×
Ad

ವರದಕ್ಷಿಣೆ ವಿರುದ್ಧ ಲಂಬಾಣಿಗರ ಹೊಸ ಸಾಮಾಜಿಕ ಪ್ರಜ್ಞೆ

Update: 2026-07-14 11:32 IST

‘‘ಒಂದು ಸಮಾಜ ತನ್ನ ವಿವಾಹ ಪದ್ಧತಿಗಳನ್ನು ಹೇಗೆ ರೂಪಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿದರೆ, ಅದರ ಆರ್ಥಿಕ ರಚನೆ, ಮಹಿಳೆಯ ಸ್ಥಾನಮಾನ ಮತ್ತು ನೈತಿಕ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬಹುದು’’ -ಮಾನವಶಾಸ್ತ್ರದ ಈ ಮೂಲಭೂತ ನಿಲುವು ಲಂಬಾಣಿ ಸಮಾಜದ ವರದಕ್ಷಿಣೆ ವಿರುದ್ಧದ ಠರಾವಿನ ಇಂದಿನ ಚರ್ಚೆಗಳನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಸುಲಭದ ದಾರಿಯಾಗಲಿದೆ.

ಬ್ರಿಟಿಷ್ ಕಾಲದ ಜನಾಂಗಶಾಸ್ತ್ರಜ್ಞ ಆರ್.ವಿ. ರಸೆಲ್ ಅವರು ತಮ್ಮ The Tribes and Castes of The Central Provinces of India ಕೃತಿಯಲ್ಲಿ ಬಂಜಾರ ಸಮುದಾಯದ ಬದುಕನ್ನು ದಾಖಲಿಸುವಾಗ, ಅವರ ಸಮೂಹ ಆಧಾರಿತ ಸಾಮಾಜಿಕ ರಚನೆ ಮತ್ತು ವಿವಾಹ ಪದ್ಧತಿಗಳ ವಿಶಿಷ್ಟತೆಯನ್ನು ಉಲ್ಲೇಖಿಸುತ್ತಾರೆ. ಮತ್ತೊಂದೆಡೆ ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ವಿವರಿಸುವ ‘Sanskritization’(ಸಂಸ್ಕೃತೀಕರಣ) ಪರಿಕಲ್ಪನೆ, ಅಂಚಿನ ಸಮುದಾಯಗಳು ಹೇಗೆ ನಿಧಾನವಾಗಿ ಪ್ರಧಾನ ಜಾತಿ ಸಮಾಜದ ಆಚರಣೆಗಳನ್ನು ಅಳವಡಿಸಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತದೆ.

ಬಹುಶಃ ಈ ಎರಡು ಚಿಂತನೆಗಳ ನಡುವೆ ಇಂದಿನ ಲಂಬಾಣಿ ಸಮಾಜದ ಆತ್ಮಪರಿಶೀಲನೆ ನಡೆಯುತ್ತಿರಬಹುದೇ? ಯಾಕೆಂದರೆ ಕರ್ನಾಟಕದ ಅತ್ಯಂತ ಹಿಂದುಳಿದ ತಾಂಡಾಗಳಲ್ಲಿ ಕೇಳಿಬರುತ್ತಿರುವ ‘ವರದಕ್ಷಿಣೆ ಸ್ವೀಕರಿಸಬಾರದು’ ಎಂಬ ನಿರ್ಧಾರಗಳು ಕೇವಲ ಒಂದು ಸಾಮಾಜಿಕ ಅಭಿಯಾನವಲ್ಲ. ಅದು ಒಂದು ಬುಡಕಟ್ಟು ಸಂಸ್ಕೃತಿ ತನ್ನದೇ ಇತಿಹಾಸವನ್ನು ಮರುಪರಿಶೀಲಿಸಲು ಆರಂಭಿಸಿರುವ ಅಪರೂಪದ ಸಂದರ್ಭ. ಮದುವೆ ಎನ್ನುವ ಮಾನವೀಯ ಸಂಬಂಧವನ್ನು ಮಾರುಕಟ್ಟೆ ಮೌಲ್ಯಗಳು ಆಕ್ರಮಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ತಾಂಡಾಗಳಿಂದ ಕೇಳಿಬರುತ್ತಿರುವ ಈ ಧ್ವನಿ ಪ್ರಜ್ಞಾವಂತ ಸಮಾಜವನ್ನೇ ಎಚ್ಚರಿಸುವಂತಿದೆ.

