ಗೌರಿಯ ಎದುರಿಗೆ ಕೂಡಾ ಬದುಕಿಗಾಗಿ ಹಲವಾರು ದಾರಿಗಳಿದ್ದವು. ಅವಳು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಯಾವುದಾದರೂ ರಾಷ್ಟ್ರಮಟ್ಟದ ಪತ್ರಿಕೆಯ ಸಂಪಾದಕಿಯಾಗಿರುತ್ತಿದ್ದಳು. ತಿಂಗಳ ಕೊನೆಯಲ್ಲಿ ಸಹೋದ್ಯೋಗಿಗಳಿಗೆ ಸಂಬಳ ಕೊಡಲು ತನ್ನ ಇನ್ಶೂರೆನ್ಸ್ ಪಾಲಿಸಿಯ ದುಡ್ಡನ್ನು ಬಳಸಿಕೊಂಡು ಬರಿದಾದ ಬ್ಯಾಂಕ್ ಖಾತೆ ಬಿಟ್ಟುಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಗೌರಿ ಅಪ್ಪನ ದಾರಿಯನ್ನು ಆಯ್ದುಕೊಂಡಳು. ಅದು ಭಿನ್ನ ದಾರಿ. ಇದರಿಂದಾಗಿ ನಮಗಿಂತ ಬೇಗ ಸಾವನ್ನು ಎದುರುಗೊಂಡಳು.

ಗೌರಿ ಸಾವಿಗೆ ಇಡೀ ಜಗತ್ತಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಭಾವುಕರಾಗಿದ್ದ ಇಂದಿರಾ ಅವರು ಮಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ. ಜತೆಯಲ್ಲಿಯೇ ಇದೇ ಜನ ಗೌರಿಯ ಪತ್ರಿಕೆಯನ್ನು ಕೊಂಡು ಓದಿದ್ದರೆ ಬದುಕಿದ್ದಷ್ಟೂ ದಿನವಾದರೂ ನೆಮ್ಮದಿಯಿಂದ ಇರುತ್ತಿದ್ದಳೇನೋ ಎಂದು ಆಗಾಗ ನಿಟ್ಟುಸಿರು ಬಿಡುತ್ತಾರೆ.

ಆ ಅಮ್ಮನ ನಿಟ್ಟುಸಿರಿನ ಕನ್ನಡಿಯಲ್ಲೊಮ್ಮೆ ನಾವೆಲ್ಲ ನಮ್ಮ ಮುಖಗಳನ್ನು ನೋಡುವುದು ಬೇಡವೇ? ನಡೆದದ್ದು ಕೇವಲ ಗೌರಿ ಲಂಕೇಶ್ ಎಂಬ ಹೆಣ್ಣುಮಗಳ ಹತ್ಯೆ ಅಲ್ಲ. ಇದು ಜಾಣಜಾಣೆಯರ ಕಣ್ಣು ತೆರೆಸಲೆಂದೇ ಹುಟ್ಟಿಕೊಂಡ ಪಿ.ಲಂಕೇಶ್ ಹುಟ್ಟು ಹಾಕಿದ್ದ ಮಾಧ್ಯಮ ಚಳವಳಿಯ ಹತ್ಯೆಯ ಪ್ರಯತ್ನವೂ ಹೌದು.

