×
Ad

ಲಕ್ಷಾಂತರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ವ್ಯವಸ್ಥೆಗೆ ನೈತಿಕ ಮುಸುಕಾಗಿ ಇಲ್ಯಾಸಿಯಂತಹವರನ್ನು ಬಳಸಿಕೊಳ್ಳುವ ಆರೆಸ್ಸೆಸ್‌ನ ಸಂವಾದ ಸಭೆ ಎಂಬ ಕಪಟ ನಾಟಕ

Update: 2025-07-29 15:27 IST

ಇತ್ತೀಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಕೆಲವು ಮುಸ್ಲಿಮ್ ಧಾರ್ಮಿಕ ನಾಯಕರ ನಡುವೆ ದಿಲ್ಲಿಯಲ್ಲಿ ಸಭೆ ನಡೆಯಿತು. ಸುಮಾರು ಐವತ್ತಕ್ಕೂ ಹೆಚ್ಚು ಮುಸ್ಲಿಮ್ ಧಾರ್ಮಿಕ ಮುಖಂಡರು ಅಲ್ಲಿದ್ದರು. ಸಂವಾದ ಎಂದು ಅದನ್ನು ಕರೆಯಲಾಗಿತ್ತು. ಅದು ಕೋಮು ಸಾಮರಸ್ಯದ ಉದ್ದೇಶದ್ದು ಎಂದು ಬಿಂಬಿಸಲಾಗಿತ್ತು. ಹಾಗೆಂದೇ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಆದರೆ, ಅದು ನಿಜವಾಗಿಯೂ ಹೌದೆ? ಅದರ ವಾಸ್ತವವೇನು?

ದೇಶಾದ್ಯಂತ ಮುಸ್ಲಿಮರು ಹಿಂದೆಂದೂ ಇರದಷ್ಟು ಸಾಮಾಜಿಕ ಬಹಿಷ್ಕಾರ, ಆರ್ಥಿಕ ಬಹಿಷ್ಕಾರ ಮತ್ತು ಹಿಂಸೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಭಾಗವತ್ ಅವರ ಈ ಕಸರತ್ತು ನಡೆಯುತ್ತಿದೆ.

ಸಮುದಾಯದ ನಿಜವಾದ ಧ್ವನಿಗಳೊಂದಿಗೆ ತೊಡಗಿಸಿಕೊಳ್ಳುವ ಮನಸ್ಸು ಅವರಿಗಿಲ್ಲ. ಬದಲಿಗೆ, ಮುಸ್ಲಿಮ್ ಸಮುದಾಯದೊಳಗೆ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟ ವ್ಯಕ್ತಿಗಳನ್ನೇ ಇಂತಹ ಸಭೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇಲ್ಲಿ ಕೋಮು ಸಂಬಂಧಗಳನ್ನು ಸರಿಪಡಿಸುವ ಉದ್ದೇಶವಿಲ್ಲ. ಬದಲಿಗೆ, ಕೆಲವೇ ಕೆಲವು ವ್ಯಕ್ತಿಗಳಿಂದ ಒಪ್ಪಿಗೆಯನ್ನು ಸಂಪಾದಿಸುವ ರಾಜಕೀಯ ಕಾಣಿಸುತ್ತದೆ. ಲಕ್ಷಾಂತರ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ವ್ಯವಸ್ಥೆಗೆ ನೈತಿಕ ಮುಸುಕಾಗಿ ಇದನ್ನು ಬಳಸಲು ಸಂಘದ ಹೊಸ ನಾಟಕದಂತೆ ಇದು ಕಂಡುಬರುತ್ತಿದೆ.

ಮೊನ್ನೆ ನಡೆದ ಸಂವಾದವನ್ನು ಆಯೋಜಿಸಿದ್ದ ಉಮರ್ ಅಹ್ಮದ್ ಇಲ್ಯಾಸಿಯ ವ್ಯಕ್ತಿತ್ವ ಏನು ಎಂಬುದನ್ನು ನೋಡಿದರೆ ಇದೆಲ್ಲವೂ ತಿಳಿಯುತ್ತ ಹೋಗುತ್ತದೆ.

