ಭಾರತದ ಜಾತ್ಯತೀತ ಸಂವಿಧಾನದ ಮೂಲ ತತ್ವಗಳಿಗೆ ಬೆದರಿಕೆಯಾದ ಮೋಹನ್ ಭಾಗವತ್ ಹೇಳಿಕೆ
‘‘ನಾಳೆಯೇ ಹಿಂದೂ ರಾಷ್ಟ್ರ ಆಗಿಬಿಡಬಹುದು’’ ಎಂಬ ಮೋಹನ್ ಭಾಗವತ್ ಮಾತು ಅತ್ಯಂತ ಉಡಾಫೆಯ ಹೇಳಿಕೆಯಾಗಿದೆ. ಅದು, ಭಾರತದ ಸಾಂವಿಧಾನಿಕ, ಜಾತ್ಯತೀತ ಮತ್ತು ಬಹುತ್ವದ ಮೂಲ ಸ್ವರೂಪವನ್ನೇ ರಾತ್ರೋರಾತ್ರಿ ಕೆಡವಬಹುದೆಂಬ ಧಾಟಿಯಲ್ಲಿದೆ. ಹಾಗಾಗಿ ಅವರ ಮಾತು ಪ್ರಜಾಪ್ರಭುತ್ವವನ್ನು ಗೌರವಿಸುವ ರೀತಿಯಲ್ಲಿಲ್ಲ. ಬದಲಾಗಿ ಈ ವೈವಿಧ್ಯಮಯ, ಏಕೀಕೃತ ಭಾರತದ ಕಲ್ಪನೆಯ ಬಗ್ಗೆಯೇ ತೀವ್ರವಾಗಿರುವ ಸಂಘಪರಿವಾರದ ಅಸಹನೆಯನ್ನು ಬಯಲಿಗೆ ತರುವ ಹೇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಆರೆಸೆಸ್ ಶತಮಾನೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಹೇಳಿದ ಮಾತುಗಳು ಚರ್ಚೆಯಾಗುತ್ತಿವೆ.
ಒಂದು ಕಡೆ ಸಂಘವನ್ನು ಟೀಕಿಸುವವರಿಗೆ ಸಮಾಧಾನ ಹೇಳುವಂತೆ, ಮತ್ತೊಂದೆಡೆ ತಮ್ಮ ನೆಲೆ ಗಟ್ಟಿ ಮಾಡಿಕೊಳ್ಳುವಂತೆ ಆಡಿರುವ ಅವರ ಮಾತುಗಳು ಗಣರಾಜ್ಯದ ತತ್ವಗಳಿಗೇ ವಿರುದ್ಧ ಇವೆ.
ಅವರ ಮಾತುಗಳಲ್ಲಿ ಖಂಡಿತ ಪಾರದರ್ಶಕತೆಯಿಲ್ಲ, ಅವರ ಯಥಾಪ್ರಕಾರದ ದ್ವಂದ್ವ ಶೈಲಿಯ ಮಾತುಗಳು ಅವಾಗಿವೆ. ಅದಕ್ಕಿಂತಲೂ, ಸಾಂವಿಧಾನಿಕ ಹೊಣೆಗಾರಿಕೆಯನ್ನೇ ಅವು ತಿರಸ್ಕರಿಸುತ್ತವೆ.
‘‘142 ಕೋಟಿ ಜನರು ಮನಸ್ಸು ಮಾಡಿದರೆ, ನಾಳೆಯೇ ಭಾರತ ಹಿಂದೂ ರಾಷ್ಟ್ರವಾಗಬಹುದು’’ ಎಂದು ಭಾಗವತ್ ಹೇಳುತ್ತಾರೆ.
ಈ ಹೇಳಿಕೆ ಮತ್ತೊಮ್ಮೆ ಅವರ ಬೂಟಾಟಿಕೆಯನ್ನೇ ಬಯಲು ಮಾಡುತ್ತದೆ.
