ಅತಿರೇಕದ ಅಭಿಮಾನ ಅನಾಹುತಕ್ಕೆ ಆಹ್ವಾನ
ಮಂಗಳೂರು ಕೆಲ ದಿನಗಳ ಹಿಂದೆ ವಸತಿ ಸಚಿವ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಯಿತು. ಇದು ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತು. ಬೆಂಬಲಿಗರನೇಕರು ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಕಟುವಾಗಿ ಪ್ರತಿಕ್ರಿಯಿಸಿದರು. ಅಭಿಮಾನಿ ಬಳಗ ತುಮಕೂರಿನಲ್ಲಿ ಪ್ರತಿಭಟನೆ ಮೆರವಣಿಗೆಯನ್ನೂ ನಡೆಸಿತು. ಇವೆಲ್ಲವೂ ಸರಿ. ಈ ಸಂದರ್ಭದಲ್ಲಿ ಒಬ್ಬ ಅಭಿಮಾನಿ ಮೈ ಮೇಲೆ ಪೆಟ್ರೋಲ್ ಸುರಿದು ಕೊಂಡ. ಇನ್ನೊಬ್ಬ ವಿಷ ಸೇವಿಸಿದ. ಇವರಿಬ್ಬರೂ ಆತ್ಮಹತ್ಯೆ ಮಾಡಿ ಕೊಳ್ಳಲು ಪ್ರಯತ್ನಿಸಿದವರು. ಜತೆಯಲ್ಲಿದ್ದವರು ಅವರನ್ನು ಹೇಗೋ ಪ್ರಾಣಾಪಾಯದಿಂದ ಪಾರು ಮಾಡಿದರು ಎನ್ನಿ. ನಿಜಕ್ಕೂ ಇಂತಹ ಅತಿರೇಕದ ಅಭಿಮಾನ ಅಗತ್ಯವಿತ್ತೇ? ಈ ಮಾದರಿಯ ಅಭಿಮಾನದ ಒಟ್ಟು ಫಲಿತಾಂಶ ಶೂನ್ಯವೆಂದು ಅಭಿಮಾನಿಗಳೆನಿಸಿ ಕೊಂಡವರಿಗೆ ಯಾಕೆ ಅರ್ಥವಾಗುತ್ತಿಲ್ಲ? ರಾಜಣ್ಣರವರು ಮತ್ತೆ ಸಚಿವರಾಗ ಬಹುದು ಅಥವಾ ಅದಕ್ಕಿಂತಲೂ ಎತ್ತರದ ಸ್ಥಾನಕ್ಕೇರ ಬಹುದು. ಸ್ಥಾನಮಾನಗಳು ಕೈ ತಪ್ಪಿತೆಂದರೆ ಅದು ಅಂತಿಮವಲ್ಲ. ಆದರೆ ಇಂಥವರ ಮೇಲೆ ಅಭಿಮಾನ ಇಟ್ಟುಕೊಂಡವನೊಬ್ಬ ಇದಕ್ಕಾಗಿಯೇ ಪ್ರಾಣ ಕಳೆದು ಕೊಂಡರೆ, ಹೋದ ಜೀವ ಮತ್ತೆ ಬಂದೀತೇ? ಇದರಿಂದ ಇವರನ್ನೇ ನಂಬಿರುವ ಕುಟುಂಬದ ಪಾಡು ಏನಾಗ ಬಹುದು?