ತಂದೆಯ ಸಾವಿನ ನಂತರ ಅವರ ಕುರ್ಚಿಯಲ್ಲಿ ಗೌರಿ ಕೂತಾಗ ದೇಶದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ ಮಾತ್ರವಲ್ಲ, ಮಾಧ್ಯಮ ಕ್ಷೇತ್ರ ಕೂಡಾ ಜಾಗತೀಕರಣದ ಬಿರುಗಾಳಿಗೆ ಸಿಕ್ಕಿ ಅದರ ವೃತ್ತಿಪರತೆಯ ಬೇರುಗಳೆಲ್ಲಾ ಸಡಿಲಗೊಂಡು ಅದು ಕೂಡಾ ಎಳೆದ ಕಡೆ ಸಾಗುವ ಕೋಲೆ ಬಸವನಾಗಿ ಹೋಗಿತ್ತು. ಇನ್ನೊಂದೆಡೆ ಟಿ.ವಿ. ಚಾನೆಲ್‌ಗಳು ಮತ್ತು ಆನ್‌ಲೈನ್ ಮಾಧ್ಯಮಗಳ ಪ್ರವೇಶದಿಂದಾಗಿ ಮುದ್ರಣ ಮಾಧ್ಯಮ ಜಗತ್ತಿನಾದ್ಯಂತ ಓದುಗರಿಲ್ಲದೆ ಕ್ಷೀಣಿಸತೊಡಗಿದ್ದವು. ಇದರ ಪರಿಣಾಮವನ್ನು ಲಂಕೇಶ್ ಕೂಡಾ ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ಎದುರಿಸಿದ್ದರು.

ಜಾಗತೀಕರಣದ ನಂತರದ ದಿನಗಳಲ್ಲಿ ಮಾಧ್ಯಮ ವೃತ್ತಿ, ಮಾಧ್ಯಮ ಉದ್ಯಮವಾಗಿ ತೀವ್ರಗತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ. ಇದರಿಂದಾಗಿ ಮಾಧ್ಯಮಗಳ ಬದ್ಧತೆ-ಆದ್ಯತೆಗಳು ಕೂಡಾ ಬದಲಾಗತೊಡಗಿವೆ.ಅನಾರೋಗ್ಯಕರ ದರಸಮರದಿಂದಾಗಿ ಪತ್ರಿಕೆಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟಮಾಡುವುದು ಮತ್ತು ಈ ನಷ್ಟವನ್ನು ಸರಿದೂಗಿಸಲು ಜಾಹೀರಾತುಗಳನ್ನು ಅವಲಂಬಿಸುವುದು ಮಾಧ್ಯಮ ಮಾಲಕರಿಗೆ ಅನಿವಾರ್ಯವೆನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಪತ್ರಿಕೆಯ ಓದುಗರಿಗಿಂತ, ಅದರಲ್ಲಿನ ಜಾಹೀರಾತು ನೋಡಿ ಉತ್ಪನ್ನಗಳನ್ನು ಖರೀದಿಸುವ ಸಾಮರ್ಥ್ಯವುಳ್ಳ ಗ್ರಾಹಕರೇ ಮುಖ್ಯವಾಗುತ್ತಿದ್ದಾರೆ.

ಓದುಗರ ಒಲವಿನ ತುತ್ತು ಉಂಡು ಬೆಳೆಯಬೇಕಾಗಿದ್ದ ಪತ್ರಿಕೆಗೆ ಅವರೇ ನಿಜವಾದ ಅರ್ಥದಲ್ಲಿ ಒಡೆಯರಾಗಬೇಕು. ಆದರೆ ವಾಸ್ತವ ಹಾಗಿಲ್ಲ. ಪತ್ರಿಕೆ ಬದುಕುಳಿದಿರುವುದು ಓದುಗರಿಂದಲ್ಲ, ಜಾಹೀರಾತುದಾರರಿಂದ. ಪತ್ರಿಕೆಯೊಂದು ಸಾಮಾಜಿಕ ಬದ್ಧತೆಗಳನ್ನು ಒಪ್ಪಿಕೊಂಡು ಜನಪರವಾಗಿರಬೇಕೆಂದು ಬಯಸುವುದಾದರೆ ಅದನ್ನು ಜಾಹೀರಾತುದಾರರ ಋಣಭಾರದಲ್ಲಿ ಬೀಳಲು ಬಿಡಬಾರದು. ಅದು ಓದುಗನ ಋಣದಲ್ಲಿರಬೇಕು. ಅದು ಸಾಧ್ಯವಾಗಬೇಕಾದರೆ ಪತ್ರಿಕೆಯ ಕನಿಷ್ಠ ಉತ್ಪಾದನಾ ವೆಚ್ಚವನ್ನು ಭರಿಸಲು ಓದುಗರು ಸಿದ್ಧರಿರಬೇಕು.

