×
Ad

ಚೋರತನವನ್ನೇ ನಿಷ್ಠೆಯಿಂದ ಮಾಡುತ್ತಿದ್ದ ‘ಗಂಟಿಚೋರ್’

Update: 2026-05-20 10:16 IST

ದೇಶಾದ್ಯಂತ ಗಂಟಿಚೋರ್ ಸಮುದಾಯ ಬೇರೆ ಬೇರೆ ಹೆಸರುಗಳಲ್ಲಿ ಹರಡಿ ಕೊಂಡಿದೆ. ಗಂಟಿಚೋರ್, ಗಿರಣಿ ಒಡ್ಡರ್, ಗುನ್ಹೆಗಾರ, ತುಡುಗು ಒಡ್ಡರ್, ಕಳ್ಳವಡ್ಡರ್, ಕತ್ರಾಸ್, ಬಾಮ್ಟಾ, ಠಕಾರಿ ಬಾಮ್ಟಾ, ಪಾತ್ರೋಟ್ ಮತ್ತು ಉಚಲ್ಯಾ ಮುಂತಾಗಿ ಅನೇಕ ಹೆಸರುಗಳಿಂದ ಗುರುತಿಸಿಕೊಂಡಿದೆ. ಇವರು ಯಾವುದೇ ಹೆಸರುಗಳಿಂದ ಗುರುತಿಸಿಕೊಂಡರೂ ಒಟ್ಟಾರೆಯಾಗಿ ಇವರು ಸಾಂಸ್ಕೃತಿಕವಾಗಿ ‘ಶಾಕ್ತಪಂಥ’ದಿಂದ ಗುರುತಿಸಿಕೊಂಡಿರುವುದು ಗಮನಾರ್ಹ.

ಸುಮಾರು ವರ್ಷಗಳ ಹಿಂದೆ ನಾನು ಮತ್ತು ಸಾಹಿತಿ ಗೆಳೆಯ ರಾಜಪ್ಪ ದಳವಾಯಿ ಅವರು ಯಾವುದೋ ಕಾರ್ಯಕ್ರಮಕ್ಕೆ ಒಟ್ಟಿಗೆ ಹೋಗುತ್ತಿದ್ದಾಗ ಗಂಟಿಚೋರ್, ಪಾರ್ದಿಯಂತಹ ವಿಮುಕ್ತ ಅಪರಾಧಿ ಬುಡಕಟ್ಟುಗಳ ಕುರಿತು ಮಾತನಾಡುತ್ತಿದ್ದೆವು, ಮಾತಿನ ಮಧ್ಯೆ ರಾಜಪ್ಪ ಅವರು ‘‘ನೀವು ಉಚಲ್ಯ ಓದಿಲ್ಲವ..?’’ ಎಂದರು. ನಾನು ಇಲ್ಲ ಅಂದೆ. ಅಷ್ಟರಲ್ಲಿ ತುಮಕೂರು ಬಂದಿತ್ತು. ತುಮಕೂರಿನ ಪುಸ್ತಕ ಅಂಗಡಿಯೊಂದರ ಮುಂದೆ ನಿಲ್ಲಿಸಿ ತಾವೇ ಒಳಹೋಗಿ ನನಗೆ ಲಕ್ಷ್ಮಣ ಗಾಯಕವಾಡ್ ಅವರ ‘ಉಚಲ್ಯ’ ತಂದುಕೊಟ್ಟರು. ನಾನು ಆಸಕ್ತಿಯಿಂದ ಉಚಲ್ಯ ಓದಿದೆ. ಉಚಲ್ಯ ಓದಿದ ನಂತರ ಅಪರಾಧಿ ಬುಡಕಟ್ಟುಗಳೆಂಬ ಕಳಂಕ ಹೊತ್ತ ಬಾಮ್ಟ, ಠಕಾರಿ ಬಾಮ್ಟಾ, ಉಚಲ್ಯಾ, ಗಂಟಿಚೋರ್, ಪಾರ್ದಿಗಳೆಂಬ ಅಲೆಮಾರಿಗಳ ಲೋಕ ನನ್ನ ಮುಂದೆ ತೆರೆದುಕೊಂಡಿತು!