ಭಾವನೆ ಎಂಬುದು ತರ್ಕದ ವೈರಿಯಿದ್ದಂತೆ. ಯಾವುದೇ ವಿಚಾರದಲ್ಲಿ ನಾವು ಭಾವನೆಗಳ ಸುಳಿಗೆ ಸಿಲುಕಿ ವಿವೇಚನೆಯಿಲ್ಲದೆ ನಡೆದು ಕೊಂಡರೆ ಪರಿಣಾಮ ಚೆನ್ನಾಗಿರುವುದಿಲ್ಲ. ಬದಲಾಗಿ ಅದು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಅಹಿತಕಾರಿ ಬೆಳವಣಿಗೆಗಳಿಗೆ ಕಾರಣವಾಗ ಬಹುದು. ಇದನ್ನು ಸಮರ್ಥಿಸುವಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದು ನಮಗೆ ಪಾಠವಾಗ ಬೇಕು. ನಮ್ಮಲ್ಲಿ ಕೆಲವು ಮಂದಿ ಅಭಿಮಾನಿಗಳೆನಿಸಿಕೊಂಡವರು ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುವುದಕ್ಕಾಗಿ ಬೈದಾಡುವುದು, ಜಗಳ ಮಾಡುವುದು, ಕಿತ್ತಾಡುವುದು, ಬೆಂಕಿ ಹಚ್ಚುವುದು, ಹಿಂಸಾ ಕೃತ್ಯಗಳಲ್ಲಿ ತೊಡಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ಯಾದಿ ಕಂಡು ಬರುತ್ತವೆ. ಯಾರಿಗೂ ಯಾವುದಕ್ಕೂ ಪ್ರಯೋಜನವಾಗದ ಇಂತಹ ಕ್ರಮಗಳು ವ್ಯರ್ಥವೆಂದು ಇವರಿಗೇಕೆ ಅರ್ಥವಾಗುತ್ತಿಲ್ಲ?
ಇತ್ತೀಚೆಗಿನ ಇನ್ನೊಂದು ಘಟನೆಯನ್ನು ಇಲ್ಲಿ ನೆನಪಿಸಿ ಕೊಳ್ಳಬಹುದೆನಿಸುತ್ತದೆ. ನಟಿ ರಮ್ಯಾ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಾಕಿದಂತಹ ಪೋಸ್ಟ್ ಒಂದಕ್ಕೆ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ವ್ಯಕ್ತಿಗಳು ಅತಿರೇಕದ ಪ್ರತಿಕ್ರಿಯೆಗಳನ್ನು ನೀಡಿದ್ದು, ಅನಾಹುತಕಾರಿ ಬೆಳವಣಿಗೆಗೆ ಕಾರಣವಾಯಿತು. ರಮ್ಯಾರವರು ನಟ ದರ್ಶನ್ ಅವರ ಬೇಲ್ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದೇ ಇದಕ್ಕೆ ಕಾರಣ. ಅವರ ಅಭಿಪ್ರಾಯ ಸಭ್ಯ ರೀತಿಯಲ್ಲಿಯೇ ಇತ್ತು. ಈ ಅಭಿಮಾನಿಗಳೆನಿಸಿಕೊಂಡವರೂ ಪ್ರತಿಕ್ರಿಯೆ ನೀಡಲೇ ಬೇಕಿದ್ದರೆ, ಅದೇ ಸಭ್ಯ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ ಸುಮ್ಮನಾಗ ಬಹುದಿತ್ತು. ಆದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ರಮ್ಯಾ ಅವರಿಗೆ ಕಳುಹಿಸಿ ಕೊಲೆ ಬೆದರಿಕೆಯನ್ನೂ ಹಾಕಿದರು. ಇದು ನಾಗರಿಕ ನಡವಳಿಕೆಗೆ ತಕ್ಕುದಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಹೆಸರುಗಳಲ್ಲಿರುವ 43 ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿ ಪೊಲೀಸ್ ತನಿಖೆ ಮುಂದುವರಿದಿದೆ. ಅತಿರೇಕದಿಂದ ಕೂಡಿದ ಈ ಆಕ್ರಮಣಕಾರಿಯಾದ ನಡವಳಿಕೆ ಅಭಿಮಾನಿಗಳೆನಿಸಿಕೊಂಡವರಿಗೆ ಅಗತ್ಯವಿತ್ತೇ? ಇದೆಂತಹ ಮಾದರಿಯ ಅಭಿಮಾನ? ಈಗ ಸುಪ್ರೀಂ ಕೋರ್ಟ್ ರಮ್ಯಾ ನಿರೀಕ್ಷೆಯಂತೆ ಹೈಕೋರ್ಟ್ ತೀರ್ಪನ್ನು ಬದಿಗಿಟ್ಟು ದರ್ಶನ್‌ಅವರ ಬೇಲ್‌ಅನ್ನು ರದ್ದು ಗೊಳಿಸಿತು. ಇರಲಿ, ಅದು ಬೇರೆ ಮಾತು.
