ವಾಸವಿಲ್ಲ ಎಂದು ಫಾರಂ ತಿರಸ್ಕಾರ: ಬಾಡಿಗೆ, ಲೈನ್ ಮನೆಯವರಿಗೆ ಎಸ್‌ಐಆರ್ ಶಾಕ್

2002ರ ಪಟ್ಟಿಯಲ್ಲಿ ಹೆಸರು ಹುಡುಕುವುದೇ ದೊಡ್ಡ ಸವಾಲು

Update: 2026-07-23 14:53 IST

ಮಡಿಕೇರಿ: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಆರಂಭವಾಗಿ ಮೂರು ವಾರ ಪೂರ್ಣಗೊಂಡಿದ್ದು, ಆಗಸ್ಟ್ 8ರವರೆಗೆ ಮತದಾರರು ಎನ್ಯುಮರೇಶನ್ ಫಾರಂ ಮತಗಟ್ಟೆ ಅಧಿಕಾರಿಗಳಿಗೆ ಹಿಂತಿರುಗಿಸಲು ಅವಕಾಶ ಇದೆ.

ಕೊಡಗು ಜಿಲ್ಲೆಯಲ್ಲಿ ಶೇ.100ರಷ್ಟು ಮತದಾರರಿಗೆ ಎನ್ಯುಮರೇಶನ್ ಫಾರಂ ವಿತರಣೆ ಪೂರ್ಣಗೊಂಡಿದ್ದು ಮತದಾರರ ಮಾಹಿತಿ ಡಿಜಿಟಲೀಕರಣ ಸಾಗುತ್ತಿದೆ. ಆದರೆ ಮತದಾರರಿಗೆ 2002ರ ಮತದಾರರ ಪಟ್ಟಿಯಲ್ಲಿನ ಮಾಹಿತಿ ಹುಡುಕುವುದೇ ಸವಾಲಾಗಿದೆ.

2002ರಲ್ಲಿ 18 ವರ್ಷ ಪೂರ್ಣಗೊಂಡಿದ್ದ ಬಹುತೇಕರು ಅಂದಿನ ಮತದಾರರ ಪಟ್ಟಿಯಲ್ಲಿ ಸೇರಿರಲಿಲ್ಲ. ಇನ್ನೂ ಕೆಲವರಿಗೆ 2002ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಯಾವ ಬೂತ್‌ನಲ್ಲಿ ಇದೆ ಎಂಬ ಮಾಹಿತಿ ಇಲ್ಲ. ಇದರಿಂದಾಗಿ ಮತದಾರರು ಗೊಂದಲಕ್ಕೀಡಾಗಿದ್ದಾರೆ.

2002ರಲ್ಲಿ ಯಾವ ಕ್ಷೇತ್ರದಲ್ಲಿ ವೋಟ್ ಇತ್ತು ಎಂಬುದೇ ಗೊಂದಲ:

2002ರಲ್ಲಿ ನಡೆದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿತ್ತು. ಮಡಿಕೇರಿ, ಸೋಮವಾರಪೇಟೆ, ಹಾಗೂ ವಿರಾಜಪೇಟೆ ಕ್ಷೇತ್ರಗಳು. ನಂತರ 2008ರ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಎರಡಕ್ಕಿಳಿಸಲಾಗಿತ್ತು. 2002ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರಿಗೆ ಯಾವ ಕ್ಷೇತ್ರದಲ್ಲಿ ತಮ್ಮ ಹೆಸರು ಇತ್ತು ಎಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ಸಿದ್ದಾಪುರ, ಗುಹ್ಯ,ಚೆನ್ನಯ್ಯನ ಕೋಟೆ,ಮಾಲ್ದಾರೆ ಹಾಗೂ ಹುಂಡಿ ಗ್ರಾಮಗಳು ಮಡಿಕೇರಿ ಕ್ಷೇತ್ರ ವ್ಯಾಪ್ತಿಗೊಳಪಟ್ಟಿತ್ತು. ಈ ಭಾಗದಲ್ಲಿ ಕೆಲವು ಮತದಾರರು ತಮ್ಮ 2002ರ ಮಾಹಿತಿಯನ್ನು ವಿರಾಜಪೇಟೆ ಕ್ಷೇತ್ರದಲ್ಲಿ ಹುಡುಕಿ ಗೊಂದಲಕ್ಕೀಡಾಗಿದ್ದಾರೆ.

