ಔರಾದ್: ತಾಲೂಕಿನ ಯನಗುಂದಾ ಗ್ರಾಮದ ರೈತರೊಬ್ಬರು ನಿರುಪಯುಕ್ತ ಭೂಮಿಯನ್ನು ಬೇಸಾಯ ಪ್ರಕ್ರಿಯೆಗೆ ಸಜ್ಜುಗೊಳಿಸಿದ ನಂತರ ಗಿಡಗಳು, ತರಕಾರಿ ಬೆಳೆದು, ಹೈನುಗಾರಿಕೆಯಲ್ಲೂ ಲಾಭ ಪಡೆದುಕೊಂಡು ಹಲವಾರು ರೈತರಿಗೆ ಮಾದರಿಯಾಗಿದ್ದಾರೆ.

ರೈತ ವಿಠ್ಠಲರೆಡ್ಡಿ ಗಂಗಾಪುರೆ ಅವರು ತಮ್ಮ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭ ಗಳಿಸುತ್ತಾ, ಇತರ ರೈತರಿಗೂ ಮಾದರಿಯಾದ ಉದಾಹರಣೆಯಾಗಿದ್ದಾರೆ. ಅವರ ಮಗ ಲಕ್ಷ್ಮಣರೆಡ್ಡಿ ಶಿಕ್ಷಕರಾಗಿದ್ದು, ಸಮಯ ಸಿಕ್ಕಾಗ ತಂದೆಯ ಕೃಷಿಗೆ ಸಾಥ್ ನೀಡುತ್ತಾರೆ.

ಔರಾದ್ ತಾಲೂಕು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿ ಹೊಂದಿದ್ದು, ಆ ರಾಜ್ಯಗಳ ರೈತರು ಕೂಡ ಔರಾದ್ ತಾಲೂಕಿನ ಕೃಷಿ ಮಾರುಕಟ್ಟೆಯೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ರೈತರು ಕೂಡ ವಿಠ್ಠಲರೆಡ್ಡಿ ಅವರ ಹೊಲಕ್ಕೆ ಭೇಟಿ ನೀಡಿ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಅವರಿಗೆ ಸುಮಾರು 20 ಎಕರೆ ಜಮೀನು ಇದೆ. ಅದರಲ್ಲಿ ಸುಮಾರು 8 ಎಕರೆ ಬರಡು ಭೂಮಿಯಿದೆ. ಈ ಭೂಮಿಯಲ್ಲಿ ಯಾವುದೇ ರೀತಿಯ ಬೆಳೆಗಳು ಬಾರದ ಕಾರಣ, ಈ ಭೂಮಿಯಲ್ಲಿ ತರಹೇವಾರಿ ಗಿಡಿಗಳನ್ನು ಬೆಳೆದು ಈ ಭಾಗದ ರೈತರ ಗಮನ ಸೆಳೆಯುತ್ತಿದ್ದಾರೆ.

8 ಎಕರೆ ಬರಡು ಭೂಮಿಯಲ್ಲಿ 5 ಎಕರೆಯಲ್ಲಿ 7 ವರ್ಷದ ಹಿಂದೆಯೇ 1 ಸಾವಿರ ಶ್ರೀಗಂಧ (ಚಂದನ) ಗಿಡ, ಮಹಾಘನಿ 500, ತೆಂಗಿನ ಮರ 60, ಹೆಬ್ಬೆವು 600, ಹುಣಸೆ ಮರ 200 ಸೇರಿದಂತೆ ಮಾವಿನ ಮರಗಳು, ಪೇರಳೆ (ಜಾಫಳ‌ ಕಾಯಿ) ಮತ್ತು ಇತರೆ ಹಣ್ಣುಗಳ ಮರಗಳನ್ನು ಮೂರು ಎಕರೆ ಪ್ರದೇಶದಲ್ಲಿ ಬೆಳೆಸಿದ್ದಾರೆ. ಇನ್ನುಳಿದ 3 ಎಕರೆ ಬರಡು ಭೂಮಿಯಲ್ಲಿ ಸುಮಾರು 800 ನಿಂಬೆಹಣ್ಣಿನ ಗಿಡಗಳನ್ನು ನೆಟ್ಟಿದ್ದು, ಫಸಲಿಗೆ ಬಂದಿವೆ. ಈ ಎಲ್ಲ ಗಿಡಗಳಿಂದ ವಿಠ್ಠಲರೆಡ್ಡಿ ಅವರು ಹೆಚ್ಚಿನ ಆದಾಯದ ನಿರೀಕ್ಷೆ ಹೊಂದಿದ್ದಾರೆ.