ನಮ್ಮ ದೇಶದಲ್ಲಿ ಅಭಿಮಾನ ಎನ್ನುವುದು ಸೃಷ್ಟಿಸುವ ಅವಾಂತರ, ಅನಾಹುತಗಳು ಕಡಿಮೆಯೇನಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳು ಪ್ರಖ್ಯಾತರಾಗುವುದು ಸ್ವಾಭಾವಿಕ. ಇಂತಹ ವ್ಯಕ್ತಿಗಳು ಆ ಕ್ಷೇತ್ರಗಳ ಒಲವುಳ್ಳಂತಹವರನ್ನು ತಮ್ಮತ್ತ ಸೆಳೆಯುತ್ತಾರೆ. ಇದು ಅಭಿಮಾನಿಗಳೆಂಬ ವರ್ಗ ಸೃಷ್ಟಿಯಾಗುವ ಬಗೆ. ಆದರೆ ಅಭಿಮಾನಿಗಳೆನಿಸಿ ಕೊಂಡವರು ಕಾಲಾಂತರದಲ್ಲಿ ಯಾಕೆ ವಿಚಿತ್ರ ನಡವಳಿಕೆಯನ್ನು ಪ್ರದರ್ಶಿಸುತ್ತಾರೆಂಬುದೇ ಅರ್ಥವಾಗುತ್ತಿಲ್ಲ. ಅವರ ಅಸಹಜ, ಅತಿರೇಕದ ನಡವಳಿಕೆ ಸಾಮಾಜಿಕ ಸಮಸ್ಯೆಯನ್ನು ಹುಟ್ಟು ಹಾಕುತ್ತಿರುವುದು ಸತ್ಯ. ಮೇರೆ ಮೀರಿದ ಅಭಿಮಾನವೆಂಬುದು ಅನೇಕ ಸಂದರ್ಭದಲ್ಲಿ ಸಾವು-ನೋವು, ಆಸಿ-ಪಾಸ್ತಿ ನಷ್ಟಗಳಿಗೆ ಕಾರಣವಾಗಿರುವುದನ್ನು ನಾವು ಕಂಡಿದ್ದೇವೆ.
ಚಲನಚಿತ್ರ ತಾರೆಯರು, ಗಾಯಕರು, ಆಟಗಾರರು, ರಾಜಕೀಯ ನಾಯಕರು ಅಭಿಮಾನಿಗಳ ದೃಷ್ಟಿಯಿಂದ ಅಗ್ರ ಪಂಕ್ತಿಯಲ್ಲಿದ್ದಾರೆ ಎನ್ನ ಬಹುದು. ಇನ್ನು ಸಾಹಿತಿ, ಕಲಾವಿದರಿಗೂ ಅವರದೇ ಆದ ಅಭಿಮಾನಿ ವರ್ಗವಿದೆ. ಸಾಮಾನ್ಯವಾಗಿ ಈ ಅಭಿಮಾನಿಗಳಿಗೆ ಒಂದು ಮಟ್ಟದ ಪ್ರಬುದ್ಧತೆಯಿರುವುದರಿಂದ ಅಹಿತಕರ ಬೆಳವಣಿಗೆಯ ಸಾಧ್ಯತೆ ತೀರ ಕಡಿಮೆ. ಈ ಅಭಿಮಾನಿಗಳ ಪೈಕಿ ಹೆಚ್ಚು ಸುದ್ದಿಯಲ್ಲಿರುವವರು ಚಲನಚಿತ್ರ ತಾರೆಯರ ಅಭಿಮಾನಿಗಳು.