ಸಮುದಾಯದ ಬಗೆಗಿನ ಕಾಳಜಿಗಳಿಗಿಂತ ಹಿಂದುತ್ವ ಸಂಘಟನೆಗಳ ನಿಲುವಿಗೆ ಹೆಚ್ಚು ಹೊಂದುವ ವಿವಾದಾತ್ಮಕ ಹೇಳಿಕೆಗಳಿಂದಲೇ ಇಲ್ಯಾಸಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರನ್ನು ಅನೇಕ ಮುಸ್ಲಿಮ್ ವಿದ್ವಾಂಸರು ಮತ್ತು ತಳಮಟ್ಟದ ಸಂಸ್ಥೆಗಳು ಸ್ವಾರ್ಥಪರ ಎಂದು ಬಹಳ ಹಿಂದಿನಿಂದಲೂ ಬದಿಗಿರಿಸಿರುವುದನ್ನು ಗಮನಿಸಬೇಕು.

ಅವರ ಬೇಡಿಕೆಗಳಿಗೂ ಹಿಂದುತ್ವ ಸಂಘಟನೆಗಳ ಬೇಡಿಕೆಗಳಿಗೂ ವ್ಯತ್ಯಾಸವಿಲ್ಲ. ಗೋಹತ್ಯೆ ನಿಷೇಧಿಸಬೇಕು ಎನ್ನುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದನ್ನು ಖಂಡಿಸುತ್ತಾರೆ. ಮುಸ್ಲಿಮರು ಹಿಂದೂ ದೇವತೆಗಳ ವಂಶಸ್ಥರು ಎಂಬ ವಾದ ಮುಂದಿಡುತ್ತಾರೆ. ಹಿಂದುತ್ವ ನಾಯಕರಂತೆಯೇ ಮುಸ್ಲಿಮರಿಗೇ ದೇಶಪ್ರೇಮದ ಪಾಠ ಮಾಡುತ್ತಾರೆ.

ಆದರೆ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅವರು ಮಾತಾಡುವುದೇ ಇಲ್ಲ. ಬಿಜೆಪಿ ಸರಕಾರಗಳ ಮುಸ್ಲಿಮ್ ದ್ವೇಷ ನೀತಿಗಳ ಬಗ್ಗೆ ಚಕಾರ ಎತ್ತುವುದಿಲ್ಲ. ಅವರ ಇಂಥ ನಿಲುವೆಲ್ಲ ಈಗಾಗಲೇ ತೀಕ್ಷ್ಣ ಟೀಕೆಗೆ, ಖಂಡನೆಗೆ ತುತ್ತಾಗಿವೆ.

ಈ ದೇಶದಲ್ಲಿರುವ ಕೋಟಿಗಟ್ಟಲೆ ಮುಸ್ಲಿಮರ ಭಾವನೆಗಳಿಗೆ ಪೂರ್ತಿ ಭಿನ್ನವಾಗಿರುವ ಇಲ್ಯಾಸಿ, ಆರೆಸ್ಸೆಸ್ ನಿಲುವಿಗೆ ಹೊಂದುವಂತೆಯೇ ಮಾತಾಡುತ್ತ ಬಂದವರು.

ಇಲ್ಯಾಸಿ 2017ರಲ್ಲಿ, ದೇಶಾದ್ಯಂತ ಗೋಹತ್ಯೆ ನಿಷೇಧಿಸಬೇಕೆಂದು ಇಂದೋರ್‌ನಲ್ಲಿ ಮಾತಾಡುತ್ತ ಹೇಳಿದ್ದರು. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದರು.

2022ರಲ್ಲಿ ಅವರು, ಮಸೀದಿಯ ಧ್ವನಿವರ್ಧಕಗಳ ಮೇಲಿನ ನಿಷೇಧ ಬೆಂಬಲಿಸಿ ಮಾತಾಡಿದ್ದರು. ಅದು ಹಲವಾರು ಮುಸ್ಲಿಮ್ ಧರ್ಮಗುರುಗಳು ಮತ್ತು ಸಂಘಟನೆಗಳ ನಿಲುವಿಗೆ ವಿರುದ್ಧವಾಗಿತ್ತು.

