ಕೆಪಿಎಸ್ ಶಾಲೆಯಲ್ಲಿ ಸುತ್ತಮುತ್ತಲಿನ 7 ಶಾಲೆಗಳ ವಿಲೀನ: ವಿದ್ಯಾರ್ಥಿ ವಿರೋಧಿ ಯೋಜನೆ
"ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತಿರುವ ಮಂತ್ರಿ ಮಧು ಬಂಗಾರಪ್ಪನವರೇ...."
ಸಚಿವ ಮಧು ಬಂಗಾರಪ್ಪ
ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತಿರುವ ಮಂತ್ರಿ ಮಧು ಬಂಗಾರಪ್ಪನವರೇ ಒಂದೊಂದು KPS ಶಾಲೆಯಲ್ಲಿ ಸುತ್ತಮುತ್ತಲಿನ ಏಳು ಸರ್ಕಾರಿ ಶಾಲೆಗಳ ವಿಲೀನಗೊಳಿಸಬೇಕೆಂಬ ಯೋಜನೆಯ ಅರ್ಥವೇನು?"
ಮಂತ್ರಿ ಮಧು ಬಂಗಾರಪ್ಪನವರೆ, ಇಂದು Deccan Herald ಪತ್ರಿಕೆಗೆ ಕೊಟ್ಟಿರುವ ಸಂದರ್ಶನದಲ್ಲಿ Karnataka Public School- KPS ಯೋಜನೆಯಿಂದ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂಬ ವೀರಾವೇಶದ ಹೇಳಿಕೆಯನ್ನು ಕೊಟ್ಟಿದ್ದೀರಿ.
ನಿರ್ದಿಷ್ಟವಾಗಿ "....Our Government will not close a single school . Take my word for it" ಎಂದು ಕೊಚ್ಚಿಕೊಂಡಿದ್ದೀರಿ. ಆದರೆ ಇದು ಹಸಿಹಸಿ ಸುಳ್ಳು. ಅದೂ ಕೂಡ ಮೋದಿ ಮಾದರಿ ಸುಳ್ಳು.
ಏಕೆಂದರೆ ಆ ಸಂದರ್ಶನದಲ್ಲಿ "ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ಕಡೆಗೆ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಒಂದು ಉತ್ಕೃಷ್ಟ ಮಟ್ಟದ Karnataka Public School - KPS ಶಾಲೆ ಸ್ಥಾಪಿಸುವ" ನಿಮ್ಮ ಸರ್ಕಾರದ KPS ಯೋಜನೆಯ ಹುಸಿ ಆದರ್ಶದ ಮುಖವಾಡವನ್ನು ಮಾತ್ರ ತೆರೆದಿಟ್ಟಿದ್ದೀರಿ. ಆದರೆ ಆ ಯೋಜನೆಯ ಇನ್ನೊಂದು ಕರಾಳ ವಿದ್ಯಾರ್ಥಿ ವಿರೋಧಿ ಮುಖವನ್ನು ಜನರಿಂದ ಮುಚ್ಚಿಟ್ಟಿದ್ದೀರಿ.
KPS ಯೋಜನೆಯ ಅನುಷ್ಠಾನಕ್ಕೆ 15-10-2025 ರಂದು ನಿಮ್ಮ ಸರ್ಕಾರ ಹೊರಡಿಸಿರುವ ಆದೇಶ ಸಂಖ್ಯೆ ಐಪಿ 64 ಎಂಪಿಇ 2024 ಪ್ರಕಾರ 1-5 ಕಿಮೀ ವ್ಯಾಪ್ತಿಯ ಒಳಗಿನ ಚಿಕ್ಕ ಸರ್ಕಾರಿ ಶಾಲೆಗಳನ್ನು ಈ ಪ್ರಸ್ತಾವಿತ ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ಸುಲಲಿತವಾಗಿ ಸಮ್ಮಿಳತಗೊಳಿಸುವುದು ಈ ಯೋಜನೆಯ ಪ್ರಮುಖ ಭಾಗ.