ಕರ್ನಾಟಕದಲ್ಲಿ ಗಂಟಿಚೋರ್ ಸಮುದಾಯದ ನಾಯಕ ಸುರೇಶ್. ಈತ ಒಂದಷ್ಟು ಗಂಟಿಚೋರ್ ಸಮುದಾಯವನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಗೋಕಾಕ್ ಫಾಲ್ಸ್ ಬಳಿಯ ಗಂಟಿಚೋರ್ ಸಮುದಾಯ ನೆಲೆಸಿರುವ ಸೆಟಲ್ಮೆಂಟ್‌ಗೆ ಒಮ್ಮೆ ಕರೆದೊಯ್ದರು. ಯಾವುದೇ ಜೈಲಿಗಿಂತಲೂ ಎತ್ತರದ ದೊಡ್ಡ ಗೋಡೆ, ಇಂತಹ ನಾಲ್ಕು ಗೋಡೆಗಳ ನಡುವೆ ಹಂದಿಗೂಡುಗಳಂತಹ ಮನೆಗಳು. ಪಕ್ಕದಲ್ಲೇ ಬ್ರಿಟಿಷರ ಕಾಲದ ಬಟ್ಟೆ ಗಿರಣಿ, ಈ ಗಿರಣಿಯ ಒಳಹೋಗಿ ಕೆಲಸ ಮಾಡಿ ಬರಲು ಒಂದು ಸಣ್ಣ ಓಣಿ, ಕೆಲಸ ಮಾಡಿದ ನಂತರ ಗಂಟಿಚೋರ್ ಸಮುದಾಯದ ಕಾರ್ಮಿಕರು ಎಲ್ಲೂ ಹೊರಹೋಗದಂತೆ ಸರ್ಪಗಾವಲು! ಮನೆ, ಮಡದಿ, ಮಕ್ಕಳು, ವಯಸ್ಸಾದವರು ಎಲ್ಲರೂ ಈ ಸೆಟಲ್ಮೆಂಟ್‌ನೊಳಗೇ ಸದಾ ಬಂದಿಯಾಗಿರಬೇಕು! ನಿಮಗೆ ಈ ಗಂಟಿಚೋರ್ ಸಮುದಾಯದವರು ಹೇಗೆ ಬದುಕಿರಬಹುದೆಂಬ ಒಂದು ಕಲ್ಪನೆ ಬರಬೇಕಾದರೆ ನೀವೊಮ್ಮೆ ಗೋಕಾಕ್ ಬಳಿಯ ಗಂಟಿಚೋರ್ ಸೆಟಲ್ಮೆಂಟ್‌ಗೆ ಹೋಗಿ ನೋಡಿ ಬರಬೇಕು.

ಗಂಟಿಚೋರ್ ಸಮುದಾಯಕ್ಕೆ ‘ಗಂಟುಕಳ್ಳರು’ ಎಂಬ ಕಳಂಕ ಇರುವುದರಿಂದ ಇದರಿಂದ ತಪ್ಪಿಸಿಕೊಳ್ಳಲು ಈ ಸಮುದಾಯದವರು ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು ಇವರು ‘ಗಿರಣಿ ಒಡ್ಡರ್’ ಎಂದು ತಮ್ಮನ್ನು ತಾವು ಗುರುತಿಸಿಕೊಂಡು ಅದೇ ಹೆಸರಲ್ಲಿ ಜಾತಿ ಸರ್ಟಿಫಿಕೇಟ್ ಪಡೆಯುತ್ತಾ ತಮ್ಮ ಕರಾಳ ಅಸ್ಮಿತೆಯನ್ನು ಮರೆಮಾಚತೊಡಗಿದರು. ಆದರೆ ಹಿಂದಿನವರು ಗಂಟಿಚೋರ್ ಹೆಸರಲ್ಲಿ ಸರ್ಟಿಫಿಕೇಟ್ ಪಡೆದು ಈಗಿನವರು ಗಿರಣಿ ಒಡ್ಡರ್ ಹೆಸರಲ್ಲಿ ಸರ್ಟಿಫಿಕೇಟ್ ಪಡೆಯುತ್ತಿದ್ದುದರಿಂದ ಇವರಿಗೆ ಜಾತಿ ಸರ್ಟಿಫಿಕೇಟ್ ಪಡೆಯಲು ಇಲ್ಲದ ಗೊಂದಲವಾಗತೊಡಗಿತು.