ನೋಡುವುದಕ್ಕೆ ಇದು ಜನರ ನಿರ್ಧಾರದಂತೆ ಎನ್ನುವ ರೀತಿಯಲ್ಲಿದೆ. ಹಿಂದೂರಾಷ್ಟ್ರವಾಗಬಹುದಾದ ಸಾಧ್ಯತೆಗೆ ಪ್ರಜಾಪ್ರಭುತ್ವದ ವೇಷ ತೊಡಿಸಲು ಅವರು ನೋಡುತ್ತಾರೆ. ಆದರೆ ಈ ಸೋಗಿನ ಹಿಂದೆ ಅವರ ಸಂವಿಧಾನ ವಿರೋಧಿ ನಿಲುವು ಮತ್ತು ಸಂವಿಧಾನಕ್ಕೆ ಒಡ್ಡುವ ಬೆದರಿಕೆಯೇ ಇದೆಯೆಂಬುದು ಸ್ಪಷ್ಟ.
ಭಾಗವತ್ ಮಾತಿಗೆ ಪ್ರತಿಕ್ರಿಯಿಸಿರುವ ಬಿ.ಕೆ. ಹರಿಪ್ರಸಾದ್ ಮುಖ್ಯವಾದ ಪ್ರಶ್ನೆ ಎತ್ತಿದ್ದಾರೆ.
‘‘ಭಾರತ ಹಿಂದೂ ರಾಷ್ಟ್ರವೋ, ಜಾತ್ಯತೀತ ರಾಷ್ಟ್ರವೋ ಎನ್ನುವುದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ನೋಂದಣಿ ಇಲ್ಲದ ಆರೆಸ್ಸೆಸ್ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮತಿಯ ಮೇಲಲ್ಲ’’ ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.
ಇನ್ನು, ‘142 ಕೋಟಿ ಜನರು’ ಎಂದು ಭಾಗವತ್ ಬಳಸಿರುವುದು ಉದ್ದೇಶಪೂರ್ವಕ ತಂತ್ರದಂತೆ ಕಾಣುತ್ತದೆ.
ಅಂದರೆ, ಇದು ಭಾರತದ್ದೇ ಭಾಗವಾಗಿರುವ ಮುಸ್ಲಿಮರು, ಕ್ರಿಶ್ಚಿಯನ್ನರನ್ನಲ್ಲದೆ, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳೆಲ್ಲರ ವಿಶಿಷ್ಟ ಗುರುತುಗಳನ್ನು ಅಳಿಸಿಹಾಕಲು ಯತ್ನಿಸುವ ಸಂಘದ ಅಜೆಂಡಾವನ್ನು ಅಡಗಿಸಿಕೊಂಡಿರುವ ಮಾತಾಗಿದೆ.
ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳಾದರೆ, ಇದೇ ನೆಲದಲ್ಲಿ ವಾಸಿಸುತ್ತಿರುವ ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಪಾರ್ಸಿಗಳನ್ನು ಅವರು ಹಿಂದೂಗಳೆಂದು ಪರಿಗಣಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಹರಿಪ್ರಸಾದ್ ಎತ್ತಿದ್ದಾರೆ.
ಹಿಂದೂ ರಾಷ್ಟ್ರದ ಕಲ್ಪನೆಯ ಬಗ್ಗೆ ಸ್ವತಃ ಆರೆಸ್ಸೆಸ್‌ಗೇ ಗೊಂದಲ ಇರುವಾಗ ದೇಶವನ್ನು ಹಿಂದೂ ರಾಷ್ಟ್ರವೆಂದು ದಾರಿ ತಪ್ಪಿಸುತ್ತಿರುವುದು ಯಾಕೆ ಎಂದು ಅವರು ಕೇಳಿದ್ದಾರೆ.