ಒಂದೇ ಬೂತ್‌ನಲ್ಲಿ ಒಂದೇ ಹೆಸರಿನ 20ಕ್ಕೂ ಹೆಚ್ಚು ಮಂದಿ ಮತದಾರರು:

2002ರ ಮತದಾರರ ಪಟ್ಟಿಯಲ್ಲಿ ಮತ ದಾರರ ಹೆಸರು, ವಯಸ್ಸು,ಸಂಬಂಧ ಹಾಗೂ ಸಂಬಂಧಿಯ ಹೆಸರು ಮಾತ್ರ ಇದೆ.ಕೆಲವರಿಗೆ ಮಾತ್ರ ಮತದಾರರ ಗುರುತಿ ಚೀಟಿ ಸಂಖ್ಯೆ ಇದೆ.ಆದರೆ ಫೋಟೊ ಮುದ್ರಿತವಾಗಿರಲಿಲ್ಲ. ಫೋಟೊ ಇಲ್ಲದೆ ಇರುವುದೇ ಈಗ ಸಮಸ್ಯೆಯಾಗಿದೆ. ಬಹುತೇಕ ಕಡೆಗಳಲ್ಲಿ ಒಂದೇ ಬೂತ್ ನಲ್ಲಿ ಒಂದೇ ರೀತಿಯ ಹೆಸರು,ಸಂಬಂಧಿಯ ಹೆಸರು ಇರುವ ಮತದಾರರು ಇದ್ದಾರೆ.

ಇದರಿಂದಾಗಿ ಎನ್ಯುಮರೇಶನ್ ಫಾರಂ ಭರ್ತಿ ಮಾಡುವಾಗ ಸಮಸ್ಯೆಗೆ ಸಿಲುಕಿದ್ದಾರೆ. ಬೂತ್ ಒಂದರಲ್ಲಿ ಒಂದೇ ಹೆಸರಿನ ವ್ಯಕ್ತಿಯೊಬ್ಬರು ತಮ್ಮ 2002ರ ಮತದಾರರ ಪಟ್ಟಿಯಲ್ಲಿನ ಮಾಹಿತಿಯನ್ನು ಎನ್ಯುಮರೇಶನ್ ಫಾರಂನಲ್ಲಿ ಭರ್ತಿಮಾಡಿ ಬಿಎಲ್‌ಒಗೆ ನೀಡಿದ್ದಾರೆ. ಆದರೆ ಅದೇ ಮತಗಟ್ಟೆಯ ಸಮಾನವಾದ ಹೆಸರು ಇರುವ ಮತ್ತೊಬ್ಬ ಮತದಾರರೊಬ್ಬರಿಗೆ ಮ್ಯಾಪಿಂಗ್ ಆಗಿದೆ.

ಆದಿವಾಸಿಗಳು, ಲೈನ್ ಮನೆ ನಿವಾಸಿಗಳು 2002ರ ಪಟ್ಟಿಯಲ್ಲಿ ಇಲ್ಲ:

ಜಿಲ್ಲೆಯಲ್ಲಿ ಆದಿವಾಸಿಗಳು ಹಾಗೂ ಲೈನ್ ಮನೆಯಲ್ಲಿ ವಾಸಿಸುತ್ತಿರುವ ಬಹುತೇಕ ಮತದಾರರ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಅದಲ್ಲದೇ ಅವರ ಪೋಷಕರ ಹೆಸರೂ ಪಟ್ಟಿಯಲ್ಲಿ ಇಲ್ಲದಿರುವುದು ಇದೀಗ ಸಮಸ್ಯೆಯಾಗಿದೆ.

ಎನ್ಯುಮರೇಶನ್ ಫಾರಂ ಭರ್ತಿ ಮಾಡಿದರೂ ಮ್ಯಾಪಿಂಗ್ ಆಗದ ಮತದಾರರಿಗೆ ಕರಡು ಪಟ್ಟಿಯನಂತರ ನೋಟಿಸ್ ಜಾರಿಯಾಗಲಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ದಾಖಲೆ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಲೈನ್ ಮನೆಯಲ್ಲಿ ವಾಸಿಸುವವರು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯ. 2024ರಲ್ಲಿ ಒಂದು ತೋಟದಲ್ಲಿ ಕೆಲಸ ನಿರ್ವಹಿಸಿದ್ದ ಮತದಾರ ಮತ್ತೊಂದು ತೋಟದ ಲೈನ್ ಮನೆಗೆ ವರ್ಗಾವಣೆಯಾಗಿದ್ದಾನೆ.