ದೇಶಾದ್ಯಂತ ಗಂಟಿಚೋರ್ ಸಮುದಾಯ ಬೇರೆ ಬೇರೆ ಹೆಸರುಗಳಲ್ಲಿ ಹರಡಿ ಕೊಂಡಿದೆ. ಗಂಟಿಚೋರ್, ಗಿರಣಿ ಒಡ್ಡರ್, ಗುನ್ಹೆಗಾರ, ತುಡುಗು ಒಡ್ಡರ್, ಕಳ್ಳವಡ್ಡರ್, ಕತ್ರಾಸ್, ಬಾಮ್ಟಾ, ಠಕಾರಿ ಬಾಮ್ಟಾ, ಪಾತ್ರೋಟ್ ಮತ್ತು ಉಚಲ್ಯಾ ಮುಂತಾಗಿ ಅನೇಕ ಹೆಸರುಗಳಿಂದ ಗುರುತಿಸಿಕೊಂಡಿದೆ. ಇವರು ಯಾವುದೇ ಹೆಸರುಗಳಿಂದ ಗುರುತಿಸಿಕೊಂಡರೂ ಒಟ್ಟಾರೆಯಾಗಿ ಇವರು ಸಾಂಸ್ಕೃತಿಕವಾಗಿ ‘ಶಾಕ್ತಪಂಥ’ದಿಂದ ಗುರುತಿಸಿಕೊಂಡಿರುವುದು ಗಮನಾರ್ಹ.

ಗಂಟಿಚೋರ್ ಸಮುದಾಯ ತಮ್ಮನ್ನು ಅಪರಾಧಿ ಬುಡಕಟ್ಟೆಂದು ಗುರುತಿಸಿಕೊಳ್ಳದೇ ಇರಲು ಪ್ರಯತ್ನಿಸುತ್ತಾ ಕಳ್ಳತನ ಎಂಬ ತನ್ನ ತಲೆತಲಾಂತರದಿಂದ ಹೇರಿದ್ದ ಕುಲವೃತ್ತಿಯನ್ನು ತೊರೆದು ಬೇರೆಲ್ಲಾ ಕೆಲಸ ಮಾಡುತ್ತಾ, ಹೊಸ ಬದುಕಿಗೆ ತೆರೆದುಕೊಳ್ಳಲು ಕಾತರದಿಂದ ಪ್ರಯತ್ನಪಡುತ್ತಿದೆ. ಆದರೆ ಸ್ಥಳೀಯ ಪೊಲೀಸರು ತಮ್ಮ ಠಾಣೆಯ ಸುತ್ತ ಕಳ್ಳತನ, ದರೋಡೆಯಂತಹ ಏನೇ ಅಪರಾಧ ನಡೆದರೂ ಗಂಟಿಚೋರ್ ಸಮುದಾಯದ ಮೇಲೆಯೇ ಕಳಂಕ ಹೊರಿಸಿ ಹಿಡಿದುತಂದು ಹಿಂಸಿಸುತ್ತಾರೆ. ಈ ಕಾರಣಕ್ಕೆ ಅವರು ಕಳ್ಳತನ ಬಿಟ್ಟಿದ್ದರೂ ಜಾತಿಯ ಕಾರಣಕ್ಕಾಗಿ ಇವರು ಅಪರಾಧಿಗಳಾಗಿಯೇ ಉಳಿದುಬಿಟ್ಟಿದ್ದಾರೆ.

ಗಂಟಿಚೋರ್, ಪಾರ್ದಿ, ಕಂಜರ್ಬಾಟ್, ಹರಿಣಿಶಿಕಾರಿ, ಬಾಮ್ಟಾ ಮುಂತಾದ ವಿಮುಕ್ತ ಅಲೆಮಾರಿ ಬುಡಕಟ್ಟುಗಳ ಕುರಿತು ಅಧ್ಯಯನ ಮಾಡುವಾಗ ಕೆಲ ವಿದ್ವಾಂಸರು ಮೈಕ್ ಡ್ಯಾಶ್ ಅವರ ‘ದ ಥಗ್’ ಅಥವಾ ಮೆಡೋಸ್ ಟೇಲರ್ ಎಂಬವರ ‘ಕನ್ಫೆಷನ್ ಆಫ್ ಥಗ್’ ಎಂಬ ಪುಸ್ತಕಗಳನ್ನು ಆಧರಿಸಿ ಗಂಟಿಚೋರ್ ಸಮುದಾಯದ ಕುರಿತು ಅಧ್ಯಯನ ಎಂಬ ಹೆಸರಲ್ಲಿ ಬರೆದು ಮುಗಿಸುತ್ತಾರೆ. ಆದರೆ ವಾಸ್ತವವಾಗಿ ಗಂಟಿಚೋರ್‌ಗಳ ಅಧ್ಯಯನದ ನೆಲೆಯೇ ಈ ಥಗ್‌ಗಳೆಂಬ ಕತೆಗಳಿಂದ ತೀರಾ ವಿಭಿನ್ನವಾಗಿದೆ. ಇಲ್ಲಿ ಒಂದು ಸಮುದಾಯ ಅಥವಾ ಜಾತಿಯೇ ಕಳ್ಳತನವನ್ನು ತಮ್ಮ ಕುಲವೃತ್ತಿ ಎಂದು ಸ್ವೀಕರಿಸಿ ನಂಬಿರುತ್ತಾರೆ ಅಥವಾ ಕುಲವೃತ್ತಿಗಳನ್ನು ಸೃಷ್ಟಿ ಮಾಡಿದ ಬಲಿಷ್ಠ ಜಾತಿಗಳ ‘ಸಭ್ಯ’ರು ತಮ್ಮ ಸ್ವಾರ್ಥಕ್ಕಾಗಿ ಈ ಸಮುದಾಯಗಳನ್ನು ಬಳಸಿಕೊಂಡು ಇವರಿಗೆ ಚಾರಿತ್ರಿಕವಾಗಿ ಅಪರಾಧಿ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಈ ಕಾರಣಕ್ಕೆ ಇವರನ್ನು ಯಾವುದೋ ದೇಶದ ವೃತ್ತಿಪರ ಥಗ್‌ಗಳ ಜತೆ ಇಟ್ಟು ನೋಡಬಾರದು.

ಗಂಟಿಚೋರ್ ಸಮುದಾಯದವರು ಕಳ್ಳತನವನ್ನು ಅದೆಷ್ಟು ಭಕ್ತಿಭಾವದಿಂದ ಮಾಡುತ್ತಿದ್ದರು ಅಂದರೆ ಇವರಲ್ಲಿ ಕೆಲವರು ಕಿಸೆಗಳ್ಳತನ ಮಾಡುತ್ತಿದ್ದವರು ಬ್ಲೇಡ್ ಅನ್ನು ಅಂಬಾಭವಾನಿ ಪಟದ ಮುಂದೆ ಇಟ್ಟು ಅದಕ್ಕೆ ಅರಶಿನ ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸುತ್ತಿದ್ದರು. ಕೆಲವೊಮ್ಮೆ ಕೋಳಿಕೊಯ್ದು ಅದರ ರಕ್ತದ ಚುಕ್ಕೆಯನ್ನು ಬ್ಲೇಡಿಗೆ ಇಟ್ಟು ಪೂಜಿಸಿ ನಂತರ ತಮ್ಮ ವೃತ್ತಿಗಾಗಿ ಬ್ಲೇಡನ್ನು ಕೊಂಡೊಯ್ಯುತ್ತಿದ್ದರು. ಮಿಕ್ಕಂತೆ ಮನೆ ಕಳ್ಳತನ, ದಿಕ್ಕುತಪ್ಪಿಸಿ ಕದಿಯುವುದು, ನಂಬಿಸಿ ಕದಿಯುವುದು, ಬಸ್ಸು, ರೈಲುಗಳಲ್ಲಿ ಕದಿಯುವುದೇ ಮುಂತಾದ ವೃತ್ತಿಪರ ಕಳ್ಳತನ ಮಾಡುತ್ತಿದ್ದರು.