ಮದುವೆ: ಸಂಬಂಧದಿಂದ ಮಾರುಕಟ್ಟೆವರೆಗೆ

ಭಾರತದ ಸಾಮಾಜಿಕ ಇತಿಹಾಸವನ್ನು ಒಳಹೊಕ್ಕಿದರೆ ಹಲವು ಬಗೆಯ ವಿರೋಧಾಭಾಸಗಳು ಕಾಣಸಿಗುತ್ತವೆ. ನೂರಾರು ವರ್ಷಗಳ ಹೆಮ್ಮೆಯ ಸಂಸ್ಕೃತಿಯನ್ನು ಹೊಂದಿರುವ ಈ ಸಮಾಜ, ಮದುವೆ ಎನ್ನುವ ಸಹಬಾಳ್ವೆಯ ಪರಿಕಲ್ಪನೆಯನ್ನು ಆರ್ಥಿಕ ವ್ಯವಹಾರವನ್ನಾಗಿ ಪರಿವರ್ತಿಸಿಕೊಂಡಿದೆ. ಕುಟುಂಬಗಳ, ಸಮೂಹಗಳ ಮತ್ತು ಸಂಸ್ಕೃತಿಗಳ ಪುನರ್ಮಿಲನವಾಗಿದ್ದ ಮದುವೆ, ಇಂದು ಚಿನ್ನ, ಆಸ್ತಿ, ಪ್ರತಿಷ್ಠೆ ಮತ್ತು ಪ್ರದರ್ಶನದ ಭಾರ ಹೊತ್ತ ಸಾಮಾಜಿಕ ಮಾರುಕಟ್ಟೆಯಾಗಿ ಪರಿಣಮಿಸಿದೆ.

ವೈಭವದ ಮಂಟಪಗಳು, ಸಾಲದಲ್ಲಿ ನಡೆಯುವ ಮದುವೆಗಳು, ಪ್ರದರ್ಶನದ ಆಭರಣಗಳು, ಲಕ್ಷಾಂತರ ರೂಪಾಯಿಗಳ ವಿನಿಮಯ ಇವುಗಳೆಲ್ಲವೂ ಮದುವೆಯ ಮೂಲ ಮಾನವೀಯ ಅರ್ಥವನ್ನು ಮಸುಕುಗೊಳಿಸುತ್ತಿವೆ. ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೆತ್ತ ಕುಟುಂಬಗಳ ಮೇಲಾಗುತ್ತಿರುವ ಆರ್ಥಿಕ ಒತ್ತಡ, ವರದಕ್ಷಿಣೆ ಹಿಂಸೆ, ಸಾಲಬಾಧೆ ಮತ್ತು ಮಾನಸಿಕ ಕುಸಿತಗಳು ಅಂತಿಮವಾಗಿ ಭಾರತೀಯ ಸಮಾಜವನ್ನು ಗಂಭೀರ ಸ್ವರೂಪದಲ್ಲಿ ಘಾಸಿಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ತಾಂಡಾಗಳಲ್ಲಿ ತೆಗೆದುಕೊಳ್ಳಲಾಗುತ್ತಿರುವ ವರದಕ್ಷಿಣೆ ವಿರೋಧಿ ನಿರ್ಧಾರಗಳು ಮದುವೆಯ ಮಾರುಕಟ್ಟೆಯ ವಿರುದ್ಧದ ಸಾಂಸ್ಕೃತಿಕ ಪ್ರತಿರೋಧವಾಗಿ ಗೋಚರಿಸುತ್ತಿವೆ.