ಅದೇ ಹೊತ್ತಲ್ಲಿ ಅವರು, ಕರ್ನಾಟಕದಲ್ಲಿನ ಹಿಜಾಬ್ ವಿವಾದವನ್ನು ವಿದೇಶಿ ಸಂಸ್ಥೆಗಳು ಮತ್ತು ಅಲ್ ಖಾಯಿದಾದಂತಹ ಭಯೋತ್ಪಾದಕ ಗುಂಪುಗಳ ಹಸ್ತಕ್ಷೇಪವೆಂಬಂತೆ ನೋಡಿದ್ದರು.

ಮಾರ್ಚ್ 2025ರಲ್ಲಿ, ಈದುಲ್ ಫಿತ್ರ್ ಸಂದರ್ಭದಲ್ಲಿ ಅವರು ಸಾರ್ವಜನಿಕ ರಸ್ತೆಗಳಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಮುಸ್ಲಿಮರನ್ನು ಒತ್ತಾಯಿಸಿದ್ದರು.

ಜನವರಿ 2024ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಸಮಾರಂಭಕ್ಕೆ ಅವರು ಭೇಟಿ ನೀಡಿದ ನಂತರ, ಮುಫ್ತಿಗಳು ಅವರ ವಿರುದ್ಧ ಫತ್ವಾ ಹೊರಡಿಸಿ ಕ್ಷಮೆಯಾಚಿಸಲು ಕೇಳಿದರು. ಆದರೆ ಇಲ್ಯಾಸಿ, ಭಾರತ ಇಸ್ಲಾಮಿಕ್ ರಾಷ್ಟ್ರವಲ್ಲ, ಷರಿಯಾ ಕಾನೂನು ಇಲ್ಲಿ ಅನ್ವಯವಾಗದು ಎಂದು ಹೇಳಿದ್ದರು.

ಇದಕ್ಕೂ ಮೊದಲೇ ಸೆಪ್ಟಂಬರ್ 2022ರಲ್ಲಿ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಎಂದು ಕರೆದಿದ್ದರು ಇದೇ ಇಲ್ಯಾಸಿ. ತಮ್ಮ ಈ ನಿಲುವನ್ನು ಸಹಿಸದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಇಲ್ಯಾಸಿ ಬಹಿರಂಗವಾಗಿಯೇ ಹೇಳಿದ್ದರು.

ಇಲ್ಯಾಸಿ ಅವರು ಅಖಿಲ ಭಾರತ ಇಮಾಮ್ ಸಂಘಟನೆ ಎಂಬ ಸಂಘಟನೆಯ ಸ್ವಯಂ ಘೋಷಿತ ಮುಖ್ಯ ಇಮಾಮ್ ಆಗಿದ್ದಾರೆ.

ಆದರೆ, ಈ ಸಂಘಟನೆ ಭಾರತದ ವೈವಿಧ್ಯಮಯ ಮತ್ತು ವಿಕೇಂದ್ರೀಕೃತ ಮುಸ್ಲಿಮ್ ಧಾರ್ಮಿಕ ನಾಯಕತ್ವವನ್ನು ಪ್ರತಿನಿಧಿಸುವುದಿಲ್ಲ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.

ದಿಯೋಬಂದ್ ಮತ್ತು ಬರೇಲ್ವಿ ಹಿನ್ನೆಲೆಯವರು ಸೇರಿದಂತೆ ಅನೇಕ ಪ್ರಮುಖ ಮುಸ್ಲಿಮ್ ಗುಂಪುಗಳು ಅವರ ಹೇಳಿಕೆಗಳಿಂದ ದೂರ ಉಳಿದಿವೆ ಅಥವಾ ಅವರ ಕಾರ್ಯಗಳ ಬಗ್ಗೆ ಮೌನವಾಗಿವೆ.