ಅದರಂತೆ ಕೆಳಗೆ ಬೆಂಗಳೂರು ದಕ್ಷಿಣ ಜಿಲ್ಲೆ , ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನಲ್ಲಿ ಇದನ್ನು ಅನುಷ್ಠಾನಗೊಳಿಸಲು ಒಂದು ಪೈಲೆಟ್ ಯೋಜನೆಯನ್ನೂ ಪ್ರಾರಂಭಿಸಿದ್ದೀರಿ.
ಸರ್ಕಾರಿ ಆದೇಶ ಸಂಖ್ಯೆ ಇಪಿ 02 ಇಎಸ್ಪಿ 2025 ದಿನಾಂಕ 1/7/2025 ಮತ್ತು ಡಿಡಿಪಿಐ ಈಎಸ್ಪಿ /2025 ಇ ಕ್ಯಾಂಪ್ ನಂ 1859630 ದಿನಾಂಕ 08/08/2025 ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಹೊಂಗನೂರಿನ ಕೆಪಿಎಸ್ ಮಾಗ್ನೆಟ್ ಶಾಲೆಗೆ ಹೊಂಗನೂರಿನ ಆರು ಕಿಮೀ ಫಾಸನೆಯಲ್ಲಿರುವ ಏಳು ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿ, ಉಪಾಧ್ಯಾಯರು ಮತ್ತು ಪರಿಕರಗಳ ಸಮೇತ ವಿಲೀನಗೊಳಿಸಲು ಆದೇಶ ಹೊರಡಿಸಿದ್ದೀರಿ. ಇದರ ಪ್ರಕಾರ ಹೊಂಗನೂರಿನಿಂದ 6 ಕಿಮೀ ದೂರದ ವ್ಯಾಪ್ತಿಯೊಳಗಿರುವ 77 ವಿದ್ಯಾರ್ಥಿಗಳಿರುವ ಹೊಡಿಕೆ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, 82 ವಿದ್ಯಾರ್ಥಿಗಳಿರುವ ಕನ್ನಿ ದೊಡ್ಡಿ ಶಾಲೆ, 31 ವಿದ್ಯಾರ್ಥಿಗಳಿರುವ ಅಮ್ಮಳ್ಳಿ ದೊಡ್ಡಿ ಶಾಲೆ, 100 ವಿದ್ಯಾರ್ಥಿಗಳಿರುವ ಸಂತೆ ಮೊಗೇನಹಳ್ಳಿ ಶಾಲೆ, 20 ವಿದ್ಯಾರ್ಥಿಗಳಿರುವ ಮೊಗೇನಹಳ್ಳಿ ದೊಡ್ಡಿ, 80 ವಿದ್ಯಾರ್ಥಿಗಳಿರುವ ಸುಣ್ಣ ಘಟ್ಟ ಶಾಲೆ ಗಳನ್ನೂ ಹೊಂಗನೂರಿನ KPS ಗೆ ತುರ್ತಾಗಿ ವಿಲೀನಗೊಳಿಸಿ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ.
ಹೊಂಗನೂರಿನ KPS ಸ್ಥಾಪನೆಯಾಗುತ್ತಿರುವುದು ಈಗಾಗಲೇ ಇರುವ ಈ ಏಳು ಶಾಲೆಗಳ ಜೊತೆಗಲ್ಲ.
ಹೊಂಗನೂರಿನ KPS ಈ ಏಳು ದೂರದೂರದ ಹಳ್ಳಿಗಳಲ್ಲಿದ್ದ ಶಾಲೆಗಳ ಬದಲಿಗೆ, ಅಂದರೆ, ಮಾನ್ಯ ಮಂತ್ರಿಗಳೇ ಹೊಂಗನೂರಿನ ಒಂದು KPS ಶಾಲೆಗೇ 7 ಹಳ್ಳಿಗಳಲ್ಲಿದ್ದ ಏಳು ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿದ್ದೀರಿ.