ನಮ್ಮ ರಾಜ್ಯದಲ್ಲಿ ಚಲನಚಿತ್ರ ನಟರ ಅಭಿಮಾನಿ ಸಂಘಗಳು ಸ್ಥಾಪನೆಯಾಗಿ ದಶಕಗಳೇ ಕಳೆದಿವೆ. ಇದರೊಂದಿಗೆ ಮೇರು ನಟರ ಅಭಿಮಾನಿಗಳಿಂದ ಸೃಷ್ಟಿಯಾಗಿರುವ ಒಳಿತು-ಕೆಡುಕುಗಳ ಒಂದು ಪರಂಪರೆಯೇ ನಮ್ಮ ಮುಂದೆ ತೆರೆದು ಕೊಳ್ಳುತ್ತದೆ. ಹಿಂದೆ ಕೆಲವು ಸಂದರ್ಭಗಳಲ್ಲಿ ಸಂಭವಿಸಿರುವ ಘರ್ಷಣೆ, ಹಿಂಸೆಗಳಂತಹ ಕಹಿ ನೆನಪುಗಳು ನೋವುಂಟು ಮಾಡುತ್ತದೆ. ದಶಕಗಳ ಹಿಂದೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ಮೇರು ನಟರ ಅಭಿಮಾನಿಗಳ ನಡುವಿನ ಸಂಘರ್ಷ ಸಾಕಷ್ಟು ಅಹಿತಕರ ಘಟನೆಗಳಿಗೆ ಎಡೆ ಮಾಡಿರುವುದನ್ನು ಮರೆಯುವಂತಿಲ್ಲ. ಆದರೆ ಈ ಇಬ್ಬರು ಕಲಾವಿದರ ವೈಯಕ್ತಿಕ ಸಂಬಂಧ ಕೆಟ್ಟದ್ದೇನಾಗಿರಲಿಲ್ಲ. ಕ್ರಮೇಣ ಆ ನಟರಿಬ್ಬರ ಸಂಬಂಧ ಮಧುರವಾಗಿಯೇ ಬೆಳೆದಿತ್ತು. ಇಂತಹ ಸಂಗತಿಗಳನ್ನು ಅಭಿಮಾನಿಗಳು ಅರ್ಥ ಮಾಡಿ ಕೊಳ್ಳಬೇಕು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ. ಕ್ರಿಕೆಟ್ ತಂಡದ ಅಭಿನಂದನಾ ಸಮಾರಂಭವು ಘೋರ ದುರಂತದಲ್ಲಿ ಪರ್ಯಾವಸಾನ ಕಂಡಿದ್ದು ಇನ್ನೂ ಕಾಡುವಂತಿದೆ. ಕ್ರೀಡಾಂಗಣದೊಳಗೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಿ ಕಣ್ತುಂಬಿ ಕೊಳ್ಳ ಬೇಕೆಂಬ ಉತ್ಸಾಹ, ಆತುರದಲ್ಲಿ 11 ಮಂದಿ ಕ್ರಿಕೆಟ್ ಅಭಿಮಾನಿಗಳು ಕಾಲ್ತುಳಿತದಿಂದಾಗಿ ಸಾವನ್ನು ಕಾಣುವಂತಾಯಿತು. ಇದಕ್ಕೆ ಸರಕಾರ, ಪೊಲೀಸ್ ಇಲಾಖೆ, ವ್ಯವಸ್ಥಾಪಕ ವರ್ಗ ಹೊಣೆಗಾರಿಕೆ ನಿಭಾಯಿಸುವುದರಲ್ಲಿ ಎಡವಿದ್ದು ಕಾರಣವಿರಬಹುದು. ಆದರೆ ಅಭಿಮಾನಿಗಳೂ ಒಂದಷ್ಟು ಎಚ್ಚರ, ಸಂಯಮ ವಹಿಸಿದ್ದರೆ ಸಾವನ್ನು ತಪ್ಪಿಸಿ ಕೊಳ್ಳಬಹುದಿತ್ತೇನೋ ಎಂಬ ನೋವಿನ ನಿಟ್ಟುಸಿರು ಹಾಗೆ ಉಳಿದು ಬಿಡುತ್ತದೆ.