‘‘ನಾಳೆಯೇ ಹಿಂದೂ ರಾಷ್ಟ್ರ ಆಗಿಬಿಡಬಹುದು’’ ಎಂಬ ಭಾಗವತ್ ಮಾತು ಅತ್ಯಂತ ಉಡಾಫೆಯ ಹೇಳಿಕೆಯಾಗಿದೆ. ಅದು, ಭಾರತದ ಸಾಂವಿಧಾನಿಕ, ಜಾತ್ಯತೀತ ಮತ್ತು ಬಹುತ್ವದ ಮೂಲ ಸ್ವರೂಪವನ್ನೇ ರಾತ್ರೋರಾತ್ರಿ ಕೆಡವಬಹುದೆಂಬ ಧಾಟಿಯಲ್ಲಿದೆ. ಹಾಗಾಗಿ ಅವರ ಮಾತು ಪ್ರಜಾಪ್ರಭುತ್ವವನ್ನು ಗೌರವಿಸುವ ರೀತಿಯಲ್ಲಿಲ್ಲ. ಬದಲಾಗಿ ಈ ವೈವಿಧ್ಯಮಯ, ಏಕೀಕೃತ ಭಾರತದ ಕಲ್ಪನೆಯ ಬಗ್ಗೆಯೇ ತೀವ್ರವಾಗಿರುವ ಸಂಘಪರಿವಾರದ ಅಸಹನೆಯನ್ನು ಬಯಲಿಗೆ ತರುವ ಹೇಳಿಕೆಯಾಗಿದೆ.
ಭಾಗವತ್ ತಮ್ಮ ಮಾತಿನಲ್ಲಿ, ಆರೆಸ್ಸೆಸ್ ಏಕೆ ನೋಂದಾಯಿತವಾಗದೇ ಉಳಿದಿದೆ ಎಂಬುದನ್ನು ಕೂಡ ಸಮರ್ಥಿಸಿಕೊಂಡಿದ್ದಾರೆ.
ಆರೆಸ್ಸೆಸ್ 1925ರಲ್ಲಿ ಸ್ಥಾಪನೆಯಾಯಿತು.
ಹಾಗಾದರೆ, ಬ್ರಿಟಿಷ್ ಸರಕಾರದಲ್ಲಿ ನೋಂದಣಿಯಾಗಿರಬೇಕಿತ್ತೆಂದು ಹೇಳುತ್ತೀರಾ? ಸ್ವಾತಂತ್ರ್ಯದ ನಂತರ ಭಾರತ ಸರಕಾರ ನೋಂದಣಿಯನ್ನು ಕಡ್ಡಾಯಗೊಳಿಸಲಿಲ್ಲ ಎಂದು ಭಾಗವತ್ ಹೇಳಿದ್ದಾರೆ.ಇದು ಖಂಡಿತವಾಗಿಯೂ ಒಂದು ಬಾಲಿಶ ಹೇಳಿಕೆ ಮತ್ತು ನಿರ್ಲಜ್ಜವಾಗಿ ತಪ್ಪಿಸಿಕೊಳ್ಳುವ ಹೇಳಿಕೆ.
ಹರಿಪ್ರಸಾದ್ ಹೇಳಿರುವಂತೆ, ಬ್ರಿಟಿಷರ ಪರವಾಗಿದ್ದವರು ಬ್ರಿಟಿಷರ ಕಾಲದಲ್ಲಿ ನೋಂದಣಿಯಾಗದೆ ಇರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದರೆ, ಸಂವಿಧಾನದಡಿಯಲ್ಲಿ ಕಾನೂನಿಗೆ ಗೌರವ ಕೊಟ್ಟು ನೋಂದಣಿ ಮಾಡಿಕೊಳ್ಳದೆ ಕಾನೂನನ್ನೇ ಧಿಕ್ಕರಿಸುತ್ತಿರುವುದು ಯಾಕೆ ಎಂಬುದರ ಬಗ್ಗೆ ಆರೆಸ್ಸೆಸ್ ಉತ್ತರಿಸಬೇಕಿದೆ ಎಂದು ಹರಿಪ್ರಸಾದ್ ಹೇಳುತ್ತಾರೆ.
