ನಿರ್ಭಯ ಭಾರತ ಕನಸಾಗಿಯೇ ಉಳಿಯಿತೇ?
2012ರ ಡಿಸೆಂಬರ್‌ನಲ್ಲಿ ದಿಲ್ಲಿಯ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಇಡೀ ದೇಶದ ಆತ್ಮಸಾಕ್ಷಿಯನ್ನು ನಡುಗಿಸಿತ್ತು. ಆ ಘಟನೆಯ ನಂತರ ಬೀದಿಗಿಳಿದ ಜನಸಾಗರ, ದೇಶವ್ಯಾಪಿ ಆಕ್ರೋಶ ಮತ್ತು ಮಹಿಳಾ ಸುರಕ್ಷತೆಯ ಕುರಿತ ಚರ್ಚೆ ಭಾರತದ ಕಾನೂನು ವ್ಯವಸ್ಥೆಯನ್ನೇ ಬದಲಿಸುವಂತೆ ಮಾಡಿತು. ನ್ಯಾಯಮೂರ್ತಿ ಜೆ.ಎಸ್. ವರ್ಮಾ ನೇತೃತ್ವದ ಸಮಿತಿ ಕೇವಲ ಶಿಕ್ಷೆ ಹೆಚ್ಚಿಸುವುದಕ್ಕೆ ಸೀಮಿತವಾಗದೆ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗ, ರಾಜಕೀಯ ಮತ್ತು ಸಾಮಾಜಿಕ ಮನೋಭಾವಗಳಲ್ಲಿ ಮೂಲಭೂತ ಬದಲಾವಣೆಗೆ ಶಿಫಾರಸು ಮಾಡಿತು. 2013ರ Criminal Law (Amendment) Act ಮೂಲಕ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ವ್ಯಾಖ್ಯಾನ ಹಾಗೂ ಶಿಕ್ಷೆಗಳನ್ನು ಬಲಪಡಿಸಲಾಯಿತು. ಆದರೆ ಈಗ ಹದಿಮೂರು ವರ್ಷಗಳ ನಂತರವಾದರೂ ಮಹಿಳೆಯರ ಬದುಕಿನಲ್ಲಿ ನಿಜವಾದ ನಿರ್ಭಯದ ವಾತಾವರಣ ಸಾಧ್ಯವಾಗಿದೆಯೇ? ಎನ್ನುವ ಪ್ರಶ್ನೆ ಎದುರಾಗಿದೆ. ನ್ಯಾಯಮೂರ್ತಿ ವರ್ಮಾ ಸಮಿತಿಯ ವರದಿ 2013ರ ಜನವರಿ 23ರಂದು ಸಲ್ಲಿಕೆಯಾಗಿತ್ತು ಮತ್ತು ಅದರ ವ್ಯಾಪ್ತಿ ಅತ್ಯಾಚಾರಕ್ಕಿಂತ ಬಹಳ ವಿಶಾಲವಾಗಿತ್ತು
ಆದರೆ ಇತ್ತೀಚಿನ ಗ್ರೇಟರ್ ನೊಯ್ಡಾ ಘಟನೆಯು ಈ ಪ್ರಶ್ನೆಯನ್ನು ಮತ್ತೊಮ್ಮೆ ನಮ್ಮ ಮುಂದಿರಿಸಿದೆ. ಮಳೆಯ ರಾತ್ರಿಯಲ್ಲಿ ದಾರಿ ತಪ್ಪಿ ಸಹಾಯದ ನಿರೀಕ್ಷೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಆಕೆಯು ಹೋಗಲು ಬಯಸಿದ ಸ್ಥಳದಲ್ಲಿ ಇಳಿಸುವುದಾಗಿ ಪುಸಲಾಯಿಸಿ ಸ್ಲೀಪರ್ ಬಸ್ ಹತ್ತಿಸಿಕೊಂಡ ಚಾಲಕ ಮತ್ತು ನಿರ್ವಾಹಕರು ಚಲಿಸುತ್ತಿದ್ದ ಬಸ್‌ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ನಂತರ ಬಾಲಕಿಯನ್ನು ದಿಲ್ಲಿಯ ಕಾಶ್ಮೀರಿ ಗೇಟ್ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಬಸ್ ವಶಪಡಿಸಿಕೊಂಡು ಫೊರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆದರೆ ಈ ಘಟನೆ ಮತ್ತೊಂದು ನಿರ್ಭಯಾ ಪ್ರಕರಣವೆಂದು ಭಾವನಾತ್ಮಕವಾಗಿ ಹೇಳುವುದಕ್ಕಿಂತ, ಅದರ ಹಿಂದಿರುವ ವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸುವುದು ಮುಖ್ಯ. ಬಸ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕಾರ್ಯನಿರ್ವಹಿಸದಿರುವುದು, ಖಾಸಗಿ ಸಾರಿಗೆ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆಯ ಪ್ರಶ್ನೆಗಳು ಮತ್ತು ದೀರ್ಘ ಅಂತರದ ಪ್ರಯಾಣದಲ್ಲಿ ಮೇಲ್ವಿಚಾರಣೆಯ ಕೊರತೆ ಗಂಭೀರ ಆತಂಕ ಮೂಡಿಸಿವೆ.