ಚಿಂತನೆ ಮಾಡಬೇಕಾದ ಓದುಗರೇ ಒಂದೆಡೆ ಕಡಿಮೆ ಬೆಲೆಗೆ ಓದಲು ಸಿಗುವ ಪತ್ರಿಕೆಗಾಗಿ ಖುಷಿಪಡುತ್ತಾ, ಇನ್ನೊಂದೆಡೆ ಪುಟಪುಟಗಳಲ್ಲಿ ತುಂಬಿರುವ ಜಾಹೀರಾತಿಗಾಗಿ ಪತ್ರಿಕಾ ಮಾಲಕರಿಗೆ ಶಪಿಸುತ್ತಾ ಗೊಂದಲಕ್ಕೆ ಬಿದ್ದಿದ್ದಾರೆ. ಮಾಧ್ಯಮ ಮಾಲಕರು ಮತ್ತು ಓದುಗನನ್ನು ಹೊರಬರಲಾಗದಂತಹ ಇಂತಹ ಚಕ್ರವ್ಯೆಹದಲ್ಲಿ ಸಿಕ್ಕಿಸಿ ಹಾಕಿದ ಉದ್ಯಮಪತಿಗಳು ಮತ್ತು ಅವರ ಬೆಂಗಾವಲಿಗೆ ನಿಂತಿರುವ ಪ್ರಭುತ್ವದ ಮಾಟಗಾರರು ಗೆದ್ದ ಖುಷಿಯಲ್ಲಿದ್ದಾರೆ. ಅವರು ಜಾಣತನದಿಂದ ರಚಿಸಿರುವ ಚಕ್ರವ್ಯೆಹದಲ್ಲಿ ತನಗರಿವಿಲ್ಲದಂತೆಯೇ ಸಿಕ್ಕಿಹಾಕಿಕೊಂಡಿರುವ ಮಾಧ್ಯಮಮಾಲಕರು ಮತ್ತು ಓದುಗರು ಹೊರಬರಲು ದಾರಿಕಾಣದೆ ಪರಸ್ಪರ ದೂಷಿಸುತ್ತಾ ನರಳಾಡುತ್ತಿದ್ದಾರೆ.

ಗೌರಿ ಕೂಡಾ ಈ ಚಕ್ರವ್ಯೆಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದಳು. ಜಾಹೀರಾತು ಪಡೆಯದೆ ಓದುಗರನ್ನು ಮಾತ್ರ ನಂಬಿ ಪತ್ರಿಕೆ ನಡೆಸುವುದು ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ಅಪ್ಪ ನೆಟ್ಟ ಮರಕ್ಕೆ ಜೋತುಬಿದ್ದ ಗೌರಿ ಜಾಹೀರಾತು ಇಲ್ಲದೆಯೇ ಪತ್ರಿಕೆ ನಡೆಸಬೇಕೆಂದು ತೀರ್ಮಾನಿಸಿದಾಗಲೇ ಅರ್ಧ ಸೋತುಹೋಗಿದ್ದಳು. ಪ್ರತಿವಾರ 10 ರೂಪಾಯಿ ಕೊಟ್ಟು ಪತ್ರಿಕೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿತ್ತು. ನೋಟುಗಳ ಅಮಾನ್ಯೀಕರಣದ ನಂತರ ಪತ್ರಿಕೆಯ ಪ್ರಸಾರ ಸಂಖ್ಯೆ ಇನ್ನಷ್ಟು ಕುಸಿಯತೊಡಗಿತ್ತು.