78 ವರ್ಷಗಳಿಂದಲೂ ಭಾರತ ಸರಕಾರದ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲು ಅದು ಏಕೆ ನಿರಾಕರಿಸಿದೆ ಎಂಬುದು ಈಗಿನ ಪ್ರಶ್ನೆ.
ನೋಂದಣಿ ಕಡ್ಡಾಯವಾಗಿರಲಿಲ್ಲ ಎಂಬುದೇ ಒಂದು ಸುಳ್ಳಿನ ನಾಟಕ. ಅಸ್ತಿತ್ವದಲ್ಲಿ ಇರುವುದು ಕಡ್ಡಾಯವಲ್ಲದಿದ್ದರೂ, ಒಂದು ಸಂಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ, ನಿಧಿ ಸಂಗ್ರಹ, ಆಸ್ತಿ ಹೊಂದುವುದು ಮತ್ತು ಸ್ಪಷ್ಟ ಕಾನೂನು ಚೌಕಟ್ಟಿನ ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಲು ಬಯಸಿದರೆ ನೋಂದಾಯಿಸಿಕೊಳ್ಳುವುದು ಸಂಪೂರ್ಣವಾಗಿ ಕಡ್ಡಾಯ. ಆದರೆ, ನೋಂದಣಿ ಕಡ್ಡಾಯವಾಗಿರಲಿಲ್ಲ ಎಂದು ಹೇಳುತ್ತ, ಇದೆಲ್ಲದಕ್ಕೂ ಅವರು ರಿಯಾಯಿತಿ ಬಯಸುತ್ತಿರುವಂತೆ ಕಾಣುತ್ತದೆ.
ಸಂಘವನ್ನು ವ್ಯಕ್ತಿಗಳ ಸಮೂಹ ಎಂದು ವರ್ಗೀಕರಿಸಲಾಗಿದೆ ಎಂದು ಭಾಗವತ್ ಹೇಳುತ್ತಾರೆ.
‘‘ನಾವು ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು ಆರೆಸ್ಸೆಸ್ ಅನ್ನು ವ್ಯಕ್ತಿಗಳ ಸಮೂಹ ಎಂದು ಪರಿಗಣಿಸಿವೆ ಮತ್ತು ಸಂಸ್ಥೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ’’ ಎಂದು ಭಾಗವತ್ ಹೇಳುತ್ತಾರೆ.
ವ್ಯಕ್ತಿಗಳ ಸಮೂಹ ಎಂಬುದೇ ಅಸ್ಪಷ್ಟವಾಗಿದ್ದು, ಒಂದು ಸಣ್ಣ ಕ್ಲಬ್ ಅಥವಾ ಸ್ಥಳೀಯ ಸಮಿತಿಗಾದರೆ ಹಾಗೆ ಹೇಳಬಹುದು. ಆದರೆ ಲಕ್ಷಾಂತರ ಸದಸ್ಯರನ್ನು ಹೊಂದಿರುವ, ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಇರುವ, ಪ್ರಜಾಸತ್ತಾತ್ಮಕ ಸರಕಾರದ ಮೇಲೆ ಹಿಡಿತವಿರುವ ಆರೆಸ್ಸೆಸ್ ತನ್ನನ್ನು ತಾನು ‘ವ್ಯಕ್ತಿಗಳ ಸಮೂಹ’ ಎಂಬುದರ ಮರೆಯಲ್ಲಿ ನಿಲ್ಲಿಸಲು ಬಯಸುತ್ತಿರುವುದು ವಿಪರ್ಯಾಸ.