ಹಿಂದೊಮ್ಮೆ ಅವರು ಒಂದು ಸಂದರ್ಶನದಲ್ಲಿ, ಮುಸ್ಲಿಮರು ಶ್ರೀಕೃಷ್ಣನ ವಂಶಸ್ಥರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಅಂಥ ವ್ಯಕ್ತಿ ಆರೆಸ್ಸೆಸ್ ಮುಖ್ಯಸ್ಥರನ್ನು ಕರೆದು ಮಣೆ ಹಾಕುವಾಗ, ಏಕತೆಯ ಸಂದೇಶ ಹೋಗಲು ಹೇಗೆ ಸಾಧ್ಯ? ಅದು ಖಂಡಿತ ಏಕತೆಗಾಗಿ ಅಲ್ಲ, ಬದಲಾಗಿ ದ್ವೇಷ ರಾಜಕೀಯಕ್ಕೆ ಶರಣಾಗಿರುವ ಸಂದೇಶವನ್ನು ಮುಟ್ಟಿಸುತ್ತದೆ.ಸ್ಥಾನ ಪಡೆಯುವುದಕ್ಕಾಗಿ ಮುಸ್ಲಿಮರು ಮೊದಲು ಸಂಘಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಬೇಕು ಎಂಬಂತೆ ಕಾಣುತ್ತದೆ.

ಇಲ್ಯಾಸಿಯಂತಹವರಿಗೆ ಈ ದೇಶದ ಸಂವಿಧಾನಕ್ಕಿಂತ ಆರೆಸ್ಸೆಸ್ ಹಾಗೂ ಭಾಗವತ್ ಮುಖ್ಯವಾಗುತ್ತಾರೆ. ಅವರಿಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿರುವ ಮುಸ್ಲಿಮರಿಗೆ ದೇಶಪ್ರೇಮವನ್ನು ಕಲಿಸಬೇಕಾಗಿಲ್ಲ ಎಂದು ಗೊತ್ತಿಲ್ಲ.

ಇದೇ ಮೊದಲಲ್ಲ, ಈ ಹಿಂದೆಯೂ ಭಾಗವತ್ ಇಂಥದೇ ಕಸರತ್ತುಗಳನ್ನು ಮಾಡಿದ್ದಾರೆ. ಮುಸ್ಲಿಮ್ ಬುದ್ಧಿಜೀವಿಗಳು ಮತ್ತು ನಾಯಕರೊಂದಿಗಿನ ಅವರ ಇಂಥ ಸಭೆಗಳೆಲ್ಲವೂ ಬರೀ ಟೊಳ್ಳು, ಬೋಗಸ್ ಎಂಬುದು ಬಯಲಾಗಿವೆ. ಆದರೆ ಪ್ರಚಾರ ಮಾಡುವಾಗ, ಅವನ್ನು ಸಾಮರಸ್ಯದ ಹೆಗ್ಗುರುತು ಎಂಬಂತೆ ಬಿಂಬಿಸಲಾಗುತ್ತದೆ. ಇಂಥವೆಲ್ಲ ಎಷ್ಟೇ ವ್ಯವಸ್ಥಿತವಾಗಿ ನಡೆದರೂ, ಈ ದೇಶದ ಮುಸ್ಲಿಮರ ಬದುಕಿನ ವಾಸ್ತವದಿಂದ ಅವು ಬಲು ದೂರ ಇವೆ ಎಂಬುದು ಮಾತ್ರ ಸತ್ಯ.

ಇವೆಂದೂ ಅಲ್ಪಸಂಖ್ಯಾತ ಸಮುದಾಯಗಳ ಸುತ್ತಲಿನ ಭೀಕರತೆಯನ್ನು ಬಗೆಹರಿಸುವುದಿಲ್ಲ. ಬದಲಾಗಿ, ಆರೆಸ್ಸೆಸ್ ಅನ್ನು ಶುಚಿಗೊಳಿಸಿ ತೋರಿಸುವ ಉದ್ದೇಶದ ಬಹಳ ಎಚ್ಚರಿಕೆಯ ನಡೆಗಳಾಗಿವೆ.