ಹೀಗಾಗಿ ಇನ್ನು ಮುಂದೆ ಈ ಗ್ರಾಮಗಳ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ತಮ್ಮ ಮನೆಯ , ಹಳ್ಳಿಯ ಪಕ್ಕದಲ್ಲಿದ್ದ ಶಾಲೆಗಳಿಂದ 6 ಕಿಮೀ ದೂರದ ಹೊಂಗನೂರಿಗೆ ಬಂದು ವಾಪಸ್ ಮನೆಗೆ ಹೋಗಬೇಕು.
ಈ ಕುಗ್ರಾಮಗಳಿಗೆ ಬಸ್ ಸೌಲಭ್ಯ ಇದೆಯೇ? ಹೊಂಗನೂರಿನಲ್ಲಿ ಹಾಸ್ಟೆಲ್ ಸೌಲಭ್ಯವನ್ನು ಸರ್ಕಾರ ಕಲ್ಪಿಸುವುದೇ? ಅದಕ್ಕೆ ಬಜೆಟ್ ನಲ್ಲಿ ಹಣ ಒದಗಿಸಲಾಗಿದೆಯೇ? ಈ ಎಲ್ಲಕ್ಕೂ ನಿಮ್ಮ ಸರ್ಕಾರದ್ದು ಉಡಾಫೆ ಉತ್ತರ.
ವಾಸ್ತವದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಾವಣೆ ಅದರಲ್ಲೂ ದಲಿತ, ಹಿಂದುಳಿದ ಸಮುದಾಯಗಳ ಅತ್ಯಂತ ಬಡವರ್ಗಗಳ ಮಕ್ಕಳ ನೋಂದಾವಣೆ ಹೆಚ್ಚಾಗಿದ್ದಕ್ಕೆ ಕಾರಣವೇ ಕುಗ್ರಾಮಗಳಲ್ಲೂ ಕನಿಷ್ಠ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದ್ದು. ಹೀಗಾಗಿ ಇದು ಭವಿಷ್ಯ ಭಾರತಕ್ಕೆ ಮಾಡುತ್ತಿರುವ ಹೂಡಿಕೆ. ಇದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತ ಅಥವಾ ವೆಚ್ಚ -ಲಾಭದ ಅನುಪಾತದ ಲೆಕ್ಕಾಚಾರ ಸಲ್ಲದು. ಭಾರತದ ಅತ್ಯಂತ ಬಡವರ್ಗಗಳ ಶಿಕ್ಷಣ ಮತ್ತು ಆರೋಗ್ಯಗಳಲ್ಲಿ ವೆಚ್ಚ-ಲಾಭದ ನವಉದಾರವಾದಿ ಬಂಡವಾಳಶಾಹಿ ಲೆಕ್ಕಾಚಾರದ ಮಾನದಂಡಗಳು ಬರುತ್ತಿದ್ದಂತೆ ಕುಗ್ರಾಮದ ಹಳ್ಳಿಗಳು ಮುಚ್ಚಿಕೊಳ್ಳುತ್ತವೆ. ದಲಿತ-ಹಿಂದುಳಿದ ಜಾತಿಗಳ ಬಡ ಮತ್ತು ಹೆಣ್ಣು ಮಕ್ಕಳ ಡ್ರಾಪ್ ಔಟ್ ಹೆಚ್ಚಾಗುತ್ತದೆ.
ಖಾಸಗಿ ಶಾಲೆಯಂತೆ ಈ ನಿಮ್ಮ ಸರ್ಕಾರಿ KPS ಶಾಲೆಗಳೂ ಸಮಾಜದ ಕುಲೀನರ ಸೇವೆಗೆ ಮುಡಿಪಾಗುತ್ತವೆ. ಮೋದಿ ಸರ್ಕಾರದ National Educational Policy- NEP ಯ ಹೂರಣ ಇದೇ ಆಗಿತ್ತು.