ಇದು ರಾಷ್ಟ್ರಕ್ಕೆ ಅದು ಮಾಡುವ ಅತಿ ವ್ಯವಸ್ಥಿತ ವಂಚನೆಯಾಗಿದೆ. ಹೀಗೆ ಹೇಳಿಕೊಳ್ಳುವ ಮೂಲಕ ಅದು ಯಾವುದೇ ಕಾನೂನು ಜವಾಬ್ದಾರಿಗಳಿಲ್ಲದೆಯೂ ಇಲ್ಲಿನ ರಾಜಕೀಯದಲ್ಲಿ ತಲೆಹಾಕಲು ಅವಕಾಶ ಮಾಡಿಕೊಂಡಿದೆ. ಅಂದರೆ ಯಾವುದೇ ಹೊಣೆಗಾರಿಕೆ ಇಲ್ಲ, ಆದರೆ ಸಂಪೂರ್ಣ ಅಧಿಕಾರ ಇದೆ.
ಹೀಗೆ ಪಾರದರ್ಶಕವಾಗಿಲ್ಲದೆ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಆರೆಸ್ಸೆಸ್ ತನ್ನ ಸ್ವಯಂಸೇವಕರು ನೀಡುವ ದೇಣಿಗೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಮೋಹನ್ ಭಾಗವತ್ ಹೇಳುವ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಸ್ವಯಂಸೇವಕರು ಯಾರು ಮತ್ತು ಅವರನ್ನು ಹೇಗೆ ಗುರುತಿಸಲಾಗುತ್ತದೆ? ನೀಡಲಾದ ದೇಣಿಗೆಗಳ ಪ್ರಮಾಣ ಮತ್ತು ಸ್ವರೂಪ ಏನು?, ಅದನ್ನು ಯಾವ ವಿಧಾನಗಳ ಮೂಲಕ ಸ್ವೀಕರಿಸಲಾಗುತ್ತದೆ ಎಂದು ಅವರು ಕೇಳಿದ್ದಾರೆ.
ಆರೆಸ್ಸೆಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತನ್ನದೇ ಆದ ನೋಂದಾಯಿತ ಗುರುತಿನಡಿಯಲ್ಲಿ ದೇಣಿಗೆಗಳನ್ನು ಏಕೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ನೋಂದಾಯಿತ ಘಟಕವಾಗದೆ ಇರುವಾಗ ಆರೆಸ್ಸೆಸ್ ತನ್ನ ಹಣಕಾಸು ಮತ್ತು ಸಾಂಸ್ಥಿಕ ಸ್ವರೂಪವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂಬುದು ಅವರ ಮತ್ತೊಂದು ಪ್ರಶ್ನೆ.
ಪೂರ್ಣ ಸಮಯದ ಪ್ರಚಾರಕರಿಗೆ ಯಾರು ವೇತನ ನೀಡುತ್ತಾರೆ ಮತ್ತು ಸಂಸ್ಥೆಯ ದಿನನಿತ್ಯದ ವೆಚ್ಚಗಳನ್ನು ಯಾರು ಪೂರೈಸುತ್ತಾರೆ? ದೊಡ್ಡ ಪ್ರಮಾಣದ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಪ್ರಚಾರ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸಲಾಗುತ್ತದೆ? ಸ್ವಯಂಸೇವಕರು ಸ್ಥಳೀಯ ಕಚೇರಿಗಳಿಂದ ಸಮವಸ್ತ್ರ ಅಥವಾ ವಸ್ತುಗಳನ್ನು ಖರೀದಿಸಿದಾಗ, ಈ ಹಣವನ್ನು ಎಲ್ಲಿ ಲೆಕ್ಕಹಾಕಲಾಗುತ್ತದೆ? ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ? ಈ ಪ್ರಶ್ನೆಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೂಲಭೂತ ಸಮಸ್ಯೆಯನ್ನು ಒತ್ತಿಹೇಳುತ್ತವೆ ಎಂದು ಖರ್ಗೆ ಹೇಳುತ್ತಾರೆ.
ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆ ಆರ್ಥಿಕ ಪಾರದರ್ಶಕತೆ ಕಾಯ್ದುಕೊಳ್ಳಬೇಕಾದಾಗ, ಆರೆಸ್ಸೆಸ್ ಇಂಥ ಹೊಣೆಗಾರಿಕೆಯಿಂದ ಏಕೆ ಹೊರಗಿದೆ ಎಂಬುದು ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಯಾಗಿದೆ.
ಇತರ ಸಂಸ್ಥೆಗಳನ್ನು ಫಂಡ್ ನೆಪದಲ್ಲಿ ಬೆನ್ನಟ್ಟಲಾಗುತ್ತದೆ ಮತ್ತು ಅವುಗಳ ಪರವಾನಿಗೆಗಳನ್ನು ರದ್ದುಗೊಳಿಸಲಾಗುತ್ತದೆ.
ಆದರೆ ಆರೆಸ್ಸೆಸ್‌ಗೆ ಮಾತ್ರ ಇದೆಲ್ಲದರಿಂದ ರಿಯಾಯಿತಿ ಏಕೆಂಬುದೇ ಪ್ರಶ್ನೆ.
ಅದು ದೊಡ್ಡ ಮೊತ್ತದ, ಪತ್ತೆಹಚ್ಚಲಾಗದ ಹಣದ ಹರಿವು ಸಂಘದೊಳಗಿರುವಾಗ ಈ ಪ್ರಶ್ನೆಗಳು ಮುಖ್ಯವಾಗುತ್ತವೆ.
ಆದಾಯ ತೆರಿಗೆ ತನ್ನನ್ನು ವ್ಯಕ್ತಿಗಳ ಸಮೂಹ ಎಂದು ಗುರುತಿಸುತ್ತದೆ ಮತ್ತು ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿಕೊಳ್ಳುವುದು ಸಮರ್ಥನೆಯಾಗುವುದಿಲ್ಲ.ಬದಲಾಗಿ ಅದೊಂದು ಹಗರಣದ ನೆರಳಿನ ಸುಳಿವು ಕೊಡುತ್ತದೆ.
ಅವರದೇ ಬಿಜೆಪಿ ಸರಕಾರ ಆರೆಸ್ಸೆಸ್‌ನ ಅಪಾರದರ್ಶಕತೆಗೆ ತೇಪೆ ಹಚ್ಚುತ್ತಿದೆ ಮತ್ತು ರಕ್ಷಿಸಲು ನಿಂತಿದೆ ಎಂಬುದನ್ನೇ ಇದು ಸಾಬೀತುಪಡಿಸುತ್ತದೆ.
ಇನ್ನು, ರಾಜಕೀಯವನ್ನು ನಿಯಂತ್ರಿಸುವುದಿಲ್ಲ ಎಂಬ ಮೋಹನ್ ಭಾಗವತ್ ಹೇಳಿಕೆಗೂ ಕಟು ಟೀಕೆ ಬಂದಿದೆ.
ಇದು ಅವರ ಹಸಿ ಹಸಿ ಸುಳ್ಳಿಗೆ ನಿದರ್ಶನ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ರಾಜಕೀಯ ನಿಯಂತ್ರಣ ಇಲ್ಲ ಎಂದಾದರೆ ಬಿಜೆಪಿಯನ್ನು ನಿಯಂತ್ರಿಸುತ್ತಿರುವುದು ಯಾರು? ಯಾರ ಬಾಲಂಗೋಚಿಯಂತೆ ಬಿಜೆಪಿ ವರ್ತಿಸುತ್ತಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸತ್ಯವಲ್ಲವೇ ಎಂದು ಅವರು ಕೇಳಿದ್ದಾರೆ.