ಕೋಮು ಸಾಮರಸ್ಯದ ಹೇಳಿಕೆಗಳನ್ನು ನೀಡುತ್ತ ಭಾಗವತ್ ಕಾಣಿಸಿಕೊಳ್ಳುವ ರೀತಿಯೇ ಬೇರೆ. ಆದರೆ ಅವರ ಇಂಥ ಸಂವಾದಗಳು ಮುಸ್ಲಿಮ್ ವಿರೋಧಿ ಹಿಂಸಾಚಾರವನ್ನು ಖಂಡಿಸುವುದಿಲ್ಲ. ಮುಸ್ಲಿಮರ ಕರಾಳ ಅನುಭವಗಳ ಬಗ್ಗೆ ಅವರದು ಜಾಣ ಮೌನ.

ನಿತ್ಯವೂ ಏನು ನಡೆಯುತ್ತಿದೆ ಎನ್ನುವುದನ್ನು ನೋಡುತ್ತಲೇ ಇದ್ದೇವೆ. ಮುಸ್ಲಿಮರನ್ನು ಹಾಡಹಗಲೇ ಕ್ಷುಲ್ಲಕ ನೆಪ ಮುಂದೆ ಮಾಡಿ ಕೊಲ್ಲಲಾಗುತ್ತಿದೆ. ಗೋಹತ್ಯೆ ಅಥವಾ ಅಂತರ್‌ಧರ್ಮ ಸಂಬಂಧಗಳ ನೆಪದಲ್ಲಿ ಇಂಥ ಗುಂಪು ಹಲ್ಲೆಗಳು, ಹತ್ಯೆಗಳು ಹೆಚ್ಚಾಗಿ ನಡೆಯುತ್ತವೆ.

ಅಪರಾಧಿಗಳು ಆ ಹಿಂಸಾಚಾರವನ್ನು ವೀಡಿಯೊ ಮಾಡಿ, ಅಪ್‌ಲೋಡ್ ಮಾಡಿ ಹೆಮ್ಮೆಪಡುತ್ತಿದ್ದಾರೆೆ. ಕಾನೂನಿನ ಕೈಗಳಿಂದಲೂ ಬಹಳ ಸಲ ಅವರು ತಪ್ಪಿಸಿಕೊಳ್ಳುತ್ತಾರೆ.

ಕ್ಷುಲ್ಲಕ ಕಾರಣಗಳಿಗಾಗಿಯೇ ಮುಸ್ಲಿಮರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಭಯೋತ್ಪಾದನಾ ವಿರೋಧಿ ಕಾನೂನುಗಳಲ್ಲಿ ಸುಮ್ಮನೆ ಸಿಲುಕಿಸಿ ಮುಸ್ಲಿಮರನ್ನು ಜೈಲಿಗಟ್ಟಲಾಗುತ್ತಿದೆ. ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಆದರೆ ಮುಸ್ಲಿಮರ ವಿರುದ್ಧದ ಈ ದ್ವೇಷವನ್ನು ಆರೆಸ್ಸೆಸ್ ನಾಯಕ ವಿರೋಧಿಸುವುದಿಲ್ಲ. ಆದರೆ ಅತಿ ಎಚ್ಚರದಿಂದ ಕೆಲವು ಮುಸ್ಲಿಮ್ ಮುಖಂಡರನ್ನು ಆರಿಸಿಕೊಂಡು ಸಂವಾದದ ಪೋಸು ಕೊಡುತ್ತಾರೆ. ಅವರು ಹೀಗೆ ಮಾಡುತ್ತ, ಸಾಮರಸ್ಯ ಬಯಸುವುದಾಗಿ ಹೇಳಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೂಟಾಟಿಕೆಯಾಗಿದೆ.