ತಾಂಡಾ: ಕೇವಲ ವಾಸಸ್ಥಳವಲ್ಲ, ಒಂದು ಸಾಮಾಜಿಕ ಸಮೂಹ

ಲಂಬಾಣಿ ಸಮಾಜದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ‘ತಾಂಡಾ’ ಎಂಬ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲೇಬೇಕು.

ತಾಂಡಾ ಎಂದರೆ ಕೇವಲ ಮನೆಗಳ ಗುಂಪು ಅಲ್ಲ. ಅದು ಒಂದು ಚರ ಆರ್ಥಿಕ ವ್ಯವಸ್ಥೆ, ಒಂದು ಸಾಮಾಜಿಕ ಭದ್ರತಾ ವಲಯ ಮತ್ತು ಸಮೂಹ ಬದುಕಿನ ಸಾಂಸ್ಕೃತಿಕ ರೂಪ. ಫ್ರೆಂಚ್ ಮಾನವಶಾಸ್ತ್ರಜ್ಞ ಕ್ಲೌಡ್ ಲೆವಿ ಅವರು ತಮ್ಮ ಅಲಿಯೆನ್ಸ್ ಥಿಯೇರಿಯಲ್ಲಿ ಬುಡಕಟ್ಟು ಸಮಾಜಗಳ ವಿವಾಹ ವ್ಯವಸ್ಥೆಗಳನ್ನು ವಿಶ್ಲೇಷಿಸುವಾಗ, ಮದುವೆ ಎನ್ನುವುದು ಕೇವಲ ಇಬ್ಬರ ವೈಯಕ್ತಿಕ ಸಂಬಂಧವಲ್ಲ; ಅದು ಸಮುದಾಯಗಳ ನಡುವಿನ ಬಾಂಧವ್ಯದ ವಿಸ್ತರಣೆ ಎಂದು ವಿವರಿಸುತ್ತಾರೆ.

ಇದೇ ಅಂಶಗಳು ಲಂಬಾಣಿ ಸಮಾಜದ ಹಳೆಯ ವಿವಾಹ ಪದ್ಧತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಶತಮಾನಗಳ ಕಾಲ ಬಂಜಾರ ಸಮುದಾಯವು ಸಂಚಾರಿ ವ್ಯಾಪಾರಿಕ ಸಮುದಾಯವಾಗಿ ಬದುಕಿತ್ತು. ಉಪ್ಪು, ಧಾನ್ಯ, ಮಸಾಲೆ ಹಾಗೂ ಇತರ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಿದ್ದ ಈ ಸಮುದಾಯದ ಬದುಕು ಸಂಪೂರ್ಣವಾಗಿ ಚಲನೆಯ ಮೇಲೆ ಆಧಾರಿತವಾಗಿತ್ತು. ಹೀಗಾಗಿ ಮದುವೆಯೂ ಕೇವಲ ಕುಟುಂಬದೊಳಗಿನ ಆಚರಣೆಯಾಗಿರಲಿಲ್ಲ; ಅದು ಎರಡು ತಾಂಡಾಗಳ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಬಲಪಡಿಸುವ ವ್ಯವಸ್ಥೆಯಾಗಿತ್ತು.

ಪುರಾತನ ತಾಂಡಾಗಳಲ್ಲಿ ಮದುವೆ ಎಂದರೆ ಹಲವಾರು ದಿನಗಳ ಸಮೂಹೋತ್ಸವ. ದೂರದ ತಾಂಡಾಗಳಿಂದ ಬಂಧುಗಳು ಆಗಮಿಸುತ್ತಿದ್ದರು. ಡೊಳ್ಳಿನ ಸದ್ದು, ಜನಪದ ಹಾಡುಗಳು, ಸಮೂಹ ಊಟ, ಸಮೂಹ ನೃತ್ಯ, ಮಹಿಳೆಯರ ಕಸೂತಿ ಉಡುಪುಗಳು ಇವೆಲ್ಲವೂ ಮದುವೆಯನ್ನು ಜೀವಂತ ಸಮುದಾಯೋತ್ಸವವನ್ನಾಗಿ ರೂಪಿಸುತ್ತಿದ್ದವು. ಮದುವೆ ಅಂದರೆ ಪ್ರದರ್ಶನವಲ್ಲ; ಅದು ಸಮುದಾಯ ತನ್ನನ್ನು ತಾನು ಮರುಸೃಷ್ಟಿಸಿಕೊಳ್ಳುವ ಸಾಂಸ್ಕೃತಿಕ ಸಂದರ್ಭವಾಗಿತ್ತು.