ಸಂಘಟನೆಯ ಮುಖ್ಯಸ್ಥರೇ ಸುಳ್ಳುಗಳನ್ನು ಹೆಣೆಯುವಾಗ, ಸಂಘ ಪರಿವಾರ ಸುಳ್ಳನ್ನು ಹೇಳದೆ ಇರಲು ಸಾಧ್ಯವೇ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಆರೆಸ್ಸೆಸ್ ಹೇಗೆ ರಾಜಕೀಯವನ್ನು ನಿಯಂತ್ರಿಸುತ್ತಿದೆ ಎನ್ನುವುದು ಕಾಣುತ್ತಲೇ ಇದೆ. ಬಿಜೆಪಿ ಎನ್ನುವುದು ಸಂಘದ ರಾಜಕೀಯ ವಿಭಾಗಕ್ಕಿಂತ ಹೆಚ್ಚೇನೂ ಅಲ್ಲ. ಪ್ರಧಾನಿ, ಗೃಹ ಸಚಿವರು, ಕ್ಯಾಬಿನೆಟ್ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಎಲ್ಲರೂ ಆರೆಸ್ಸೆಸ್ ಸ್ವಯಂಸೇವಕರೇ ಆಗಿದ್ದಾರೆ. ಬಿಜೆಪಿಯೊಳಗೆ ಸಂಘಟನಾ ಕಾರ್ಯದರ್ಶಿಗಳಾಗುವವರು ಆರೆಸ್ಸೆಸ್ ಜನರೇ ಆಗಿರುತ್ತಾರೆ. ಅಲ್ಲಿಂದಲೇ ಅವರನ್ನು ಈ ಹುದ್ದೆಯ ಹೊಣೆ ವಹಿಸಿ ಕಳಿಸಲಾಗಿರುತ್ತದೆ.
ಪಕ್ಷದೊಳಗೆ ನಿಜವಾದ ಅಧಿಕಾರ ಹೊಂದಿರುವ ಅವರು ವರದಿ ಮಾಡಿಕೊಳ್ಳುವುದು ಬಿಜೆಪಿಯ ಅಧ್ಯಕ್ಷರಿಗಲ್ಲ. ಬದಲಾಗಿ, ನಾಗಪುರದಲ್ಲಿರುವ ಆರೆಸ್ಸೆಸ್ ಪ್ರಧಾನ ಕಚೇರಿಗೆ.
ರಾಜಕೀಯದ ಮೇಲೆ ಹಿಡಿತ ಹೊಂದಿಲ್ಲ ಎನ್ನುವ ಭಾಗವತ್ ಹೇಳಿಕೆ, ಅವರ ತಪ್ಪಿಸಿಕೊಳ್ಳುವ ಆಟದ ಭಾಗವೇ ಆಗಿದೆ. ಅವರಿಗೆ ರಾಜಕೀಯ ಹೊಣೆಗಾರಿಕೆ ಬೇಡ. ಆದರೆ ಸಂಪೂರ್ಣ ರಾಜಕೀಯ ಅಧಿಕಾರ ಚಲಾಯಿಸಲು ಸಂಘ ಬಯಸುತ್ತದೆ. ಹಾಗಾಗಿ, ಸಂಘ ಚುನಾವಣೆಯ ಹಂಗಿಲ್ಲದೆ ಸರಕಾರವಾಗಿರುತ್ತದೆ.
ದೇಶಕ್ಕೆ ಸ್ಪಷ್ಟವಾಗಿ ಈ ನಾಟಕ ಕಾಣಿಸುತ್ತಿದ್ದರೂ, ಮೋಹನ್ ಭಾಗವತ್ ಥರದ ಜನರು ಪರಮ ಪ್ರಾಮಾಣಿಕರ ಸೋಗು ಹಾಕಿಕೊಂಡು ತತ್ವ ಹೇಳುತ್ತಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ.
ಅದಕ್ಕಿಂತ ಹೆಚ್ಚಾಗಿ, ಅದು ಅತಿ ಕುತಂತ್ರದ ನಡೆಯಾಗಿದೆ.