×
Ad

ಮಹಿಳೆಯರ ರಕ್ಷಣೆ ಸಮಾಜದ ಜವಾಬ್ದಾರಿ

Update: 2026-07-14 10:20 IST

ಅತ್ಯಾಚಾರವು ಹೆಣ್ಣಿನ ಮೇಲೆ ನಡೆಯುವ ಅತ್ಯಂತ ಕ್ರೂರ ಮತ್ತು ಅಮಾನವೀಯ ಕೃತ್ಯವಾಗಿದೆ. ಇದು ಕೇವಲ ದೇಹದ ಮೇಲಿನ ದಾಳಿಯಲ್ಲ, ಅವಳ ಮನಸ್ಸು, ಆತ್ಮಗೌರವ ಮತ್ತು ಬದುಕಿನ ಕನಸುಗಳ ಮೇಲಿನ ದಾಳಿಯಾಗಿದೆ. ಇಂತಹ ಘಟನೆಗೆ ಒಳಗಾದ ಹೆಣ್ಣಿನ ರೋದನೆ ಕೇವಲ ಅವಳ ನೋವಲ್ಲ; ಅದು ಇಡೀ ಸಮಾಜದ ಮನಸ್ಸನ್ನು ಕದಡುವ ಕರುಣಾಜನಕ ಕೂಗು.

ಅವಳು ಕೇಳುವುದು ನ್ಯಾಯ, ಗೌರವ ಮತ್ತು ಸುರಕ್ಷಿತ ಜೀವನವನ್ನು. ಆದರೆ ಅನೇಕ ಬಾರಿ ಅವಳಿಗೆ ಸಿಗುವುದು ಅನುಮಾನ, ಟೀಕೆ ಮತ್ತು ನಿರ್ಲಕ್ಷ್ಯ. ತಪ್ಪು ಮಾಡಿದವನಿಗಿಂತ, ನೋವು ಅನುಭವಿಸಿದವಳನ್ನೇ ಪ್ರಶ್ನಿಸುವ ಮನೋಭಾವ ಸಮಾಜದಲ್ಲಿ ಇನ್ನೂ ಕೆಲವು ಕಡೆ ಕಾಣಸಿಗುತ್ತದೆ. ಇದು ಅವಳ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಒಬ್ಬ ಹೆಣ್ಣಿನ ಕಣ್ಣೀರು ನಮಗೆ ಒಂದು ಪ್ರಶ್ನೆಯನ್ನು ಕೇಳುತ್ತದೆ: ನಾನು ಸುರಕ್ಷಿತವಾಗಿ ಬದುಕುವ ಹಕ್ಕು ಹೊಂದಿಲ್ಲವೇ? ಅವಳ ರೋದನೆ ನಮಗೆ ಹೆಣ್ಣುಮಕ್ಕಳನ್ನು ಗೌರವಿಸುವುದು, ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸಮಾಜ ಒಗ್ಗಟ್ಟಿನಿಂದ ನಿಲ್ಲಬೇಕೆಂಬ ಸಂದೇಶವನ್ನು ನೀಡುತ್ತದೆ.

ಇತ್ತೀಚೆಗೆ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿ ಬಿಟ್ಟಿದೆ. ಭಾರತದ ಮಹಿಳೆಯರ ಮೇಲಿನ ಅತ್ಯಾಚಾರವು ಅತ್ಯಂತ ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ. ಪ್ರತೀ ವರ್ಷ ಸಾವಿರಾರು ಮಹಿಳೆಯರು ಮತ್ತು ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಅತ್ಯಾಚಾರ ವಿಷಯದಲ್ಲಿ ಅಂಕಿ-ಅಂಶವೊಂದು ಬಿಡುಗಡೆಯಾಗಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತಿದೆ.

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳ ಕುರಿತು ಅಧಿಕೃತ ಮಾಹಿತಿ ((NCRB) National Crime Record Bureau ಪ್ರಕಟಿಸುತ್ತದೆ. ಅಂಕಿ-ಅಂಶದ ಮಾಹಿತಿಯಂತೆ, ದೇಶದಲ್ಲಿ ಸರಾಸರಿ ಪ್ರತೀ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. 2017 ಮತ್ತು 2022ರ ಅಂಕಿ-ಅಂಶಗಳ ಪ್ರಕಾರ ಪ್ರತೀ ದಿನ ಸುಮಾರು 86 ಅತ್ಯಾಚಾರ ಪ್ರಕರಣ ದಾಖಲಾಗಿವೆ. 2022ರಲ್ಲಿ ಭಾರತದಲ್ಲಿ ಸುಮಾರು 31,500ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ವಿರುದ್ಧದ ಒಟ್ಟು ಪ್ರಕರಣಗಳು 4.4ಲಕ್ಷಕ್ಕೂ ಹೆಚ್ಚು ದಾಖಲಾಗಿದ್ದವು. ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ಪರಿಚಿತರೇ ದೌರ್ಜನ್ಯ ನಡೆಸಿರುವುದು ಆಘಾತದ ವಿಷಯವಾಗಿದೆ. ರಾಜ್ಯವಾರು ನೋಡಿದರೆ ರಾಜಸ್ಥಾನದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅದರ ನಂತರ ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಹರ್ಯಾಣ ಮುಂತಾದ ರಾಜ್ಯಗಳು ಬರುತ್ತವೆ. ಕರ್ನಾಟಕದಲ್ಲಿಯೂ ನೂರಾರು ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ವಿಷಯವಾಗಿದೆ.