ಮಾಧ್ಯಮ ಕ್ಷೇತ್ರದೊಳಗಿನ ಇಂತಹದೊಂದು ಬದಲಾವಣೆಯನ್ನು ಒಳಗಿನಿಂದಲೇ ವಿರೋಧಿಸಲಾಗದ ಅಸಹಾಯಕ ಸ್ಥಿತಿಯೇ ದೇಶ-ವಿದೇಶಗಳ ಬಹಳಷ್ಟು ಪತ್ರಕರ್ತರು Journalist-Activist ಆಗಿ ಬದಲಾಗುವಂತೆ ಮಾಡಿದೆ. ಪತ್ರಕರ್ತರು ‘Objective’ ಆಗಿರಬೇಕೆಂದು ಮಾಧ್ಯಮದ ಮೊದಲ ಪಾಠ ಹೇಳುತ್ತದೆ. ಆದರೆ ಈ ‘Objective’ಯನ್ನು ಹುಡುಕುವ ಪ್ರಯತ್ನವೇ ಒಮ್ಮೊಮ್ಮೆ ಪತ್ರಕರ್ತರನ್ನು ಸತ್ಯದಿಂದ ದೂರ ಕೊಂಡೊಯ್ಯುತ್ತಿದೆ ಎಂಬ ವ್ಯಾಖ್ಯಾನವೂ ಇದೆ. ('It is the very persuit of objectivity that can sometime keeps us away from truth'-Colombia university Journalism review).

ಸತ್ಯದ ಹುಡುಕಾಟದಲ್ಲಿದ್ದ ಗೌರಿ ಬಹಳಷ್ಟು ಸಲ Journalistಗಿಂತಲೂ ಹೆಚ್ಚಾಗಿ Activist ತರಹ ಕಾಣಿಸುತ್ತಿದ್ದದ್ದು ನಿಜ. ಇದನ್ನು ಎಂದೂ ನಿರಾಕರಿಸದೆ ಇದ್ದ ಗೌರಿ ತನ್ನನ್ನು Activist Journalist ಎಂದೇ ಕರೆದುಕೊಳ್ಳುತ್ತಿದ್ದಳು.

ನನ್ನ ವೃತ್ತಿ ಗುರುಗಳಾದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರು ಪಕ್ಷಪಾತಿ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಿದ್ದರು. ಸತ್ಯ, ಧರ್ಮ, ನ್ಯಾಯದ ಪ್ರಶ್ನೆ ಎದುರಾದಾಗ ಪತ್ರಕರ್ತರು ಪಕ್ಷಪಾತಿಗಳಾಗಿ ಇರಬೇಕಾಗುತ್ತದೆ ಎನ್ನುವುದು ಅವರ ವಾದವಾಗಿತ್ತು.

ಗೌರಿ ಅಂತಹ ಪಕ್ಷಪಾತಿ ಪತ್ರಿಕೋದ್ಯಮದ ಪರವಾಗಿದ್ದಳು.ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್, ಆರೆಸ್ಸೆಸ್, ಬಾಬಾಬುಡಾನ್ ಗಿರಿ ವಿವಾದ, ನಕ್ಸಲಿಸಂ, ರಾಘವೇಶ್ವರ ಸ್ವಾಮೀಜಿ ಮೇಲಿನ ಅತ್ಯಾಚಾರದ ಆರೋಪ ಇಂತಹ ಹಲವಾರು ವಿಷಯಗಳ ಬಗ್ಗೆ ಗೌರಿ ತನಗೆ ಸರಿಕಂಡ ವಿಷಯಗಳ ಪರವಾಗಿ ಗಟ್ಟಿಯಾಗಿ ನಿಂತು ಪತ್ರಕರ್ತೆಯ ಕರ್ತವ್ಯ ನಿರ್ವಹಿಸಿದ್ದಳು. ಯುದ್ಧ ಮಾಡಬೇಕಾದವರು ಒಬ್ಬೊಬ್ಬರಾಗಿ ಶಸ್ತ್ರತ್ಯಾಗ ಮಾಡುತ್ತಿರುವ ಪರಿಸ್ಥಿತಿಯಲ್ಲಿ ಗೌರಿ ವ್ಯವಸ್ಥೆಯ ಚಕ್ರವ್ಯೆಹದೊಳಗೆ ನುಗ್ಗಲು ಹೊರಟು ದಿನದಿಂದ ದಿನಕ್ಕೆ ಏಕಾಂಗಿಯಾಗುತ್ತಾ ಹೋಗಿದ್ದು ನಿಜ.