‘Bridewealth’ನಿಂ ‘Dowry’ವರೆಗೆ: ವಿವಾಹದ ಆರ್ಥಿಕ ಪರಿವರ್ತನೆ

ಸಾಮಾಜಿಕ ಮಾನವಶಾಸ್ತ್ರಜ್ಞ ಜ್ಯಾಕ್ ಗೂಡ್ಯೀ ತಮ್ಮ ವಿವಾಹ ಮತ್ತು ಕುಟುಂಬ ವ್ಯವಸ್ಥೆಗಳ ಅಧ್ಯಯನಗಳಲ್ಲಿ, ಅನೇಕ ಸಂಚಾರಿ ಹಾಗೂ ಬುಡಕಟ್ಟು ಸಮಾಜಗಳಲ್ಲಿ ಮಹಿಳೆ ಕುಟುಂಬದ ಆರ್ಥಿಕ ವ್ಯವಸ್ಥೆಯ ಕೇಂದ್ರ ಭಾಗವಾಗಿದ್ದಳು ಎಂದು ವಿವರಿಸುತ್ತಾರೆ.Bridewealth ಅಥವಾ Bride Price ಎಂದರೆ ವರಪಕ್ಷದಿಂದ ವಧುಪಕ್ಷಕ್ಕೆ ನೀಡಲಾಗುವ ಪ್ರತೀಕಾತ್ಮಕ ವಿನಿಮಯ. ಅದು ಜಾನುವಾರು, ಧಾನ್ಯ, ಬೆಳ್ಳಿ ಅಥವಾ ಸಮೂಹ ಸೇವೆಯ ರೂಪದಲ್ಲಿರಬಹುದು. ಅದರ ಮೂಲ ಅರ್ಥ ಮಹಿಳೆಯ ಉತ್ಪಾದಕ ಶ್ರಮಕ್ಕೆ ನೀಡುವ ಸಾಮಾಜಿಕ ಮಾನ್ಯತೆ.

ಲಂಬಾಣಿ ಸಮಾಜದಲ್ಲಿಯೂ ಮಹಿಳೆಯರು ಕೇವಲ ಗೃಹಕೇಂದ್ರಿತ ಪಾತ್ರದಲ್ಲಿರಲಿಲ್ಲ. ಪಶುಪಾಲನೆ, ಆಹಾರ ವ್ಯವಸ್ಥೆ, ಕಸೂತಿ, ಕೈಗಾರಿಕೆ, ಸಮೂಹ ಜೀವನದ ನಿರ್ವಹಣೆಗಳೆಲ್ಲದರಲ್ಲೂ ಮಹಿಳೆಯರ ಪಾತ್ರವೇ ಅತ್ಯಂತ ಪ್ರಮುಖ ಹಾಗೂ ಪ್ರಧಾನವಾಗಿತ್ತು.