ಸಮುದಾಯವೇ ತಿರಸ್ಕರಿಸಿರುವ ಪ್ರತಿನಿಧಿಗಳೊಂದಿಗೆ ಕಾಣಿಸಿಕೊಳ್ಳುತ್ತ, ತಮ್ಮೆದುರು ಮಣಿಯುವವರಿಗೆ ನ್ಯಾಯ ನೀಡುವ ಸರ್ವಾಧಿಕಾರಿ ನಿಲುವಿನ ಭಾಗದಂತೆ ಇದು ಕಾಣಿಸುತ್ತದೆ. ಈ ಮೂಲಕ, ಅವರು ಭಿನ್ನಾಭಿಪ್ರಾಯವನ್ನು ಹೊಸಕಿಹಾಕುತ್ತಾರೆ. ಭಾಗವತ್ ಅವರ ಸಭೆಗಳ ಹಿಂದಿರುವ ಹುನ್ನಾರವೇ ಇದಾಗಿದೆ.

ಸಂಘವನ್ನು ಒಪ್ಪಿಕೊಳ್ಳುವ ಅಥವಾ ಕಡೇಪಕ್ಷ ಮುಸ್ಲಿಮರ ವಿರುದ್ಧದ ಎಲ್ಲ ಅನ್ಯಾಯಗಳ ಬಗ್ಗೆ ಮೌನವಾಗಿರಲು ತಯಾರಿರುವ ಮುಸ್ಲಿಮ್ ನಾಯಕರನ್ನು ಮಾತ್ರವೇ ಆರಿಸಿಕೊಳ್ಳಲಾಗುತ್ತಿದೆ. ಆ ಮೂಲಕ, ಒಮ್ಮತದ ಭ್ರಮೆಯನ್ನು ಸೃಷ್ಟಿಸುವುದು ಆರೆಸ್ಸೆಸ್ ಉದ್ದೇಶವಾಗಿದೆ. ಹಾಗೆ ಮಾಡುತ್ತ, ನ್ಯಾಯ, ಘನತೆ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಪ್ರಶ್ನೆ ಎತ್ತುತ್ತಿರುವ ತಳಮಟ್ಟದ ಮುಸ್ಲಿಮ್ ನಾಯಕತ್ವವನ್ನು ಅವರು ಬೇಕೆಂತಲೇ ಬೈಪಾಸ್ ಮಾಡುತ್ತಾರೆ. ಈ ರೀತಿಯೇ ಕಪಟತನದ್ದಾಗಿದೆ ಮತ್ತು ಬಹಳ ಅಪಾಯಕಾರಿಯಾಗಿದೆ.

ನಿಜವಾದ ಸಂವಾದ ಪರಸ್ಪರ ಗುರುತಿಸುವಿಕೆ ಮತ್ತು ಗೌರವದಿಂದ ಬರಬೇಕು. ಆದರೆ ಭಾಗವತ್ ಮಾಡುತ್ತಿರುವುದು ಪ್ರಾಮಾಣಿಕತೆಯಿಲ್ಲದ, ಕಳಕಳಿಯಿಲ್ಲದ ಬರೀ ಪ್ರದರ್ಶನ ಅಷ್ಟೆ. ಮಾತುಕತೆಯಿಂದ ದ್ವೇಷ ಇಲ್ಲವಾಗಿಸಬಹುದು ಎಂಬ ಭಾಗವತ್ ಹೇಳಿಕೆಗಳು ಕೂಡ ಅಷ್ಟೇ ನಾಟಕೀಯವಾಗಿವೆ. ಇಂದಿನ ಮುಸ್ಲಿಮರು ಅನುಭವಿಸುತ್ತಿರುವ ಕರಾಳತೆಗೂ ಭಾಗವತ್ ಅವರ ಇಂಥ ಹೇಳಿಕೆಗಳಿಗೂ ಯಾವ ಸಂಬಂಧವೂ ಇಲ್ಲ.

