ಬಿತ್ತನೆಗೆ ಸಜ್ಜಾದರೂ ಮಳೆಯಿಲ್ಲದೆ ಕಂಗಾಲು
ಹೊಲದಲ್ಲಿ ಸಿದ್ಧತೆ ಪೂರ್ಣ; ಆಕಾಶದತ್ತ ರೈತರ ಚಿತ್ತ
ಆಳಂದ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾಗಿರುವ ಮಳೆಯೇ ಈ ಬಾರಿ ಕೈಕೊಟ್ಟಿರುವುದರಿಂದ ತಾಲೂಕಿನ ರೈತ ಸಮುದಾಯ ತೀವ್ರ ಆತಂಕಕ್ಕೆ ಒಳಗಾಗಿದೆ. ಕಳೆದ ವರ್ಷದೊಂದಿಗೆ ಹೋಲಿಸಿದರೆ ಸುಮಾರು 15 ದಿನಗಳು ಕಳೆದರೂ ಬಿತ್ತನೆಗೆ ಅಗತ್ಯವಾದ ಹದವಾದ ಮಳೆ ಸುರಿಯದ ಕಾರಣ ರೈತರು ಹೊಲಗಳನ್ನು ಸಜ್ಜುಗೊಳಿಸಿಕೊಂಡು ಮಳೆ ಆಗಮನಕ್ಕಾಗಿ ಕಾತರದಿಂದ ಕಾಯುವಂತಾಗಿದೆ.
ಬೇಸಿಗೆಯ ಬಿಸಿಲಿನ ನಡುವೆಯೇ ರೈತರು ತಮ್ಮ ಜಮೀನುಗಳಲ್ಲಿ ಮಾಗಿ ಉಳುಮೆ, ಆಳ ಉಳುಮೆ ಸೇರಿದಂತೆ ವಿವಿಧ ಕೃಷಿ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಟ್ರ್ಯಾಕ್ಟರ್ ಮೂಲಕ ಹೊಲಗಳನ್ನು ಹದಗೊಳಿಸಿದ್ದು, ದುಬಾರಿ ಬೆಲೆಯ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಮುಂಚಿತವಾಗಿ ಖರೀದಿಸಿ ಸಿದ್ಧವಾಗಿಟ್ಟಿದ್ದಾರೆ. ಇನ್ನೂ ಕೆಲವರು ಮಳೆಯ ನಿರೀಕ್ಷೆಯಲ್ಲಿ ಬೀಜ, ಗೊಬ್ಬರ ಖರೀದಿಗೆ ಎದುರು ನೋಡುತ್ತಿದ್ದಾರೆ.
ಆದರೆ ನಿರೀಕ್ಷಿತ ಸಮಯಕ್ಕೆ ಮಳೆ ಬಾರದ ಕಾರಣ ಬಿತ್ತನೆ ಕಾರ್ಯ ಆರಂಭಿಸಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೃಷಿ ವೆಚ್ಚಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆ ರೈತರು ಸಾಲ ಮಾಡಿ ಬೀಜ, ರಸಗೊಬ್ಬರ ಹಾಗೂ ಕಳೆನಾಶಕಗಳನ್ನು ಖರೀದಿಸಿದ್ದಾರೆ. ಮಳೆ ತಡವಾದಂತೆ ಬಿತ್ತನೆ ಅವಧಿಯೂ ಮುಂದೂಡಲ್ಪಡುತ್ತಿದ್ದು, ಬೆಳೆ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀಳುವ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ತೊಗರಿ, ಹೆಸರು, ಉದ್ದು, ಸೋಯಾಬೀನ್, ಜೋಳ ಸೇರಿದಂತೆ ಮುಂಗಾರು ಬೆಳೆಗಳನ್ನು ಅವಲಂಬಿಸಿರುವ ರೈತರು ಹವಾಮಾನ ವೈಪರೀತ್ಯದಿಂದ ಚಿಂತೆಗೀಡಾಗಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಆಕಾಶದತ್ತ ದೃಷ್ಟಿ ನೆಟ್ಟು ಮೋಡಗಳ ಚಲನವಲನ ಗಮನಿಸುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ದಿನಗಳಿಂದ ಮೋಡಗಳು ಕಾಣಿಸಿಕೊಂಡರೂ ಮಳೆಯಾಗಿ ಪರಿವರ್ತನೆಯಾಗದೇ ಇರುವುದರಿಂದ ರೈತರಿಗೆ ನಿರಾಸೆಯಾಗುತ್ತಿದೆ. ಕೆಲವೆಡೆ ತುಂತುರು ಮಳೆಯಾಗಿದ್ದರೂ ಬಿತ್ತನೆಗೆ ಅಗತ್ಯವಾದಷ್ಟು ತೇವಾಂಶ ಭೂಮಿಯಲ್ಲಿ ಸಂಗ್ರಹವಾಗಿಲ್ಲ.
ಮಳೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ವೇಳಾಪಟ್ಟಿಯಲ್ಲೂ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಕೃಷಿ ಇಲಾಖೆಯ ಸಲಹೆ ಪಡೆದು ಬೆಳೆ ಆಯ್ಕೆ ಹಾಗೂ ಬಿತ್ತನೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಹೊಲ ಸಿದ್ಧವಾಗಿದೆ, ಬೀಜ ಸಿದ್ಧವಾಗಿದೆ, ರಸಗೊಬ್ಬರವೂ ಸಿದ್ಧವಾಗಿದೆ. ಈಗ ರೈತನ ಕಣ್ಣು ಮಾತ್ರ ಆಕಾಶದತ್ತ ನೆಟ್ಟಿದೆ. ಮಳೆ ಬಂದರೆ ಬದುಕು ಹಸನಾಗುತ್ತದೆ, ಇಲ್ಲದಿದ್ದರೆ ಮತ್ತೆ ಸಂಕಷ್ಟದ ಚಕ್ರವೇ ಮುಂದುವರಿಯಲಿದೆ ಎಂಬುದು ರೈತ ಸಮುದಾಯದ ನೋವಿನ ಮಾತು. ತಾಲೂಕಿನ ತಡಕಲ್, ಕಿಣ್ಣಿಸುಲ್ತಾನ, ತಂಬಾಕವಾಡಿ ಆಳಂದ ಸೇರಿ ಹಲವಡೆ ಗ್ರಾಮಗಳ ವಲಯದಲ್ಲಿ ಅಲ್ಪಸ್ವಲ್ಪ ಬಿತ್ತನೆ ನಡೆಸಲಾಗಿದೆಯಾದರೂ, ಬಿತ್ತನೆಯಾದ ಬೀಜದ ಮೊಳಕೆಗೆ ಅಗತ್ಯ ತೇವಾಂಶ ಇಲ್ಲದೆ, ಮೊಳೆಕೆ ಒಡೆದಿಲ್ಲ. ಮತ್ತೆ ಬಿತ್ತನೆಗೆ ಮುಂದಾಗಿ ಕೈಸುಟ್ಟುಕೊಳ್ಳುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಮಳೆಯಾದ ಮೇಲೆ ಬಿತ್ತನೆಗೆ ಸಲಹೆ
ಮಳೆಯಾಗುವ ನಿರೀಕ್ಷೆಯಿದೆ. ಉತ್ತಮ ಮಳೆಯಾಗಿ ಭೂಮಿ ಸಂಪೂರ್ಣ ತೇವಾಂಶದಿಂದ ಹದವಾದ ಮೇಲೆ ಬಿತ್ತನೆ ಮಾಡಬೇಕು. ಮುಂಗಾರಿನ ಅಲ್ಪಾವಧಿ ಬೆಳೆ ಹೆಸರು, ಉದ್ದು ಬಿತ್ತನೆಗೆ ಕಾಲಾವಧಿ ಬಹುತೇಕ ಮುಗಿದಿದ್ದು, ಉಳಿದ ಬೆಳೆಗಳಿಗೆ ಮಳೆಯನ್ನೇ ಕಾಯಬೇಕಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬೀಜ ಹಾಗೂ ಮಾರುಕಟ್ಟೆಯಲ್ಲಿ ಅಗತ್ಯವಾದ ರಸಗೊಬ್ಬರ ಲಭ್ಯವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ.
-ತಿಪ್ಪೇಸ್ವಾಮಿ ವಿ.,
ಸಹಾಯಕ ಕೃಷಿ ನಿರ್ದೇಶಕರು
ಕಳೆದ ಸಾಲಿನಲ್ಲಿ ಮೇ ಕೊನೆಯ ವಾರದಲ್ಲೇ ಬಿತ್ತನೆ ನಡೆದಿತ್ತು. ಈ ಬಾರಿ 20 ದಿನ ವಿಳಂಬವಾಗಿದೆ. ಜೂನ್ ಆರಂಭದಲ್ಲೇ ಬಿದ್ದ ಕೊಂಚ ಮಳೆಯಿಂದ ಮುಂದೆ ಮಳೆ ಬರುವ ನಿರೀಕ್ಷೆಯಲ್ಲಿ ಕೆಲವರು ಅಲ್ಲಲ್ಲಿ ಬಿತ್ತನೆ ಮಾಡಿದ್ದಾರೆ. ಈಗ ಮಳೆ ತಡವಾದ್ದರಿಂದ ಬಿತ್ತನೆ ಕೈಬಿಟ್ಟು ಕುಳಿತಿದ್ದಾರೆ.
-ಚಂದ್ರಕಾಂತ ಖೋಬ್ರೆ,
ಕಿಸಾನಸಭಾ ಗೌರವ ಅಧ್ಯಕ್ಷಕಿಸಾನಸಭಾ ಗೌರವ ಅಧ್ಯಕ್ಷ