ಇದು ಕೇವಲ ಒಂದು ಘಟನೆ ಅಲ್ಲ. ಎನ್‌ಸಿಆರ್‌ಬಿಯ 2024ರ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಮಹಿಳೆಯರ ವಿರುದ್ಧ 4,41,534 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 29,536 ಅತ್ಯಾಚಾರ ಪ್ರಕರಣಗಳು ಸೇರಿವೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ಪೊಕ್ಸೊ ಕಾಯ್ದೆಯಡಿ 69,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಇಆಂಯ ವಿಶ್ಲೇಷಣೆಯ ಪ್ರಕಾರ 2024ರಲ್ಲಿ ಭಾರತದಲ್ಲಿ ಮಹಿಳೆಯ ವಿರುದ್ಧದ ಒಂದು ಅಪರಾಧ ಸರಾಸರಿ ಪ್ರತೀ 71 ಸೆಕೆಂಡಿಗೆ ದಾಖಲಾಗಿದೆ.
ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಅತ್ಯಾಚಾರ ಮಾತ್ರವಲ್ಲದೆ ಪತಿ, ಸಂಬಂಧಿಕರು ಮತ್ತು ಇತರ ಪುರುಷರಿಂದ ಕ್ರೌರ್ಯ, ಅಪಹರಣ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಸಂಬಂಧಿತ ಹಿಂಸೆ, ಕಳ್ಳಸಾಗಣೆ ಮತ್ತು ಇತರ ಹಲವು ರೂಪಗಳ ಹಿಂಸೆ ಸೇರಿವೆ. ಆದ್ದರಿಂದ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಕೇವಲ ‘ಅತ್ಯಾಚಾರ ಪ್ರಕರಣಗಳ ಸಂಖ್ಯೆ’ಯಲ್ಲಿ ಅಳೆಯುವುದು ಸಮಸ್ಯೆಯ ವ್ಯಾಪ್ತಿಯನ್ನು ಸಣ್ಣದಾಗಿಸುತ್ತದೆ.
ಇದರಲ್ಲಿನ ಇನ್ನೊಂದು ಅತ್ಯಂತ ಕಳವಳಕಾರಿ ಸಂಗತಿ ಎಂದರೆ, ಲೈಂಗಿಕ ಅಪರಾಧಗಳ ಹಿಂದೆ ಅನೇಕ ಸಂದರ್ಭಗಳಲ್ಲಿ ಅಪರಿಚಿತ ವ್ಯಕ್ತಿಗಿಂತ ಪರಿಚಿತ ವ್ಯಕ್ತಿಯೇ ಇರುತ್ತಾನೆ. ಹೀಗಾಗಿ ‘‘ಮಹಿಳೆಯರು ಹೊರಗೆ ಹೋಗುವಾಗ ಎಚ್ಚರಿಕೆಯಿಂದಿರಬೇಕು’’ ಎಂಬ ಸರಳ ಸಲಹೆ ಸಮಸ್ಯೆಗೆ ಈಗ ಪರಿಹಾರವಲ್ಲ. ಈ ತೆರನಾದ ಅಪಾಯಗಳು ನಿರ್ಜನ ರಸ್ತೆಯಲ್ಲಿ ಮಾತ್ರ ಇರುವುದಿಲ್ಲ; ಮನೆ, ಕುಟುಂಬ, ನೆರೆಹೊರೆ, ಕೆಲಸದ ಸ್ಥಳ, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸಾರಿಗೆ ಮತ್ತು ಪರಿಚಯದ ವಲಯಗಳಲ್ಲಿಯೂ ಇರಬಹುದು. ಮಹಿಳೆಯ ಸ್ವಾತಂತ್ರ್ಯವನ್ನು ಕಡಿಮೆ ಮಾಡುವ ಮೂಲಕ ಸುರಕ್ಷತೆಯನ್ನು ಸಾಧಿಸಲು ಸಾಧ್ಯವಿಲ್ಲ. ಅಪರಾಧಿಯ ಸ್ವಭಾವ ಬದಲಾಗಬೇಕೇ ಹೊರತು ಮಹಿಳೆಯ ಬದುಕಿನ ವ್ಯಾಪ್ತಿ ಅಲ್ಲ.
ಅಪ್ರಾಪ್ತ ವಯಸ್ಸಿನ ಬಾಲಕಿಯ ಸಾಮೂಹಿಕ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಂತಹ ಅತ್ಯಂತ ಕಠಿಣ ಶಿಕ್ಷೆಯನ್ನೂ ಕಾನೂನು ಒದಗಿಸಿದೆ. ಆದರೆ ಇಲ್ಲಿರುವ ಮೂಲಭೂತ ಪ್ರಶ್ನೆಗಳೆಂದರೆ: ಶಿಕ್ಷೆಯ ಪ್ರಮಾಣ ಅಪರಾಧವನ್ನು ತಡೆಯುತ್ತದೆಯೇ ಅಥವಾ ಶಿಕ್ಷೆ ಖಚಿತವಾಗಿ ಜಾರಿಯಾಗುತ್ತದೆ ಎಂಬ ನಂಬಿಕೆ ಅಪರಾಧಿಯನ್ನು ತಡೆಯುತ್ತದೆಯೇ?
ಕಾನೂನಿನ ಶಕ್ತಿ ನ್ಯಾಯಾಲಯದ ಬಾಗಿಲಿಗೆ ಬಂದಾಗ ಮಾತ್ರ ಸಾಬೀತಾಗುತ್ತದೆ ಎನ್ನುವುದಕ್ಕಿಂತ ಅದು ಪೊಲೀಸ್ ಠಾಣೆಯಿಂದಲೇ ಆರಂಭವಾಗಬೇಕು. ದೂರು ಸ್ವೀಕರಿಸುವ ವಿಧಾನ, ತನಿಖೆಯ ಗುಣಮಟ್ಟ, ವೈದ್ಯಕೀಯ ಮತ್ತು ಫೊರೆನ್ಸಿಕ್ ಸಾಕ್ಷ್ಯ ಸಂಗ್ರಹ, ಸಾಕ್ಷಿದಾರರ ರಕ್ಷಣೆ, ಸರಕಾರಿ ಅಭಿಯೋಜಕರ ಸಾಮರ್ಥ್ಯ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯ ವೇಗ ಇವೆಲ್ಲವೂ ಒಂದೇ ಸರಪಳಿಯ ಕೊಂಡಿಗಳು. ಒಂದು ಕೊಂಡಿ ದುರ್ಬಲವಾದರೂ ನ್ಯಾಯದ ಸರಪಳಿ ತುಂಡಾಗುತ್ತದೆ. 2024ರಲ್ಲಿ ದೇಶದ ನ್ಯಾಯಾಲಯಗಳಲ್ಲಿ ವಿಚಾರಣೆಗೆ 2,06,777 ಅತ್ಯಾಚಾರ ಪ್ರಕರಣಗಳು ಲಭ್ಯವಿದ್ದರೂ, ಕೇವಲ 20,587 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿತ್ತು; ವರ್ಷದ ಕೊನೆಯಲ್ಲಿ 1,85,785 ಪ್ರಕರಣಗಳು ಬಾಕಿ ಉಳಿದಿದ್ದವು. ಅತ್ಯಾಚಾರ ಪ್ರಕರಣಗಳ ವಿಚಾರಣೆಗಳ ಬಾಕಿ ಪ್ರಮಾಣ 89.8ರಷ್ಟಿತ್ತು.