ಇಂದು ವಿಶ್ವವಿದ್ಯಾನಿಲಯಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಕಿರುಕುಳ ಕೊಡಲಾಗುತ್ತಿದೆ. ಕೆಲಸದ ಸ್ಥಳಗಳಲ್ಲಿ ಮುಸ್ಲಿಮರು ವ್ಯವಸ್ಥಿತ ತಾರತಮ್ಯ ಎದುರಿಸುತ್ತಾರೆ. ಅವರಿಗೆ ಬಾಡಿಗೆಗೂ ಮನೆ ನೀಡಲಾಗುತ್ತಿಲ್ಲ. ಅವರು ಮನೆ ಖರೀದಿಸುವುದಕ್ಕೂ ಅಕ್ಕಪಕ್ಕದವರು ವಿರೋಧಿಸುತ್ತಾರೆ. ನ್ಯಾಯಾಲಯಗಳಂಥಲ್ಲಿಯೂ ಅವರು ಹೆಚ್ಚಾಗಿ ಪ್ರತಿಕೂಲ ಸ್ಥಿತಿಯನ್ನೇ ಎದುರಿಸಬೇಕಿದೆ. ಹೀಗೆ ದ್ವೇಷದ ವಾತಾವರಣವನ್ನೇ ಸಹಜ ಎಂಬಂತೆ ಮಾಡಿಬಿಡಲಾಗಿದೆ.

ಮೀಡಿಯಾಗಳ ಪಕ್ಷಪಾತ ಇದನ್ನು ಇನ್ನಷ್ಟು ಹೆಚ್ಚಿಸಿದೆ. ಅಧಿಕಾರದಲ್ಲಿರುವವರು ಇದನ್ನು ಕಾನೂನುಬದ್ಧಗೊಳಿಸಿಬಿಟ್ಟಿದ್ದಾರೆ. ಮುಸ್ಲಿಮರನ್ನು ಸಹ ನಾಗರಿಕರಾಗಿ ನೋಡದೆ, ಹೊರಗಿನವರಾಗಿ ನೋಡುವುದು ಸಮಾಜದಲ್ಲಿ ಸಾಮಾನ್ಯ ಎಂಬಂತಾಗಿದೆ. ಹೀಗಿರುವಾಗ, ಸಂವಾದದ ಹೆಸರಿನ ನಾಟಕಗಳು, ಫೋಟೊಗಳಲ್ಲಿನ ತೋರಿಕೆಯ ಪೋಸುಗಳು ಸಾಮರಸ್ಯ ತರಲು ಸಾಧ್ಯವಿಲ್ಲ.

ಹಾಗಾದರೆ, ಇಂಥವುಗಳಿಂದ ಯಾರು ಲಾಭ ಪಡೆಯುತ್ತಾರೆ?

ಎಲ್ಲ ಲಾಭವು ಆರೆಸ್ಸೆಸ್‌ಗೆ ಹೋಗುತ್ತದೆ.

ಧರ್ಮಾಂಧತೆಯ ಆರೋಪಗಳನ್ನು ಅಳಿಸಿಹಾಕಲು ಇವುಗಳನ್ನು ಬಳಸಿಕೊಳ್ಳಲಾಗುತ್ತದೆ. ಸಹಿಷ್ಣು ರಾಷ್ಟ್ರೀಯವಾದಿಗಳೆಂದು ಆರೆಸ್ಸೆಸ್ ಮಂದಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಇದು ಉಪಯೋಗಕ್ಕೆ ಬರುತ್ತದೆ. ಇದರಿಂದ ಅವರದೇ ಸರಕಾರ ಸಹ ಪ್ರಯೋಜನ ಪಡೆಯುತ್ತದೆ. ಅಂತರ್‌ರಾಷ್ಟ್ರೀಯ ಟೀಕೆಗಳ ವಿರುದ್ಧ ಕೂಡ ಗುರಾಣಿಯಂತೆ ಇದನ್ನು ಬಳಸುವುದು ನಡೆಯುತ್ತದೆ.ಆದರೆ ಭಾರತೀಯ ಮುಸ್ಲಿಮರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ.

ಇಂಥ ಸಭೆಗಳು ದ್ವೇಷಾಪರಾಧಗಳ ವಿರುದ್ಧ ಯಾವುದೇ ರಕ್ಷಣೆ ನೀಡುವುದಿಲ್ಲ.ಅವು ಶಿಕ್ಷಣ, ವಸತಿ ಅಥವಾ ಉದ್ಯೋಗಗಳ ವಿಷಯದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು, ನೀತಿಗಳಲ್ಲಿಯೇ ಅಡಗಿರುವ ಹಿಂಸೆಯನ್ನು ಅವು ಬಗೆಹರಿಸುವುದಿಲ್ಲ.

