ರಾಯಚೂರು : ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಜಿಪಂ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಸಮೀಕ್ಷೆ ಕೈಗೊಂಡು 1.15 ಲಕ್ಷ ವೈಯಕ್ತಿಕ ಶೌಚಾಲಯಗಳ ಪರಿಶೀಲನೆ ಮಾಡಿದ್ದಾರೆ.
ರಾಯಚೂರನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಿದರೂ ಕಾಲಕಾಲಕ್ಕೆ ಪರಿಶೀಲನೆ ನಡೆಸದೆ ಜಿಪಂ ಕಡತ ಹಾಗೂ ಮಾಹಿತಿ ನಿರ್ವಾಹಣಾ ವ್ಯವಸ್ಥೆಯಲ್ಲಿ ದಾಖಲಿಸಿದ ಅಂಕಿ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಉಂಟಾಗಿತ್ತು. ಇದು ಅನೇಕ ಅನುಮಾನ ಮೂಡಿಸಿತ್ತು. ಈ ಬಗ್ಗೆ ವಾರ್ತಾಭಾರತಿ ಪತ್ರಿಕೆಯಲ್ಲಿ ಸೆ.16ರಂದು ‘ಸ್ವಚ್ಛ ಭಾರತ ಮಿಷನ್‌ನಲ್ಲಿ ಭಾರಿ ಅವ್ಯವಹಾರ?’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಈ ಕುರಿತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೂ ರಾಜ್ಯ ಸರಕಾರಕ್ಕೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದರು.
ಇದರಿಂದ ಎಚ್ಚೆತ್ತ ರಾಯಚೂರು ಜಿಪಂ ಸಿಇಒ ಅವರು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಪ್ರತಿಯೊಂದು ಅರ್ಹ ಕುಟುಂಬಕ್ಕೂ ವೈಯಕ್ತಿಕ ಗೃಹ ಶೌಚಾಲಯದ ಸೌಲಭ್ಯ ತಲುಪಿದೆಯೇ ಹಾಗೂ ನಿರ್ಮಿಸಲಾಗಿರುವ ಶೌಚಾಲಯಗಳು ಪ್ರಸ್ತುತ ಬಳಕೆಯಲ್ಲಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ರಾಯಚೂರು ಜಿಪಂನಿಂದ ‘‘ನಿರ್ಮಲ ರಾಯಚೂರು’’ ಮೊಬೈಲ್ ಆ್ಯಪ್ ಮೂಲಕ ಮನೆ-ಮನೆ ಸಮೀಕ್ಷೆ ಅಭಿಯಾನ ಹಮ್ಮಿಕೊಂಡಿದ್ದಾರೆ.
ಮನೆ-ಮನೆ ಭೇಟಿ ಹಾಗೂ ತಂತ್ರಜ್ಞಾನದ ಬಳಕೆ: ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷ ಸಮೀಕ್ಷಾ ತಂಡಗಳನ್ನು ರಚಿಸಲಾಗಿದ್ದು, ಸದಸ್ಯರು ಪ್ರತಿಯೊಂದು ಮನೆಗೆ ಕಡ್ಡಾಯವಾಗಿ ಭೇಟಿ ನೀಡಿ ಶೌಚಾಲಯಗಳ ಭೌತಿಕ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ನಿರ್ಮಲಾ ರಾಯಚೂರು ಮೊಬೈಲ್ ಆ್ಯಪ್‌ನಲ್ಲಿ ಸ್ಥಳದಲ್ಲೇ ಮಾಹಿತಿ ದಾಖಲಿಸುತ್ತಿದ್ದಾರೆ. ನೈಜ ಸಮಯದಲ್ಲಿ ಮಾಹಿತಿ ಸಂಗ್ರಹಿಸಿ, ಗ್ರಾಪಂ ಹಾಗೂ ತಾಲೂಕುವಾರು ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಜಿಲ್ಲೆಯ 179 ಗ್ರಾಪಂಗಳಲ್ಲಿ ಸೆ.21ರಿಂದ ಸಮೀಕ್ಷೆ ಪ್ರಾರಂಭವಾಗಿದ್ದು, 15 ದಿನಗಳ ಕಾಲ ಸಮಗ್ರ ಸಮೀಕ್ಷಾ ಕಾರ್ಯ ನಡೆಯಲಿದೆ. ತಾಪಂ ಹಾಗೂ ಜಿಪಂ ಮಟ್ಟದ ಅಧಿಕಾರಿಗಳು ಸಮೀಕ್ಷಾ ಕಾರ್ಯವನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಗ್ರಾಪಂ ಹಾಗೂ ತಾಲೂಕುವಾರು ಮಾಹಿತಿ ಕ್ರೋಢೀಕರಿಸಿ ಅಂತಿಮ ವರದಿಯನ್ನು ಜಿಪಂಗೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ ಸಿಇಒ ಈಶ್ವರ್ ಕಯಮಾರ ಕಾಂದೂ ತಿಳಿಸಿದ್ದಾರೆ.
1.15 ಲಕ್ಷಕ್ಕೂ ಅಧಿಕ ಶೌಚಾಲಯಗಳ ಸಮೀಕ್ಷೆ ಪೂರ್ಣ: ಇದೀಗ ಜಿಲ್ಲೆಯ ಒಟ್ಟು 3,02,753 ವೈಯಕ್ತಿಕ ಗೃಹ ಶೌಚಾಲಯಗಳ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ 1,15,282 ಶೌಚಾಲಯಗಳ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ 1,87,471 ಶೌಚಾಲಯಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.
ತಾಲೂಕುವಾರು ಪೂರ್ಣಗೊಂಡ ಸಮೀಕ್ಷೆಯ ವಿವರ
ದೇವದುರ್ಗ: 19,313, ಲಿಂಗಸುಗೂರು: 19,611, ಮಾನ್ವಿ: 7,174, ಮಸ್ಕಿ: 15,315
ರಾಯಚೂರು: 23,868, ಸಿಂಧನೂರು: 22,208
ಸಿರವಾರ: 7,793
ರಾಯಚೂರು ಜಿಲ್ಲೆಯನ್ನು ಸಂಪೂರ್ಣ ಬಹಿರ್ದೆಸೆ ಮುಕ್ತವನ್ನಾಗಿಸಲು ಪಣ ತೊಟ್ಟಿದ್ದೇವೆ. ಹೀಗಾಗಿ ವೈಯಕ್ತಿಕ ಶೌಚಾಲಯಗಳ ಸ್ಥಿತಿಗತಿ ಪರಿಶೀಲನೆ ನಡೆಸಲಾಗುತ್ತಿದೆ. ನಿರ್ಮಲ ರಾಯಚೂರು ಆ್ಯಪ್ ಮೂಲಕ ಪ್ರತಿದಿನ ಸರಿಸುಮಾರು 1000 ರಿಂದ 1,500 ಸದಸ್ಯರು ಶೌಚಾಲಯಗಳ ಮನೆ-ಮನೆ ಸಮೀಕ್ಷೆ ಮಾಡುತ್ತಿದ್ದಾರೆ. ಸಮೀಕ್ಷೆಯ ಮೂಲಕ ದಾಖಲೆಗಳಲ್ಲಿರುವ ಮಾಹಿತಿಯನ್ನು ವಾಸ್ತವ ಸ್ಥಿತಿಯೊಂದಿಗೆ ಪರಿಶೀಲಿಸಿ, ಶೌಚಾಲಯಗಳ ಲಭ್ಯತೆ, ಬಳಕೆ ಹಾಗೂ ಸ್ಥಿತಿಗತಿಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
- ಈಶ್ವರ್ ಕುಮಾರ ಕಾಂದೂ
ಜಿಪಂ ಸಿಇಒ ರಾಯಚೂರು