ರಾಯಚೂರು : ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ಕಳಪೆ ಆಹಾರ ಸೇವಿಸಿ 33 ದಿನಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಧಿಕಾರಿಗಳು ವಸತಿ ನಿಲಯಗಳನ್ನು ನಿರ್ವಹಿಸುವಲ್ಲಿ ಗಂಭೀರ ಲೋಪಗಳನ್ನು ಎಸಗುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಬಹುತೇಕ ವಸತಿ ನಿಲಯಗಳಲ್ಲಿ ಸರಕಾರ ನಿಗದಿಪಡಿಸಿದ ಆಹಾರ ಪಟ್ಟಿ ಪ್ರಕಾರ ಪೌಷ್ಟಿಕ ಆಹಾರ ನೀಡುತ್ತಿಲ್ಲ.

ಕೊಳೆತ ತರಕಾರಿ, ಬೇಯದ ಸಾಂಬಾರ್, ತಾಜಾ ಅನ್ನ ನೀಡದಿರುವುದು ಒಂದೆಡೆಯಾದರೆ ಹುಳ ಬಿದ್ದ ಆಹಾರ ಸೇವಿಸಿ ಅನೇಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಪ್ರಕರಣ ನಡೆದಿವೆ. ವಸತಿ ನಿಲಯದ ಅಡುಗೆ ಕೋಣೆ, ಆಹಾರ ಸಾಮಾಗ್ರಿಗಳು,

ಆಹಾರ ಧಾನ್ಯಗಳು, ಬೇಳೆ, ಅಡುಗೆ ಎಣ್ಣೆ ಇತರೆ ಪದಾರ್ಥಗಳು ಶುದ್ಧವಾಗಿವೆಯೇ ಎಂಬ ಪ್ರಶ್ನೆ ಮೂಡಿವೆ.

2025ರ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 77 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 72 ವಸತಿ ನಿಲಯಗಳು, ಅಲ್ಪಸಂಖ್ಯಾತರ ಇಲಾಖೆಯಿಂದ 18 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ವಸತಿ ನಿಲಯಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಎದ್ದು ಕಾಣುತ್ತಿವೆ. ನಗರದ ಅಂಬೇಡ್ಕರ್ ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಕಳೆದ 2 ವರ್ಷಗಳಿಂದ ಕುಡಿಯುವ ನೀರಿನ ಶುದ್ಧೀಕರಣ ಘಟಕ ಕೆಟ್ಟು ಹೋಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ, ಸ್ವಚ್ಛತೆ, ನೈರ್ಮಲ್ಯವಿಲ್ಲ. ಗುತ್ತಿಗೆ ಪಡೆದ ಸಂಸ್ಥೆಯವರು ಸರಿಯಾಗಿ ಸೌಲಭ್ಯ ಒದಗಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ಜಿಲ್ಲೆಯಲ್ಲಿ ಆಹಾರ ವಿಷಬಾಧೆ ಘಟನೆಗಳು ಆಗಾಗ ನಡೆಯುತ್ತಲೇ ಇದ್ದು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಆದ ಲೋಪ ದೋಷಗಳನ್ನು ಸರಿ ಮಾಡುವ ಪ್ರಯತ್ನ ಯಶಸ್ಸು ಕಾಣುತ್ತಿಲ್ಲ. ಹಾಗೂ ಮಕ್ಕಳ ಫುಡ್ ಪಾಯಿಸನ್ ಗೆ ಕಾರಣರಾದವರ ಯಾರೊಬ್ಬರ ಮೇಲೂ ಇದುವರೆಗೂ ಕ್ರಮವಾಗಿಲ್ಲ ಎನ್ನುವುದು ಆತಂಕದ ಸಂಗತಿ.

► ಜು.30ರಂದು ಸಿಂಧನೂರು ತಾಲೂಕಿನ ಒಳ ಬಳ್ಳಾರಿ ರಸ್ತೆಯ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಲಾವಿನಲ್ಲಿ ಹುಳು ಪತ್ತೆಯಾಗಿ 21 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.

► ಆ.4ರಂದು ಸಿಂಧನೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಕಲುಷಿತ ಉಪಹಾರ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

► ಆ.29ರಂದು ಸಿಂಧನೂರು ಪೊಲೀಸ್ ಠಾಣೆ ಎದುರಿನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಬೆಳಗಿನ ಉಪಾಹಾರವಾಗಿ ಚಿತ್ರಾನ್ನ ನೀಡಲಾಗಿತ್ತು. ವಿದ್ಯಾರ್ಥಿನಿಯೊಬ್ಬಳ ತಟ್ಟೆಯಲ್ಲಿ ಕಬ್ಬಿಣದ ವಸ್ತು ಪತ್ತೆಯಾದ ಬಳಿಕ ಉಪಾಹಾರ ಸೇವಿಸಿದ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ತಾಯಿ-ಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

► ಸೆ.2ರಂದು ಮಾನ್ವಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಪಾಹಾರ ಸೇವಿಸಿದ ಬಳಿಕ 34 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಈ ಪೈಕಿ 24 ವಿದ್ಯಾರ್ಥಿಗಳಿಗೆ ಸ್ಥಳೀಯ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ಇಬ್ಬರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗುತ್ತಿರುವ ಘಟನೆಗಳನ್ನು ಪರಿಶೀಲಿಸಿದಾಗ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಾಗಿವೆ. ಆದರೆ ಗಂಭೀರವಾಗಿಲ್ಲ, ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲು ಅಡುಗೆ ಸಿಬ್ಬಂದಿಗೆ ಸ್ವಚ್ಛ ಹಾಗೂ ಆರೋಗ್ಯಕರ ಆಹಾರ ತಯಾರಿಕೆಗೆ ತರಬೇತಿ ನೀಡಲಾಗುವುದು.

-ಪ್ರವೀಣ ಕುಮಾರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರಾಯಚೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor