×
Ad

ಮಾಗಡಿ: ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಹುನ್ನಾರ

Update: 2026-07-14 07:27 IST

ಸಾಂದರ್ಭಿಕ ಚಿತ್ರ (AI)

ಬೆಂಗಳೂರು : ಹಿಂದಿನ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ನೇರಲವಾಡಿ ಗ್ರಾಮದಲ್ಲಿ ಸುಮಾರು 50-60 ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರನ್ನು ಅರಣ್ಯ ಇಲಾಖೆಯು ಒಕ್ಕಲೆಬ್ಬಿಸಲು ಮುಂದಾಗಿದೆ. 50-60 ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರ ಜಮೀನಿನ ಮೇಲೆ ಅರಣ್ಯ ಇಲಾಖೆಯು ಈ ಜಮೀನು ತಮ್ಮದು ಎಂದು 2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ತನ್ನ ಹಕ್ಕು ಸ್ಥಾಪಿಸಿತ್ತು.

ವಿಶೇಷವೆಂದರೇ ಈ ಜಮೀನಿನ ಹಕ್ಕುದಾರಿಕೆ ಕುರಿತು 2017ರಲ್ಲಿಯೇ ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿ ಮುಂದೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ಸಲ್ಲಿಕೆಯಾಗಿ 9 ವರ್ಷಗಳಾದರೂ ಇನ್ನೂ ಇತ್ಯರ್ಥವಾಗಿಲ್ಲ. ಇದೀಗ 2026ರಲ್ಲಿ ಕರ್ನಾಟಕ ವಿಧಾನ ಪರಿಷತ್‌ಅರ್ಜಿ ಸಮಿತಿ ಮುಂದೆ ಮತ್ತೆ ಈ ವಿಚಾರವು ಬಂದಿದೆ.

ಈ ಸಂಬಂಧ ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿಯು 2024ರ ಆಗಸ್ಟ್ 30ರಂದು ಸಭೆ ನಡೆಸಿತ್ತು. ಈ ಸಭೆ ನಡೆದು 2 ವರ್ಷವಾದರೂ ಇನ್ನೂ ಈ ಅರ್ಜಿಯು ಇತ್ಯರ್ಥವಾಗಿಲ್ಲ. ಹೀಗಾಗಿ ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿಯು 2026ರ ಜುಲೈ 9ರಂದು ಸಭೆ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಸಮಿತಿ ಸಭೆಯ ನಡಾವಳಿಗಳು ‘the-file.in’ಗೆ ಲಭ್ಯವಾಗಿವೆ.

2024ರ ಆಗಸ್ಟ್ 30ರಂದು ನಡೆದಿದ್ದ ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಇಲಾಖೆಯು ಪಾಲಿಸಿರಲಿಲ್ಲ. ಹೀಗಾಗಿ 2026ರ ಜುಲೈ 9ರಂದು ಸಭೆ ನಡೆದಿದೆ. ಈ ಸಭೆಗೆ ಪೂರಕ ಮಾಹಿತಿ ಒದಗಿಸಬೇಕು ಎಂದು ಕರ್ನಾಟಕ ವಿಧಾನ ಪರಿಷತ್‌ಕಾರ್ಯದರ್ಶಿ ಜ್ಯೋತಿ ಅವರು 2026ರ ಜುಲೈ 3ರಂದು ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯೂ ‘the-file.in’ಗೆ ಲಭ್ಯವಾಗಿದೆ.