ಆದರೆ ಆತನ ವೋಟ್ ತನ್ನ ಹಳೆಯ ಬೂತ್ ನಲ್ಲೇ ಇದೆ.ಆದರೆ ಬಿಎಲ್‌ಒಗಳು ಆ ಮತದಾರರ ಮಾಹಿತಿ ಕಲೆಹಾಕದೆ ಸ್ಥಳಾಂತರ ಎಂದು ಎನ್ಯುಮರೇಶನ್ ಫಾರಂ ವಿತರಣೆ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಸಿದ್ದಾಪುರ, ಮಾಲ್ದಾರೆ ಮತ್ತು ಅಮ್ಮತ್ತಿ ಭಾಗದ ಪುಲಿಯೇರಿ,ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದವರಿಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾಗಿದೆ. ಬಾಡಿಗೆ ಮನೆಯಿಂದ ಶಿಫ್ಟ್ ಆಗಿರುವವರು ತಮ್ಮ ಪ್ರಸಕ್ತ ವಿಳಾಸಕ್ಕೆ ಮತದಾರರ ವಿಳಾಸವನ್ನು ಬದಲಾಯಿಸಿಲ್ಲ. ಬಿಎಲ್‌ಒಗಳು ಎನ್ಯುಮರೇಶನ್ ಫಾರಂ ವಿತರಿಸುವ ಸಂದರ್ಭದಲ್ಲಿ ಬಾಡಿಗೆ ಮನೆಯಲ್ಲಿ ಮತದಾರರು ಪತ್ತೆಯಾಗದ ಸಂದರ್ಭದಲ್ಲಿ ಸ್ಥಳಾಂತರ ಎಂದು ಗುರುತಿಸಿ,ಅಂತಹ ಮತದಾರರಿಗೆ ಎನ್ಯುಮರೇಶನ್ ಫಾರಂ ವಿತರಣೆ ಮಾಡುತ್ತಿಲ್ಲ.ಅದಲ್ಲದೇ ಆ ಮತದಾರರ ಪ್ರಸಕ್ತ ವಿಳಾಸವನ್ನು ಪತ್ತೆ ಹಚ್ಚುವ ಗೋಜಿಗೆ ಹೋಗುತ್ತಿಲ್ಲ ಎಂಬ ಆರೋಪ ಸಿದ್ದಾಪುರ ಭಾಗದಲ್ಲಿ ಕೇಳಿಬಂದಿದೆ.

ಎನ್ಯುಮರೇಶನ್ ಫಾರಂ ಸಿಗದ ಮತದಾರರು ಆಗಸ್ಟ್ 8ರ ಕರಡು ಪಟ್ಟಿಯ ನಂತರ ಹೊಸದಾಗಿ ಅರ್ಜಿ-6 ಪಡೆದು ಮತ್ತೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕಾಗಿದೆ.

ನಾನು ಕಳೆದ ಎರಡು ಇಲೆಕ್ಷನ್‌ನಲ್ಲಿ ವೋಟ್ ಮಾಡಿದ್ದೇನೆ. 2025ರ ಮತದಾರರ ಪಟ್ಟಿಯಲ್ಲಿಯೂ ಹೆಸರು ಇದೆ.ಆದರೆ ನನಗೆ ಎನ್ಯುಮರೇಶನ್ ಫಾರಂ ಸಿಕ್ಕಿಲ್ಲ. ಇದರ ಬಗ್ಗೆ ಬಿಎಲ್‌ಒಗೆ ಮಾಹಿತಿ ಕೇಳುವಾಗ ವೋಟ್ ಡಿಲಿಟ್ ಆಗಿದೆ ಎಂದು ಹೇಳಿದ್ದಾರೆ. ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಯಾಕಾಗಿ ವೋಟ್ ಡಿಲಿಟ್ ಆಗಿದೆ ಎಂಬುದರ ಕಾರಣ ಹೇಳುತ್ತಿಲ್ಲ.