ಮಾಧ್ಯಮ ಕ್ಷೇತ್ರವೇ ಅತ್ಯಂತ ವೇಗವಾಗಿ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗೌರಿ ಜನಪರವಾಗಿ ನಿಂತು ತನ್ನ ಪತ್ರಿಕೆಯ ಮೂಲಕವೇ ಸಾಮಾಜಿಕ-ರಾಜಕೀಯ ಹೋರಾಟವನ್ನು ನಡೆಸುತ್ತಿದ್ದರು.

ಸಂಪ್ರದಾಯಸ್ಥ ಪತ್ರಕರ್ತರಿಗೆ ಗೌರಿ ವೃತ್ತಿಯಲ್ಲಿ ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು, ಮುಖ್ಯವಾಹಿನಿಯ ಪತ್ರಿಕೆಗಳ ಓದುಗರಿಗೆ ಗೌರಿಯ ಈ ನಿಲುವು ಅತಿರೇಕದ್ದು ಎಂದು ಅನಿಸಿರಲೂಬಹುದು. ಆದರೆ ಆಕೆಯ ಉದ್ದೇಶದ ಹಿಂದಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ನೈತಿಕತೆಯನ್ನು ಎಷ್ಟು ಮಂದಿ ಪತ್ರಕರ್ತರು ಉಳಿಸಿಕೊಂಡಿದ್ದಾರೆ?

ಲಂಕೇಶ್ ಕೂಡಾ ಉಳಿದವರು ತುಳಿದ ದಾರಿಯನ್ನು ಬಿಟ್ಟು ಏಕಾಂಗಿಯಾಗಿಯೇ ಕನ್ನಡ ಪತ್ರಿಕಾವೃತ್ತಿಗೆ ಹೊಸಭಾಷೆ-ಶೈಲಿಯನ್ನು ಕೊಟ್ಟವರು ಮತ್ತು ಪತ್ರಿಕೋದ್ಯಮದ ಸೂತ್ರಗಳನ್ನು ಬದಲಾಯಿಸುವ ಪ್ರಯತ್ನ ಮಾಡಿದವರು. ಜಾಹೀರಾತಿನ ಬಲ ಇಲ್ಲದೆ ಓದುಗರನ್ನು ನಂಬಿ ಪತ್ರಿಕೆ ಮಾಡಲು ಹೊರಡುವುದು ಅವರ ಕಾಲದಲ್ಲಿಯೂ ಜಾಣ ನಿರ್ಧಾರವಾಗಿರಲಿಲ್ಲ. ಆದರೆ ಆ ಕಾಲದಲ್ಲಿ ರೈತ, ದಲಿತ ಮತ್ತು ಭಾಷಾ ಚಳವಳಿಯಿಂದ ಕಾವೇರಿಸಿಕೊಂಡ ಜಾಗೃತ ಸಮುದಾಯ ಅವರನ್ನು ಏಕಾಂಗಿಯಾಗಲು, ಸೋತುಹೋಗಲು ಬಿಡಲಿಲ್ಲ. ಚಳವಳಿಗಳಿಂದಾಗಿ ಇಡೀ ರಾಜ್ಯದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಎಚ್ಚರದ ವಾತಾವರಣ ನಿರ್ಮಾಣವಾಗಿತ್ತು. ಆ ಕಾಲದ ಕರೆಯನ್ನು ಸರಿಯಾಗಿ ಗ್ರಹಿಸಿದ್ದ ಲಂಕೇಶ್ ಪತ್ರಿಕೆಯನ್ನು ಜಾಣಜಾಣೆಯರಿಗಾಗಿ ರೂಪಿಸುತ್ತಾ ಹೋದರು