ರೈತರ ಅರ್ಜಿಯಲ್ಲೇನಿದೆ?: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಾಡಬಾಳ್ ಹೋಬಳಿಯ ನೇರಲವಾಡಿ ಗ್ರಾಮದ ಸರ್ವೇ ನಂಬರ್ 17ರಲ್ಲಿನ ಜಮೀನು ಗೋಮಾಳ ಜಮೀನಾಗಿದೆ. ಈ ಜಮೀನನ್ನು 50-60 ವರ್ಷಗಳಿಂದಲೂ ರೈತರು ಉಳುಮೆ ಮಾಡುತ್ತಿದ್ದಾರೆ. ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಒಟ್ಟು 31 ಕುಟುಂಬಗಳ ರೈತರಿಗೆ 1981ರ ನವೆಂಬರ್ 8ರಂದು 65 ಎಕರೆ 09 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಉಳುಮೆ ಚೀಟಿ ನೀಡುವ ಮೂಲಕ ಹಕ್ಕುಪತ್ರ ನೀಡಿತ್ತು.

ಸರ್ವೇ ನಂಬರ್ ಎಲ್‌ಎನ್‌ಡಿಯುಸಿಆರ್ (3)ರಂತೆ 1997ರ ಸೆ.22ರಂದು ಒಟ್ಟು 17 ಕುಟುಂಬಗಳಿಗೆ ಸುಮಾರು 18 ಎಕರೆ 33 ಗುಂಟೆ ಜಮೀನಿಗೆ ಉಳುಮೆ ಚೀಟಿ ನೀಡಿತ್ತು. ಹಾಗೂ ಹಾಲಿ ಭೂ ಮಂಜೂರಾತಿ ಸಮಿತಿ ಮುಂದೆ ಇನ್ನು 50-60 ಎಕರೆಗೆ ಸಂಬಂಧಿಸಿದಂತೆ ಹೆಚ್ಚಿನ ಕಡತಗಳು ಬಾಕಿ ಇವೆ. ಇವು ಇನ್ನೂ ಮಂಜೂರಾತಿ ಹಂತದಲ್ಲಿವೆ ಎಂಬುದು ರೈತರ ದೂರಿನ ಅರ್ಜಿಯಿಂದ ತಿಳಿದು ಬಂದಿದೆ.

ಈ ಜಮೀನಿನಲ್ಲಿ ಸಣ್ಣ ಹಿಡುವಳಿದಾರರು ಕೃಷಿ ನಡೆಸುತ್ತಿದ್ದರು. ಈ ಜಮೀನಿನಲ್ಲಿ ಬೆಲೆ ಬಾಳುವ ಮಾವಿನ ಮರಗಳು ಸೇರಿದಂತೆ ಮರ ಗಿಡಗಳನ್ನು ಬೆಳೆಸಿಕೊಂಡು ರೈತರು ಜೀವನ ಸಾಗಿಸುತ್ತಿರುವುದು ದೂರರ್ಜಿಯಿಂದ ಗೊತ್ತಾಗಿದೆ.

ಅರಣ್ಯ ಇಲಾಖೆಯಿಂದ ಅಡ್ಡಿ: 50-60 ವರ್ಷಗಳಿಂದಲೂ ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೆ ಅರಣ್ಯ ಇಲಾಖೆಯು ಅಡ್ಡಿಯನ್ನುಂಟು ಮಾಡಿದೆ. ಈ ಜಮೀನು ತಮ್ಮ ಇಲಾಖೆಗೆ ಸೇರಿದೆ ಎಂದು ವ್ಯವಸಾಯಕ್ಕೆ ಅಡ್ಡಿಪಡಿಸುತ್ತಿದೆ. ಏಕಾಏಕೀ ಅರಣ್ಯ ಇಲಾಖೆಯು ಈ ಜಮೀನು ತಮ್ಮದು ಎಂದು ಹಕ್ಕು ಸ್ಥಾಪಿಸಲು ಮುಂದಾಗಿರುವ ಕಾರಣ, 50-60 ವರ್ಷಗಳಿಂದಲೂ ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತರಿಗೆ ಆಘಾತವಾಗಿದೆ. ಈ ಎಲ್ಲಾ ಸಮಸ್ಯೆಗಳ ಕುರಿತು ರೈತರು ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿಗೆ ದೂರು ಸಲ್ಲಿಸಿತ್ತು.