ಹೀಗಾಗಿ ಮದುವೆ ಸಂದರ್ಭದಲ್ಲಿ ನಡೆಯುತ್ತಿದ್ದ ಪ್ರತೀಕಾತ್ಮಕ ವಿನಿಮಯವು ಇಂದಿನ ವರದಕ್ಷಿಣಾ ಆರ್ಥಿಕತೆಯಂತಿರಲಿಲ್ಲ. ಆದರೆ ಕಾಲಕ್ರಮೇಣ ಗ್ರಾಮೀಣ ಜಾತಿ ಆಧಾರಿತ ಪ್ರತಿಷ್ಠಾ ರಾಜಕೀಯ, ಮಾರುಕಟ್ಟೆ ಸಂಸ್ಕೃತಿ ಮತ್ತು ಜಾತಿ ಮಾದರಿಗಳ ಪ್ರಭಾವದಿಂದ ಮದುವೆಯ ಸ್ವರೂಪ ಬದಲಾಗತೊಡಗಿತು. ಮಹಿಳೆಯ ಶ್ರಮದ ಮಾನ್ಯತೆ ನಿಧಾನವಾಗಿ ಆರ್ಥಿಕ ಒತ್ತಡದ ರೂಪಕ್ಕೆ ಪರಿವರ್ತಿತವಾಯಿತು.

ತಾಂಡಾದ ಮೂಲ ಅಸ್ತಿತ್ವದ ಮೇಲೆ ವಸಾಹತುಶಾಹಿಯ ಆಕ್ರಮಣದ ಪರಿಣಾಮ

ಲಂಬಾಣಿ ಸಮಾಜದ ಇತಿಹಾಸದಲ್ಲಿ ಅತ್ಯಂತ ಆಳವಾದ ಗಾಯವನ್ನು ಉಂಟುಮಾಡಿದ ಬೆಳವಣಿಗೆಗಳಲ್ಲಿ ಒಂದು Criminal Tribes Act. ಈ ಕಾನೂನು ಕೇವಲ ಆಡಳಿತಾತ್ಮಕ ಕ್ರಮವಾಗಿರಲಿಲ್ಲ; ಅದು ಸಂಚಾರಿ ಬದುಕಿನ ವಿರುದ್ಧದ ವಸಾಹತುಶಾಹಿ ನಿಯಂತ್ರಣದ ಭಾಗವಾಗಿತ್ತು. ಸಂಚಾರಿ ಸಮುದಾಯಗಳನ್ನು ‘ಸಂದೇಹಾಸ್ಪದ ಗುಂಪುಗಳು’ ಎಂದು ಗುರುತಿಸುವ ಬ್ರಿಟಿಷರ ಆಡಳಿತ ಕ್ರಮ, ಬಂಜಾರ ಸಮುದಾಯದ ಸ್ವಾಯತ್ತ ಚಲನೆಯನ್ನು ಕುಂಠಿತಗೊಳಿಸಿತು. ಸಂಚಾರಿ ವ್ಯಾಪಾರದ ಆರ್ಥಿಕ ನೆಲೆಯನ್ನು ಕುಸಿತಗೊಳಿಸಿತು. ತಾಂಡಾಗಳು ನಿಧಾನವಾಗಿ ಸ್ಥಿರ ವಾಸ ಜೀವನದತ್ತ ತಿರುಗಿದವು. ಈ ಬದಲಾವಣೆ ಕೇವಲ ಆರ್ಥಿಕ ಬದಲಾವಣೆ ಅಲ್ಲ; ಅದು ಒಂದು ಸಂಸ್ಕೃತಿಯ ಸಾಮಾಜಿಕ ರಚನೆಯನ್ನೇ ಬದಲಾಯಿಸಿತು. ಸಮೂಹ ಬದುಕಿನ ಜಾಗದಲ್ಲಿ ಕ್ರಮೇಣ ಜಾತಿ ಆಧಾರಿತ ಗ್ರಾಮೀಣ ಪ್ರಭಾವಗಳು ಬಲಗೊಂಡವು. ಮದುವೆಯ ಮೇಲೂ ಅದರ ಪರಿಣಾಮ ಗೋಚರಿಸತೊಡಗಿತು.