ಕಾಲ ಬದಲಾಗಿದೆ. ಬದಲಾಗಿರುವ ಕಾಲದಲ್ಲಿ ಪತ್ರಿಕೆಗಳ ಓದುಗವರ್ಗದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಿತರೆನಿಸಿಕೊಂಡವರೇ ಮೂಢ, ಜಾತಿವಾದಿ, ಕೋಮುವಾದಿ, ಭ್ರಷ್ಟ ಮತ್ತು ಶೋಷಕರಾಗಿ ನಮ್ಮನ್ನು ಅಣಕಿಸುತ್ತಿದ್ದಾರೆ.ಇಂತಹದೊಂದು ಸಣ್ಣ ಆಸೆಯ ದೀಪ ಕೂಡಾ ಮಂಕಾದಂತೆ ಅನಿಸುತ್ತಿರುವುದು ನಿಜ.

ಮನುಷ್ಯ ವಿರೋಧಿ ಚಿಂತನೆಗಳನ್ನು ಮಾಧ್ಯಮಗಳಲ್ಲಿ, ಬಹುಮುಖ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ, ಟಿ.ವಿ. ಚಾನೆಲ್‌ಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ, ಒಂದಿನಿತೂ ಪಾಪಪ್ರಜ್ಞೆ, ಪಶ್ಚಾತ್ತಾಪ ಇಲ್ಲದೆ ಅಂಜದೆ, ಅಳುಕದೆ ಸಮರ್ಥಿಸಿಕೊಳ್ಳುತ್ತಿರುವವರು ಯಾರು ಎನ್ನುವುದನ್ನು ಸುಮ್ಮನೆ ಒಮ್ಮೆ ಕಣ್ಣುಮುಚ್ಚಿ ನೆನಪಿಗೆ ತಂದುಕೊಳ್ಳಿ. ಜತೆಗೆ ಪ್ರಭುತ್ವ ಕೂಡಾ ಯಾರ ಪರವಾಗಿ ನಿಂತಿದೆ ಎಂಬುದನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ನಮ್ಮೆಲ್ಲರನ್ನೂ ಹೆಚ್ಚು ಚಿಂತೆಗೀಡುಮಾಡಿರುವುದು ಮತ್ತು ಹತಾಶರನ್ನಾಗಿ ಮಾಡಿರುವುದು ಈ ಬೆಳವಣಿಗೆ.

ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಗೌರಿ ತನ್ನ ಅಪ್ಪ ಹುಟ್ಟುಹಾಕಿರುವ ಹೊಸ ಮಾಧ್ಯಮ ಚಳವಳಿಯನ್ನು ಮುಂದು ವರಿಸಿಕೊಂಡು ಹೋಗಲು ಹೆಣಗಾಡುತ್ತಿದ್ದಳು.

ಆದ್ದರಿಂದ ಗೌರಿ ಹತ್ಯೆ ಕೇವಲ ಓರ್ವ ಪತ್ರಕರ್ತೆಯದ್ದು ಮಾತ್ರವಲ್ಲ, ಲಂಕೇಶ್ ಪ್ರಾರಂಭಿಸಿದ ಮಾಧ್ಯಮ ಚಳವಳಿಯ ಕತ್ತು ಕುಯ್ಯುವ ಪ್ರಯತ್ನವೂ ಹೌದು. ಗೌರಿ ಹತ್ಯೆಯ ನಂತರ ಅವಳ ಪತ್ರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲವೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ಕೂಡಾ ಈ ಬೆದರಿಕೆಯನ್ನು ನೆನಪು ಮಾಡಿಕೊಡುತ್ತಿದೆ.

(‘ವಾರ್ತಾಭಾರತಿ’ಯ 15ನೇ ವಾರ್ಷಿಕ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನದ ಆಯ್ದ ಭಾಗ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಿನೇಶ್ ಅಮಿನ್ ಮಟ್ಟು

contributor