ನಿಜವಾದ ಕೋಮುಸಾಮರಸ್ಯ ಭಾಷಣಗಳಿಂದ ಬರುವುದಿಲ್ಲ. ಅದಕ್ಕೆ ಹೊಣೆಗಾರಿಕೆಯ ಅಗತ್ಯವಿದೆ. ದ್ವೇಷಾಪರಾಧಗಳನ್ನು ಮಾಡುವವರಿಗೆ ಶಿಕ್ಷೆಯಾಗುವುದು ಮುಖ್ಯ. ಅಲ್ಪಸಂಖ್ಯಾತರೊಡನೆ ಸಂವಾದ ಎಂದುಬಿಟ್ಟರೆ ಸಾಲದು. ಅವರನ್ನು ಘನತೆ, ಹಕ್ಕುಗಳು ಮತ್ತು ಅಧಿಕಾರ ಹೊಂದಿರುವ ಸಮಾನ ನಾಗರಿಕರೆಂದು ಪರಿಗಣಿಸುವುದು ಅಗತ್ಯ.

ದ್ವೇಷವನ್ನು ಕೊನೆಗೊಳಿಸುವ ಬಗ್ಗೆ ಭಾಗವತ್ ಗಂಭೀರವಾಗಿದ್ದರೆ, ಅವರು ಗೋರಕ್ಷಣೆ ಹೆಸರಲ್ಲಿ ಕೊಲ್ಲುವವರ ವಿರುದ್ಧ ಮಾತಾಡಬೇಕು, ಅವರನ್ನು ಖಂಡಿಸಬೇಕು. ಲವ್ ಜಿಹಾದ್‌ನಂಥ ಪಿತೂರಿಗಳ ಮೂಲಕ ಮುಸ್ಲಿಮ್ ಯುವಕರನ್ನು ನಿಂದಿಸುವ ಅಭಿಯಾನಗಳನ್ನು ಖಂಡಿಸಬೇಕು. ಮನೆಗಳನ್ನು ಧ್ವಂಸ ಮಾಡುವುದು, ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂಬಂತೆ ಬಿಂಬಿಸುವುದು, ಅಮಾಯಕರನ್ನು ಬಂಧಿಸುವುದರ ವಿರುದ್ಧ ಕ್ರಮಕ್ಕೆ ಭಾಗವತ್ ಒತ್ತಾಯಿಸಬೇಕು. ಇದನ್ನವರು ಮಾಡಬಲ್ಲರೆ? ಭಾರತ ಮೂಲಭೂತವಾಗಿ ‘ಹಿಂದೂ ರಾಷ್ಟ್ರ’ ಎಂದು ಹೇಳಹೊರಟಿರುವ ಸಂಘಟನೆಯ ಮುಖ್ಯಸ್ಥರು ಇದನ್ನು ಮಾಡುತ್ತಾರೆಯೆ?

ಹೇಗೆ ಆರೆಸ್ಸೆಸ್ ನಾಯಕ ಭಾಗವತ್ ಈ ದೇಶದ ಸಮಸ್ತ ಹಿಂದೂಗಳ ಪ್ರತಿನಿಧಿ ಅಲ್ಲವೋ, ಅದೇ ರೀತಿ ಈ ಪೇಟಾಧಾರಿ, ಗಡ್ಡಧಾರಿ ಸ್ವಯಂ ಘೋಷಿತ ಮುಖ್ಯ ಇಮಾಮ್ ಕೂಡ ಈ ದೇಶದ ಮುಸ್ಲಿಮರ ಪ್ರತಿನಿಧಿ ಅಲ್ಲ.

ಹಾಗಾಗಿ ಇವರಿಬ್ಬರ ನಡುವಿನ ಸಂವಾದ ಸಭೆ ಒಂದು ಕಪಟ ನಾಟಕವೇ ಹೊರತು ಬೇರೇನಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎ.ಎನ್. ಯಾದವ್

contributor

Similar News