-ಫೌಜಿಯಾ,ಸಿದ್ದಾಪುರ

ಜಿಲ್ಲೆಯ 47 ಬೂತ್‌ಗಳಲ್ಲಿ ಸ್ಥಳಾಂತರಗೊಂಡ ಮತದಾರರು ಹೆಚ್ಚು ಪತ್ತೆಯಾಗಿದ್ದಾರೆ. ಇವರ ಮಾಹಿತಿಯನ್ನು ಪಕ್ಷದ ವತಿಯಿಂದ ಸಂಗ್ರಹಿಸಲಾಗುತ್ತಿದೆ. ಲೈನ್ ಮನೆಯಲ್ಲಿ ವಾಸಿಸುತ್ತಿರುವವರು,ಬಾಡಿಗೆ ಮನೆಯಿಂದ ಶಿಫ್ಟ್ ಆದವರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. 2025ರಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿರುವವರು ಇದೀಗ ತೋಟ ಬದಲಾವಣೆ ಮಾಡಿದ್ದಾರೆ. ಆದರೆ ಅದರಲ್ಲಿ ಬಹುತೇಕರು ತಮ್ಮ ಮತದಾರರ ವಿಳಾಸವನ್ನು ಬದಲಾಯಿಸಿಲ್ಲ. ಅಂತಹ ಮತದಾರರನ್ನು ಬಿಎಲ್‌ಒಗಳು ಸ್ಥಳಾಂತರ ಎಂದು ಗುರುತಿಸಿ ಎನ್ಯುಮರೇಶನ್ ಫಾರಂ ನೀಡುತ್ತಿಲ್ಲ. ಇದರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇವೆ. ಬಿಎಲ್‌ಒಗಳಿಗೆ ಮತದಾರರ ಮಾಹಿತಿ ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ನಾವು ಪತ್ತೆ ಹಚ್ಚಲು ಸಹಕಾರ ಮಾಡುತ್ತೇವೆ ಎಂದು ತಿಳಿಸಿದ್ದೇವೆ.

-ತೆನ್ನಿರ ಮೈನಾ

ಎಸ್‌ಐಆರ್ ವಾರ್ ರೂಂ ಅಧ್ಯಕ್ಷ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವರಿಗೆ ಸಮಸ್ಯೆ ಎದುರಾಗಿದೆ.ಬಾಡಿಗೆ ಮನೆಯಿಂದ ಶಿಫ್ಟ್ ಆದವರು ತಮ್ಮ ವಿಳಾಸಕ್ಕೆ ವೋಟರ್ ಐಡಿ ವಿಳಾಸ ಬದಲಾವಣೆ ಮಾಡಿಲ್ಲ. ಪ್ರಸಕ್ತ ಅವರು ವಾಸವಿಲ್ಲ, ಸ್ಥಳಾಂತರವಾಗಿದ್ದಾರೆ ಎಂದು ಎನ್ಯುಮರೇಶನ್ ಫಾರಂ ವಿತರಣೆ ಮಾಡುತ್ತಿಲ್ಲ. 2025ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಹುತೇಕ ಮತದಾರರು ಇದೀಗ ಪಟ್ಟಿಯಿಂದ ಡಿಲಿಟ್ ಆಗಿದ್ದು ಅವರಿಗೆ ಎನ್ಯುಮರೇಶನ್ ಫಾರಂ ವಿತರಣೆಯಾಗಿಲ್ಲ. ಕಳೆದ ಎರಡು ಚುನಾವಣೆಯಲ್ಲಿ ಮತ ಹಾಕಿರುವವರ ಹೆಸರು ಡಿಲಿಟ್ ಆಗಿದ್ದಕ್ಕೆ ಕಾರಣವೇನೆಂದು ಆರ್‌ಐ,ಬಿಎಲ್‌ಒ ಹೇಳುತ್ತಿಲ್ಲ, ಈ ಸಮಸ್ಯೆ ಎಲ್ಲ ಕಡೆಗಳಲ್ಲಿ ಇದೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಿಲ್ಲಾಡಳಿತ ಕ್ರಮವಹಿಸಬೇಕು.

-ಎ.ಎಸ್. ಮುಸ್ತಫಾ

ಸಾಮಾಜಿಕ ಕಾರ್ಯಕರ್ತ ಸಿದ್ದಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News