ರಾಜಕೀಯ ನಾಯಕರ ಅಂಧಾಭಿಮಾನ ಸೃಷ್ಟಿಸುವಂತಹ ಅನಾಹುತಗಳು ಕಡಿಮೆಯೇನಿಲ್ಲ. ಯಾರೋ ಒಬ್ಬ ನಾಯಕನಿಗೆ ತಮ್ಮ ನಿಷ್ಠೆ, ನಂಬಿಕೆಯನ್ನು ಪೂರ್ತಿಯಾಗಿ ಅಡವಿಟ್ಟ ವ್ಯಕ್ತಿಗಳು ಅದಕ್ಕಾಗಿ ತಮ್ಮ ಸ್ನೇಹಿತರ, ಕುಟುಂಬ ವರ್ಗದವರ ಜತೆ ಸಂಬಂಧಗಳನ್ನು ಕಹಿ ಮಾಡಿರುವುದೂ ಇದೆ: ಕಡಿದು ಕೊಂಡಿದ್ದೂ ಇದೆ. ಈಗ ಸಾಮಾಜಿಕ ಜಾಲತಾಣದಿಂದಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಅಹಿತಕಾರಿ ಬೆಳವಣಿಗೆಗಳಾಗುವುದನ್ನು ನಾವು ಕಾಣುತ್ತೇವೆ. ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸೃಷ್ಟಿಸಿದ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ತಮ್ಮ ರಾಜಕೀಯ ನಾಯಕನ ಗುಣಗಾನಕ್ಕೆ ದುರ್ಬಳಕೆ ಮಾಡುವುದು ಕಂಡು ಬರುತ್ತದೆ. ಇಂತಹವರಿಗೆ ಈ ಅಂಧಾಭಿಮಾನವೆಂಬುದು ಹತ್ತಿಕ್ಕಲಾಗದ ಒಂದು ಚಟವಾಗಿ ಬೆಳೆದು ಬಂದಿರುತ್ತದೆ. ಅತಿ ಅಭಿಮಾನವೆನ್ನುವುದು ವ್ಯಕ್ತಿ ಪೂಜೆಯ ಮಟ್ಟಕ್ಕೆ ಏರುವುದೇ ಹೀಗೆ. ಜನಜೀವನದ ಮೇಲೆ ಮಹತ್ವದ ಪರಿಣಾಮ ಬೀರುವಂತಹ ರಾಜಕೀಯದಂತಹ ಕ್ಷೇತ್ರದಲ್ಲಿ ಈ ಬೆಳವಣಿಗೆ ಕಳವಳಕಾರಿ. ನಾಯಕನೊಬ್ಬನ ನಿರ್ಧಾರ, ನಿಲುವು, ಕ್ರಮಗಳು ನಿರಂತರ ಪರಿಶೀಲನೆ, ವಿಮರ್ಶೆಗೆ ಒಳಪಡುತ್ತಲೇ ಇರಬೇಕು. ಇದರಿಂದ ನಾಯಕನೊಬ್ಬನ ಆಡಳಿತಾತ್ಮಕ ನಿರ್ಧಾರಗಳ ತಪ್ಪು-ಸರಿಗಳ ತುಲನೆ ಸಾಧ್ಯವಾಗಿ ಅಗತ್ಯ ಟೀಕೆ ಅಥವಾ ಮೆಚ್ಚುಗೆ ಸೃಷ್ಟಿಯಾಗುತ್ತದೆ. ಇದು ಪ್ರಜೆಯೊಬ್ಬನ ಪ್ರಬುದ್ಧತೆ, ವಿವೇಕದ ನಡೆ. ಇಂತಹ ಕ್ರಮಗಳು ದೇಶದ ಹಿತದೃಷ್ಟಿಯಿಂದ ಅಗತ್ಯ.