ಗಂಟಿಚೋರ್ ಸಮುದಾಯದ ಮುಖಂಡ ಸುರೇಶ್ ಒಮ್ಮೆ ನನ್ನನ್ನು ಕಾಣಲು ಹೈಕೋರ್ಟ್ ಗೆ ಬಂದಿದ್ದರು. ಹೈಕೋರ್ಟ್‌ನ ಮೊದಲ ಮಹಡಿಯಲ್ಲಿ ವಿಧಾನಸೌಧಕ್ಕೆ ಮುಖಮಾಡಿ ನಾವಿಬ್ಬರೂ ಮಾತಾಡುತ್ತಿದ್ದೆವು. ಈಗ ನಿಮ್ಮ ಕುಲವೃತ್ತಿ ಹೇಗಿದೆ ಎಂದು ತಮಾಷೆ ಮಾಡಿದೆ. ಆತ ವಿಧಾನಸೌಧವನ್ನು ತೋರಿಸುತ್ತಾ ‘‘ಇವರ ಮುಂದೆ ನಮ್ಮ ಸಣ್ಣಪುಟ್ಟ ಕಳ್ಳತನ ಯಾವ ಲೆಕ್ಕ ಸರ್.. ನಾವು ಸಣ್ಣಪುಟ್ಟದಾಗಿ ಕದ್ದರೆ ಪೊಲೀಸರು ನಮ್ಮ ಚರ್ಮ ಸುಲಿಯುತ್ತಾರೆ.. ಅವರು ಕೋಟಿಕೋಟಿ ಲೂಟಿ ಮಾಡಿದರೂ ಪೊಲೀಸರೇ ಅವರಿಗೆ ರಕ್ಷಣೆ ಕೊಡುತ್ತಾರೆ..’’ ಎಂದು ಮುಗುಳ್ನಕ್ಕ! ನನ್ನಲ್ಲಿ ಮಾತುಗಳಿರಲಿಲ್ಲ!

ಲಕ್ಷ್ಮಣ ಗಾಯಕವಾಡ್ ಹೇಳುವಂತೆ ಹಿಂದೆ ಗಂಟಿಚೋರ್ ಕುಟುಂಬಸ್ಥರು ಮಕ್ಕಳಿಗೆ ಚಪ್ಪಲಿ ಕದಿಯುವುದು, ಗಂಟು ಕದಿಯುವುದು, ನಕಲಿ ಬಂಗಾರ ತೋರಿಸಿ ಅಸಲಿ ಬಂಗಾರ ಹೊಡೆಯುವುದೇ ಮುಂತಾದ ಶಿಕ್ಷಣವನ್ನು ಕಲಿಸುತ್ತಿದ್ದರಂತೆ. ಅಂತೆಯೇ ಪೊಲೀಸರಿಗೆ ಸಿಕ್ಕಿಬಿದ್ದಾಗ ತಮ್ಮ ಮರಗು ಭಾಷೆಯಲ್ಲಿ ಮಾತಾಡಿಕೊಂಡು ಹೇಗೆ ಪೊಲೀಸರಿಂದ ತಪ್ಪಿಸಿಕೊಳ್ಳಬೇಕು ಮತ್ತು ಪೊಲೀಸರು ಹಿಂಸಿಸಿದಾಗ ಆ ಹಿಂಸೆಯನ್ನು ಸಹಿಸಿಕೊಂಡು ಬಾಯಿಬಿಡದಂತೆ ಹೇಗೆ ಮೌನವಾಗಿ ಇರಬೇಕೆಂಬುದನ್ನು ಕೂಡ ತರಬೇತಿ ನೀಡುತ್ತಿದ್ದರಂತೆ.

ಕರ್ನಾಟಕದಲ್ಲಿ ಬೆಳಗಾವಿ, ಗದಗ, ಕೊಪ್ಪಳ, ಉತ್ತರಕನ್ನಡ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿಗಳಲ್ಲಿ ಗಂಟಿಚೋರ್ ಸಮುದಾಯಗಳು ನೆಲೆಸಿವೆ. ಇವರು ಈಗ ತಮ್ಮ ವೃತ್ತಿ ಕಳಕೊಂಡು ಬರಿಗೈ ಆಗಿದ್ದಾರೆ. ಇವರಿಗೆ ಸರಕಾರ ಯಾವುದೇ ಪರ್ಯಾಯ ವೃತ್ತಿಗಳನ್ನು ಯೋಜಿಸಲಿಲ್ಲ. ಹಿಂದೆ ಇವರ ಮಕ್ಕಳು ಶಾಲೆಗೆ ಹೋದರೆ ಇತರ ಮಕ್ಕಳು ಇವರನ್ನು ಕಳ್ಳಕಾಕರೆಂದು ಗೋಳುಹೊಯ್ಕೊಳ್ಳುತ್ತಿದ್ದರು, ಈಚೆಗೆ ಇವರ ಸೆಟಲ್ಮೆಂಟ್‌ಗಳಲ್ಲೇ ಶಾಲೆಗಳು ಆರಂಭವಾದ ಕಾರಣ ಮತ್ತು ಶಾಲೆ ತುಂಬ ಗಂಟಿಚೋರ್ ಮಕ್ಕಳೇ ಇದ್ದ ಕಾರಣ ಕ್ರಮೇಣ ಗೋಳು ಹೊಯ್ಕೊಳ್ಳುವ ಸಮಸ್ಯೆ ಇಲ್ಲವಾಯಿತು. ಇದೀಗ ಸರಕಾರಗಳು ಇಂತಹ ಸಮುದಾಯಗಳ ಕುರಿತು ಗಮನ ಹರಿಸಬೇಕು. ಮುಖ್ಯವಾಗಿ ಗಂಟಿಚೋರ್ ಸಮುದಾಯಕ್ಕೆ ಹಲವಾರು ಕಡೆ ಜಾತಿ ಸರ್ಟಿಫಿಕೇಟ್ ನೀಡುತ್ತಿಲ್ಲ, ಈ ಕಾರಣಕ್ಕೆ ಈ ಸಮುದಾಯದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣಕ್ಕೂ ತೊಂದರೆ ಆಗುತ್ತಿದೆ. ಸರಕಾರಿ ಉದ್ಯೋಗದಲ್ಲೂ ಇವರ ಪ್ರಾತಿನಿಧ್ಯ ಇಲ್ಲ. ಇನ್ನು ಸರಕಾರದ ವಸತಿ, ನಿವೇಶನ, ಭೂಮಿ, ಅನುದಾನ, ಸಾಲಸೋಲ ಯಾವುದೂ ಗಂಟಿಚೋರ್ ಸಮುದಾಯಕ್ಕೆ ದಕ್ಕುತ್ತಿಲ್ಲ. ಸರಕಾರದಲ್ಲಿ ಪಂಚೇಂದ್ರಿಯಗಳು ಇರುವವರು ಇದ್ದರೆ ಇಂತಹವರೆಲ್ಲ ಕಾಣಿಸಿಯಾರು..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News