ಈ ಜಮೀನಿನ ಮೂಲಕ ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದೇವೆ. ಆದರೆ ಈ ಜಮೀನನ್ನು ಸರಕಾರದ ಅರಣ್ಯ ಇಲಾಖೆಯಿಂದ ಕಿತ್ತುಕೊಳ್ಳದೇ ಕಂದಾಯ ಇಲಾಖೆಯಲ್ಲಿಯೇ ಉಳಿಸಿಕೊಡಬೇಕು. ತಪ್ಪಿದಲ್ಲಿ ಆತ್ಮಹತ್ಯೆ ದಾರಿಯೊಂದೆ ನಮಗೆ ಉಳಿದಿದೆ ಎಂದು ಅರ್ಜಿ ಸಮಿತಿ ಮುಂದೆ ಬೇಡಿಕೊಂಡಿದ್ದರು.

2017ರಲ್ಲೇ ಅರ್ಜಿ ಸಲ್ಲಿಕೆ- 9 ವರ್ಷವಾದರೂ ಇತ್ಯರ್ಥವಾಗಿಲ್ಲ

ರೈತರು ಈ ಅರ್ಜಿಯನ್ನು ವಿಧಾನ ಪರಿಷತ್‌ಗೆ ಸಲ್ಲಿಸಿದ್ದು ( ಸಂಖ್ಯೆ; 150/2017) 2017ರಲ್ಲಿ. ಈ ಅರ್ಜಿ ಸಲ್ಲಿಕೆಯಾಗಿ ಸರಿ ಸುಮಾರು 9 ವರ್ಷಗಳು ಕಳೆದಿವೆ. ಆದರೂ ಸಹ ಈ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಬಾಧಿತ ರೈತರಿಗೆ ಅರಣ್ಯ ಇಲಾಖೆಯ ಕಾಟ ತಪ್ಪಿಲ್ಲ. ಈ ಸಂಬಂಧ ವಿಧಾನ ಪರಿಷತ್‌ನ ಅರ್ಜಿ ಸಮಿತಿಯು ಚರ್ಚಿಸಿದೆ.

ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದೇನು?: ಈ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರಾಮನಗರದ ಸಹಾಯಕ ಆಯುಕ್ತರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದರು. ನೇರಲವಾಡಿ ಗ್ರಾಮದ ಸರ್ವೇ ನಂಬರ್ 17ರಲ್ಲಿನ ಜಮೀನು ಗೋಮಾಳ ಜಮೀನಾಗಿದೆ. ಅರಣ್ಯ ಇಲಾಖೆಯವರು 1934ರಲ್ಲಿ ಈ ಪೂರ್ಣ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎನ್ನುವ ಅಧಿಸೂಚನೆ ಇದೆ ಎಂದು ಹೇಳಿದೆ. ಈ ಜಮೀನು ಮೂಲತಃ ಗೋಮಾಳ ಜಮೀನು. ಕೆಲವು ಜನರಿಗೆ ಮಂಜೂರಾಗಿದೆ. ದುರಸ್ತಿ ಕೂಡ ಆಗಿದೆ. ಇತ್ತೀಚೆಗೆ 2017ರಲ್ಲಿ ಅರಣ್ಯ ಇಲಾಖೆಯವರು ಬಂದು 1934ರಲ್ಲಿ ಈ ಜಮೀನು ಅರಣ್ಯ ಇಲಾಖೆಗೆ ಅಧಿಸೂಚನೆ ಆಗಿದೆ. ಈ ಜಮೀನನ್ನು ನಮಗೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ ಎಂದು ಸಮಿತಿ ಗಮನಕ್ಕೆ ತಂದಿರುವುದು ನಡಾವಳಿಯಿಂದ ತಿಳಿದು ಬಂದಿದೆ.