‘ಸಂಸ್ಕೃತೀಕರಣ’: ಪ್ರತಿಷ್ಠೆಯ ಹೊಸ ರಾಜಕೀಯ

ಎಂ.ಎನ್. ಶ್ರೀನಿವಾಸನ್ ವಿವರಿಸುವ ‘Sanskritization’ ಪರಿಕಲ್ಪನೆ ಇಲ್ಲಿ ಅತ್ಯಂತ ಮಹತ್ವದ್ದು. ಸಮಾಜದಲ್ಲಿ ಮೇಲೇರಬೇಕೆಂಬ ಒತ್ತಡ ಅನೇಕ ಬಾರಿ ಅಂಚಿನ ಸಮುದಾಯಗಳನ್ನು ಪ್ರಧಾನ ಜಾತಿ ಆಚರಣೆಗಳತ್ತ ತಳ್ಳುತ್ತದೆ. ಲಂಬಾಣಿ ಸಮಾಜವೂ ಕ್ರಮೇಣ ಚಿನ್ನದ ಪ್ರದರ್ಶನ, ವೈಭವದ ಮದುವೆಗಳು, ಆಸ್ತಿ ಆಧಾರಿತ ಸಂಬಂಧಗಳು, ವರದಕ್ಷಿಣೆ ಒತ್ತಡದ ಪ್ರಭಾವಕ್ಕೆ ಒಳಗಾದ ಸಾಧ್ಯತೆಗಳನ್ನು ಸಮಾಜಶಾಸ್ತ್ರೀಯ ಅಧ್ಯಯನಗಳು ಸೂಚಿಸುತ್ತವೆ. ಹೀಗಾದಾಗ ‘‘ಸಮಾಜದಲ್ಲಿ ಪ್ರತಿಷ್ಠೆ ಪಡೆಯಬೇಕೆಂಬ ಒತ್ತಡ, ಕೆಲವೊಮ್ಮೆ ತನ್ನದೇ ಸಂಸ್ಕೃತಿಯನ್ನು ಮರೆಯುವ ಹಂತಕ್ಕೆ ಕರೆದೊಯ್ಯುತ್ತದೆಯೇ?’’ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಬಹುಶಃ ಇಂದಿನ ಲಂಬಾಣಿ ಸಮಾಜದ ಆತ್ಮಪರಿಶೀಲನೆ ಇದೇ ಪ್ರಶ್ನೆಯ ಸುತ್ತ ನಡೆಯುತ್ತಿದೆ.

ಸಂವಿಧಾನ, ಕಾನೂನು ಮತ್ತು ತಾಂಡಾದ ನೈತಿಕ ಜಾಗೃತಿ

ಭಾರತೀಯ ಸಂವಿಧಾನದ ಮೂಲ ಆತ್ಮವೇ ಸಮಾನತೆ, ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯ. ಭಾರತೀಯ ಸಂವಿಧಾನದ 14ನೇ ವಿಧಿ ಸಮಾನತೆಯ ಹಕ್ಕನ್ನು, 15ನೇ ವಿಧಿ ಜಾತಿ ಮತ್ತು ಲಿಂಗ ಆಧಾರಿತ ಭೇದಭಾವದ ವಿರುದ್ಧದ ರಕ್ಷಣೆಯನ್ನು ಹಾಗೂ 21ನೇ ವಿಧಿ ಗೌರವಯುತ ಬದುಕಿನ ಹಕ್ಕನ್ನು ಪ್ರತಿಪಾದಿಸುತ್ತವೆ. ಮದುವೆಯನ್ನು ಆರ್ಥಿಕ ವ್ಯವಹಾರವನ್ನಾಗಿ ಪರಿವರ್ತಿಸುವ ಯಾವುದೇ ಒತ್ತಡ, ಈ ಸಂವಿಧಾನಾತ್ಮಕ ಮೌಲ್ಯಗಳೊಂದಿಗೆ ಸಂಘರ್ಷಕ್ಕೆ ಇಳಿಯುತ್ತದೆ.