ಕಾನೂನು ತಜ್ಞರಾದ ಕರುಣಾ ನುಂಡಿ ಹೇಳಿರುವಂತೆ, ಮಹಿಳೆಯರ ಮೇಲಿನ ಹಿಂಸೆಯ ಮೂಲದಲ್ಲಿರುವ ಪಿತೃಪ್ರಾಧಾನ್ಯತೆ ಮತ್ತು ಸ್ತ್ರೀದ್ವೇಷವನ್ನು ನಿರ್ಮೂಲಗೊಳಿಸಲು ಕೇವಲ ಕಾನೂನು ಸಾಕಾಗುವುದಿಲ್ಲ; ನಿರಂತರ ಸಾಮಾಜಿಕ ಮತ್ತು ಸಮುದಾಯ ಮಟ್ಟದ ಬದಲಾವಣೆ ಅಗತ್ಯ. ಇದೇ ಅತ್ಯಂತ ಮುಖ್ಯವಾದ ವಿಚಾರ. ಅತ್ಯಾಚಾರವೆಂಬುದು ಕೇವಲ ಅಪರಾಧಿಯ ವಿಕೃತ ಮನಸ್ಸಿನ ಫಲವಲ್ಲ; ಕೆಲವೊಮ್ಮೆ ಅದಕ್ಕೆ ಮೌನ, ಮಹಿಳೆಯನ್ನು ವಸ್ತುವಾಗಿ ನೋಡುವ ಸಂಸ್ಕೃತಿ, ಅಧಿಕಾರದ ದುರುಪಯೋಗ ಮತ್ತು ಸಂತ್ರಸ್ತೆಯನ್ನೇ ಪ್ರಶ್ನಿಸುವ ಸಾಮಾಜಿಕ ಮನೋಭಾವವೂ ಪರೋಕ್ಷವಾಗಿ ಬಲ ನೀಡುತ್ತವೆ.
ಹೀಗಾಗಿ ಪರಿಹಾರವನ್ನು ಕೇವಲ ‘‘ಇನ್ನಷ್ಟು ಕಠಿಣ ಶಿಕ್ಷೆ ನೀಡಬೇಕು’’ ಎಂದು ಹೇಳಿ ಮುಗಿಸಲಾಗದು. ಶಾಲಾ ಹಂತದಿಂದಲೇ ಸ್ತ್ರೀ ಘನತೆ, ಸಮಾನತೆ ಮತ್ತು ಗೌರವವನ್ನು ಪ್ರೇರೇಪಿಸುವ ಶಿಕ್ಷಣ ಬೇಕು. ಪೊಲೀಸ್ ಇಲಾಖೆಯಲ್ಲಿ ಲಿಂಗಸಂವೇದನಾ ತರಬೇತಿ, ವೇಗವಾದ ತನಿಖಾ ಕ್ರಮ ಮತ್ತು ಹೊಣೆಗಾರಿಕೆ ಇರಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಕೆಲಸಮಾಡುವವರ ಹಿನ್ನೆಲೆ ಪರಿಶೀಲನೆ, ಸಿಸಿಟಿವಿ, ತುರ್ತು ಸಂಪರ್ಕ ವ್ಯವಸ್ಥೆ ಮತ್ತು ಸಿಬ್ಬಂದಿಯ ಮೇಲ್ವಿಚಾರಣೆ ಕಡ್ಡಾಯವಾಗಬೇಕು. ನ್ಯಾಯಾಲಯಗಳಲ್ಲಿ ಪ್ರಕರಣಗಳ ಅನಗತ್ಯ ವಿಳಂಬವನ್ನು ಕಡಿಮೆ ಮಾಡಬೇಕು. ಸಂತ್ರಸ್ತೆಯನ್ನು ಅಪರಾಧದ ಕಾರಣವೆಂದು ನೋಡುವ ಸಾಮಾಜಿಕ ಮನೋಭಾವ ಸಂಪೂರ್ಣವಾಗಿ ತಿರಸ್ಕೃತವಾಗಬೇಕು.
