. ಮಮತಾ ಬ್ಯಾನರ್ಜಿಯವರು ಕೂಡಲೇ ಸ್ಪಂದಿಸಿ ಅನುಮತಿಸಿದರು. ಈ ಸಂದರ್ಭವನ್ನು ನೆನೆಯುತ್ತಾ, ಮಾನವಿ ಅವರು ‘‘ಮಮತಾ ಬ್ಯಾನರ್ಜಿ ಅವರು ನನಗೆ ‘ಲಿಂಗ ಪರಿವರ್ತನೆಯ ಮಹಿಳೆ’ ಎಂಬ ಗುರುತು ಮತ್ತು ಘನತೆಯನ್ನು ನೀಡಿದರು. ಅವರು ಅಧಿಕಾರಕ್ಕೆ ಬರುವ ಮೊದಲು, ಮಹಿಳೆಯಾಗಿ ನನ್ನ ಕಾನೂನುಬದ್ಧ ಮಾನ್ಯತೆಗಾಗಿ ಎಡರಂಗ ಸರಕಾರದೊಂದಿಗೆ ಸತತವಾಗಿ ಹೋರಾಡಬೇಕಾಯಿತು. ಆದರೂ ಎಡ ಸರಕಾರವು ನನ್ನ ಕೋರಿಕೆಯನ್ನು ನಿರಾಕರಿಸಿತ್ತು’’ ಎನ್ನುತ್ತಾರೆ. ಒಬ್ಬ ಮಹಿಳಾ ಮುಖ್ಯಮಂತ್ರಿ ಲಿಂಗದ ಸಮಸ್ಯೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಸ್ಪಂದಿಸಿದ್ದು ಪಶ್ಚಿಮ ಬಂಗಾಳದ ಜನರ ಗಮನ ಸೆಳೆಯಿತು. ಅಂತೆಯೇ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ಒಂದು ಹೊಸ ಭರವಸೆ ಮೂಡಿತು.

ಇದರ ಪರಿಣಾಮವಾಗಿ ತೃಣಮೂಲ ಕಾಂಗ್ರೆಸ್ ಸರಕಾರವು ಜೂನ್ 9, 2015ರಂದು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ಮಹಿಳಾ ಕಾಲೇಜಿನಲ್ಲಿ ಮಾನವಿ ಬಂದೋಪಾಧ್ಯಾಯ ಅವರನ್ನು ಪ್ರಾಂಶುಪಾಲೆಯನ್ನಾಗಿ ನೇಮಕ ಮಾಡಿತು. ದೇಶದಲ್ಲಿ ಒಂದು ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕಗೊಂಡ ಮೊದಲ ಟ್ರಾನ್ಸ್‌ಜೆಂಡರ್ ವ್ಯಕ್ತಿಯಾದರು. ಇದು ಮಾನವಿ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿತು. ಎಲ್ಲಾ ಮಾಧ್ಯಮದವರು ಸಂದರ್ಶನ ಮಾಡಿದರು. ಪತ್ರಿಕೆಗಳ ಮುಖಪುಟಗಳಲ್ಲಿ ಸ್ಥಾನ ಪಡೆದರು. ಈ ಮೂಲಕ ಇಡೀ ಇಂಡಿಯಾದ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಒಂದು ಮಾದರಿಯನ್ನು ಹುಟ್ಟುಹಾಕಿದರು.