ಈ ಮಾಹಿತಿ ಪಡೆದುಕೊಂಡ ಸಭೆ ಅಧ್ಯಕ್ಷರು ಇಷ್ಟು ವರ್ಷಗಳ ತನಕ ಅರಣ್ಯ ಇಲಾಖೆಯವರು ಏನು ಮಾಡುತ್ತಿದ್ದರು, ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಹಾಯಕ ಆಯುಕ್ತರು ಅರಣ್ಯ ಇಲಾಖೆಯವರು ಇತ್ತೀಚೆಗೆ ಬಂದಿದ್ದಾರೆ. ಗೆಜೆಟ್ ನೋಟಿಫಿಕೇಷನ್ ತೋರಿಸಿದ್ದಾರೆ. ಒಔಆIಈIಅಂಖಿIಔಓಗೆ ತಿದ್ದುಪಡಿ ಮಾಡಿಕೊಡಬೇಕು ಎಂದು ಕೇಳಿದ್ದಾರೆ. ಈಗ ಕಿರು ಅರಣ್ಯ ಎಂದು ಸೆಕ್ಷನ್ 17 ರಲ್ಲಿ ಅಧಿಸೂಚನೆ ಆಗಿದೆ. ಸೆಕ್ಷನ್ 4 ಕೂಡ ಆಗಿದೆ. ಗೆಜೆಟ್ನ ಸೆಕ್ಷನ್ 34ರಲ್ಲೂ ಬಂದಿದೆ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ಆಗ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ‘ಸೆಕ್ಷನ್ 4ಕ್ಕೆ ಸ್ಕೋಪ್ ಇರುತ್ತದೆ. ಕೆಲವು ಜಾಗವನ್ನು ಬಿಟ್ಟುಕೊಡಬಹುದು. ಆದರೆ ಸೆಕ್ಷನ್ 17 ಆದ ಮೇಲೆ ಆ ರೀತಿ ಮಾಡುವುದಕ್ಕೆ ಆಗುವುದಿಲ್ಲ,’ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.

ವಿಧಾನ ಪರಿಷತ್ ಸದಸ್ಯ ಪುಟ್ಟಣ ಅವರು ಈ ಸಭೆಯಲ್ಲಿ ಹಾಜರಿದ್ದರು. ಅವರು ಸಭೆ ಚರ್ಚೆಯಲ್ಲಿ ಭಾಗವಹಿಸಿ ‘ನೀವು ಆ ರೀತಿ ಮಾಡುವುದಕ್ಕೆ ಆಗುವುದಿಲ್ಲ. ಏಕೆಂದರೇ ಅರಣ್ಯ ಸಚಿವರು 3-4 ಎಕರೆ ಜಾಗ ಹೊಂದಿ ಉಳುಮೆ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅರಣ್ಯ ಇಲಾಖೆಯವರು ಈ ಜಾಗವನ್ನು ಉಪಯೋಗ ಮಾಡಿಕೊಳ್ಳದೇ ಇದ್ದದ್ದರಿಂದ ಈ ಜನ ಖಾಲಿ ಇದ್ದ ಜಾಗವನ್ನು ಬಳಸಿಕೊಳ್ಳುತ್ತಿದ್ದಾರೆ. ಗೋಮಾಳ ಜಮೀನನ್ನು ಈ ಜನರಿಗೆ ಗ್ರಾಂಟ್ ಮಾಡಲಾಗಿದೆ. ಆದರೆ ಈಗ ಅರಣ್ಯ ಇಲಾಖೆಯವರು ಬದು ಸದರಿ ಜಾಗ ತಮ್ಮದು ಎಂದು ಹೇಳುತ್ತಿದ್ದಾರೆ. ಇಷ್ಟು ವರ್ಷ ಏನು ಮಾಡುತ್ತಿದ್ದರು,’ ಎಂದು ಪುಟ್ಟಣ್ಣ ಅವರು ಪ್ರಶ್ನಿಸಿರುವುದು ಸಭೆ ನಡಾವಳಿಯಿಂದ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News