ಈ ಅಂಕಿ-ಅಂಶಗಳು ದಾಖಲಾದ ಪ್ರಕರಣಗಳನ್ನು ಮಾತ್ರ ಪ್ರತಿಬಿಂಬಿಸುತ್ತವೆ. ಸಾಮಾಜಿಕ ಕಳಂಕ, ಭಯ, ಒತ್ತಡ ಮುಂತಾದ ಕಾರಣಗಳಿಂದ ಅನೇಕ ಪ್ರಕರಣಗಳು ದಾಖಲಾಗದೆ ಉಳಿಯುವ ಸಾಧ್ಯತೆಯಿದೆ ಎಂದು ತಜ್ಞರು ಸೂಚಿಸುತ್ತಾರೆ.

ಈ ಸಮಸ್ಯೆಗೆ ಅನೇಕ ಕಾರಣಗಳಿವೆ. ಮಹಿಳೆಯರ ಬಗ್ಗೆ ತಪ್ಪು ಮನೋಭಾವ, ಕಾನೂನು ಭಯದ ಕೊರತೆ, ಸಾಮಾಜಿಕ ಅಸಮಾನತೆ, ಮದ್ಯ ಮತ್ತು ಮಾದಕ ವಸ್ತುಗಳ ದುರುಪಯೋಗ, ಮಕ್ಕಳಿಗೆ ಮತ್ತು ಯುವಕರಿಗೆ ಸೂಕ್ತ ಮೌಲ್ಯ ಶಿಕ್ಷಣದ ಕೊರತೆ ಇವು ಪ್ರಮುಖ ಕಾರಣಗಳಾಗಿವೆ. ಜೊತೆಗೆ, ಕೆಲವರು ಭಯ, ಸಾಮಾಜಿಕ ಒತ್ತಡ ಅಥವಾ ಅವಮಾನದಿಂದ ದೂರು ದಾಖಲಿಸಲು ಹಿಂಜರಿಯುತ್ತಾರೆ.

ಈ ಪರಿಸ್ಥಿತಿಯನ್ನು ಬದಲಾಯಿಸಲು ಸಮಾಜ, ಕುಟುಂಬ, ಶಾಲೆಗಳು ಮತ್ತು ಸರಕಾರ ಎಲ್ಲರೂ ಸೇರಿ ಕೆಲಸ ಮಾಡಬೇಕು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು, ಮಕ್ಕಳಿಗೆ ಬಾಲ್ಯದಿಂದಲೇ ಮಹಿಳೆಯರನ್ನು ಗೌರವಿಸುವ ಮೌಲ್ಯಗಳನ್ನು ಕಲಿಸುವುದು, ಕಾನೂನು ಕ್ರಮವನ್ನು ತ್ವರಿತವಾಗಿ ಜಾರಿಗೊಳಿಸುವುದು ಮತ್ತು ಸಂತ್ರಸ್ತರಿಗೆ ಅಗತ್ಯವಾದ ಬೆಂಬಲ ಒದಗಿಸುವುದು ಅತ್ಯಗತ್ಯ.

ಮಹಿಳೆಯರ ಸುರಕ್ಷತೆ ಕೇವಲ ಸರಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಪ್ರತಿಯೊಬ್ಬ ಮಹಿಳೆಯೂ ಭಯವಿಲ್ಲದೆ ಶಿಕ್ಷಣ ಪಡೆಯುವ, ಕೆಲಸ ಮಾಡುವ ಮತ್ತು ಸ್ವತಂತ್ರವಾಗಿ ಬದುಕುವ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಬೇಕು. ಮಹಿಳೆಯರ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡಿದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನು ಕರುಣೆಯಿಂದ, ಗೌರವದಿಂದ ಮತ್ತು ಮಾನವೀಯತೆಯಿಂದ ಕಾಣಬೇಕು. ಅವರಿಗೆ ಮಾನಸಿಕ ಬೆಂಬಲ, ನ್ಯಾಯ ಮತ್ತು ಹೊಸ ಬದುಕಿನ ಭರವಸೆಯನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಹೆಣ್ಣಿನ ಕಣ್ಣೀರು ನಿಲ್ಲಬೇಕಾದರೆ, ಸಮಾಜದ ಮನಸ್ಸು ಬದಲಾಗಬೇಕು. ಪ್ರತಿಯೊಬ್ಬ ಹೆಣ್ಣು ಭಯವಿಲ್ಲದೆ, ಗೌರವದಿಂದ ಬದುಕುವ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ. ಮಹಿಳೆಯರ ಸುರಕ್ಷತೆ, ಸಮಾನತೆ ಮತ್ತು ಗೌರವವೇ ನಿಜವಾದ ನಾಗರಿಕ ಸಮಾಜದ ಗುರುತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆಯೇಷಾ ಝಬಿ. ಮೈಸೂರು

contributor

Similar News