ಒಂದು ಘಟನೆಯು ಮಾನವಿ ಅವರ ಬದುಕನ್ನು ದೇಶಮಟ್ಟದಲ್ಲಿ ಪರಿಚಯಿಸುತ್ತದೆ. ಆ ದಿನವನ್ನು ಮಾನವಿ ಹೀಗೆ ನೆನಪು ಮಾಡಿಕೊಳ್ಳುತ್ತಾರೆ. ‘‘ಅದು ಶಿಕ್ಷಕರ ದಿನಾಚರಣೆಯ ಸಂದರ್ಭ. ಅತ್ಯುತ್ತಮ ಕೆಲಸ ಮಾಡಿದ ಆದರ್ಶ ಶಿಕ್ಷಕರನ್ನು ಸನ್ಮಾನಿಸುವ ಸರಕಾರದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ನಾನು ವೇದಿಕೆಯ ಕೆಳಗಡೆ ಕುಳಿತಿದ್ದೆ. ದೀದಿ ನನ್ನನ್ನು ವೇದಿಕೆಗೆ ಕರೆದು ಎಲ್ಲಾ ಅತಿಥಿಗಳಿಗೆ ಪರಿಚಯಿಸಿದರು. ಶಿಕ್ಷಣ ಸಚಿವರೂ ಅಲ್ಲಿದ್ದರು. ನನ್ನನ್ನು ಸನ್ಮಾನಿಸಿ ಮಾತನಾಡಲು ಅವಕಾಶ ಕೊಟ್ಟರು. ನಾನು ನನ್ನ ಜೀವನ ಮತ್ತು ಅನುಭವಗಳ ಬಗ್ಗೆ ಮಾತನಾಡಿದೆ. ಪ್ರೇಕ್ಷಕರೊಂದಿಗೆ ಸಂವಾದ ನಡೆಯಿತು. ನಾನು ಮುಖ್ಯಮಂತ್ರಿಗಳೊಂದಿಗೆ ಸಂಭಾಷಣೆ ನಡೆಸಿದೆ. ಆಗ ನಾನು ಇದ್ದಕ್ಕಿದ್ದಂತೆ ಪ್ರಸಿದ್ಧಳಾದೆ. ಇದರಿಂದ ಇಡೀ ಪಶ್ಚಿಮ ಬಂಗಾಳದ ನನ್ನ ಸಮುದಾಯದಲ್ಲಿ ಒಂದು ಬಗೆಯ ಧೈರ್ಯ ಬಂತು’’ ಎಂದು ನೆನಪಿಸಿಕೊಳ್ಳುತ್ತಾರೆ.

ಮಾನವಿ ಅವರ ಆತ್ಮಕಥನದಲ್ಲಿ ತಜ್ಞ ವೈದ್ಯರ ಸಲಹೆಯ ಮೇರೆಗೆ ಹಾರ್ಮೋನ್ಸ್ ಥೆರಪಿ ತೆಗೆದುಕೊಳ್ಳುತ್ತಾರೆ. ನಿಧಾನಕ್ಕೆ ಗಂಡು ದೇಹ ಹೆಣ್ಣಾಗಿ ಮಾಗುತ್ತದೆ, ಇದಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಈ ಅನುಭವವನ್ನು ಬಹಳ ತೀವ್ರವಾಗಿ ಕಟ್ಟಿಕೊಡುತ್ತಾರೆ. ಈ ಕುರಿತ ದೀರ್ಘ ಅನುಭವವು ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ನೆರವಾಗುವಂತಿದೆ. ಮಾನವಿಯವರು ಶಿಕ್ಷಕರಾದ ಮೊದಲಿನಿಂದ ಹಿಡಿದು ಪ್ರಾಂಶುಪಾಲೆ ಆದ ನಂತರವೂ ಸಮಾಜದ ಕಂಗೆಣ್ಣಿಗೆ ಗುರಿಯಾಗಿ ಅಪಾರ ಹಿಂಸೆಯನ್ನು ಅನುಭವಿಸುತ್ತಾರೆ. ಇಂತಹ ಕಂಗೆಡಿಸುವ ಹಿಂಸೆ ಕ್ರೌರ್ಯವನ್ನು ಹಲ್ಲುಕಚ್ಚಿ ಅನುಭವಿಸುತ್ತಲೇ ದಿಟ್ಟವಾಗಿ ಎದುರಿಸುತ್ತಾರೆ. ಬದುಕಲ್ಲಿ ಸೋತವರಿಗೆ ಈ ಆತ್ಮಕಥನ ಹೊಸ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಟ್ರಾನ್ಸ್ ಜೆಂಡರ್ ಸಮುದಾಯಗಳ ಪಾಲಿಗೆ ಸಾಂತ್ವನವನ್ನು ನೀಡುವ ಮಾನವೀಯ ಪಾಠದಂತಿದೆ. ಮಾನವಿ ಅವರ ಅನುಭವದ ತೀವ್ರತೆಯನ್ನು ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಸಮರ್ಥವಾಗಿ ಕನ್ನಡಕ್ಕೆ ದಾಟಿಸಿದ್ದಾರೆ. ಹಾಗಾಗಿ ಅನುವಾದಕರಿಗೆ ಕನ್ನಡದ ಓದುಗರ ಕೃತಜ್ಞತೆ ಸಲ್ಲುತ್ತವೆ.

(ಅಂಕಣಕಾರರು ಪ್ರಾಧ್ಯಾಪಕರು ಮತ್ತು ಜನಪದ ಸಂಶೋಧಕರು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor