15ನೇ ಹಣಕಾಸು ಆಯೋಗದ ಅನುದಾನ ಸ್ಥಗಿತ: ಗ್ರಾ.ಪಂ. ನಿರ್ವಹಣೆಗೆ ಸಂಕಷ್ಟ
ಬೀದಿದೀಪ, ಕುಡಿಯುವ ನೀರಿನ ಮೋಟರ್ ದುರಸ್ತಿಗೂ ಹಣವಿಲ್ಲ
ಯಡ್ರಾಮಿ: ಕೇಂದ್ರ ಸರಕಾರದ 15ನೇ ಹಣಕಾಸು ಆಯೋಗದ ಅನುದಾನ ಕಳೆದ ಒಂದೂವರೆ ವರ್ಷದಿಂದ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕುಡಿಯುವ ನೀರಿನ ಮೋಟಾರ್ ದುರಸ್ತಿ, ಬೀದಿದೀಪ ನಿರ್ವಹಣೆ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ದಿನನಿತ್ಯದ ಕಚೇರಿ ನಿರ್ವಹಣೆಗೂ ಹಣದ ಕೊರತೆ ಎದುರಿಸುತ್ತಿವೆ.
ತಾಲೂಕಿನ ಶೇ.90ರಷ್ಟು ಗ್ರಾಮ ಪಂಚಾಯತ್‌ಗಳು 15ನೇ ಹಣಕಾಸು ಆಯೋಗದ ಅನುದಾನವನ್ನೇ ದೈನಂದಿನ ನಿರ್ವಹಣೆಗೆ ಅವಲಂಬಿಸಿವೆ. 2025ರ ಏಪ್ರಿಲ್‌ನಿಂದ ಅನುದಾನ ಬಿಡುಗಡೆಯಾಗದಿರುವುದು ಪಂಚಾಯತ್‌ಗಳಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಿದ್ಯುತ್ ಬಿಲ್ ಬಾಕಿ: ಹಲವು ಪಂಚಾಯತ್‌ಗಳು ಏಳೆಂಟು ತಿಂಗಳಿಂದ ಬೀದಿದೀಪ ಹಾಗೂ ಕುಡಿಯುವ ನೀರಿನ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಪಾವತಿಸಿಲ್ಲ. ಲಕ್ಷಾಂತರ ರೂ. ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ನೋಟಿಸ್ ನೀಡುತ್ತಿದ್ದಾರೆ. ಆದರೂ ಕೇಂದ್ರ ಸರಕಾರ ಪಾವತಿಸಬೇಕಾದ ಅನುದಾನ ನೀಡುತ್ತಿಲ್ಲ ಎನ್ನಲಾಗಿದೆ.
ಬೀದಿದೀಪ, ಮೋಟಾರ್ ದುರಸ್ತಿಗೂ ಹಣವಿಲ್ಲ: ಸಕಾಲ ಯೋಜನೆಯಡಿ ಬೀದಿದೀಪ ಕೆಟ್ಟರೆ ಮೂರು ದಿನಗಳಲ್ಲಿ ದುರಸ್ತಿ ಮಾಡಬೇಕಿದೆ. ಆದರೆ ಹಿಂದಿನ ದುರಸ್ತಿ ಕಾಮಗಾರಿಗಳ ಬಿಲ್‌ಗಳೇ ಬಾಕಿ ಇರುವುದರಿಂದ ಹೊಸದಾಗಿ ಕೆಲಸ ಮಾಡಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಕುಡಿಯುವ ನೀರಿನ ಮೋಟಾರ್ ಕೆಟ್ಟರೂ ದುರಸ್ತಿ ಮಾಡಿಸುವುದು ಪಂಚಾಯತ್‌ಗಳಿಗೆ ಸವಾಲಾಗಿದೆ.
ಸ್ಥಳೀಯವಾಗಿ ಸಂಗ್ರಹವಾಗುವ ವರಮಾನದಲ್ಲಿ ಶೇ.53ರಷ್ಟು ಸರಕಾರಕ್ಕೆ ಪಾವತಿಸಿದ ಬಳಿಕ ಉಳಿಯುವ ಶೇ.47ರಷ್ಟು ಹಣದಲ್ಲಿ ಹೊರಗುತ್ತಿಗೆ ನೌಕರರ ವೇತನ ಸೇರಿದಂತೆ ಇತರೆ ನಿರ್ವಹಣಾ ವೆಚ್ಚಗಳನ್ನು ಭರಿಸಬೇಕಾಗಿದೆ. ಇದರಿಂದ ಕಂಪ್ಯೂಟರ್ ದುರಸ್ತಿ, ಆ್ಯಂಟಿ ವೈರಸ್ ಅಳವಡಿಕೆ ಸೇರಿದಂತೆ ಸಣ್ಣಪುಟ್ಟ ಕಚೇರಿ ಕೆಲಸಗಳಿಗೂ ಹಣದ ಕೊರತೆ ಉಂಟಾಗಿದೆ. ಗ್ರಾಮಸಭೆ ಅಥವಾ ಕಚೇರಿಗೆ ಬರುವವರಿಗೆ ಕಾಫಿ, ಟೀ ವ್ಯವಸ್ಥೆ ಮಾಡಲೂ ಕಷ್ಟವಾಗಿದೆ ಎಂದು ಪಿಡಿಒಗಳು ಅಳಲು ತೋಡಿಕೊಂಡಿದ್ದಾರೆ.
ಇದರ ಜತೆಗೆ ತಾಲೂಕಿನಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಬೇಸಿಗೆಗೂ ಮುನ್ನವೇ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಸಂದರ್ಭದಲ್ಲಿ ಪಂಚಾಯತ್‌ಗಳಿಗೆ ಅನುದಾನದ ಕೊರತೆ ಮುಂದುವರಿದರೆ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯಗಳ ನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಕೇಂದ್ರ ಸರಕಾರ ತನ್ನ ಪಾಲಿನ ಅನುದಾನ ನೀಡದೆ ಇರುವುದರಿಂದ ಇದೀಗ ಗ್ರಾಮ ಪಂಚಾಯತ್ ನಿರ್ವಹಣೆ ಸವಾಲಾಗಿದೆ. ಬೀದಿದೀಪಗಳು ಕೆಟ್ಟು ತಿಂಗಳಾದರೂ ರಿಪೇರಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಬರ ಎದುರಾಗಿರುವ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಮೋಟಾರ್ ಕೆಟ್ಟರೆ ದುರಸ್ತಿ ಮಾಡಿಸಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ.
-ಹೆಸರು ಹೇಳಲು ಇಚ್ಛಿಸದ ಪಿಡಿಒ