ಇದೇ ಹಿನ್ನೆಲೆಯಲ್ಲಿಯೇ Dowry Prohibition Act(ವರದಕ್ಷಿಣಾ ನಿಷೇಧ ಕಾಯ್ದೆ) ಜಾರಿಗೆ ಬಂತು. ನಂತರ Protection of Women from Domestic Violence Act ಮುಂತಾದ ಕಾನೂನುಗಳೂ ಮಹಿಳೆಯ ಗೌರವ ಮತ್ತು ಭದ್ರತೆಯನ್ನು ಕೇಂದ್ರವಾಗಿಟ್ಟುಕೊಂಡು ಸಮಾಜವನ್ನು ಪುನರ್‌ಚಿಂತನೆಗೆ ಆಹ್ವಾನಿಸಿವೆ. ಆದರೆ ಕೇವಲ ಕಾನೂನುಗಳಿಂದ ಸಮಾಜ ಬದಲಾಗುವುದಿಲ್ಲ. ಬದಲಾವಣೆಯ ಶಾಶ್ವತ ನೆಲೆ ಸಮುದಾಯದೊಳಗಿನ ನೈತಿಕ ಒಪ್ಪಿಗೆಯಿಂದಲೇ ನಿರ್ಮಾಣವಾಗುತ್ತದೆ.

ಬಹುಶಃ ಇದೇ ಕಾರಣಕ್ಕೆ ಕೆಲವು ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ಧದ ನಿರ್ಧಾರಗಳು ವಿಶೇಷ ಮಹತ್ವ ಪಡೆದುಕೊಳ್ಳುತ್ತಿವೆ. ಯಾಕೆಂದರೆ ಇಲ್ಲಿ ಕಾನೂನು ಮತ್ತು ಸಂಸ್ಕೃತಿ ಪರಸ್ಪರ ವಿರೋಧಿಗಳಾಗಿ ಕಾಣಿಸುತ್ತಿಲ್ಲ; ಬದಲಾಗಿ ಒಂದು ಬುಡಸಂಸ್ಕೃತಿ ತನ್ನೊಳಗೇ ಸಂವಿಧಾನದ ಮೌಲ್ಯಗಳಿಗೆ ಹತ್ತಿರವಾಗುತ್ತಿರುವ ಸಾಮಾಜಿಕ ಪರಿವರ್ತನೆಯ ಚಿತ್ರ ಕಾಣಿಸುತ್ತಿದೆ.

ತಾಂಡಾಗಳಿಂದ ಕೇಳಿಬರುತ್ತಿರುವ ಪ್ರಶ್ನೆ

ವರದಕ್ಷಿಣೆಯ ಜಾಗೃತಿಯ ನಡುವೆಯೇ ಮತ್ತೊಂದು ಗಂಭೀರ ಪ್ರಶ್ನೆಯೂ ತಲೆದೋರುತ್ತಿದೆ. ಕೆಲವು ತಾಂಡಾಗಳಲ್ಲಿ ವರದಕ್ಷಿಣೆ ನೀಡುವವರನ್ನೂ, ಸ್ವೀಕರಿಸುವವರನ್ನೂ ಸಮುದಾಯದಿಂದ ಬಹಿಷ್ಕರಿಸುವ ನಿರ್ಧಾರಗಳೂ ಕೇಳಿಬರುತ್ತಿವೆ. ಒಂದೆಡೆ ಇದು ವರದಕ್ಷಿಣೆ ಎನ್ನುವ ಆರ್ಥಿಕ ಮತ್ತು ಮಾನಸಿಕ ಶೋಷಣೆಯ ವಿರುದ್ಧ ಸಮುದಾಯದೊಳಗೆ ಮೂಡುತ್ತಿರುವ ನೈತಿಕ ಆಕ್ರೋಶವನ್ನು ಪ್ರತಿಬಿಂಬಿಸಿದರೂ, ಮತ್ತೊಂದೆಡೆ ‘ಬಹಿಷ್ಕಾರ’ ಎಂಬ ಕ್ರಮವು ಸ್ವತಃ ಒಂದು ಸಾಮಾಜಿಕ ಶಿಕ್ಷಾ ವ್ಯವಸ್ಥೆಯಾಗಿ ಪರಿಣಮಿಸುವ ಅಪಾಯವನ್ನೂ ಒಳಗೊಂಡಿದೆ.