ನಿರ್ಭಯಾ ಪ್ರಕರಣದ ನಂತರ ದೇಶವು ನಾವು ‘‘ಇಂತಹ ಘಟನೆಗಳಿಗೆ ಮತ್ತೆ ಸಾಕ್ಷಿಯಾಗಬಾರದು’’ ಎಂದು ಪ್ರತಿಜ್ಞೆ ಮಾಡಿದ್ದೆವು. ಆದರೆ ಇಂದು ಕೂಡ ದೇಶದ ಯಾವುದೋ ಒಂದು ಮೂಲೆಯಲ್ಲಿ ಮಹಿಳೆಯೊಬ್ಬಳು ತನ್ನ ಸುರಕ್ಷತೆಗಾಗಿ ಹೋರಾಡುತ್ತಿದ್ದಾಳೆ; ಯಾವುದೋ ಒಂದು ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ಹೇಳಲು ಹೆದರುತ್ತಿದ್ದಾಳೆ; ಯಾವುದೋ ಒಂದು ಕುಟುಂಬ ನ್ಯಾಯಕ್ಕಾಗಿ ವರ್ಷಗಳ ಕಾಲ ಕಾಯುತ್ತಿದೆ. ಆದ್ದರಿಂದ ನಿರ್ಭಯಾ ನಮ್ಮ ಭೂತಕಾಲದ ಒಂದು ಪ್ರಕರಣ ಮಾತ್ರವಲ್ಲ, ಅದು ಇಂದಿಗೂ ನಮ್ಮ ಸಮಾಜದ ಮುಂದೆ ನಿಂತಿರುವ ಕನ್ನಡಿ. ಈಗ ಕಾನೂನುಗಳು ಬದಲಾಗಿವೆ, ಶಿಕ್ಷೆಗಳು ಮತ್ತಷ್ಟು ಕಠಿಣವಾಗಿವೆ, ನ್ಯಾಯಾಲಯಗಳೂ ಕೂಡ ದಾರಿ ತೋರಿಸಿವೆ. ಆದರೆ ಈಗ ಬದಲಾಗಬೇಕಿರುವುದು ಸಮಾಜದ ಮನಸ್ಸು.
ಮಹಿಳೆಯೊಬ್ಬಳು ರಾತ್ರಿ ಒಬ್ಬಳೇ ಪ್ರಯಾಣಿಸುವಾಗ ‘‘ಎಚ್ಚರಿಕೆಯಿಂದಿರು’’ ಎಂದು ಹೇಳುವ ಬದಲಾಗಿ ‘‘ನೀನು ಸುರಕ್ಷಿತವಾಗಿದ್ದೀಯೆ; ಈ ಸಮಾಜ ನಿನ್ನೊಂದಿಗಿದೆ’’ ಎಂದು ಹೇಳಬಹುದಾದ ದಿನವೇ ನಿಜವಾದ ನಿರ್ಭಯ ಭಾರತದ ಆರಂಭ. ಮಹಿಳೆಗೆ ಭಯವಿಲ್ಲದ ಸಮಾಜ ನಿರ್ಮಾಣವಾಗುವವರೆಗೂ, ನಿರ್ಭಯಾ ಪ್ರಕರಣ ಮುಗಿದ ಅಧ್ಯಾಯವಲ್ಲ. ನಮ್ಮ ಪ್ರಜಾಪ್ರಭುತ್ವದ ಆತ್ಮಸಾಕ್ಷಿಗೆ ಪ್ರತಿದಿನ ಕೇಳಿಬರುವ ಪ್ರಶ್ನೆ.