ಲಕ್ಷಾಂತರ ಏಕೋಪಾಧ್ಯಾಯ ಶಾಲೆಗಳ ಮೇಲಿನ ವೆಚ್ಚ ಅನುತ್ಪಾದಕ ಎಂದು ಘೋಷಿಸಿದ್ದ ಮೋದಿಯ NEP, ಪಂಚಾಯತಿ. ಹೋಬಳಿಗಳಿಗೊಂದು ಅತ್ಯುತ್ತಮ ಕ್ಲಸ್ಟರ್ ಶಾಲೆಯನ್ನು ಸ್ಥಾಪಿಸುವುದಾಗಿಯೂ, ಅದರಿಂದ ಕಟ್ಟಡ ಮತ್ತು ಉಪಾದ್ಯಾಯರುಗಳ ಮೇಲಿನ ವೆಚ್ಚ ವ್ಯರ್ಥವಾಗುವುದು ತಪ್ಪುವುದೆಂದು ಘೋಷಿಸಿತ್ತು.
ಮೋದಿ NEPಯಲ್ಲಿ ಕ್ಲಸ್ಟರ್ ಶಾಲೆ ಎಂದಿರುವುದನ್ನು ತಮ್ಮ ಸರ್ಕಾರ ಮ್ಯಾಗ್ನೆಟ್ ಶಾಲೆ ಎಂದಿರುವುದನ್ನು ಬಿಟ್ಟರೆ ತಾವು ಯಥಾವತ್ ವಿದ್ಯಾರ್ಥಿ ವಿರೋಧಿ NEP ಯನ್ನೇ ಕಾಂಗ್ರೆಸ್ ನ ಮೋಸದ ಭಾಷೆಯಲ್ಲಿ ಸುಳ್ಳು ಹೇಳುತ್ತಾ ಜಾರಿ ಮಾಡುತ್ತಿದ್ದೀರಿ. ಏಕೆಂದರೆ ತಮ್ಮ ಮ್ಯಾಗ್ನೆಟ್ ಶಾಲೆ ಮೋದಿಯ ಕ್ಲಸ್ಟರ್ ಶಾಲೆಯಂತೆ ಬಡ-ದಲಿತ-ಹಿಂದುಳಿದ ಮಕ್ಕಳನ್ನು ಆಕರ್ಷಿಸುವುದಿಲ್ಲ ವಿಕರ್ಷಿಸುತ್ತದೆ.
ತಮ್ಮ ಸರ್ಕಾರದ ಈ ಬಗೆಯ ಗುಪ್ತ ಮೋದಿ NEP ಪರತೆಯ ಕಾರಣಕ್ಕಾಗಿಯೇ ರಾಜ್ಯದ ಪ್ರಗತಿಪರರು ರೂಪಿಸಿಕೊಟ್ಟ State Education Policy ಯನ್ನೂ ಜಾರಿ ಹಂತಕ್ಕೆ ತೆಗೆದುಕೊಂಡು ಹೋಗದೆ, ಪರೋಕ್ಷವಾಗಿ ವಿರೋಧಿಸುತ್ತಾ ಒಳಗಿನಿಂದ ಟೊಳ್ಳು ಮಾಡುತ್ತಿದ್ದೀರಿ. ಕರ್ನಾಟಕದ ಪ್ರಜ್ಞಾವಂತ ಜನತೆ ಇದನ್ನು ವಿರೋಧಿಸಬೇಕು. ಗ್ರಾಮಾಂತರ ಶಾಲೆಗಳನ್ನು ಇನ್ನಷ್ಟು ಸಬಲೀಕರಿಸಬೇಕು. ಮೋದಿಯ NEP ಮತ್ತು ಕಾಂಗ್ರೆಸ್ ಸರ್ಕಾರದ ಮುಸುಕಿನ NEP ಎರಡನ್ನೂ ವಿರೋಧಿಸಬೇಕು. ಅಲ್ಲವೇ?
-ಶಿವಸುಂದರ್