ರೈತನ ಕೈಹಿಡಿದ ಪಲ್ಯದ ಅವರೆ ತರಕಾರಿ: 2 ಎಕರೆ ಭೂಮಿಯಲ್ಲಿ ಈ ವರ್ಷ ಮಳೆಗಾಲದಲ್ಲಿ ರೈತ ವಿಠ್ಠಲರೆಡ್ಡಿ ಅವರು ಪಲ್ಯದ ಅವರೆಕಾಯಿ ತರಕಾರಿ ಬೆಳೆದಿದ್ದು, ಒಂದು ಕೆಜಿಗೆ 60 ರೂಪಾಯಿನಂತೆ ಮಾರಾಟವಾಗುತ್ತಿದೆ. ಒಮ್ಮೆ ತರಕಾರಿ ಕಟಾವು ಮಾಡಿದಾಗ 5ರಿಂದ 6 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಧಾರಣೆ ಸಿಕ್ಕರೆ ಖರ್ಚು ವೆಚ್ಚ ತೆಗೆದು ಸುಮಾರು 4ರಿಂದ 5 ಲಕ್ಷ ರೂ. ಲಾಭ ಸಿಗಲಿದೆ ಎಂದು ವಿಠ್ಠಲರೆಡ್ಡಿ ಹೇಳಿಕೊಂಡಿದ್ದಾರೆ.

ಇನ್ನುಳಿದ ಐದು ಎಕರೆ ಭೂಮಿಯಲ್ಲಿ ಹತ್ತಿ, ಎರಡು ಎಕರೆಯಲ್ಲಿ ಕಬ್ಬು ಹಾಗೂ ಸೋಯಾ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದಿದ್ದಾರೆ. ಎರಡು ಬಾವಿಗಳ ಮೂಲಕ ಎಲ್ಲಾ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದು, ಇದರಿಂದ ನೀರು ಪೋಲಾಗದೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಠ್ಠಲರೆಡ್ಡಿ ಅವರು ಎರಡು ಜೋಡಿ ಎತ್ತು, ಎರಡು ಎಮ್ಮೆ ಹಾಗೂ ಎರಡು ದೇಸಿ ಆಕಳುಗಳನ್ನು ಸಾಕಿದ್ದಾರೆ. ಈ ದನಗಳ ಸಗಣಿ ಮತ್ತು ಮೂತ್ರದಿಂದಲೇ ಜೀವಾಮೃತ ತಯಾರಿಸಿ ಎಲ್ಲಾ ಬೆಳೆಗಳಿಗೆ ಔಷಧಿ ರೂಪದಲ್ಲಿ ಬಳಸುತ್ತಿದ್ದಾರೆ. ಹಾಗೆಯೇ ಎರೆಹುಳು ಗೊಬ್ಬರವನ್ನು ತಯಾರಿಸಿ ಹೊಲಕ್ಕೆ ಉಪಯೋಗಿಸಿ ಉತ್ತಮ ಇಳುವರಿ ಜತೆಗೆ ಆದಾಯವನ್ನೂ ಪಡೆಯುತ್ತಿದ್ದಾರೆ ಎಂದು ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಿಯಾಜಪಾಶಾ ಜಿ. ಕೊಳ್ಳೂರ

contributor