ರೈತರ ಪಾಲಿಗೆ ಕಹಿಯಾದ ಮಾವು: ಸೂಕ್ತ ಬೆಲೆ ಸಿಗದೆ ಕಂಗಾಲು
ಶಿಡ್ಲಘಟ್ಟ : ರೈತರ ಪಾಲಿಗೆ ಸಿಹಿಯಾಗಬೇಕಾಗಿದ್ದ ಮಾವಿನ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಹಿಯಾಗಿ ಮಾರ್ಪಟ್ಟಿದೆ. ಮಾವಿನ ಬೆಳೆ ಬೆಳೆದ ರೈತರು, ತೋಟದಿಂದ ಬೆಳೆ ಖಾಲಿ ಮಾಡಲು ವ್ಯಾಪಾರಿಗಳ ಬಳಿ ದುಂಬಾಲು ಬೀಳುವಂತಾಗಿದೆ.
ರೈತರು ತಮ್ಮ ತೋಟಗಳಲ್ಲಿ ಬೆಳೆದಿರುವ ಮಾವನ್ನು ವ್ಯಾಪಾರಿಗಳು ಕಿತ್ತುಕೊಂಡು ಹೋಗದ ಕಾರಣ, ಹಣ್ಣಾಗಿ ನೆಲಕ್ಕುರುಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮಾವಿನ ಮರಗಳಿಗೆ ಗೊಬ್ಬರ ಹಾಕಿ, ರೋಗಗಳಿಂದ ಸಂರಕ್ಷಣೆ ಮಾಡಲು ಔಷಧಗಳನ್ನು ಸಿಂಪಡಣೆ ಮಾಡಿ, ಬೆಳೆ ಕಾಪಾಡಿಕೊಂಡಿದ್ದ ರೈತರು, ಉತ್ತಮ ಇಳುವರಿ ಬರುತ್ತದೆ. ಬೇಸಿಗೆಯಲ್ಲಿ ಒಳ್ಳೆಯ ಬೆಲೆಯೂ ಸಿಗಲಿದ್ದು, ಒಂದಷ್ಟು ಸಾಲಗಳನ್ನಾದರೂ ತೀರಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದರು.
ಗಿಡಗಳಲ್ಲಿ ಹೂ ಬಿಟ್ಟಾಗಲೇ, ತೋಟಗಳಿಗೆ ಧಾವಿಸಿ ಬಂದಿದ್ದ ವ್ಯಾಪಾರಿಗಳು, ಈ ಬಾರಿ ಮಾವಿನ ಗಿಡಗಳಲ್ಲಿನ ಬೆಳೆಯನ್ನು ನಮಗೆ ಕೊಡಬೇಕು, ಲಾಭವಾದರೂ ಸರಿ, ನಷ್ಟವಾದರೂ ಸರಿ ನಾವೇ ಭರಿಸುತ್ತೇವೆ ಎಂದು ವ್ಯಾಪಾರ ಮಾಡಿಕೊಂಡಿದ್ದ ವ್ಯಾಪಾರಿಗಳು, ಈಗ ಬೆಳೆ ಕಟಾವಿನ ಹಂತಕ್ಕೆ ಬಂದಾಗ, ಬೆಲೆಯಿಲ್ಲ, ನಮಗೆ ನಷ್ಟವಾಗುತ್ತಿದೆ ಎಂದು ಕಾರಣ ಹೇಳಿ, ಮರಗಳಲ್ಲಿ ಕಾಯಿಗಳನ್ನು ಕೀಳುತ್ತಿಲ್ಲದ ಕಾರಣ, ಹಣ್ಣುಗಳು ಉದುರಿಹೋಗುತ್ತಿವೆ. ಇದರಿಂದ ನೊಣಗಳು ಉತ್ಪತ್ತಿಯಾಗಿ ಉಳಿದ ಹಣ್ಣುಗಳಿಗೆ ಹಾನಿಯುಂಟು ಮಾಡುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಗಂಗನಹಳ್ಳಿಯ ರೈತ ಬೈರೇಗೌಡ ಮಾತನಾಡಿ, ತೋಟದಲ್ಲಿ ಹೂವಿರುವಾಗ 1 ಲಕ್ಷಕ್ಕೆ ವ್ಯಾಪಾರ ಮಾಡಿದ್ದೆವು. ನಮಗೆ 20 ಸಾವಿರ ರೂ. ಕೊಟ್ಟಿದ್ದರು. ಈಗ ಕಾಯಿಗಳನ್ನು ಕಿತ್ತುಕೊಂಡು,ಉಳಿದ ಹಣವನ್ನು ಕೊಡಿ ಎಂದು ಕೇಳಿದರೆ, ಅಡ್ವಾನ್ಸ್ ಹಣವನ್ನು ನೀವೇ ಇಟ್ಟುಕೊಳ್ಳಿ, ಹಣ್ಣುಗಳನ್ನು ಬೇರೆ ಯಾರಿಗಾದರೂ ಮಾರಿ ಬಿಡಿ ಎಂದು ಹೇಳುತ್ತಿದ್ದಾರೆ. ಹಣ್ಣು ಕಿತ್ತುಕೊಂಡು ಹೋಗಿ, ಎಲ್ಲಿ ಮಾರಾಟ ಮಾಡಲು ಸಾಧ್ಯ? ಸರಕಾರ, ರೈತರ ನೆರವಿಗೆ ಬರಬೇಕು, ಮಾವಿನ ಗಿಡಗಳನ್ನು ನಂಬಿಕೊಂಡು ಸಾಕಷ್ಟು ಸಾಲ ಮಾಡಿಕೊಂಡಿದ್ದೇವೆ. ಈಗ ಸಾಲ ತೀರಿಸುವುದಕ್ಕೂ ಸಾಧ್ಯವಾಗದೇ, ಪರದಾಡುವಂತಾಗಿದೆ. ನಮಗೆ ಬೆಳೆ ನಷ್ಟ ಪರಿಹಾರವನ್ನಾದರೂ ಬಿಡುಗಡೆ ಮಾಡಿದರೆ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಬೆಳೆಗಾರರು.
ಜಂಬೂ ನೇರಳೆಗೂ ಬೆಲೆ ಇಲ್ಲ: ಪ್ರತಿ ವರ್ಷ ಕೆ.ಜಿ.ಗೆ 100 ರೂ.ಗೆ ಮಾರಾಟವಾಗುತ್ತಿದ್ದ ಮಧುಮೇಹಿಗಳ ಪಾಲಿಗೆ ಅಚ್ಚುಮೆಚ್ಚಾಗಿರುವ ಜಂಬೂ ನೇರಳೆ ಬೆಳೆಗೂ ಬೆಲೆಯಿಲ್ಲದ ಕಾರಣ, ಮರಗಳಲ್ಲಿ ಹುಲುಸಾಗಿ ಬಿಟ್ಟಿರುವ ಜಂಬೂ ನೇರಳೆ ಹಣ್ಣುಗಳು ನೆಲಕ್ಕುರುಳಿವೆ. ಇದರಿಂದ ರೈತರು ನಿರಾಶರಾಗಿದ್ದಾರೆ.
ಶಿಡ್ಲಘಟ್ಟ ತಾಲೂಕಿನಲ್ಲಿ 2,880 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಈ ಬಾರಿ ಉತ್ತಮ ಇಳುವರಿಯೂ ಇಲ್ಲ. ಸೂಕ್ತ ಬೆಲೆಯೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
-ಮಂಜುಳಾ, ಸಹಾಯಕ ನಿರ್ದೇಶಕಿ
ತೋಟಗಾರಿಕೆ ಇಲಾಖೆ ಶಿಡ್ಲಘಟ್ಟ
ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧದ ಸನ್ನಿವೇಶವಿದ್ದು, ಇಂಧನಗಳ ಬೆಲೆ ಏರಿಕೆಯಾಗಿರುವ ಕಾರಣ, ಮಾವಿನ ಹಣ್ಣಿನ ಸಾಗಾಟಕ್ಕೆ ಹೆಚ್ಚು ಖರ್ಚು ಬರುತ್ತಿದೆ. ರೈತರಿಂದ ಖರೀದಿಸಿರುವ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದ ಕಾರಣ, ವ್ಯಾಪಾರ ಮಾಡಿಕೊಂಡಿರುವ ತೋಟಗಳನ್ನು ಬಿಟ್ಟು ಬಿಟ್ಟಿದ್ದೇವೆ.
-ನರಸಿಂಹಗೌಡ, ಮಾವಿನ ಹಣ್ಣು ವ್ಯಾಪಾರಿ