ಭಾರತೀಯ ಸಮಾಜದ ಇತಿಹಾಸದಲ್ಲಿ ಜಾತಿ ಪಂಚಾಯಿತಿಗಳು ಮತ್ತು ಸಮುದಾಯ ನಿಯಂತ್ರಣದ ಹೆಸರಿನಲ್ಲಿ ‘ಬಹಿಷ್ಕಾರ’ ಅನೇಕ ಬಾರಿ ವ್ಯಕ್ತಿಯ ಗೌರವ ಮತ್ತು ಬದುಕಿನ ಮೇಲೆ ದಂಡನಾ ಕ್ರಮವಾಗಿ ಬಳಸಲ್ಪಟ್ಟಿರುವುದನ್ನು ಮರೆಯಲು ಸಾಧ್ಯವಿಲ್ಲ.

ಸಂವಿಧಾನ ಪ್ರತಿಪಾದಿಸುವ ಸಮಾನತೆ, ವ್ಯಕ್ತಿಗೌರವ ಮತ್ತು ಸ್ವಾತಂತ್ರ್ಯದ ತತ್ವಗಳು ಯಾವುದೇ ಸಾಮಾಜಿಕ ಸುಧಾರಣೆಯೂ ಮಾನವೀಯ ಮಿತಿಗಳನ್ನು ದಾಟಬಾರದು ಎಂಬುದನ್ನು ನೆನಪಿಸುತ್ತವೆ. ಹೀಗಾಗಿ ವರದಕ್ಷಿಣೆ ವಿರೋಧಿ ಹೋರಾಟವು ನೈತಿಕ ಜಾಗೃತಿ, ಸಮುದಾಯದ ಸಂವಾದ ಮತ್ತು ಸಾಮಾಜಿಕ ಅರಿವಿನ ಮೂಲಕ ಮುಂದುವರಿಯಬೇಕೇ ಹೊರತು, ಭಯ ಮತ್ತು ಬಹಿಷ್ಕಾರದ ಮೂಲಕ ಅಲ್ಲ ಎಂಬ ಪ್ರಶ್ನೆಯೂ ತಾಂಡಾಗಳೊಳಗೆ ಚರ್ಚೆಗೆ ಬರಬೇಕಿದೆ. ಯಾಕೆಂದರೆ ನಿಜವಾದ ಸಾಮಾಜಿಕ ಸುಧಾರಣೆ ಎಂದರೆ ಕೇವಲ ತಪ್ಪನ್ನು ತಡೆಯುವುದು ಅಲ್ಲ; ಅದು ಸಮಾಜವನ್ನು ಹೆಚ್ಚು ನ್ಯಾಯಸಮ್ಮತ ಮತ್ತು ಹೆಚ್ಚು ಮಾನವೀಯವಾಗಿಸುವ ಪ್ರಕ್ರಿಯೆ.

ಮದುವೆಯನ್ನು ನಿಧಾನವಾಗಿ ಮಾರುಕಟ್ಟೆಯ ಪ್ರದರ್ಶನವನ್ನಾಗಿ ಪರಿವರ್ತಿಸಿಕೊಂಡಿರುವ ಇಡೀ ಭಾರತೀಯ ಸಮಾಜವೇ ತನ್ನನ್ನು ತಾನು ಜನಜಾಗೃತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ. ಒಂದು ಬುಡಕಟ್ಟು ಸಂಸ್ಕೃತಿ ತನ್ನೊಳಗಿನ ಪದ್ಧತಿಗಳನ್ನು ಮರುಪರಿಶೀಲಿಸಲು ಆರಂಭಿಸಿದಾಗ, ಅದು ಕೇವಲ ಸಂಸ್ಕೃತಿಯ ಬದಲಾವಣೆ ಅಲ್ಲ, ಇತಿಹಾಸದೊಳಗಿನ ಹೊಸ ನೈತಿಕ ಜಾಗೃತಿ ಎನ್ನಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತೀಶ್ ನಾಯಕ್

contributor

Similar News