ನಮ್ಮ ಬದುಕಿನಲ್ಲಿ ಬೇರೆ ಬೇರೆ ಚಟುವಟಿಕೆಗಳು ಉಲ್ಲಾಸ, ಚೈತನ್ಯ ತುಂಬುವ ಗುಣ ಪಡೆದಿವೆ. ನಮಗೆ ಗೊತ್ತಿದ್ದಂತೆ ಕ್ರೀಡೆ, ಸಿನೆಮಾ, ನೃತ್ಯ, ಸಂಗೀತ, ಸಾಹಿತ್ಯ ಇತ್ಯಾದಿ ನಮ್ಮ ಯಾಂತ್ರಿಕ ಬದುಕಿನ ಏಕತಾನತೆಯನ್ನು ನಿವಾರಿಸುತ್ತವೆ. ಜೊತೆಗೆ ಜೀವನೋತ್ಸಾಹ, ಸಂತೋಷವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಕ್ಷೇತ್ರಗಳ ಪ್ರತಿಭಾವಂತರು, ಸಾಧಕರಿಗೆ ಜನಮಾನಸದಲ್ಲಿ ಎತ್ತರದ ಸ್ಥಾನವಿದೆ. ಈ ದೃಷ್ಟಿಯಿಂದ ಇಂತಹವರ ಬಗ್ಗೆ ಹೆಚ್ಚಿನ ಮೆಚ್ಚುಗೆ, ಅಭಿಮಾನಗಳನ್ನು ಅರ್ಥ ಮಾಡಿ ಕೊಳ್ಳಬಹುದು. ಆದರೆ ಇಂತಹ ಭಾವನೆಗಳು ನಮ್ಮ ಭವಿಷ್ಯವನ್ನು ರೂಪಿಸಲಾರವು,: ಹೊಟ್ಟೆ ತುಂಬಿಸಲಾರವು. ಆದ್ದರಿಂದ ಇವನ್ನೆಲ್ಲ ಒಂದು ಅಂಕೆಯಲ್ಲಿ ಇಟ್ಟುಕೊಂಡು ಅವುಗಳಿಂದ ಸ್ಫೂರ್ತಿ, ಪ್ರೇರಣೆ ಪಡೆಯಲು ಮಾತ್ರ ಬಳಸಿ ಕೊಂಡರೆ ಒಳ್ಳೆಯದು.
ನಾವು ಪ್ರತಿಭಾವಂತರ ಸಾಧನೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಬೇರೆ, ಅವರ ವ್ಯಕ್ತಿತ್ವದ ಕುರಿತು ಮೆಚ್ಚುಗೆ ಇಟ್ಟು ಕೊಳ್ಳುವುದು ಬೇರೆ. ನಿರಂತರ ಸಂಪರ್ಕ, ಸಹವಾಸವಿಲ್ಲದೆ ವ್ಯಕ್ತಿಯೊಬ್ಬನ ಆಳ-ಅಗಲವನ್ನು ಅರಿತು ಕೊಳ್ಳಲು ಸಾಧ್ಯವಿಲ್ಲ. ಕವಿ ಅಡಿಗರ ಮಾತೊಂದು ಇಲ್ಲಿ ಪ್ರಸ್ತುತ. ಅವರು, ‘ನಾವು ಸಂಗ ಮಾಡದೇ ಯಾರನ್ನೇ ಆಗಲಿ ಅರಿಯಲು ಸಾಧ್ಯವಿಲ್ಲ.’ ಎನ್ನುತ್ತಾರೆ. ಈ ಮಾತು ಎಷ್ಟು ಸತ್ಯ ನೋಡಿ. ಈ ದೃಷ್ಟಿಯಿಂದ ಹೀರೊ, ತಾರೆಗಳೆನಿಸಿ ಕೊಂಡವರನ್ನು ಒಂದು ಅಂತರದಲ್ಲಿ ಇಟ್ಟು ಕೊಂಡು ನೋಡಿ ನಮ್ಮ ಉತ್ಸಾಹ, ಸಂತಸ ಹೆಚ್ಚಿಸಿ ಕೊಳ್ಳಬೇಕೇ ಹೊರತು ಅವರಿಗಾಗಿ ಬೇರೆಯವರೊಡನೆ ಕಿತ್ತಾಡುವುದು, ಜೀವನವನ್ನು ಪಣಕಿಟ್ಟು ಹೋರಾಡುವುದು ಮೂರ್ಖತನ. ಮೇಲಾಗಿ ಇದು ನಮ್ಮ ವ್ಯಕ್ತಿತ್ವಕ್ಕೆ ನಾವೇ ಮಾಡಿ ಕೊಳ್ಳುವಂತಹ ಅಪಚಾರ. ಹಾಗೆಯೇ ಸ್ವಾಭಿಮಾನ, ಆತ್ಮಗೌರವಗಳಿಗೆ ಚ್ಯುತಿ ತರುವಂತಹ ನಡವಳಿಕೆ ಕೂಡ.