×
Ad

ಪಪಂ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಪಾರ್ಕ್ ಸ್ವಚ್ಛಗೊಳಿಸಿದ ಕೊಟ್ಟೂರಿನ ಮಹಿಳೆಯರು!

Update: 2026-06-18 14:53 IST

ಕೊಟ್ಟೂರು (ವಿಜಯನಗರ ಜಿಲ್ಲೆ): ಪಟ್ಟಣ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಬಡಾವಣೆಯ ಮಹಿಳೆಯರು ತಾವೇ ಪೊರಕೆ ಹಾಗೂ ಚಲಕಿ ಹಿಡಿದು ಪಾರ್ಕ್ ಸ್ವಚ್ಛಗೊಳಿಸಿದ ಘಟನೆ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಉಜ್ಜಿನಿ ರಸ್ತೆಯ ಬಸವೇಶ್ವರ ಬಡಾವಣೆಯ ಈಶ್ವರ ಗುಡಿ ಸಮೀಪದ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬಡಾವಣೆಯ ನಿವಾಸಿಗಳು ಸ್ವತಃ ಕಾಳಜಿ ವಹಿಸಿ ಪಾರ್ಕ್‌ನಲ್ಲಿ ನೂರಾರು ಗಿಡಮರಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರು ವನವನ್ನಾಗಿ ರೂಪಿಸಿದ್ದರು. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮಕ್ಕಳು, ವೃದ್ಧರು ಸೇರಿದಂತೆ ನೂರಾರು ಜನರು ನಡಿಗೆಗಾಗಿ ಈ ಪಾರ್ಕಿಗೆ ಬರುತ್ತಾರೆ. ಆದರೆ, ಹಲವು ದಿನಗಳಿಂದ ಮರಗಳಿಂದ ಬಿದ್ದ ಒಣ ಎಲೆಗಳು ಹಾಗೂ ಕಸ ತೆರವುಗೊಳಿಸದ ಪರಿಣಾಮ ಪಾರ್ಕ್ ಕಸದ ತಾಣದಂತಾಗಿತ್ತು.

ಕಸದ ರಾಶಿ ಹಾಗೂ ಪೊದೆಗಳಿಂದಾಗಿ ಹಾವು ಸೇರಿದಂತೆ ವಿಷಜಂತುಗಳ ಭೀತಿ ಎದುರಾಗಿದ್ದು, ಪಾರ್ಕ್‌ಗೆ ಬರುವ ಮಕ್ಕಳು ಹಾಗೂ ಸಾರ್ವಜನಿಕರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ನಿವಾಸಿಗಳು ದೂರಿದ್ದಾರೆ.

ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳು

ಪಾರ್ಕ್‌ನಲ್ಲಿ ಸ್ವಚ್ಛತೆ ಕೈಗೊಳ್ಳುವಂತೆ ಪಟ್ಟಣ ಪಂಚಾಯತ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತು ಕೊನೆಗೆ ಬಡಾವಣೆಯ ಮಹಿಳೆಯರೇ ತಮ್ಮ ಮಕ್ಕಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.

ಕೈಯಲ್ಲಿ ಪೊರಕೆ, ಚಲಕಿ ಹಿಡಿದು ಪಾರ್ಕ್‌ನಲ್ಲಿದ್ದ ಕಸ, ಒಣ ಎಲೆಗಳ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ಮಾಡಿದರು.

ಮಹಿಳೆಯರು ಹಾಗೂ ಮಕ್ಕಳು ಸ್ವತಃ ಪಾರ್ಕ್ ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಂಡ ದಾರಿಹೋಕರು ಪಟ್ಟಣ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತೆರಿಗೆ ವಸೂಲಿಯಲ್ಲಿ ತೋರಿಸುವ ಆಸಕ್ತಿಯನ್ನು ಸಾರ್ವಜನಿಕ ಸೌಲಭ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿಯೂ ತೋರಬೇಕು ಎಂದು ಅಸಮಾಧಾನ ಹೊರಹಾಕಿದರು.

ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದೆ ಪಾರ್ಕ್‌ಗಳ ನಿರ್ವಹಣೆ ಹಾಗೂ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಪಾರ್ಕ್‌ನಲ್ಲಿ ಕಸ ಮತ್ತು ಒಣ ಎಲೆಗಳು ತುಂಬಿಕೊಂಡಿದ್ದು, ವಿಷಜಂತುಗಳ ಭಯ ಎದುರಾಗಿತ್ತು. ಈ ಕುರಿತು ಪಟ್ಟಣ ಪಂಚಾಯಿತ್‌ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಾವೇ ಸ್ವಚ್ಛತಾ ಕಾರ್ಯ ಮಾಡಬೇಕಾಯಿತು.’

<ಬಸವೇಶ್ವರ ಬಡಾವಣೆಯ ನಿವಾಸಿಗಳು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಾದಾಪೀರ್ ಕೊಟ್ಟೂರು

contributor

Similar News